ಹೆಚ್‌ಎಎಲ್ ಬಗ್ಗೆ ರಾಹುಲ್ ಹಾಗೂ ಸಿಬ್ಬಂದಿ ನಡುವಣ ಸಂವಾದ ಹೇಗಿತ್ತು?

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಫೇಲ್ ಯುದ್ಧ ವಿಮಾನ ಖರೀದಿಯನ್ನು ಹೆಚ್‌ಎಎಲ್‌ನಿಂದ ತಪ್ಪಿಸಿ, ರಿಲಯನ್ಸ್ ಕಂಪನಿಗೆ ನೀಡಿದ್ದನ್ನು ಖಂಡಿಸಿ ಇಂದು ಬೆಂಗಳೂರಿನಲ್ಲಿ ಸಂವಾದ ಕಾರ್ಯಕ್ರಮ ನಡೆಸಿದ್ರು. ದೇಶಕ್ಕೆ ಹೆಚ್‌ಎಎಲ್ ಕೊಡುಗೆ ಅಪಾರ ಎನ್ನುವ ಹೆಸರಿನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಹೆಚ್‌ಎಎಲ್ ಸಿಬ್ಬಂದಿ ಯೂನಿಫಾರ್ಮ್‌ನಲ್ಲೇ ಭಾಗಿಯಾಗುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಸಂವಾದದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ‘ಹೆಚ್‌ಎಎಲ್ ಸಾಧರಣ ಸಂಸ್ಥೆಯಲ್ಲ. ನಾನು ಏನೇನೋ ಹೇಳಲಿಕ್ಕೆ ಬಂದಿಲ್ಲ, ದೇಶದ ಭವಿಷ್ಯಕ್ಕೆ ಹೆಮ್ಮೆಯ ಸಂಸ್ಥೆ ಏನೆಲ್ಲಾ ಮಾಡಿದೆ. ಏನೆಲ್ಲಾ ಮಾಡಬಹುದು ಅನ್ನೋದನ್ನ ನಿಮ್ಮಿಂದ ಕೇಳಲು ಬಂದಿದ್ದೇನೆ ಎಂದರು..

ಹೆಚ್‌ಎಎಲ್ ನಿವೃತ್ತ ಸಿಬ್ಬಂದಿ ಸಿರಾಜುದ್ದೀನ್ ಮಾತನಾಡಿ, 1971 ರಲ್ಲಿ ನಡೆದ ಯುದ್ಧದಲ್ಲಿ ಪಾಕಿಸ್ತಾನವನ್ನ ಸೋಲಿಸಿ ಭಾರತ ಗೆದ್ದಿತ್ತು. ಆ ಗೆಲುವಿಗೆ ಹೆಚ್‌ಎಎಲ್ ಕೊಡುಗೆ ಕಾರಣ, ಅಮೆರಿಕ ಕೂಡ ಹೆಚ್‌ಎಎಲ್‌ನ ಕೆಲ ಉತ್ಪನ್ನಗಳನ್ನ ಆಮದು ಮಾಡಿಕೊಳ್ಳುತ್ತಿತ್ತು. ಆದ್ರೆ, ಇಂದು ನಮಗೆ ನೋವಾಗಿದೆ. ಶೇಕಡ 90 ರಷ್ಟು ರೆಫಲ್ ಯುದ್ಧ ವಿಮಾನ ಗುತ್ತಿಗೆ ಮುಗಿದಿತ್ತು. ಆದ್ರೆ ಅಂತಿಮವಾಗಿ ಅದು ರದ್ದು ಆಗಿತ್ತು. ಹೆಚ್‌ಎಎಲ್ ಸಂಸ್ಥೆಗೆ ಗುತ್ತಿಗೆ ಸಿಕ್ಕಿದ್ರೆ ಅನೇಕ ಯುವಕರಿಗೆ ಉದ್ಯೋಗ ಸಿಗುತ್ತಿತ್ತು. ಆದ್ರೆ ಅದು ಸಾಧ್ಯವಾಗಲೇ ಇಲ್ಲ. ನಾವೇನೂ ನಮ್ಮ ಸಂಸ್ಥೆಗೆ ಗುತ್ತಿಗೆ ಕೊಡಿ ಅಂತಾ ಭಿಕ್ಷೆ ಬೇಡುತ್ತ್ತಿಲ್ಲ. ನಮ್ಮ ಶಕ್ತಿ ಸಾಮರ್ಥ್ಯ ನೋಡಿ ಅವಕಾಶ ಕೊಡಿ ಅಂತಾ ಕೇಳ್ತಿದ್ದೇವೆ ಎಂದ್ರು.

