ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮತ್ತೊಂದು ವಿವಾದ; ಸಮಾಜ ಸೇವೆ ಅವರ ಕೆಲಸವಲ್ಲವಂತೇ..!

ಡಿಜಿಟಲ್ ಕನ್ನಡ ಟೀಮ್:

ವಿವಾದ ಸೃಷ್ಟಿಸುವುದರಲ್ಲಿ ತಮ್ಮ ‘ಕೌಶಲ್ಯ’ ವ್ಯಯಿಸುತ್ತಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮತ್ತೆ ‘ಬಾಯಿಬೇಧಿ’ ಮಾಡಿಕೊಂಡಿದ್ದಾರೆ.

‘ನಾವು ಸಮಾಜ ಸೇವೆ ಮಾಡಲು ಕುರ್ಚಿ ಮೇಲೆ ಕೂತಿಲ್ಲ. ಅದು ನಮ್ಮ ಕೆಲಸಾನೂ ಅಲ್ಲ. ರಾಜಕಾರಣ ಮಾಡೋಕೆ ಅಂತ ರಾಜಕಾರಣಕ್ಕೆ ಬಂದಿದ್ದೇವೆ. ರಾಜಕಾರಣನೇ ಮಾಡ್ತೀವಿ. ಮಾಧ್ಯಮದವರು ಏನೂ ಬೇಕಾದರೂ ಬರೆದುಕೊಳ್ಳಲಿ’ ಎಂದು ಕೇಂದ್ರ ಕೌಶಲ್ಯ ಅಭಿವೃದ್ಧಿ ಖಾತೆ ಸಚಿವ ಅನಂತಕುಮಾರ ಹೆಗಡೆ ಉದ್ಧಟತನದ ಹೇಳಿಕೆ ನೀಡಿದ್ದಾರೆ.

‘ನಮಗೆ ವೋಟ್ ಹಾಕೋದು ನಿಮ್ಮ (ಜನರ) ಕರ್ತವ್ಯ. ಅದನ್ನು ನೀವು ಮಾಡಬೇಕು. ನಾವು ಇರೋದು ರಾಜಕಾಣ ಮಾಡೋಕೆ. ಅದಕ್ಕೇ ತಾಲೂಕು ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಆಗೋದು. ಅದಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯರಾಗೋದು. ಶಾಸಕರು, ಸಂಸದರು ಕೂಡ ಆಗೋದು. ರಾಜಕಾರಣ ನಮ್ಮ ಕೆಲಸ. ಅದನ್ನು ಮಾಡ್ತೀವಿ. ಸಮಾಜ ಸೇವೆ ನಮ್ಮ ಕೆಲಸ ಅಲ್ಲ’ ಎಂದು ಒತ್ತಿ ಹೇಳಿದ್ದಾರೆ.

ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತಪಡಿಸಿರೋ ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ, ‘ಮೊದಲು ಅನಂತಕುಮಾರ ಹೆಗಡೆ ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು. ಸಮಾಜಸೇವೆ ರಾಜಕಾರಣದ ಬಹುಮುಖ್ಯ ಭಾಗ. ಅದೇ ಅರ್ಥವಾಗದಿದ್ದರೆ ಇವರನ್ನು ಹುಚ್ಚ ಅನ್ನದೇ ಏನನ್ನಬೇಕು? ಬಿಜೆಪಿಲಿ ಈ ಥರದವರು ತುಂಬಿ ಹೋಗಿದ್ದಾರೆ. ಅವರ ಹೇಳಿಕೆಗಳೇ ಅವರು ಏನು ಎಂಬುದನ್ನು ಸಾಬೀತು ಮಾಡುತ್ತಿವೆ’ ಎಂದಿದ್ದಾರೆ.

ಬಿಜೆಪಿ ವಕ್ತಾರ ಗೋ. ಮಧುಸೂದನ ಅವರು, ‘ಸಮಾಜಸೇವೆ ರಾಜಕಾರಣ ಅಲ್ಲದೇ ಮತ್ತೇನಂತೇ? ಈ ಬಗ್ಗೆ ಅವರನ್ನೇ ಪ್ರಶ್ನೆ ಮಾಡೋದು ಒಳ್ಳೆಯದು’ ಎಂದು ಹೇಳಿದ್ದಾರೆ.

Leave a Reply