ಡಿಕೆಶಿ, ಉಗ್ರಪ್ಪ ಅಡ್ರೆಸ್ ಕೇಳಿ ಮೈಮೇಲೆ ಕೆಂಡ ಸುರಿದುಕೊಂಡಿರುವ ರಾಮುಲು!

ದುರ್ಗ

ರಾಜ್ಯದ ಮೂರು ಲೋಕಸಭೆ ಕ್ಷೇತ್ರ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳಲ್ಲಿ ಮರುಚುನಾವಣೆ ನಡೆಯುತ್ತಿದೆ. ಉಳಿದ ಕ್ಷೇತ್ರಗಳ ಗತ್ತೇ ಒಂದಾದರೆ, ಬಳ್ಳಾರಿ ಲೋಕಸಭೆ ಕ್ಷೇತ್ರದ ಗಮ್ಮತ್ತೇ ಬೇರೆ. ಹಿಂದೆ ಬಳ್ಳಾರಿ ಗಣಿಗಳಿಂದ ಚಿಮ್ಮುತ್ತಿದ್ದ ಕೆಂದೂಳನ್ನೂ ಪಕ್ಕಕ್ಕಿಡುವಷ್ಟರ ಮಟ್ಟಿಗೆ ಚುನಾವಣೆ ಕಾವು ನಭಗಟ್ಟುತ್ತಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಉಪಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿಸಿಕೊಂಡಿದ್ದ ಶ್ರೀರಾಮುಲು ತಮ್ಮದೇ ಆದ ತೆಲುಗುಬೆರಕೆ ಕನ್ನಡದಲ್ಲಿ ಉದುರಿಸುತ್ತಿರುವ ಅಣಿಮುತ್ತುಗಳು ಎದುರಾಳಿ ಕಾಂಗ್ರೆಸ್ ನಾಯಕರನ್ನು ನೆಲಕೆರೆದು ಮುನ್ನುಗ್ಗುವಂತೆ ಮಾಡುತ್ತಿದೆ. ಮದವೇರಿದ ಎರಡು ಗೂಳಿಗಳು ಪರಸ್ಪರ ತಲೆಗುದ್ದಿಕೊಳ್ಳುತ್ತಿರುವುದರಿಂದ ಬಳ್ಳಾರಿ ಕಣ ರಣಗುಟ್ಟುತ್ತಿದೆ.

ಜಾತಿ ಮತ್ತು ಪ್ರದೇಶ ಮುಂದಿಟ್ಟುಕೊಂಡು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ತಡವಿಕೊಂಡಿದ್ದ ರಾಮುಲು ಈಗ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಅವರ ಮೇಲೂ ಅದೇ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಆದರೆ ಶಿವಕುಮಾರ್ ಹಾಗೂ ಉಗ್ರಪ್ಪ ಇಬ್ಬರೂ ಪ್ರತ್ಯಸ್ತ್ರ ಬಿಟ್ಟಿರುವುದರಿಂದ ರಾಮುಲು ಸಮರ್ಥನೆಯ ಶಬ್ದಗಳಿಗಾಗಿ ತಡಕಾಡುತ್ತಿದ್ದಾರೆ.

ಶಿವಕುಮಾರ್ ಆಟವೇನಿದ್ದರೂ ಕನಕಪುರದಲ್ಲಿ ಮಾತ್ರ. ಬಳ್ಳಾರಿಯಲ್ಲಿ ಗೌಡರ ಆಟ ನಡೆಯೋದಿಲ್ಲ. ಉಗ್ರಪ್ಪ ಅವರಿಗೆ ಬಳ್ಳಾರಿಯಲ್ಲಿ ಅಡ್ರಸ್ಸೇ ಇಲ್ಲ ಎಂದು ಕೆಣಕಿದ್ದ ರಾಮುಲು ಅವರನ್ನು ಎದುರಾಳಿಗಳು ಸರಿಯಾಗಿಯೇ ಕುಟುಕಿದ್ದಾರೆ. ರಾಮುಲು ಬಹಳ ದೊಡ್ಡ ಮನುಷ್ಯರು. ಶ್ರೀರಾಮನ ಅಪರಾವತಾರ. ನಾವು ಸಾಮಾನ್ಯ ಕಾರ್ಯಕರ್ತರು. ಪಾಪ ಬಳ್ಳಾರಿ ಗ್ರಾಮಾಂತರ ಕ್ಷೇತ್ರ ಬಿಟ್ಟು ಮೊಳಕಾಲ್ಮೂರಿಗೆ ಓಡಿಹೋಗೋದಿಕ್ಕೆ ಏನು ಕಾರಣವಿತ್ತೋ ಗೊತ್ತಿಲ್ಲ. ಬಳ್ಳಾರಿ ಜನಕ್ಕೆ ಕಾರಣ ಗೊತ್ತಿದೆ. ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ ಎಂದು ಶಿವಕುಮಾರ್ ವ್ಯಂಗ್ಯಸ್ತ್ರದಿಂದ ಚುಚ್ಚಿದ್ದಾರೆ.

