ಉಗ್ರಪ್ಪ ಬಳ್ಳಾರಿಗೆ ಅನಿರೀಕ್ಷಿತ ಕೈ ಅಭ್ಯರ್ಥಿ; ಭಿನ್ನಮತ ನಿವಾರಣೆಗೆ ‘ಮಾಸ್ಟರ್ ಸ್ಟ್ರೋಕ್’!

ಡಿಜಿಟಲ್ ಕನ್ನಡ ಟೀಮ್:

ಅನಿರೀಕ್ಷಿತ ಬೆಳವಣಿಗೆಯಲ್ಲಿ ಮೇಲ್ಮನೆ ಸದಸ್ಯ ವಿ.ಎಸ್. ಉಗ್ರಪ್ಪ ಅವರು ಬಳ್ಳಾರಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.

ಕಾಂಗ್ರೆಸ್ ಕೇಂದ್ರ ಚುನಾವಣೆ ಸಮಿತಿ ಅಂತಿಮ ಕ್ಷಣದಲ್ಲಿ ಉಗ್ರಪ್ಪನವರ ಹೆಸರು ಅಂತಿಮಗೊಳಿಸಿದ್ದು, ಬಳ್ಳಾರಿಯಲ್ಲಿ ಸಂಭವನೀಯ ಭಿನ್ನಮತ ನಿವಾರಣೆ ತಂತ್ರಗಾರಿಕೆ ಈ ಅನಿರೀಕ್ಷಿತ ಆಯ್ಕೆಯ ಹಿಂದಿದೆ. ಜಮಖಂಡಿ ವಿಧಾನಸಭೆ ಕ್ಷೇತ್ರಕ್ಕೆ ನಿರೀಕ್ಷೆಯಂತೆ ಆನಂದ ನ್ಯಾಮಗೌಡ ಅಧಿಕೃತ ಅಭ್ಯರ್ಥಿಯಾಗಿದ್ದಾರೆ.

ಬಳ್ಳಾರಿಯಲ್ಲಿ ಶಾಸಕ ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್ ಅವರನ್ನು ಅಭ್ಯರ್ಥಿ ಮಾಡಲು ಕಸರತ್ತು ನಡೆದಿತ್ತು. ಆದರೆ ಇದಕ್ಕೆ ಸ್ಥಳೀಯ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಮಧ್ಯೆ, ತಮ್ಮ ಸಂಬಂಧಿ ದೇವೇಂದ್ರಪ್ಪ ಅವರನ್ನು ಅಭ್ಯರ್ಥಿ ಮಾಡಲು ರಮೇಶ್ ಹಾಗೂ ಸತೀಶ್ ಜಾರಕಿಹೊಳಿ ಸಹೋದರರು ಪ್ರಯತ್ನಪಟ್ಟಿದ್ದರು. ಇದಕ್ಕೂ ಸ್ಥಳೀಯ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಒಬ್ಬರಿಗೆ ಟಿಕೆಟ್ ಕೊಟ್ಟರೆ ಮತ್ತೊಬ್ಬರಿಗೆ ಆಗದ ಪರಿಸ್ಥಿತಿ. ಇದರಿಂದ ಬಳ್ಳಾರಿ ಕಾಂಗ್ರೆಸ್ನಲ್ಲಿ ಗೊಂದಲ ಸೃಷ್ಟಿಯಾಗಿತ್ತು.

ಇದೀಗ ವಿ.ಎಸ್. ಉಗ್ರಪ್ಪ ಅವರ ಆಯ್ಕೆಯಿಂದಾಗಿ ಬಳ್ಳಾರಿ ಕಾಂಗ್ರೆಸ್ ಶಾಸಕರು ಒಟ್ಟಾಗಿ ಶ್ರಮಿಸುವುದು ಅನಿವಾರ್ಯವಾಗಿದೆ. ಸಂಪುಟ ವಿಸ್ತರಣೆ ಹತ್ತಿರದಲ್ಲೇ ಇದ್ದು, ಸಚಿವ ಸ್ಥಾನಾಕಾಂಕ್ಷಿಗಳು ಬಳ್ಳಾರಿಯಲ್ಲಿ ಸಾಕಷ್ಟು ಮಂದಿ ಇರುವುದರಿಂದ ಅವರೆಲ್ಲರೂ ಅಧಿಕೃತ ಅಭ್ಯರ್ಥಿ ಪರ ಕೆಲಸ ಮಾಡಲೇಬೇಕಿದೆ. ಇಲ್ಲದಿದ್ದರೆ ಸಂಪುಟ ವಿಸ್ತರಣೆಯಲ್ಲಿ ಕೊಕ್ಕೆ ಬೀಳಲಿದೆ. ಈ ಎಲ್ಲ ಸಾಧಕ-ಬಾಧಕಗಳನ್ನು ಮುಂದಿಟ್ಟುಕೊಂಡು ಉಗ್ರಪ್ಪ ಅವರನ್ನು ಅಭ್ಯರ್ಥಿ ಮಾಡಿರುವ ಹೈಕಮಾಂಡ್ ಒಂದೇ ಕಲ್ಲಿನಲ್ಲಿ ಭಿನ್ನಮತದ ಎಲ್ಲ ಹಕ್ಕಿಗಳನ್ನು ಹೊಡೆದುರುಳಿಸಿದೆ.

Leave a Reply