ಅಶೋಕ್ ‘ಕುದುರೆ ವ್ಯಾಪಾರ’ಕ್ಕೆ ‘ಆಲ್ ದ ಬೆಸ್ಟ್’ ಎಂದ ಡಿಕೆಶಿ!

ಡಿಜಿಟಲ್ ಕನ್ನಡ ಟೀಮ್:

ಇನ್ನೆರಡು ತಿಂಗಳಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತದೆ ಎಂಬ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ‘ತಾವು ಕುದುರೆ ವ್ಯಾಪಾರ ಮಾಡುವುದನ್ನು ಬಿಜೆಪಿಯವರು ಬಹಿರಂಗ ಪಡಿಸಿದ್ದಾರೆ. ಅವರ ಕುದುರೆ ವ್ಯಾಪಾರಕ್ಕೆ ಒಳ್ಳೆಯದಾಗಲಿ’ ಎಂದು ಹೇಳಿದ್ದಾರೆ.

ಬಳ್ಳಾರಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ನಾಯಕರ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದ್ದಿಷ್ಟು:

‘ಸರ್ಕಾರ ರಚನೆಗೆ ದಿನಾಂಕ ನಿಗದಿ ಮಾಡುವ ಮೂಲಕ ತಾವು ಕುದುರೆ ವ್ಯಾಪಾರಕ್ಕೆ ಇಳಿದಿರುವುದನ್ನು ಅಶೋಕ್ ಬಹಿರಂಗವಾಗಿ ಹೇಳಿದ್ದಾರೆ. ಅವರಿಗೆ ಶುಭವಾಗಲಿ.’

‘ಬಿಜೆಪಿಯ ಶ್ರೀರಾಮುಲು ಅವರು ನಾವು ಪಾಂಡವರಿದ್ದಂತೆ, ಕಾಂಗ್ರೆಸ್‍ನವರು ಕೌರವರಿದ್ದಂತೆ ಎಂದಿದ್ದಾರೆ. ಪಾಂಡವರೇ ಗೆಲ್ಲುತ್ತಾರೆ ಎಂದೂ ಹೇಳಿಕೊಂಡಿದ್ದಾರೆ. ಹಾಗಿದ್ದರೆ ಶ್ರೀರಾಮುಲು ಅವರು ಬಳ್ಳಾರಿ ಗ್ರಾಮೀಣ ವಿಧಾನಸಭೆ ಕ್ಷೇತ್ರವನ್ನು ಬಿಟ್ಟು ಓಡಿಹೋಗಿದ್ದು ಏಕೆ? ಶ್ರೀರಾಮಲು ಬಹಳ ದೊಡ್ಡವರು. ಶ್ರೀರಾಮ ಮತ್ತು ಶ್ರೀರಾಮುಲು ಗೆಲ್ಲಲಿ, ಪಾಪ..’

‘ಮರುಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ. ನಾವು ಜೆಡಿಎಸ್ ಜೊತೆ ಮೈತ್ರಿಯೊಂದಿಗೆ ಚುನಾವಣೆ ಎದುರಿಸುತ್ತೇವೆ. ಬಳ್ಳಾರಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ. ಈ ವಿಚಾರದಲ್ಲಿ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಎಲ್ಲರೂ ಒಟ್ಟಾಗಿದ್ದೇವೆ. ಒಟ್ಟಾಗಿಯೇ ಚುನಾವಣೆ ಎದುರಿಸಿ ಗೆಲ್ಲುತ್ತೇವೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬಳ್ಳಾರಿಯ ಆರು ಕಾಂಗ್ರೆಸ್ ಶಾಸಕರು ಸೇರಿ ಎಲ್ಲ ಮುಖಂಡರೂ ಭಾಗವಹಿಸಿದ್ದಾರೆ. ಅನಿಲ್ ಲಾಡ್ ಮಾತ್ರ ಭಾಗವಹಿಸಿಲ್ಲ. ಅವರು ಕೇಂದ್ರ ಸ್ಥಾನದಲ್ಲಿ ಇಲ್ಲದಿರುವುದರಿಂದ ಬರಲು ಸಾಧ್ಯವಾಗಿಲ್ಲ.’

‘ನಾನು ಪಕ್ಷ ವಹಿಸಿದ ಜವಾಬ್ದಾರಿಯನ್ನಷ್ಟೇ ನಿಭಾಯಿಸುತ್ತಿದ್ದೇನೆ. ಈಗಾಗಲೇ ಬಳ್ಳಾರಿಯ ಎಲ್ಲ ಕಾಂಗ್ರೆಸ್‍ ಶಾಸಕರೊಂದಿಗೆ ಚರ್ಚೆ ನಡೆಸಿದ್ದೇನೆ. ಈ ಚುನಾವಣೆಯಲ್ಲಿ ಜನರು ನೀಡುವ ತೀರ್ಪು ರಾಷ್ಟ್ರಮಟ್ಟಕ್ಕೆ ಸಂದೇಶ ರವಾನೆ ಮಾಡುತ್ತದೆ. ಆರು ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತದೆ.’

‘ಬಿಎಸ್ಪಿಯ ಮಹೇಶ್ ನನ್ನ ಆತ್ಮೀಯ ಸ್ನೇಹಿತ. ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಅವರು ಸಚಿವ ಸಂಪುಟದಲ್ಲೇ ಮುಂದುವರೆದು ಅದೇ ಖಾತೆಯಲ್ಲಿ ಮತ್ತಷ್ಟು ಉತ್ತಮ ಕೆಲಸ ಮಾಡಲಿ ಎಂಬುದು ನಮ್ಮ ಆಶಯ. ರಾಜಕೀಯದಲ್ಲಿ ಎಲ್ಲವೂ ಆಕಸ್ಮಿಕ. ಇಂದಿನಿಂದ ಗುರು ಬದಲಾಗಿದ್ದಾನೆ. ಎಲ್ಲವೂ ಒಳ್ಳೆಯದಾಗುತ್ತದೆ.’

Leave a Reply