ಮಂಡ್ಯದಲ್ಲಿ ಮೈತ್ರಿ ಗೊಟಕ್: ಚಲುವಣ್ಣನ ಮೇಲೆ ಸುರೇಶ್ ಗೌಡ ಅಟ್ಯಾಕ್!

ಡಿಜಿಟಲ್ ಕನ್ನಡ ಟೀಮ್:

ಮಂಡ್ಯದಲ್ಲಿ ಹಿತಶತ್ರುಗಳ ಕಿತ್ತಾಟ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ನಿನ್ನೆ-ಮೊನ್ನೆ ಸಚಿವ ಸಿ.ಎಸ್. ಪುಟ್ಟರಾಜು, ಮಾಜಿ ಸಚಿವ ಚಲುವರಾಯಸ್ವಾಮಿ ಮಾಡಿಕೊಂಡಿದ್ದ ಕಿತ್ತಾಟಕ್ಕೆ ಈಗ ನಾಗಮಂಗಲ ಶಾಸಕ ಸುರೇಶ್ ಗೌಡ ಕೂಡ ಸೇರಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ತಾವು ಸೋಲಿಸಿದ್ದ ಕಾಂಗ್ರೆಸ್ಸಿನ ಚಲುವರಾಯಸ್ವಾಮಿ ಅವರನ್ನು ರಾಜಕೀಯ ವ್ಯಭಿಚಾರಿ ಎಂದು ಜರಿದಿದ್ದಾರೆ.

ಚಲುವರಾಯಸ್ವಾಮಿ ಅವರು ಮೊದಲಿಂದಲೂ ಎದುರಾಳಿಗಳ ಜತೆ ಚುನಾವಣೆ ಹೊಂದಾಣಿಕೆ ಮಾಡಿಕೊಂಡೇ ಬಂದಿದ್ದಾರೆ. 2013 ರ ಚುನಾವಣೆಯಲ್ಲಿ ರಮ್ಯಾ ಗೆಲ್ಲಲು ಚಲುವರಾಯಸ್ವಾಮಿಯೇ ಕಾರಣ. ಆಗ ಅವರು ಕಾಂಗ್ರೆಸ್ ಮುಖಂಡರ ಜತೆ ಹೊಂದಾಣಿಕೆ ಮಾಡಿಕೊಂಡರು. ಪುಟ್ಟರಾಜು ಅವರನ್ನು ಸೋಲಿಸಲು ಒಳಸಂಚು ಮಾಡಿದರು. ಅವರು ಈ ಕೆಲಸ ಮಾಡಿಲ್ಲ ಅಂದರೆ ಧರ್ಮಸ್ಥಳದ ಮಂಜುನಾಥ ಸ್ವಾಮಿಯೇ ಮೇಲೆ ಆಣೆ ಮಾಡಲಿ. ಜನ ಕೊಟ್ಟ ಅಧಿಕಾರವನ್ನು ಮಾರಾಟ ಮಾಡಿಕೊಂಡು ಬಂದಿರುವ ಅವರನ್ನು ರಾಜಕೀಯ ವ್ಯಭಿಚಾರಿ ಎಂದೇ ಕರೆಯುತ್ತೇನೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪುಟ್ಟರಾಜು ಅವರು ಚಲುವರಾಯಸ್ವಾಮಿ ಅವರನ್ನು ಡೆಡ್ ಹಾರ್ಸ್ (ಸತ್ತ ಕುದುರೆ) ಎಂದು ಕರೆದಿದ್ದಾರೆ. ಆದರೆ ನಿನ್ನೆ ಮೊನ್ನೆ ಸತ್ತವರನ್ನು ಮಾತ್ರ ಡೆಡ್ ಎಂದು ಕರೆಯುತ್ತೇವೆ. ಆದರೆ ಚಲುವರಾಯಸ್ವಾಮಿ ರಾಜಕೀಯ ಬದುಕು ಮುಗಿದು ಎಷ್ಟೋ ದಿನವಾಗಿದೆ. ಹೀಗಾಗಿ ಅವರು ಡೆಡ್ ಹಾರ್ಸ್ ಅಲ್ಲ, ಕ್ಲೋಸ್ಡ್ ಹಾರ್ಸ್ (ಮುಗಿದ ಕುದುರೆ). ಅವರಿಗೆ ತಾಕತ್ತಿದ್ದರೆ ಮಂಡ್ಯ ಲೋಕಸಭೆ ಕ್ಷೇತ್ರದ ಮರುಚುನಾವಣೆಯಲ್ಲಿ ನಿಂತು ಗೆದ್ದು ತೋರಿಸಲಿ ಎಂದು ಮಾಧ್ಯಮದವರ ಜತೆ ಬುಧವಾರ ಮಾತನಾಡಿ, ಸವಾಲು ಹಾಕಿದರು.

ಕಾಂಗ್ರೆಸ್ಸಿಗೆ ಕುಮಾರಸ್ವಾಮಿ ಅನಿವಾರ್ಯ ಎಂದು ಅಂಬರೀಶ್ ಅವರು ಚಿನ್ನದಂಥ ಮಾತಾಡಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ಚಲುವರಾಯಸ್ವಾಮಿ ಐದು ವರ್ಷ ಸುಮ್ಮನಿರೋದು ಒಳ್ಳೆಯದು ಎಂದರು.

Leave a Reply