ಭಾರತದ ಶಕ್ತಿ ಅರಿತು ಸ್ನೇಹ ಹಸ್ತ ಚಾಚಿದ ಚೀನಾ!

ಡಿಜಿಟಲ್ ಕನ್ನಡ ಟೀಮ್:
ಏಷ್ಯಾ ಭಾಗದಲ್ಲಿ ಏಕಾಂಗಿಯಾಗಿ ಸಂಪೂರ್ಣ ಪಾರಮ್ಯ ಮೆರೆದು ವಿಶ್ವದ ಶಕ್ತಿಶಾಲಿ ರಾಷ್ಟ್ರವಾಗಿ ಬೆಳೆಯಲು ಪ್ರಯತ್ನಿಸುತ್ತಿದ್ದ ಚೀನಾಕ್ಕೆ ಈಗ ಭಾರತದ ಸಾಮರ್ಥ್ಯ ಏನು ಎಂಬುದು ಅರಿವಾಗಿದೆ. ಅಮೆರಿಕದಿಂದ ರಷ್ಯಾವರೆಗೂ ಎಲ್ಲ ರಾಷ್ಟ್ರಗಳ ಜತೆ ಉತ್ತಮ ಸಂಬಂಧ ಹೊಂದುತ್ತಿರುವ ಭಾರತವನ್ನು ಕಡೆಗಣಿಸಿದರೆ ತಮಗೆ ನಷ್ಟ ಎಂಬುದು ಚೀನಾಗೆ ಮನವರಿಕೆಯಾಗಿದೆ. ಪರಿಣಾಮ ಇದೀಗ ಚೀನಾ, ಭಾರತದ ಜತೆ ಸ್ನೇಹ ಸಂಬಂಧ ಗಟ್ಟಿ ಮಾಡಿಕೊಳ್ಳುವ ಇರಾದೆ ವ್ಯಕ್ತಪಡಿಸುತ್ತಿದೆ.
ಹೌದು, ನವರಾತ್ರಿಯ ಅಂಗವಾಗಿ ಭಾನುವಾರ ಕೋಲ್ಕತಾದ ಸಾಲ್ಟ್ ಲೇಕ್ ಪ್ರದೇಶದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚೀನಾ ರಾಯಭಾರಿ ಕಚೇರಿಯ ಮುಖ್ಯಸ್ಥ ಮಾ ಝನ್ವು, ‘ಭಾರತ ಹಾಗೂ ಚೀನಾ ಒಂದಾದರೆ ನಾವು ಬದಲಾವಣೆಗೆ ನಾಂದಿ ಹಾಡಬಹುದು’ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಪ್ರಸ್ತುತ ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ಏಷ್ಯಾದ ಪ್ರಾಮುಖ್ಯತೆ ಹೆಚ್ಚಿಸಬೇಕಾದರೆ, ಭಾರತ-ಚೀನಾ ಒಗ್ಗಟ್ಟು ತುಂಬಾನೆ ಮುಖ್ಯ. ಈ ಎರಡು ದೇಶಗಳು ಒಗ್ಗಟ್ಟಾಗಿದ್ದರೆ ಏಷ್ಯಾದ ತಾಕತ್ತು ಹೆಚ್ಚುತ್ತದೆ. ಹೀಗಾಗಿ ಭಾರತ-ಚೀನಾ ನಡುವಿನ ದ್ವಿಪಕ್ಷೀಯ ಸಹಕಾರದ ವ್ಯಾಪ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ಶೈಕ್ಷಣಿಕ ಕೊಡುಕೊಳ್ಳುವಿಕೆ ನಡೆಯಬೇಕು.  ಈ ವರ್ಷಾಂತ್ಯದಲ್ಲಿ ಚೀನಾ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಮತ್ತೆ ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆಗಳಿವೆ. ಇನ್ನು ಕೋಲ್ಕತ್ತಾದಲ್ಲಿ ನಡೆಯಲಿರುವ ದುರ್ಗಾ ಪೂಜೆಯಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಚೀನಾದ ಸಹಭಾಗಿತ್ವ ಉಭಯ ದೇಶಗಳ ಸಾಂಸ್ಕೃತಿಕ, ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸಲಿದೆ’ ಎಂದರು.