ಇನ್ನೊಂದು ಕಡೆ ಖಡಕ್ ಮಾತಿಗೆ ಹೆಸರಾದ ಉಗ್ರಪ್ಪ ಅವರಂತೂ ರಾಮುಲು ರಾಜಕೀಯ ಜನ್ಮ ಜಾಲಾಡಿದ್ದಾರೆ. ನನ್ನ ಅಡ್ರೆಸ್ ಕೇಳೋ ರಾಮುಲು ಮೊಳಕಾಲ್ಮೂರು, ಬಾದಾಮಿಯಲ್ಲಿ ಯಾವ ಅಡ್ರೆಸ್ ಇಟ್ಟುಕೊಂಡಿದ್ದಾರೆ ಎಂಬುದನ್ನು ಮೊದಲು ಹೇಳಲಿ. ಬಳ್ಳಾರಿ ಬಿಟ್ಟು ಅಲ್ಯಾಕೆ ಹೋಗಿ ನಿಂತರು ಎಂಬುದನ್ನು ವಿವರಿಸಲಿ. ಅವರ ಪಕ್ಷದ ರಾಷ್ಟ್ರೀಯ ನಾಯಕಿ ಸುಷ್ಮಾ ಸ್ವರಾಜ್ ಅವರು ಬಳ್ಳಾರಿಯಲ್ಲಿ ಬಂದು ನಿಂತಿದ್ದರಲ್ಲ ಅವರಿಗೆ ಇಲ್ಲಿ ಯಾವ ಅಡ್ರೆಸ್ ಇತ್ತು ಎಂಬುದನ್ನು ಹೇಳಲಿ ಎಂದು ನಾಲಗೆಯನ್ನೇ ಕತ್ತಿ ಮಾಡಿಕೊಂಡು ರಾಮಲು ಜಾತಕ ಕತ್ತರಿಸಿಟ್ಟಿದ್ದಾರೆ.

ಬಳ್ಳಾರಿ ಜಿಲ್ಲೆಗೆ ರಾಮುಲು, ರೆಡ್ಡಿ ಸಹೋದರರ ಕೊಡುಗೆ ಏನು ಗಣಿ ಲೂಟಿ ಮಾಡಿದ್ದು ಬಿಟ್ಟರೆ ಅವರ ಸಾಧನೆ ಏನು ಬಳ್ಳಾರಿಯನ್ನು ಹಾಳು ಮಾಡಿ, ಇಲ್ಲಿನ ಜನರಿಗೆ ಮುಖ ತೋರಿಸಲಾಗದೆ ಪಲಾಯನ ಮಾಡಿರುವವರಿಗೆ ಬೇರೆಯವರನ್ನು ಪ್ರಶ್ನೆ ಮಾಡುವ ನೈತಿಕ ಹಕ್ಕೆಲ್ಲಿದೆ ಎಂದು ಪ್ರಶ್ನಿಸಿದ್ದಾರೆ. ಈಗಷ್ಟೇ ಶುರುವಾಗಿರುವ ವಾಗ್ಸಮರ ದಿನಗಳೆದಂತೆ ಅಗ್ನಿಪರ್ವತದ ಸ್ವರೂಪ ಪಡೆದುಕೊಳ್ಳಲಿದ್ದು, ಉಲ್ಕಾಪಾತದಲ್ಲಿ ಸಾಕಷ್ಟು ಕಿಡಿಗಳು ಸಿಡಿಯುವ ಲಕ್ಷಣಗಳು ದಟ್ಟವಾಗಿವೆ.

