ಬಿಎಸ್ಪಿ, ಕಾಂಗ್ರೆಸ್ ನಡುವೆ ಏರ್ಪಡದ ಮೈತ್ರಿ; ಸಚಿವ ಎನ್. ಮಹೇಶ್ ರಾಜೀನಾಮೆ

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಪ್ರಾಥಮಿಕ ಶಿಕ್ಷಣ ಸಚಿವ ಹಾಗೂ ಬಿಎಸ್ಪಿ ಏಕೈಕ ಶಾಸಕ ಎನ್. ಮಹೇಶ್ ತಮ್ಮ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಮತ್ತು ಬಿಎಸ್ಪಿ ನಡುವೆ ಮೈತ್ರಿ ಏರ್ಪಡದ ಹಿನ್ನೆಲೆಯಲ್ಲಿ ಪಕ್ಷದ ನಾಯಕಿ ಮಾಯಾವತಿ ಅವರ ಸೂಚನೆ ಮೇರೆಗೆ ಅವರು ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ತಾವು ಅಲಂಕರಿಸಿದ್ದ ಸಚಿವ ಸ್ಥಾನ ತೊರೆದಿದ್ದಾರೆ.

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ತಾವು ಸಚಿವ ಸ್ಥಾನ ತೊರೆಯುತ್ತಿರುವುದಾಗಿ ಅವರು ಮಾಧ್ಯಮದವರಿಗೆ ತಿಳಿಸಿದರು. ಈ ವೇಳೆ ಅವರು ಹೇಳಿದ್ದಿಷ್ಟು…

‘ನನ್ನ ಪಕ್ಷದ ವರಿಷ್ಠರಾದ ಮಾಯಾವತಿ ಅವರು, ರಾಜ್ಯಾಧ್ಯಕರಾಗಿದ್ದ ನನ್ನನ್ನು ಸಚಿವರನ್ನಾಗಿ ಆಯ್ಕೆ ಮಾಡಿದ್ರು. ಸಚಿವನಾದ ಮೇಲೆ ಕ್ಷೇತ್ರದಲ್ಲಿ ಕೆಲಸ ಮಾಡ್ತಿಲ್ಲ. ಪಕ್ಷದ ಕೆಲಸಗಳನ್ನು ಮಾಡಲು ನನಗೆ ಆಗ್ತಿಲ್ಲ ಹಾಗಾಗಿ ರಾಜೀನಾಮೆ ನೀಡಿದ್ದೇನೆ. ಜೊತೆಗೆ ಲೋಕಸಭೆ ಚುನಾವಣೆಗಾಗಿ ಪಕ್ಷವನ್ನು ಬಲವರ್ಧನೆ ಮಾಡುವುದಕ್ಕಾಗಿ ರಾಜೀನಾಮೆ ಸಲ್ಲಿಕೆ ಮಾಡಿದ್ದೇನೆ. ರಾಜ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತಿದ್ದೇನೆ ಆದ್ರೆ ಜೆಡಿಎಸ್ ಗೆ ನಮ್ಮ ಪಕ್ಷದ ಬೆಂಬಲ ಇರುತ್ತೆ. ಉಪ‌ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷವನ್ನು ಬೆಂಬಲ ಮಾಡ್ತೇವೆ. ನನ್ನ ರಾಜೀನಾಮೆಯನ್ನು ಸಿಎಂಗೆ ನೀಡಿದ್ದೇನೆ. ರಾಜ್ಯಪಾಲ ವಜುಭಾಯ್ ವಾಲಾ ಅವರಿಗೂ ರಾಜೀನಾಮೆ ಪತ್ರ ಕಳುಹಿಸಿದ್ದೇನೆ.

ಸಚಿವನಾದ ನಾಲ್ಕು ತಿಂಗಳ ಅವಧಿಯಲ್ಲಿ ಪಕ್ಷದ ಚಟುವಟಿಕೆಗಳನ್ನ ಮಾಡಲು ಸಾಧ್ಯವಾಗಲಿಲ್ಲ. ಸಚಿವ ಸ್ಥಾನ ವಹಿಸಿಕೊಂಡ ಬಳಿಕ ನಿರೀಕ್ಷಿತ ಮಟ್ಟದಲ್ಲಿ ಪಕ್ಷದ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಕಳೆದ 20 ವರ್ಷಗಳ ಕಾಲ ಸತತ ಪರಿಶ್ರಮದಿಂದ ಮೊದಲ ಬಾರಿಗೆ ಗೆದ್ದಿದ್ದೇನೆ. ಪ್ರಾಥಮಿಕ ಶಿಕ್ಷಣ ಖಾತೆ ಅರ್ಥ ಮಾಡಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಂಡಿತು. ಜನರು ನನ್ನ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಗೆದ್ದ ಬಳಿಕ ಬೆಂಗಳೂರಿಗೆ ಹೋದರು ಅಲ್ಲೇ ಇದ್ದಾರೆ ಎನ್ನುತ್ತಿದ್ದಾರೆ. ನನ್ನ ಕ್ಷೇತ್ರದ ಕಡೆಯೂ ನಾನು ಗಮನ ಕೊಡಬೇಕಾಗಿದೆ. ಮಾಯಾವತಿ ಅವರೂ ರಾಜೀನಾಮೆ ನೀಡುವಂತೆ ಹೇಳಿಲ್ಲ. ನಾನೇ ವೈಯಕ್ತಿಕವಾಗಿ ರಾಜೀನಾಮೆ ನೀಡಿದ್ದೇನೆ.’

Leave a Reply