ಪಾಕಿಸ್ತಾನ ಜತೆಗೂಡಿ ಭಾರತವನ್ನು ಮಟ್ಟಹಾಕಲು ಇನ್ನಿಲ್ಲದ ಪ್ರಯತ್ನದಲ್ಲಿರುವ ಚೀನಾ ಹೀಗೆ ತನ್ನ ವರಸೆ ಬದಲಿಸಲು ಕಾರಣವಿದೆ. ಅಮೆರಿಕದ ಜತೆ ವ್ಯಾಪಾರ ಸಮರಕ್ಕಿಳಿದಿರುವ ಪರಿಣಾಮ ಚೀನಾ ಆರ್ಥಿಕತೆ ಪ್ರಗತಿಗೆ ಪೆಟ್ಟು ಬಿದ್ದಿದೆ. ಈ ಮಧ್ಯೆ ಭಾರತದ ಜತೆಗಿನ ವ್ಯಾಪಾರ ಚೀನಾ ಪಾಲಿಗೆ ಮಹತ್ವದ್ದು ಎಂಬುದನ್ನು ಮರೆಯುವಂತಿಲ್ಲ. ಇನ್ನು ಅಮೆರಿಕವನ್ನು ಎದುರು ಹಾಕಿಕೊಳ್ಳಲು ಮುಂದಾಗಿದ್ದ ಚೀನಾಗೆ ರಷ್ಯಾ ಬೆಂಬಲ ನೀಡುವ ವಿಶ್ವಾಸ ಹೊಂದಿತ್ತು. ರಷ್ಯಾ ಜತೆಗೆ ಅತ್ಯುತ್ತಮ ಸಂಬಂಧ ವೃದ್ಧಿಸಿಕೊಂಡು ಏಷ್ಯಾ ಭಾಗದಲ್ಲಿ ಭಾರತದ ನಿಯಂತ್ರಣಕ್ಕೆ ಕಡಿವಾಣ ಹಾಕಲು ಪ್ರಯತ್ನಿಸಿತ್ತು. ಆದರೆ ಇತ್ತೀಚೆಗೆ ಭಾರತ ಪ್ರವಾಸ ಮಾಡಿದ್ದ ರಷ್ಯಾ ಅಧ್ಯಕ್ಷ ವ್ಲಾಡ್ಮಿರ್ ಪುಟಿನ್, ಪ್ರಧಾನಿ ನರೇಂದ್ರ ಮೋದಿ ಅವರ ಜತೆಗಿನ ಸ್ನೇಹ ಸಂಬಂಧ ಹೂ ವ್ಯಾಪಾರ ಒಪ್ಪಂದಗಳನ್ನು ಕಂಡು ಚೀನಾ ನಿಬ್ಬೆರಗಾಗಿದೆ. ಇದರೊಂದಿಗೆ ಏಳು ದಶಕಗಳ ಭಾರತ- ರಷ್ಯಾ ಸ್ನೇಹದ ಬೇರು ಮತ್ತೆ ಬಲಗೊಳ್ಳಲು ಆರಂಭಿಸಿದ್ದು, ಚೀನಾಗೆ ಆತಂಕ ಹುಟ್ಟಿಸಿದೆ. ಈ ಎಲ್ಲ ಲೆಕ್ಕಾಚಾರಗಳು, ಚೀನಾ ಈಗ ಭಾರತದ ಜತೆ ಗುದ್ದಾಡಿ ಮೈಕೈ ನೋವು ಮಾಡಿಕೊಳ್ಳುವುದಕ್ಕಿಂತ ಸ್ನೇಹ ಸಂಬಂಧ ಬೆಸೆದುಕೊಳ್ಳುವುದೇ ಉತ್ತಮ ಎಂಬ ನಿಲುವಿಗೆ ಬರುವಂತೆ ಮಾಡಿದೆ.

Leave a Reply