ನಿಜ, ಗಣಿ ಅಕ್ರಮದಿಂದ ಜೈಲುಪಾಲಾಗಿ ಗಡೀಪಾರು ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಚಿವ ಜನಾರ್ದನರೆಡ್ಡಿ ಬಳ್ಳಾರಿಗೆ ಕಾಲಿಡದ ಪರಿಸ್ಥಿತಿಯ ಸದ್ಬಳಕೆ ಮಾಡಿಕೊಂಡಿರುವ ಶ್ರೀರಾಮುಲು ಸದ್ಯಕ್ಕೆ ಜಿಲ್ಲೆಯ ಬಿಜೆಪಿ ಕಾಲಾಳು. ಅಲ್ಲಿ ಪಕ್ಷ ಮುನ್ನಡೆಸುತ್ತಿರುವವರು ಅವರೇ. ಹಿಂದೆ ಮಾಡಿಕೊಂಡಿರುವ ಸ್ವಯಂಕೃತ ಅಪರಾಧಗಳಿಂದ ಬಳ್ಳಾರಿಯಿಂದ ಪಲಾಯನ ಮಾಡಿ ಬೇರೆ ಕಡೆ ರಾಜಕೀಯ ಆಶ್ರಯ ಪಡೆದುಕೊಂಡಿರುವ ರಾಮುಲುವಿಗೆ ಮತ್ತೆ ಜಿಲ್ಲೆಯೊಳಗೆ ಹಳೇ ರಾಜಕೀಯ ವೈಭವ ಮರುಪ್ರತಿಷ್ಠಾಪನೆ ಮಾಡಿಕೊಳ್ಳುವ ಹಪಾಹಪಿ. ಹೀಗಾಗಿಯೇ ತಮ್ಮ ಸಹೋದರಿ ಜೆ. ಶಾಂತಾ ಅವರನ್ನು ಮತ್ತೆ ಕಣಕ್ಕೆ ಇಳಿಸಿದ್ದಾರೆ. ಆದರೆ ಕಳೆದ ಎಂಟು ವರ್ಷಗಳಲ್ಲಿ ವಿನಾಕಾರಣ ಮೂರು ಬಾರಿ ಮರುಚುನಾವಣೆಗೆ ಕಾರಣರಾಗಿರುವ ರಾಮುಲು ಅವರ ತೊಗಲಕ್ ದರ್ಬಾರಿನ ನಿಲುವುಗಳು ಜಿಲ್ಲೆಯ ಜನರಿಗೆ ಬೇಸರ ತರಿಸಿವೆ. ರಾಮುಲು ಮತ್ತು ಅವರ ಸಹೋದರಿ ಶಾಂತಾ ಪರಸ್ಪರ ಕೊಕ್ ಕೊಟ್ಟುಕೊಂಡು ಮೂರು ಬಾರಿ ಮರುಚುನಾವಣೆಯನ್ನು ಜನರ ತಲೆ ಮೇಲೆ ಹೇರಿದ್ದಾರೆ. ಈಗ ನಡೆಯುತ್ತಿರುವ ಚುನಾವಣೆಯೂ ರಾಮುಲು ಅವರ ಅಂಥದ್ದೇ ನಿಲುವಿನ ಕೂಸು. ಜನರಿಗೆ ತಮ್ಮ ಮೇಲೆ ವಿಶ್ವಾಸ ಇಲ್ಲ ಎನ್ನುವ ಕಾರಣಕ್ಕೆ ರಾಮುಲು ಜಿಲ್ಲೆ ಬಿಟ್ಟು ಬೇರೆ ಕಡೆ ಪಲಾಯನ ಮಾಡಿದ್ದು. ಈಗ ಜಾತಿ, ಊರು-ಕೇರಿ ಮುಂದಿಟ್ಟುಕೊಂಡು ಬಳ್ಳಾರಿ ಜನರನ್ನು ಎಮೋಷನಲ್ ಬ್ಲಾಕ್ ಮೇಲ್ ಮಾಡಲು ಹೊರಟಿದ್ದಾರೆ. ಆದರೆ ಜಿಲ್ಲೆಯ ಜನ ಗಣಿ ಬಳಗ ಇಲ್ಲಿನ ಒಡಲಿನಿಂದ ಬಗೆದ ಕಬ್ಬಿಣದಿಂದಲೇ ಎಳೆದಿರುವ ಹಳೇ ಬರೆಗಳನ್ನು ಮರೆತಿಲ್ಲದ ಕಾರಣ ಚುನಾವಣೆ ಪ್ರತಿಷ್ಠೆ ಸಮರವಾಗಿ ಪರಿಣಮಿಸಿದೆ.

