ಪಿಎ ಕೈಲಿ ಕಾಲಿಗೆ ಮೆಟ್ಟಾಕಿಸಿಕೊಂಡ ಮಿನಿಸ್ಟ್ರು ಪುಟ್ಟರಂಗಶೆಟ್ಟಿ!

ಡಿಜಿಟಲ್ ಕನ್ನಡ ಟೀಮ್:

ಯಾರ್ಯಾರಿಗೇ ಯಾವ್ಯಾವಾಗ ಬುದ್ಧಿ ಕೈಕೊಡುತ್ತೋ, ಇಲ್ಲ ಅವರ ಬುದ್ಧಿ ಕತ್ತೆ ಮೇಯಿಸೋಕೆ ಹೋಗುತ್ತೋ ಗೊತ್ತಿಲ್ಲ. ಕಂದಾಚಾರ, ಗುಲಾಮಗಿರಿ ವಿರುದ್ಧ ಬಂಡಿಗಟ್ಟಲೇ ಮಾತಾಡುತ್ತಿದ್ದ ಸಚಿವ ಪುಟ್ಟರಂಗಶೆಟ್ಟಿ ಅವರು ಆಪ್ತ ಕಾರ್ಯದರ್ಶಿ ಕೈಲಿ ಕಾಲಿಗೆ ಚಪ್ಪಲಿ ಹಾಕಿಸಿಕೊಂಡು ವಿವಾದ ಸೃಷ್ಟಿಸಿದ್ದಾರೆ.

ಆಗಿದ್ದೇನಪ್ಪಾ ಅಂತಂದ್ರೇ.? ಚಾಮರಾಜನಗರದಲ್ಲಿ ಇವತ್ತು ಸೋಮವಾರ ರೈತ ದಸರಾ ಕಾರ್ಯಕ್ರಮವಿತ್ತು. ಗರಿಗರಿ ಬಿಳಿ ವಸ್ತ್ರ ತೊಟ್ಟು ಅಲಂಕೃತ ಬಂಡಿ ಹತ್ತುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಪುಟ್ಟರಂಗಶೆಟ್ಟಿ ಅವರು, ಅದಕ್ಕೆ ಮೊದಲು ಚಪ್ಪಲಿ ಬಿಚ್ಚಿಟ್ಟರು. ಅವರ ಪಿಎ ಅದನ್ನು ಕೈಗೆತ್ತಿಕೊಂಡರು. ಬಂಡಿ ಇಳಿದ ನಂತರ ಸಚಿವರ ಕಾಲಿಗೆ ಪಿಎ ಚಪ್ಪಲಿ ಹಾಕಿದರು. ಪುಟ್ಟರಂಗಶೆಟ್ಟರು ಯಾವುದೇ ಮುಜುಗರವಿಲ್ಲದೆ ಚಪ್ಪಲಿ ಹಾಕಿಸಿಕೊಂಡು ಮುನ್ನಡೆದರು.

ಹಿರಿಯ ಕಾಂಗ್ರೆಸ್ ಮುಖಂಡರು, ಮೂರು ಬಾರಿ ಶಾಸಕರಾಗಿರುವ ಪುಟ್ಟರಂಗಶೆಟ್ಟರು ಬಹಳ ಸರಳ, ಸಜ್ಜನ ಅಂತೆಲ್ಲ ಕರೆಸಿಕೊಂಡಿದ್ದರು. ಎರಡು ದಿನ ಮೊದಲಷ್ಟೇ ಸಚಿವ ಪದವಿಗೆ ರಾಜೀನಾಮೆ ನೀಡಿದ ಚಾಮರಾಜನಗರ ಜಿಲ್ಲೆಯವರೇ ಆದ ಎನ್. ಮಹೇಶ್ ಹಿಂದೆ ಸ್ವಾಮೀಜಿಯೊಬ್ಬರ ಪಾದುಕೆ ಹಿಡಿದುಕೊಂಡದ್ದಕ್ಕೆ ಇದೇ ಪುಟ್ಟರಂಗಶೆಟ್ಟರು ವಾಚಾಮಗೋಚರ ನಿಂದಿಸಿದ್ದರು. ಬೇರೆಯವರ ಎಕ್ಕಡ ಹಿಡಿವ ಮಹೇಶ್ ಮಂತ್ರಿ ಆಗಲು ಆಯೋಗ್ಯರು ಎಂಬರ್ಥದಲ್ಲಿ ಟೀಕಿಸಿದ್ದರು. ಇವತ್ತು ಅದೇ ಪುಟ್ಟರಂಗಶೆಟ್ಟರು ಪಿಎ ಕೈಲಿ ಎಕ್ಕಡ ಹಾಕಿಸಿಕೊಂಡು ಆಡೋದೊಂದು ಮಾಡೋದೊಂದು ಎಂಬುದನ್ನು ಸಾಬೀತು ಮಾಡಿದ್ದಾರೆ.

Leave a Reply