ದಸರಾ ಹಬ್ಬದಲ್ಲಿ ಟಿಪ್ಪು ಜಯಂತಿ ವಿವಾದದ ಪಟಾಕಿ ಸಿಡಿಸಿದ ಪ್ರತಾಪ!

ಡಿಜಿಟಲ್ ಕನ್ನಡ ಟೀಮ್:

ಟಿಪ್ಪು ಜಯಂತಿಯ ರಾಜಕೀಯ ಬಿಟ್ಟಿಲ್ಲ. ದಸರಾ ವೇದಿಕೆಯಲ್ಲೇ ಸಂಸದ ಪ್ರತಾಪಸಿಂಹ ಹಚ್ಚಿದ ವಿವಾದದ ಬೆಂಕಿಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ಮೈಸೂರಿನ ಯದುವಂಶದ ಅರಸರನ್ನು 38 ವರ್ಷ ಜೈಲಲ್ಲಿಟ್ಟಿದ್ದ ಟಿಪ್ಪುವಿನ ಜಯಂತಿಯನ್ನು ಆಚರಿಸಬಾರದು. ಹಿಂದಿನ ಸರಕಾರಕ್ಕೆ (ಸಿದ್ದರಾಮಯ್ಯ) ಮಾಡಿಕೊಂಡಿದ್ದ ಮನವಿ ಫಲ ಕೊಟ್ಟಿಲ್ಲ. ನೀವಾದರೂ ಇದಕ್ಕೆ ಕಡಿವಾಣ ಹಾಕಿ ಎಂದು ಸಿಎಂ ಕುಮಾರಸ್ವಾಮಿ ಅವರಿಗೆ ಪ್ರತಾಪಸಿಂಹ ಹೇಳಿದ್ದು ವಿವಾದದ ಸ್ವರೂಪ ಪಡೆದುಕೊಂಡಿದೆ.

ಟಿಪ್ಪುವಿನ ಹೆಸರು ಹೇಳದೆ ವಿಷಯ ಪ್ರಸ್ತಾಪಿಸಿದ ಪ್ರತಾಪಸಿಂಹ, ಮೈಸೂರು ದಸರಾ ಪರಂಪರೆ ಆರಂಭಿಸಿದ ಯದುಕುಲ ಆರಸರನ್ನು 1761 ರಿಂದ 1799ರವರೆಗೆ 38 ವರ್ಷಗಳ ಕಾಲ ಕಗ್ಗತ್ತಲ ಕೋಣೆಯಲ್ಲಿದ್ದವರು ಯಾರು (ಟಿಪ್ಪು) ಎಂಬುದು ಇಡೀ ನಾಡಿಗೆ ಗೊತ್ತಿದೆ. ಅಂಥವರ ಜಯಂತಿ ನಡೆಯದಂತೆ ನೀವಾದರೂ ತಡೆಯಿರಿ ಎಂದು ವಿನಮ್ರವಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದದ್ದು ವಿವಾದದ ಕಿಡಿ ಹೊತ್ತಿಸಿದೆ.

ಇದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಇತಿಹಾಸಕಾರ ತಲಕಾಡು ಚಿಕ್ಕರಂಗೇಗೌಡ ಅವರು, ನಾಡಹಬ್ಬ ದಸರಾದಲ್ಲಿ ಈ ವಿಷಯ ಪ್ರಸ್ತಾಪವಾದದ್ದು ಸರಿಯಲ್ಲ. ಉತ್ತಮ ಆಹಾರ ಸವಿಯುವಾಗ ಹೊಲಸಿನ ಪ್ರಸ್ತಾಪ ಮಾಡಬಾರದು. ಪ್ರತಾಪ ಸಿಂಹ ಅವರು ಹೇಳಿದಂತೆ ದಸರಾ ಪರಂಪರೆ ಆರಂಭಿಸಿದ್ದು ಮೈಸೂರಿನ ಯದುಕುಲ ಅರಸರಲ್ಲ. ಬದಲಿಗೆ ವಿಜಯನಗರ ಅರಸರಾದ ಅಕ್ಕ-ಬುಕ್ಕರು. ಮೈಸೂರು ಅರಸರು ಅದನ್ನು ಮುಂದುವರಿಸಿಕೊಂಡು ಬಂದರು. ಟಿಪ್ಪು ಆಳ್ವಿಕೆಯನ್ನು ಕಣ್ಣಾರೆ ಕಂಡಿರುವ ಬ್ರಿಟಿಷ್ ವೈಸ್ರಾಯ್ ವಿಲಿಯಮ್ಸ್ ಜೇಮ್ಸ್ ದಾಖಲಿಸಿರುವಂತೆ, 38 ವರ್ಷಗಳ ಕಾಲ ಮೈಸೂರು ಆರಸರು ಜೈಲಲ್ಲಿದ್ದದ್ದು ನಿಜ. ಆದರೆ ಅವರನ್ನು ಟಿಪ್ಪುವಿಗೇ ಮೊದಲೇ ಮೈಸೂರು ಸಂಸ್ಥಾನದ ದೇವರಾಜಯ್ಯ ಹಾಗೂ ನಂಜರಾಜಯ್ಯ ಎಂಬುವರು ಜೈಲಲ್ಲಿಟ್ಟಿದ್ದರು. ರಾಜಕೀಯ ಕಾರಣಗಳಿಗಾಗಿ ಟಿಪ್ಪು ಅದನ್ನು ಮುಂದವರಿಸಿದ ಅಷ್ಟೇ. ಅರಸರು ಜೈಲಲ್ಲಿದ್ದ ಅವಧಿಯಲ್ಲೂ ದಸರಾ ಆಚರಣೆಯನ್ನು ಟಿಪ್ಪು ವೈಭವಯುತವಾಗಿಯೇ ಮುಂದುವರಿಸಿದ್ದ ಎಂದಿದ್ದಾರೆ.

ಮುಸ್ಲಿಂ ಮುಖಂಡ ಸರ್ದಾರ್ ಅಹಮದ್, ಸುಳ್ಳು ಮಾಹಿತಿ ನೀಡುವುದರಲ್ಲಿ ಬಿಜೆಪಿಯವರು ನಂಬರ್ 1. ಟಿಪ್ಪು ಬಡವರು, ದೀನ-ದಲಿತರಿಗೆ ಮಾಡಿದ ಸಹಾಯ, ಬ್ರಿಟಿಷರ ವಿರುದ್ಧ ಹೋರಾಡಿದ್ದು, ನಾಡಿಗಾಗಿ ಮಕ್ಕಳನ್ನು ಬ್ರಿಟಿಷರಿಗೆ ಅಡಮಾನ ಇಟ್ಟಿದ್ದರ ಬಗ್ಗೆ ಯಾರೂ ಮಾತಾಡುವುದಿಲ್ಲ. ಸುಖಾಸುಮ್ಮನೆ ಕಿರಿಕ್ ಮಾಡುವುದೇ ಬಿಜೆಪಿಯವರ ಕೆಲಸ ಎಂದು ಟೀಕಿಸಿದ್ದಾರೆ.

Leave a Reply