ರಾಮುಲು ಮತ್ತವರ ಪಟಾಲಂಗೆ ಬಳ್ಳಾರಿ ಜಿಲ್ಲೆ ಕಾಂಗ್ರೆಸ್ ಮುಖಂಡರಲ್ಲಿ ಅಭ್ಯರ್ಥಿ ಆಯ್ಕೆ ಸಂಬಂಧ ಉಂಟಾಗಿದ್ದ ಭಿನ್ನಮತ ವರವಾಗಿ ಪರಿಣಮಿಸುತ್ತದೆ ಎಂಬ ಭರವಸೆ ಇತ್ತು. ಹಾಲಿ ಶಾಸಕ ನಾಗೇಂದ್ರ ಅವರ ಸಹೋದರ ವೆಂಕಟೇಶ್ ಪ್ರಸಾದ್ ಅಭ್ಯರ್ಥಿ ಮಾಡಲು ಸ್ಥಳೀಯ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಇದೇ ತಮ್ಮ ಗೆಲುವಿನ ಸೋಪಾನ ಆಗಲಿದೆ ಎಂದು ರಾಮುಲು ಕನಸು ಕಟ್ಟಿದರು. ನಾಗೇಂದ್ರ ಶಾಸಕ, ಅವರ ಸಹೋದರ ಸಂಸದರಾಗಿಬಿಟ್ಟರೆ ಜಿಲ್ಲೆಯಲ್ಲಿ ಅವರ ಸಾಮರ್ಥ್ಯ ಹೆಚ್ಚುತ್ತದೆ. ಪಕ್ಷದ ಮೇಲೆ ಹಿಡಿತ ಸಾಧಿಸುತ್ತಾರೆ ಎಂಬುದು ಸ್ಥಳೀಯ ಮುಖಂಡರ ಆತಂಕವಾಗಿತ್ತು. ಹೀಗಾಗಿ ಬಹಿರಂಗವಾಗಿಯೇ ಅವರು ವೆಂಕಟೇಶ ಪ್ರಸಾದ್ ಉಮೇದುವಾರಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಬುದ್ಧಿ ಉಪಯೋಗಿಸಿ ಬಳ್ಳಾರಿಗೆ ಹೊಂದಿಕೊಂಡಿರುವ ಪಾವಗಡ ಮೂಲದ, ವಿಧಾನ ಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ ಅವರನ್ನು ಅಭ್ಯರ್ಥಿ ಆಗುವಂತೆ ನೋಡಿಕೊಂಡಾಗ ಬಿಜೆಪಿ ಕನಸಿನ ಕೋಟೆ ಅರ್ಧ ಬಿದ್ದು ಹೋಯಿತು. ಈಗ ಬಳ್ಳಾರಿ ಕಾಂಗ್ರೆಸ್ ಶಾಸಕರು ಮತ್ತು ಇತರ ಮುಖಂಡರು ಉಗ್ರಪ್ಪ ಉಮೇದುವಾರಿಕೆ ವಿರೋಧಿಸಲು ಯಾವುದೇ ಕಾರಣವಿಲ್ಲ. ಜತೆಗೆ ಸಂಪುಟ ವಿಸ್ತರಣೆ ಬೇರೆ ಬಾಕಿ ಉಳಿದಿದೆ. ಹೀಗಾಗಿ ಜಿಲ್ಲೆಯ ಕಾಂಗ್ರೆಸ್ ಶಾಸಕರು ಉಗ್ರಪ್ಪ ಪರವಾಗಿ ಕೆಲಸ ಮಾಡುವುದು ಅನಿವಾರ್ಯವಾಗಿದೆ. ತಮ್ಮ ಸಹೋದರಿ ಗೆಲವು ಸರಾಗ ಮಾರ್ಗ ಎಂದುಕೊಂಡಿದ್ದ ರಾಮುಲುವಿಗೆ ಕಬ್ಬಿಣದ ಸಲಾಕೆಯಾಗಿ ಪರಿಣಮಿಸಿದೆ. ಚುನಾವಣೆಗೂ ನಿಜ ಅರ್ಥದಲ್ಲಿ ಗತ್ತು ತಂದಿದೆ.

Leave a Reply