ಕೇಂದ್ರ ಸರ್ಕಾರ ಹೆಚ್‌ಎಎಲ್ ಜೊತೆಗೆ ಮಾಡಿಕೊಂಡಿದ್ದ ರಫೇಲ್ ಯುದ್ಧ ವಿಮಾನ ತಯಾರಿ ಯೋಜನೆಯನ್ನು ರದ್ದು ಮಾಡುವ ನಿರ್ಧಾರ ತೆಗೆದುಕೊಂಡಾಗ ನಿಮಗೆ ಏನು ಅನ್ನಿಸ್ತು..? ಎಂದು ರಾಹುಲ್ ಗಾಂಧಿ ಹೆಚ್‌ಎಎಲ್ ಸಿಬ್ಬಂದಿಯನ್ನು ಪ್ರಶ್ನೆ ಮಾಡಿದ್ರು.

ಇದಕ್ಕೆ ಉತ್ತರಿಸಿದ ಸಿರಾಜುದ್ದೀನ್, ನಿಜಕ್ಕೂ ನಮಗೆ ನೋವಾಯ್ತು. ಗುತ್ತಿಗೆಯನ್ನು ಬೇರೆಯವರಿಗೆ ಕೊಡೋದಕ್ಕಿಂತ ಮುಂಚೆ ಸ್ವಲ್ಪ ಯೋಚಿಸಬೇಕಿತ್ತು. ನಮ್ಮ ಸಂಘ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ್ದಲ್ಲ. ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಖಂಡಿಸುತ್ತೇವೆ. ಅಮೆರಿಕದಿಂದ ಸಾಬರ್ ಜೆಟ್ಸ್‌ಗಳನ್ನು ಪಾಕಿಸ್ತಾನ ಈ ಹಿಂದೆ ಖರೀದಿ ಮಾಡಿ ತಂದಿತ್ತು. ಅದಕ್ಕೆ ಸೆಡ್ಡು ಹೊಡೆದ ಭಾರತೀಯ ಸೇನೆಗೆ ಬೆನ್ನೆಲುಬಾಗಿದ್ದು ನಮ್ಮ ಹೆಚ್‌ಎಎಲ್. ಹೆಚ್‌ಎಎಲ್ ಇಂದಿಗೂ ಒಂದೇ ಯೂನಿಯನ್ ಹೊಂದಿದೆ, ನಾವು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ. ಇಂದು ಇಲ್ಲಿ ಸೇರಿರುವ ನಾವು ಯಾವುದೇ ಪಕ್ಷದ ಪರವಾಗಿ ಬಂದವರಲ್ಲ. ನಾವು ಕೇವಲ ಹೆಚ್‌ಎಎಲ್ ಸಂಸ್ಥೆಯ ಪರ. ನಾವು ಯಾರನ್ನೂ ಬೇಡುವುದಿಲ್ಲ. ನಾವು ವಿಮಾನ ತಯಾರಿಸುವಲ್ಲಿ ಮೆರಿಟ್ ಪಡೆದಿದ್ದೇವೆ. ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಾಗ ನಮಗೆ ಅವಮಾನವಾಯ್ತು. ಹೆಚ್‌ಎಎಲ್ ನೌಕರರಲ್ಲಿರುವ ನೈಪುಣ್ಯತೆ ಬೇರೆ ಎಲ್ಲಿದೆ? ಹನ್ನೆರಡು ದಿನದ ಅನುಭವವಿರುವ ಕಂಪನಿ ನಮಗಿಂತ ಹೆಚ್ಚಾಯಿತೆ ಎಂದು ನೌಕರರು ಪ್ರಶ್ನಿಸಿದ್ರು. ಹೆಚ್‌ಎಎಲ್ ಅಡಳಿತ ಮಂಡಳಿಯನ್ನು ನಾನು ಖಂಡಿಸುತ್ತೇನೆ, ಯಾಕಂದ್ರೆ ನೌಕರರು ಈ ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ ನೋಟೀಸ್ ನೀಡಿದ್ದಾರೆ.’

