ಡಿಜಿಟಲ್ ಕನ್ನಡ ಟೀಮ್:
ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಜೆಡಿಎಸ್ ನಿಂದ ಶಿವರಾಮೇಗೌಡ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಇದರಿಂದ ಟಿಕೆಟ್ ನಿರೀಕ್ಷೆಯಲ್ಲಿದ್ದ ಲಕ್ಷ್ಮಿ ಅಶ್ವಿನ್ ಗೌಡ ಅವರಿಗೆ ತೀವ್ರ ನಿರಾಸೆಯಾಗಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸೂತ್ರದಲ್ಲಿ ಮಂಡ್ಯದಿಂದ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿತ್ತು. ಆದರೆ, ಜೆಡಿಎಸ್ ನಿಂದ ಚುನಾವಣೆಯಲ್ಲಿ ಸ್ಪರ್ಧಿಸುವವರು ಯಾರು? ಎಂಬುದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಆರಂಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅರ ಹೆಸರು ಕೇಳಿ ಬಂದಿತ್ತಾದರೂ ನಂತರ ಕುಟುಂಬ ರಾಜಕಾರಣದ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ನಿಖಿಲ್ ಹೆಸರು ಕೈಬಿಡಲಾಗಿತ್ತು.
ಆದರೆ ಮಾಜಿ ಐಪಿಎಸ್ ಅಧಿಕಾರಿ ಲಕ್ಷ್ಮಿ ಅಶ್ವಿನ್ ಗೌಡ ಅವರ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಇವರ ಜತೆಗೆ ಶಿವರಾಮೆ ಗೌಡ ಅವರ ಹೆಸರು ಕೇಳಿ ಬಂದಿತ್ತು. ಈಗ ಅಂತಿಮವಾಗಿ ಶಿವರಾಮೇಗೌಡರ ಹೆಸರು ಅಂತಿಮವಾಗಿರುವುದಾಗಿ ಮೂಲಗಳು ಮಾಹಿತಿ ನೀಡಿವೆ.
ಆದರೆ ರಾಜಕೀಯ ಗಂಧ ಗಾಳಿಯೂ ಗೊತ್ತಿಲ್ಲದೆ, ತಾನಾಯ್ತು ತನ್ನ ಪಾಡಾಯ್ತು ಎಂದು ಕೇಂದ್ರ ಸರ್ಕಾರದ ಉದ್ಯೋಗದಲ್ಲಿ ಲಕ್ಷ್ಮೀ ಅಶ್ವಿನ್ ಗೌಡ ಅವರನ್ನು ರಾಜಕೀಯವಾಗಿ ವಂಚಿಸಲಾಗಿದೆ ಅನ್ನೋ ಮಾತುಗಳು ಕೇಳಿಬಂದಿವೆ. ಕಳೆದ ಬಾರಿ ವಿಧಾನಸಭೆ ಚುನಾವಣೆ ಘೋಷಣೆಯಾಗುವ ಮೊದಲೇ ಲಕ್ಷ್ಮೀ ಅಶ್ವಿನ್ ಗೌಡ ಅವರನ್ನು ರಾಜೀನಾಮೆ ಕೊಡಿಸಿ ನಾಗಮಂಗಲ ರಾಜಕೀಯಕ್ಕೆ ಕರೆತರಲಾಯ್ತು. ಚಲುವರಾಯಸ್ವಾಮಿ ಪಕ್ಷ ತೊರೆಯುವ ಮುನ್ಸೂಚನೆ ಅರಿತ ಕುಮಾರಸ್ವಾಮಿ, ಚಲುವರಾಯಸ್ವಾಮಿ ಬದಲಿ ಅಭ್ಯರ್ಥಿ ಆಗಿ ಲಕ್ಷ್ಮೀ ಅಶ್ವಿನ್ ಗೌಡರನ್ನು ಗುರ್ತಿಸಿದ್ರು. ಆದ್ರೆ ಬದಲಾದ ರಾಜಕೀಯ ಲೆಕ್ಕಾಚಾರದಲ್ಲಿ ನಾಗಮಂಗಲ ಮಾಜಿ ಶಾಸಕ ಸುರೇಶ್ಗೌಡ ಜೆಡಿಎಸ್ ಸೇರಿದ್ರಿಂದ ವಿಧಾನಸಭಾ ಟಿಕೆಟ್ ಕೈತಪ್ಪಿತ್ತು. ಹೇಗಿದ್ದರೂ ರೈಲ್ವೇ ಇಲಾಖೆ ಹುದ್ದೆಯಲ್ಲಿ ಇದ್ದವರು ಲೋಕಸಭೆಗೆ ಹೋದರೆ ಪಕ್ಷದ ಉದ್ದೇಶಗಳನ್ನು ಕೇಂದ್ರಕ್ಕೆ ಮನವರಿಕೆ ಮಾಡಲು ಅನುಕೂಲ, ನಿಮ್ಮನ್ನು ಸಂಸದರನ್ನಾಗಿ ಮಾಡ್ತೇವೆ ಅನ್ನೋ ಭರವಸೆ ನೀಡಿದ್ರು. ಆದ್ರೀಗ ಎಲ್ಲವೂ ಹುಸಿಯಾಗಿದೆ.
