ಸಚಿವ ಸ್ಥಾನಕ್ಕೆ ಎಂ.ಜೆ ಅಕ್ಬರ್ ರಾಜೀನಾಮೆ: ಮಿ ಟೂ ಅಭಿಯಾನಕ್ಕೆ ಬಿಗ್ ಬಲಿ!

ಡಿಜಿಟಲ್ ಕನ್ನಡ ಟೀಮ್:

ನೈಜೀರಿಯಾ ಪ್ರವಾಸದಿಂದ ಭಾರತಕ್ಕೆ ವಾಪಸ್ಸಾಗಿರುವ ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಎಂ.ಜೆ ಅಕ್ಬರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ವರದಿಗಳು ಬಂದಿವೆ.

ಅಕ್ಬರ್ ಅವರು ಇ-ಮೇಲ್ ಮೂಲಕ ತಮ್ಮ ರಾಜೀನಾಮೆ ಪತ್ರ ರವಾನಿಸಿರುವುದಾಗಿ ಮೂಲಗಳು ಮಾಹಿತಿ ನೀಡಿವೆ. ಅದರೊಂದಿಗೆ ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿದ್ದ ಮಿ ಟೂ ಅಭಿಯಾನಕ್ಕೆ ಮೊದಲ ವಿಕೆಟ್ ಬಿದ್ದಂತಾಗಿದೆ.

ಆರೋಪಗಳಿಗೆ ಶೀಘ್ರವೇ ಉತ್ತರಿಸುವೆ
ವಿದೇಶದಿಂದ ದೆಹಲಿಗೆ ವಾಪಸ್ಸಾದ ಎಂ.ಜೆ ಅಕ್ಬರ್, ಸುದ್ದಿಗಾರರು ಮಿ ಟೂ ಆರೋಪಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿ ‘ನನ್ನ ವಿರುದ್ಧ ಕೇಳಿ ಬಂದಿರುವ ಲೈಂಗಿಕ ಕಿರುಕುಳ ಆರೋಪಗಳ ಕುರಿತು ಶೀಘ್ರದಲ್ಲಿಯೇ ಪ್ರತಿಕ್ರಿಯೆ ನೀಡುವೆ’ ಎಂದು ಹೇಳಿದ್ದಾರೆ.

‘ನೈಜೀರಿಯಾಗೆ ನಾನು ಅಧಿಕೃತ ಭೇಟಿ ನೀಡಿದ್ದೆ. ನನ್ನ ವಿರುದ್ಧದ ಆರೋಪಗಳ ಕುರಿತು ಶೀಘ್ರದಲ್ಲಿಯೇ ಪ್ರತಿಕ್ರಿಯೆ ನೀಡುವೆ’ ಎಂದು ಹೇಳಿದ್ದಾರೆ.

‘ಕಳೆದ ವಾರ ಮಹಿಳಾ ಪತ್ರಕರ್ತೆ ಎಂ.ಜೆ.ಅಕ್ಬರ್ ಅವರು ದಿ ಟೆಲಿಗ್ರಾಫ್ ಪತ್ರಿಕೆಯ ಸಂಪಾದಕರಾಗಿದ್ದ ಸಂದರ್ಭದಲ್ಲಿ ತಮಗೆ ಕೆಲಸದ ವೇಳೆ ಲೈಂಗಿಕ ಕಿರುಕುಳ ನೀಡಿದ್ದರು’ ಎಂದು ಆರೋಪಿಸಿದ್ದರು. ಈ ಆರೋಪದ ಬೆನ್ನಲ್ಲೇ ಎಂ.ಜೆ ಅಕ್ಬರ್ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ಕೈಬಿಡಬೇಕೆಂದು ಒತ್ತಡ ಹೇರಲಾಗುತ್ತಿದೆ.

ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ, ‘ಮಾಧ್ಯಮಗಳ ವರದಿಗಳನ್ನು ಆಧರಿಸಿ, ಈ ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆ ನಡೆಯಬೇಕು. ಈ ವಿಚಾರ ಸಹಜವಾಗಿಯೇ ಸಂಸತ್ತಿನಲ್ಲಿ ಚರ್ಚೆಯಾಗುವುದರಿಂದ ತನಿಖೆ ಅಗತ್ಯವಾಗಿದೆ’ ಎಂದು ಆಗ್ರಹಿಸಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂ.ಜೆ ಅಕ್ಬರ್ ಅವರ ಕುರಿತು ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ನಿರ್ಧರಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಸರಕಾರಿ ಹಿರಿಯ ಅಧಿಕಾರಿಗಳ ಸಭೆ ಕರೆದಿರುವುದಾಗಿ ಮೂಲಗಳು ಮಾಹಿತಿ ನೀಡಿವೆ.

Leave a Reply