ಹೆಚ್‌ಎಎಲ್ ನಿವೃತ್ತ ನೌಕರ ಮಾದೇವನ್ ಮಾತನಾಡಿ, ‘ಕೇಂದ್ರ ಸರ್ಕಾರ ತನ್ನ ವರ್ತನೆಯನ್ನು ಹೀಗೆ ಮುಂದುವರೆಸಿದ್ದೇ ಆದರೆ 2019ರಲ್ಲಿ ಪಾಠ ಕಲಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು. ಹೆಚ್‌ಎಎಲ್ ಕೊಡುಗೆ ಅಪಾರ, ಅಂತಹ ಸಂಸ್ಥೆಯನ್ನು ಉಳಿಸಿ ಬೆಳಸಬೇಕಿದೆ. ಆಡಳಿತ ಮಂಡಳಿಯನ್ನು ವಿರೋಧಿಸುತ್ತಿಲ್ಲ. ನಮ್ಮ ವಿರೋಧ ಏನಿದ್ದರೂ ಕೇಂದ್ರ ಸರ್ಕಾರದ ವಿರುದ್ಧ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ದ. ರಕ್ಷಣಾ ಸಚಿವರಿಗೆ ರಕ್ಷಣಾ ಸಾಮಗ್ರಿಗಳ ಬಗ್ಗೆ ಅರಿವಿರಬೇಕು. ಈಗ ಡಿಆರ್‌ಡಿಓವನ್ಮು ಖಾಸಗಿಯವರಿಗೆ ಮಾರಿ ಬಿಟ್ಟಿದ್ದಾರೆ. ಎಲ್ಲ ಬಿಡಿ ಭಾಗಗಳು ಖಾಸಗಿಯವರಿಂದ ಉತ್ಪಾದಿತವಾಗುತ್ತಿದೆ. ಮಿಗ್, ನ್ಯಾಟ್ ಸರಣಿ ವಿಮಾನಗಳು ಸೇರಿದಂತೆ ಹಲವಾರು ವಿಮಾನಗಳನ್ನು ಉತ್ಪಾದಿಸಿ ತೋರಿಸಿದ್ದೇವೆ. ಅತ್ಯಂತ ಉತ್ಕೃಷ್ಟ ದರ್ಜೆಯ ವಿಮಾನಗಳ ಉತ್ಪಾದನೆ ಮಾಡಿದ್ದೇವೆ. ಹೆಚ್‌ಎಎಲ್ ಮಿಗ್ ವಿಮಾನ ಉತ್ಪಾದನೆ ಮಾಡಿದಾಗ ರಷ್ಯಾ ದೇಶದವರೇ ನಮ್ಮನ್ನು ಪ್ರಶಂಸಿಸಿದ್ದರು. ಈಗ ರಫೇಲ್ ಯೋಜನೆ ನಮ್ಮ ಕೈ ತಪ್ಪಿರುವುದು ಬೇಸರದ ಸಂಗತಿ. ರಫೇಲ್ ಯುದ್ಧ ವಿಮಾನ ತಯಾರಿಕೆ ಮರಳಿ ಹೆಚ್‌ಎಎಲ್‌ಗೆ ವಾಪಸ್ ಬರಬೇಕು. ರಾಹುಲ್ ಗಾಂಧಿ ಆರಂಭಿಸಿರುವ ಆಂದೋಲನವನ್ನ ನಾವು ಬೆಂಬಲಿಸುತ್ತೇವೆ.’

‘ಮುಂದಿನ ೫ ವರ್ಷದಲ್ಲಿ ಹೆಚ್‌ಎಎಲ್ ಸಂಸ್ಥೆ ಮುಚ್ಚಿ ಹೋಗುತ್ತೆ ಅನ್ನೋ ಮಾತು ಶುರುವಾಗಿದೆ. ಈ ಬೆಳವಣಿಗೆ ನಮ್ಮಲ್ಲಿ ಆತಂಕ ಮೂಡಿಸಿದೆ. ಹೆಚ್‌ಎಎಲ್‌ನಲ್ಲಿ ಎಸ್ಸಿ, ಎಸ್ಟಿ, ಹಾಗೂ ಒಬಿಸಿಗೆ ಸೇರಿದ ಸಿಬ್ಬಂದಿಯೇ ಜಾಸ್ತಿ ಇದ್ದಾರೆ ಅನ್ನೋ ಕಾರಣಕ್ಕೆ ಸಂಸ್ಥೆಯನ್ನು ಟಾರ್ಗೆಟ್ ಮಾಡಲಾಗ್ತಿದೆ’ ಎಂದು ನಿವೃತ್ತ ನೌಕರ ಶಿವಲಿಂಗಯ್ಯ ಆರೋಪಿಸಿದ್ರು.

’10 ಸಾವಿರ ಪರಿಶಿಷ್ಟ ಜಾತಿಯ ನೌಕರರಿದ್ದಾರೆ. ನಾವೆಲ್ಲ ಖಾಯಂ ಉದ್ಯೋಗಿಗಳು. ಆದರೆ ಕಳೆದ ಐದು ವರ್ಷದಿಂದ ಖಾಯಂ ಉದ್ಯೋಗಿಗಳ ನೇಮಕ ಮಾಡಿಕೊಳ್ಳುತ್ತಿಲ್ಲ. ಜಾತಿ ಮೀಲಾತಿ ನೀತಿಯನ್ನು ತಪ್ಪಿಸುವ ಸಲುವಾಗಿಯೇ ಐದು ವರ್ಷ ನಾಲ್ಕು ವರ್ಷಕ್ಕೆಲ್ಲಾ ಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ’ ಎಂದು ಕಿಡಿಕಾರಿದರು.

