ಮೋದಿ ಈ ದೇಶ ಕಂಡ ಮಹಾನ್ ಭ್ರಷ್ಟ; ರಾಹುಲ್ ವಾಗ್ದಾಳಿ

ಡಿಜಿಟಲ್ ಕನ್ನಡ ಟೀಮ್:

‘ಪ್ರಧಾನಿ ಮೋದಿ ಈ ದೇಶ ಕಂಡ ಮಹಾನ್ ಭ್ರಷ್ಟ. ನಷ್ಟದಲ್ಲಿದ್ದ ಅನಿಲ್ ಅಂಬಾನಿಗೆ ರಫೇಲ್ ಡೀಲ್ ಮೂಲಕ 30 ಸಾವಿರ ಕೋಟಿ ರುಪಾಯಿ ಉಡುಗೊರೆ ನೀಡಿದ್ದಾರೆ. ಮೋದಿ ಮೂಗಿನ ನೇರಕ್ಕೆ ಈ ಭ್ರಷ್ಟಾಚಾರ ನಡೆದಿದೆ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ರಫೇಲ್ ಒಪ್ಪಂದದಲ್ಲಿ ಫ್ರಾನ್ಸ್ ನ ಡಸಾಲ್ಟ ಏವೀಯೇಶನ್ ಸಂಸ್ಥೆ ರಿಲಯನ್ಸ್ ಅನ್ನು ಆಯ್ಕೆ ಮಾಡಿಕೊಂಡಿದೆ ಎಂದು ಫ್ರಾನ್ಸ್ ಮಾಧ್ಯಮ ವರದಿ ಮಾಡಿದ ಬೆನ್ನಲ್ಲೇ ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಹುಲ್ ಗಾಂಧಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಮೋದಿ ಅವರು ಅನಿಲ್ ಅಂಬಾನಿಯ ಚೌಕೀದಾರ. ರಫೇಲ್ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ. ಒಪ್ಪಂದಕ್ಕೆ ಹತ್ತು ದಿನ ಮೊದಲು ಆ ಕಂಪನಿ ಅಂಬಾನಿ ಪರವಾಗಿ ಅಸ್ತಿತ್ವಕ್ಕೆ ಬಂದಿದೆ. ಭ್ರಷ್ಟಾಚಾರ ಮಾಡಲೆಂದೇ ಈ ಕಂಪನಿ ಸೃಷ್ಟಿಸಲಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಆಪಾದಿಸಿದ್ದಾರೆ.

‘ದಿನಗಳೆದಂತೆ ಮೋದಿ ಅವರ ಒಂದೊಂದೇ ಭ್ರಷ್ಟಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಆದರೆ ಈ ಬಗ್ಗೆ ಮೋದಿ ಏನೂ ಮಾತಾಡುತ್ತಿಲ್ಲ. ಉತ್ತರ ನೀಡಲು ಆಗದಿದ್ದರೆ ಪ್ರಧಾನಿ ಸ್ಥಾನಕ್ಕೆ ಅವರು ರಾಜೀನಾಮೆ ನೀಡಲಿ’ ಎಂದು ಅವರು ಆಗ್ರಹಿಸಿದ್ದಾರೆ.

Leave a Reply