ಮಹಿಳೆಯರೇ ಹೃದಯ ಸಂಬಂಧಿ ಸಮಸ್ಯೆ ನಿರ್ಲಕ್ಷಿಸದಿರಿ!

~ ~

ಡಾ.ಬಿ.ರಮೇಶ್

ಮಹಿಳೆಯರಲ್ಲಿ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಕಡಿಮೆ ಎಂದು ಜನರು ಭಾವಿಸುತ್ತಾರೆ. ಆದರೆ ಇದು ಸ್ತನ ಕ್ಯಾನ್ಸರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರನ್ನು ತೊಂದರೆಗೀಡು ಮಾಡುತ್ತಿದೆ.

ಪುರುಷ ಹಾಗೂ ಮಹಿಳೆಯರಲ್ಲಿ ಹೃದ್ರೋಗದ ಲಕ್ಷಣಗಳು ಸ್ವಲ್ಪ ಭಿನ್ನರೀತಿಯಲ್ಲಿ ಗೋಚರಿಸುತ್ತವೆ. ಪುರುಷನಿಗೆ ಹೃದಯದಲ್ಲಿ ಒಮ್ಮೆಲೆ ಹಿಂಡಿದಂತೆ ನೋವು ಉಂಟಾದರೆ, ಮಹಿಳೆಯರಲ್ಲಿ ಚಿಕ್ಕಚಿಕ್ಕ ರಕ್ತನಾಳಗಳಲ್ಲಿ ಅಡೆತಡೆ ಉಂಟಾಗಿ ಹೃದ್ರೋಗಕ್ಕೆ ಕಾರಣವಾಗುತ್ತದೆ. ಹಾಗೆ ನೋಡಿದರೆ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಲ್ಲಿಯೇ ಹೃದಯದ ತೊಂದರೆಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತವೆ.

ಪುರುಷರು ತಮ್ಮ ಹೃದಯದಲ್ಲಿ ಸಣ್ಣಪುಟ್ಟ ವ್ಯತ್ಯಾಸವಾದರೂ ತಕ್ಷಣವೇ ಮನೆಯವರ ಗಮನಕ್ಕೆ ತರುತ್ತಾರೆ, ವೈದ್ಯರ ಬಳಿ ಧಾವಿಸುತ್ತಾರೆ. ಆದರೆ ಮಹಿಳೆ ಮಾತ್ರ ಹಾಗೆ ಮಾಡುವುದಿಲ್ಲ. ಆಕೆ ಹೃದಯದಲ್ಲಿ ಉಂಟಾಗುವ ಸಣ್ಣಪುಟ್ಟ ನೋವುಗಳನ್ನು ಹೇಳಿಕೊಳ್ಳುವುದೇ ಇಲ್ಲ. ತಪಾಸಣೆ ಮಾಡಿಸಿ ಕೊಳ್ಳುವುದಿಲ್ಲ. ಚಿಕಿತ್ಸೆಗೆ ಮುಂದಾಗುವುದಿಲ್ಲ. ಇದೆಲ್ಲದರ ಒಟ್ಟು ಪರಿಣಾಮ ಹೃದಯ ರೋಗ ಆಕೆಯನ್ನು ತನ್ನ ಕಪಿಮುಷ್ಟಿಗೆ ತೆಗೆದುಕೊಂಡು ಬಿಡುತ್ತದೆ.

ಮನೆಯವರೆಲ್ಲರ ಕಾಳಜಿವಹಿಸುವ ಮಹಿಳೆ ತನ್ನಹೃದಯಕ್ಕೆ ಸಂಬಂಧಪಟ್ಟ ತೊಂದರೆಗಳನ್ನು ನಿರ್ಲಕ್ಷಿಸಿಬಿಡುತ್ತಾಳೆ. ಹೃದಯ ಕಾಯಿಲೆಗೆ ಸಂಬಂಧಪಟ್ಟ ಲಕ್ಷಣಗಳನ್ನು ನಿರ್ಲಕ್ಷಿಸಿದರೆ, ಒಮ್ಮೆ ಅದರ ಆಘಾತಕ್ಕೆ ಸಿಲುಕಿದರೆ ಮುಂಬರುವ ವರ್ಷಗಳಲ್ಲಿ ಅವಳ ದುಡಿಯುವ ಶಕ್ತಿಸಹ ಕಡಿಮೆಯಾಗಿ ಬಿಡುತ್ತದೆ.