ಸಿಐಟಿಯು ಮುಖಂಡ ಉಮೇಶ್ ಮಾತನಾಡಿ ಇದು ಕೇವಲ ಹೆಚ್‌ಎಎಲ್‌ಗೆ ಸೇರಿದ ಪ್ರಶ್ನೆಯಲ್ಲ. ಇದು ಕರ್ನಾಟಕದ ಪ್ರೈಡ್. ಅದನ್ನು ಬೇರೆ ಕಡೆಗೆ ತೆಗೆದುಕೊಂಡು ಹೋಗಲು ಬಿಡಲ್ಲ. ಈಗಾಗಲೇ ಸ್ಟೇಟ್ ಬ್ಯಾಂಕ್ ಆಫ್ ಮೈಸೂರನ್ನು ಮುಗಿಸಿದ್ರು. ಒಂದೊಂದಾಗಿ ಸಾರ್ವಜನಿಕ ಉದ್ದಿಮೆಗಳನ್ನು ಮುಚ್ಚಲಾಗುತ್ತಿದೆ. ಇದರ ಬಗ್ಗೆ ನಾವು ಎಚ್ಚರಿಕೆ ವಹಿಸಲೇಬೇಕು. ಇದಕ್ಕಾಗಿ ರಕ್ಷಣಾ ಸಾಮಗ್ರಿಗಳ ಖರೀದಿ ನಿಯಮಾವಳಿಯನ್ನು ಬದಲಾಯಿಸಬೇಕು. ರಕ್ಷಣಾ ಸಾಮಗ್ರಿ ಪೂರೈಕೆ ಗುತ್ತಿಗೆಯನ್ನು ಖಾಸಗಿಯವರಿಗೆ ಕೊಡಲೇಬಾರದು. ಜೊತೆಗೆ ಕೇಂದ್ರ ಸರ್ಕಾರ ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನ ಕಿಲ್ ಮಾಡಲು ಹೊರಟಿದೆ. ಇದೇ ಕಾರಣಕ್ಕೆ ಇದೇ ತಿಂಗಳ ೨೨ ರಂದು ಎರಡು ದಿನಗಳ ಕಾಲ ಕಾರ್ಮಿಕರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ ಎಂದರು.

ಅಂತಿಮವಾಗಿ ಮಾತನಾಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಿಷ್ಟು,

‘ಆಧುನಿಕ ಭಾರತದ ಮಂದಿರಗಳಲ್ಲಿ ಒಂದಾದ ಹೆಚ್‌ಎಎಲ್ ಸಂಸ್ಥೆಯನ್ನು ಮುಗಿಸಲು ನಾವು ಬಿಡಲ್ಲ. ನಾಶ ಮಾಡಲಿಕ್ಕೆ ಬಿಡಲ್ಲ. ನಾನು ಇಲ್ಲಿಗೆ ರಾಜಕೀಯ ಮಾಡಲು, ರಾಜಕೀಯ ಮಾತನಾಡಲು ಬಂದಿಲ್ಲ. ಹೆಚ್‌ಎಎಲ್ ಸಾಮರ್ಥ್ಯ ಇಡೀ ದೇಶಕ್ಕೆ ಗೊತ್ತಿದೆ. ನ್ಯಾಟ್ ಯುದ್ಧ ವಿಮಾನದ ಬಗ್ಗೆ ನಾನು ಚಿಕ್ಕವನಿದ್ದಾಗ ಕೇಳಿದ್ದೇನೆ. ನ್ಯಾಟ್ ಹೆಚ್‌ಎಎಲ್ ಕೊಡುಗೆ. ನಿಮ್ಮ ನೋವಿನಲ್ಲಿ ನಾನೂ ಭಾಗಿಯಾಗ್ತೇನೆ. ಸಾರ್ವಜನಿಕ ಉದ್ದಿಮೆ ದೇಶದ ಆಸ್ತಿ. ಅದು ಬೆಂಗಳೂರಿನ ಆಸ್ತಿ. ಮಾಧ್ಯಮಗಳಿಗೆ ಇಂತಹ ವಿಚಾರ ಕೂಡ ಬೇಡವಾಗಿದೆ. ಇವರಿಗೆ ಬೇಕಿದ್ದರೂ, ಇವರ ಮೇಲಿರೋ ಬಾಸ್ ಗಳಿಗೆ ಬೇಡವಾಗಿದೆ. ನಮಗೆ ಹೆಚ್‌ಎಎಲ್ ಮೇಲೆ ನಂಬಿಕೆ ಇದೆ. ವಿಶ್ವಾಸ ಇದೆ. ನಾವು ಹೆಚ್‌ಎಎಲ್ ನಂಬುತ್ತೇವೆ. ಹೆಚ್‌ಎಎಲ್ ಸಂಸ್ಥೆಯನ್ನು ಮುಗಿಸಲು ಹೊರಟಿರೋದು ಯಾಕೆ?’

Leave a Reply