ಅನಿತಾ ಸ್ಪರ್ಧೆ ನನ್ನ ನಿರ್ಧಾರವಲ್ಲ; ಕುಮಾರಸ್ವಾಮಿ

ಡಿಜಿಟಲ್ ಕನ್ನಡ ಟೀಮ್:

ಈಗಿನ ಮರುಚುನಾವಣೆ ಮುಂದಿನ ವರ್ಷ ನಡೆವ ಲೋಕಸಭೆ ಚುನಾವಣೆಯ ಸೆಮಿಫೈನಲ್. ಇದೊಂದು ಅಪವಿತ್ರ ಮೈತ್ರಿ ಸರಕಾರ ಅಂತ ಬಿಜೆಪಿಯವರು ಕಠೋರವಾಗಿ ಟೀಕಿಸಿದ್ದಾರೆ. ಇದು ಪವಿತ್ರನಾ, ಅಪವಿತ್ರನಾ ಅಂಥ ಈಗಿನ ಚುನಾವಣೆಯಲ್ಲಿ ಜನರೇ ನಿರ್ಧರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಅಲ್ಪಾವಧಿ ಮಾತ್ರ ಬಾಕಿ ಇರುವ ಕರ್ನಾಟಕದ 3 ಲೋಕಸಭೆ ಕ್ಷೇತ್ರಗಳ ಮರುಚುನಾವಣೆ ಯಾರಿಗೂ ಬೇಕಿರಲಿಲ್ಲ. ಆದರೆ  ಚುನಾವಣೆಯನ್ನು ಬಲವಂತವಾಗಿ ಹೇರಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ರಾಮನಗರದಲ್ಲಿ ಅನಿತಾ ಅವರು ನಿಲ್ಲಬೇಕು ಅನ್ನೋದು ನನ್ನ ತೀರ್ಮಾನ ಅಲ್ಲ. ಕ್ಷೇತ್ರದ ಜನರ ನಿರ್ಧಾರ. ರಾಮನಗರದಿಂದ ನಿಮ್ಮ ಕುಟುಂಬದವರೇ ಸ್ಪರ್ಧಿಸುವುದಾದರೆ ಮಾತ್ರ ಚನ್ನಪಟ್ಟಣ ಉಳಿಸಿಕೊಳ್ಳಿ ಎಂದು ಇಲ್ಲಿನ ಜನ ಹೇಳಿದ್ದರು. ಅವರು ಒಪ್ಪಿದ ಮೇಲೆಯೇ ನಾನು ಚನ್ನಪಟ್ಟಣಕ್ಕೆ ಹೋದದ್ದು. ಅವರ ಆಶಯದಂತೆ ಈಗ ಅನಿತಾ ಅಲ್ಲಿ ಸ್ಪರ್ಧಿಸುತ್ತಿದ್ದಾರೆಯೇ ಹೊರತು ಇದರಲ್ಲಿ ನನ್ನ ಪಾತ್ರವೇನೂ ಇಲ್ಲ ಎಂದು ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮೂರು ಲೋಕಸಭೆ, ಎರಡು ವಿಧಾನಸಭೆ ಕ್ಷೇತ್ರಗಳಿಗೆ ಮರುಚುನಾವಣೆ ನಡೆಯುತ್ತಿದೆ. ಮಂಡ್ಯ, ಶಿವಮೊಗ್ಗ ಲೋಕಸಭೆ ಕ್ಷೇತ್ರ, ರಾಮನಗರ ವಿಧಾನಸಭೆ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಬಳ್ಳಾರಿ ಲೋಕಸಭೆ ಕ್ಷೇತ್ರ, ಜಮಖಂಡಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತಿದೆ. ಮಂಡ್ಯದಲ್ಲಿ ಶಿವರಾಮೇಗೌಡ, ಶಿವಮೊಗ್ಗದಲ್ಲಿ ಮಧುಬಂಗಾರಪ್ಪ ಹಾಗೂ ರಾಮನಗರದಲ್ಲಿ ಅನಿತಾ ಅಭ್ಯರ್ಥಿ ಆಗಲಿದ್ದಾರೆ ಎಂದು ತಿಳಿಸಿದರು.

Leave a Reply