ಏನೇನು  ಲಕ್ಷಣಗಳು?

ಕೆಲವು ತಿಂಗಳ ಮುಂಚೆಯೇ ಹೃದಯದಲ್ಲಿ ಸಣ್ಣಪುಟ್ಟನೋವು ಎನಿಸಬಹುದು. ಭುಜದ ಭಾಗದಲ್ಲಿ ನೋವು ಇರಬಹುದು. ಇವೆಲ್ಲ ಲಕ್ಷಣಗಳು ಕಂಡುಬಂದಾಗ ತಕ್ಷಣವೇ ವೈದ್ಯರಿಂದ ತಪಾಸಣೆ ಗೊಳಗಾಗಬೇಕು. ಬೇಗಚಿಕಿತ್ಸೆ ಪಡೆದರೆ ಮುಂಬರುವ ಜೀವನದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು.

ಯಾರಲ್ಲಿ ಹೃದಯರೋಗದ ಅಪಾಯ ಜಾಸ್ತಿ ?

 • ಮಹಿಳೆಯರಲ್ಲಿ ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಕಂಡುಬರುವ ಮಧುಮೇಹ, ಅತಿರಕ್ತದೊತ್ತಡ ಇವು ಮುಂಬರುವ ವರ್ಷಗಳಲ್ಲಿ ಹೃದಯ ರೋಗಕ್ಕೆ ಕಾರಣವಾಗಬಹುದು.
 • ಕುಟುಂಬದಲ್ಲಿ ಯಾರಿಗಾದರೂ ಹೃದಯದ ಸಮಸ್ಯೆಗಳು ಇದ್ದರೆ ಅದು ವಂಶಪಾರಂಪರ್ಯವಾಗಿ ಬರಬಹುದು.
 • ಧೂಮಪಾನದ ಪ್ರಮಾಣ ಮಹಿಳೆಯರಲ್ಲಿ ಕಡಿಮೆ. ಆದರೆ ಗ್ರಾಮೀಣಭಾಗದಲ್ಲಿ ತಂಬಾಕು ಸೇವನೆ ಮಾಡುವವರ ಸಂಖ್ಯೆ ಹೆಚ್ಚಿಗೆ ಇದೆ. ಅದೇ ರೀತಿ ಧೂಮಪಾನಿಗಳು ಬಿಡುವ ಹೊಗೆ ಸೇವನೆಯಿಂದಲೂ ಹೃದ್ರೋಗದ ಅಪಾಯ ಹೆಚ್ಚುತ್ತದೆ.
 • ಆಹಾರದಲ್ಲಿ ಮಸಾಲೆಗಳ ಪ್ರಮಾಣ ಹೆಚ್ಚಿಗೆ ಇರುವುದು. ಬಳಸಿದ ಎಣ್ಣೆಯನ್ನು ಮತ್ತೆ ಬಳಸುವುದು. ಆಹಾರವನ್ನು ಮತ್ತೆಮತ್ತೆ ಬಿಸಿಮಾಡಿ ಸೇವಿಸುವುದು ಇವು ಕೂಡ ಹೃದಯದ ಕಾಯಿಲೆಗಳಿಗೆ ದಾರಿ ಮಾಡಿಕೊಡಬಹುದು.
 • ಅತಿಯಾದ ದುಃಖ ಕೂಡ ಹೃದಯದ ಕಾರ್ಯ ಸಾಮರ್ಥ್ಯ ಕುಸಿಯಲು ಕಾರಣವಾಗುತ್ತದೆ.
 • ಅತಿಯಾದ ರಕ್ತಹೀನತೆ, ಹಾರ್ಮೋನುಗಳ ಏರುಪೇರು, ಥೈರಾಯ್ಡ್ ಗ್ರಂಥಿಗಳ ಸಮಸ್ಯೆಗಳು ಕೂಡ ಹೃದಯದ ಕಾಯಿಲೆಗಳಿಗೆ ಕಾರಣವಾಗಬಹುದು.

ಮುಟ್ಟು ನಿಂತವರಲ್ಲೇ ಹೃದ್ರೋಗಗಳ ಪ್ರಮಾಣ ಜಾಸ್ತಿಯೇ?