ಕುಮಾರಸ್ವಾಮಿ ಅವರ ಭರವಸೆಯನ್ನು ವೇದವಾಕ್ಯ ಎಂಬುವ ಹಾಗೆ ನಂಬಿದ ಲಕ್ಷ್ಮೀ ಅಶ್ವಿನ್ ಗೌಡ, ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸುರೇಶ್ಗೌಡ ಗೆಲುವಿಗೆ ಪಣತೊಟ್ಟು ಕೆಲಸ ಮಾಡಿದ್ರು, ಬೃಹತ್ ಸಮಾವೇಶಗಳನ್ನು ನಡೆಸುವ ಮೂಲಕ ನಾಗಮಂಗಲ ಕ್ಷೇತ್ರದಲ್ಲಿ ಜೆಡಿಎಸ್ ಪರವಾದ ಬಿರುಗಾಳಿಯನ್ನೇ ಎಬ್ಬಿಸಿದ್ರು. ಜೆಡಿಎಸ್ ಭರ್ಜರಿಯಾಗಿ 52 ಸಾವಿರ ಮತಗಳ ಅಂತರದಲ್ಲಿ ಚಲುವರಾಯಸ್ವಾಮಿ ಅವರನ್ನು ಸೋಲಿಸಲು ಸಾಧ್ಯವಾಗಿತ್ತು. ಈ ಗೆಲುವಿನಲ್ಲಿ ಲಕ್ಷ್ಮೀ ಅಶ್ವಿನ್ ಗವಬಡ ಅವರ ಪಾತ್ರವೂ ಇದೇ ಅನ್ನೋದನ್ನು ಜೆಡಿಎಸ್ ನಾಯಕರೂ ಕೂಡ ಒಪ್ಪುತ್ತಾರೆ. ಆದ್ರೀಗ ಭರವಸೆಯಂತೆ ಸಂಸತ್ ಸದಸ್ಯೆಯನ್ನಾಗಿ ಮಾಡುವ ಮಾತನ್ನು ನಾಯಕರು ಉಳಿಸಿಕೊಳ್ಳಲಿಲ್ಲ. ಪರಿಷತ್ ಸದಸ್ಯರನ್ನಾಗಿ ಮಾಡುವ ಭರವಸೆ ಮೂಲಕ ಜೆಡಿಎಸ್ ಸೇರಿದ್ದ ಎಲ್.ಆರ್ ಶಿವರಾಮೇಗೌಡ ಅವರಿಗೆ ಮಣೆ ಹಾಕಲಾಗಿದೆ. ಇದ್ರಿಂದ ಲಕ್ಷ್ಮೀ ಅಶ್ವಿನ್ ಗೌಡ ತೀವ್ರವಾಗಿ ನೊಂದಿದ್ದಾರೆ ಎನ್ನಲಾಗ್ತಿದೆ. ಆಪ್ತರ ಎದುರು ಜೆಡಿಎಸ್ ನಾಯಕರ ವಂಚನೆಯ ಮಾತುಗಳ ಬಗ್ಗೆ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ.
ಕಳೆದೊಂದು ವರ್ಷದಿಂದ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಾನೇ ಎಂದು ಸಾಕಷ್ಟು ಓಡಾಟ ಮಾಡಿದ್ದ ಲಕ್ಷ್ಮೀ ಅಶ್ವಿನ್ ಗೌಡ ಭಾವುಕರಾಗೋದ್ರಲ್ಲಿ ಯಾವುದೇ ಅಚ್ಚರಿಯಿಲ್ಲ. ಆದ್ರೆ ಲಕ್ಷ್ಮಿ ಅಶ್ವಿನ್ ಗೌಡ ಅವರಿಗೆ ಜೆಡಿಎಸ್ ವರಿಷ್ಠರು ಕೈಕೊಟ್ಟಿದ್ದು, ಯಾವ ಮಾತನ್ನು ಹೇಳಿ ಸಮಾಧಾನ ಮಾಡಿದ್ದಾರೆ ಅನ್ನೋದು ಗೊತ್ತಾಗಬೇಕಿದೆ. ಈಗಾಗಲೇ ಬಿಜೆಪಿ ನಾಯಕರು ಲಕ್ಷ್ಮೀ ಅಶ್ವಿನ್ ಗೌಡ ಅವರನ್ನು ಸಂಪರ್ಕ ಮಾಡಲು ಯತ್ನಿಸಿದ್ದು, ರಾಮನಗರದಲ್ಲಿ ಕಾಂಗ್ರೆಸ್ ನಾಯಕನ್ನು ಸೆಳೆದು ಅಭ್ಯರ್ಥಿ ಮಾಡಿ ರೀತಿಯಲ್ಲೇ ಮಂಡ್ಯದಲ್ಲಿ ಜೆಡಿಎಸ್ ನಾಯಕಿಯನ್ನು ಸೆಳೆದು ಅಭ್ಯರ್ಥಿ ಮಾಡಿದರೂ ಅಚ್ಚರಿಯಿಲ್ಲ. ಒಂದು ವೇಳೆ ಲಕ್ಷ್ಮೀ ಅಶ್ವಿನ್ ಗೌಡ ಮಂಡ್ಯದಲ್ಲಿ ಬಂಡಾಯದ ಬಾವುಟ ಹಾರಿಸಿ ಬಿಜೆಪಿಗೆ ಹೋದರೆ, ಮಂಡ್ಯ ರಾಜಕಾರಣದಿಂದ ಸಾಕಷ್ಟು ವರ್ಷಗಳ ಹಿಂದೆಯೇ ದೂರವಾಗಿರುವ ಶಿವರಾಮೇಗೌಡರು ಗೆಲ್ಲುವುದು ಕಷ್ಟ ಕಷ್ಟ ಎನ್ನುವುದು ಸತ್ಯ.