‘ಮಿ-ಟೂ’ ಅಭಿಯಾನಕ್ಕೆ ಗಾಯಕಿ ಚಿನ್ಮಯಿ; ತಮಿಳು ಸಾಹಿತಿ ವೈರಮುತ್ತು ವಿರುದ್ದ ಆರೋಪ!

ಡಿಜಿಟಲ್ ಕನ್ನಡ ಟೀಮ್:

ದೇಶದ ಮೂಲೆಮೂಲೆಗಳಿಗೂ ಕಾಡ್ಗಿಚ್ಚಿನಂತೆ ಹಬ್ಬುತ್ತಿರುವ ಲೈಂಗಿಕ ದೌರ್ಜನ್ಯದ ವಿರುದ್ಧದ ಸಾಮಾಜಿಕ ಜಾಲತಾಣ ಅಭಿಯಾನ ‘ಮಿ-ಟೂ’ಗೆ ದಿನೇ ದಿನೇ ಹೊಸ ಹೊಸ ಪ್ರಕರಣಗಳ ಸೇರ್ಪಡೆ ಆಗುತ್ತಿದ್ದು, ತಮಿಳು ಸಾಹಿತಿ ವೈರಮುತ್ತು ವಿರುದ್ಧ ಗಾಯಕಿ ಚಿನ್ಮಯಿ ಶ್ರೀಪಾದ ಕಿರುಕುಳ ಆರೋಪ ಮಾಡಿದ್ದಾರೆ.

ಹಿಂದೆ ವೈರಮುತ್ತು ಅವರು ತಮ್ಮನ್ನು ಹೊಟೇಲ್ ಒಂದಕ್ಕೆ ಬರುವಂತೆ ಆಹ್ವಾನಿಸಿದ್ದರು. ಬಾರದಿದ್ದರೆ ಭವಿಷ್ಯದಲ್ಲಿ ಅವಕಾಶಗಳು ಸಿಗದಂತೆ ಮಾಡುವುದರ ಜತೆಗೆ ಚಾರಿತ್ರ್ಯಹರಣ ಮಾಡುವುದಾಗಿ ಬೆದರಿಸಿದ್ದರು ಎಂದು ಅವರು ಟ್ವಿಟರ್ ನಲ್ಲಿ ಬಹಿರಂಗಪಡಿಸಿದ್ದಾರೆ.

ಆದರೆ ತಾವೇನೂ ಹೊಟೇಲಿಗೆ ತೆರಳಲಿಲ್ಲ. ವೈರಮುತ್ತು ತಮಗೆ ಅವಕಾಶಗಳನ್ನು ತಪ್ಪಿಸಿದ್ದು ಗೊತ್ತಿಲ್ಲ. ಗೊತ್ತಿಲ್ಲದ ವಿಚಾರಗಳನ್ನು ಮಾತನಾಡಲು ಹೋಗುವುದಿಲ್ಲ. ಸುಖಾಸುಮ್ಮನೆ ಕಲ್ಪನೆ ಮಾಡಿಕೊಳ್ಳಲಾರೆ. ಆದರೆ ಅವರು ಆ ರೀತಿ ಹೆದರಿಸಿದ್ದು ಸತ್ಯ. ಎಲ್ಲ ಕ್ಷೇತ್ರಗಳಲ್ಲೂ ಇಂಥ ಕಿರುಕುಳುಗಳು ನಡೆಯುತ್ತಿವೆ. ಇದರ ವಿರುದ್ಧ ಅಭಿಯಾನ ಶುರುವಾಗಿರುವುದು ಉತ್ತಮ ಬೆಳವಣಿಗೆ ಎಂದು ತಮ್ಮನ್ನು ಸಂಪರ್ಕಿಸಿದ ಮಾಧ್ಯಮಗಳಿಗೆ ಹೇಳಿದ್ದಾರೆ.

ಸದ್ಯ ಮೀಟು ಅಭಿಯಾನದಿಂದ ಬಾಲಿವುಡ್ ಸೇರಿದಂತೆ ದೇಶದ ಬಹು ಭಾಷಾ ಚಿತ್ರೋದ್ಯಮ ಹಾಗೂ ಕಿರುತೆರೆ ನಟಿಯರು ಖ್ಯಾತನಾಮರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ. ಅವರಲ್ಲಿ ನಾನಾ ಪಾಟೇಕರ್, ರಜತ್ ಕಪೂರ್, ಅಲೋಕ್ ನಾಥ್, ಗಾಯಕ ಕೈಲಾಶ್ ಖೇರ್ ವಿರುದ್ಧವೂ ಈ ಆರೋಪ ಕೇಳಿ ಬಂದಿದ್ದು ಮನರಂಜನಾ ಲೋಕದ ಕರಾಳ ಮುಖವನ್ನು ಪರಿಚಯಿಸಿದೆ.

Leave a Reply