ಹಾಗೇನೂ ಇಲ್ಲ. 35 ರ ಬಳಿಕ ಮಹಿಳೆಯರಲ್ಲಿ ಯಾವುದೇ ವಯಸ್ಸಿನಲ್ಲಾದರೂ ಹೃದಯದ ಕಾಯಿಲೆಗಳು ಕಾಣಿಸಿಕೊಳ್ಳಬಹುದು. ಮುಟ್ಟು ನಿಂತ ಮಹಿಳೆಯರಲ್ಲಿ ಇದರ ಪ್ರಮಾಣ ಸ್ವಲ್ಪಜಾಸ್ತಿ. ಹಾರ್ಮೋನುಗಳ ರಕ್ಷಣೆ ಇರದೇ ಇರುವುದರಿಂದ ಈ ಸ್ಥಿತಿ ಉಂಟಾಗಬಹುದು.

ತಪಾಸಣೆ ಹೇಗೆ?

ಹೃದ್ರೋಗದ ಲಕ್ಷಣ ಕಂಡು ಬಂದವರಲ್ಲಿ ಇಸಿಜಿ, ಇಕೂಹಾರ್ಟ್ ಸ್ಕಾನರ್ ಮೂಲಕ ತೊಂದರೆಯ ಪ್ರಮಾಣವನ್ನು ಕಂಡುಕೊಳ್ಳಬಹುದು.

ಮುನ್ನೆಚ್ಚರಿಕೆ ವಹಿಸುವುದು ಹೇಗೆ?

ಹೃದ್ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ, ಅದು ಬರುವುದಕ್ಕಿಂತ ಮುಂಚೆಯೇ ಎಚ್ಚರಿಕೆ ವಹಿಸಿದರೆ ಹೃದಯರೋಗಗಳನ್ನು ಸಾಕಷ್ಟು ಮಟ್ಟಿಗೆ ತಡೆಗಟ್ಟಬಹುದು.  ಎಷ್ಟೋ ಜನರಿಗೆ ಹೃದಯಾಘಾತ,  ಹೃದಯರೋಗಗಳ ಬಗ್ಗೆ ಗೊತ್ತಿರುವುದೇ ಇಲ್ಲ. ಅವರಿಗೆ ಅದರ ಬಗ್ಗೆ ಅರಿವು ಮೂಡಿಸುವುದರ ಮೂಲಕ ಹೃದಯರೋಗಗಳಿಂದ ಅವರನ್ನು ರಕ್ಷಿಸಬಹುದು.

 • ಎದೆ ನೋವು, ಭುಜದ ನೋವು, ಸುಸ್ತು, ಉಸಿರಾಟ ತೊಂದರೆಗಳು ಕಾಣಿಸಿಕೊಂಡಾಗ ತಡಮಾಡದೆ ವೈದ್ಯರನ್ನು ಸಂಪರ್ಕಿಸಬೇಕು.
 • ಎಷ್ಟೇ ಕೆಲಸ ಮಾಡಿ, ಆದರೆ ದಿನಕ್ಕೆ 15 – 20 ನಿಮಿಷ ಹೊರಗಡೆ ಪ್ರಶಾಂತ ವಾತಾವರಣದಲ್ಲಿ ನಡೆದಾಡುವುದು ಹೃದಯದ ಆರೋಗ್ಯಕ್ಕೆ ಒಳ್ಳೆಯದು.
 • ದೇಹತೂಕ ಅತಿಯಾಗದಂತೆ ನೋಡಿಕೊಳ್ಳಿ.
 • ಧೂಮಪಾನ, ತಂಬಾಕು ಸೇವನೆ ನಿಲ್ಲಿಸಿಬಿಡಿ. ಅಪರೋಕ್ಷ ಧೂಮಪಾನದಿಂದ ದೂರಇರಿ. ಅಂದರೆ ಮನೆಯಲ್ಲಿ ಯಾರಾದರೂ ಧೂಮಪಾನಿಗಳು ಇದ್ದರೆ ಅವರು ಬಿಡವು ಹೊಗೆ ಸೇವನೆ ಮಾಡಬೇಡಿ.
 • ಕೆಲವರಲ್ಲಿ ಹುಟ್ಟಿನಿಂದಲೇ ಹೃದ್ರೋಗದ ಲಕ್ಷಣಗಳು ಇರುತ್ತವೆ. ಆದರೆ ಅವು ಗುಪ್ತಗಾಮಿನಿಯಂತೆ ಇರುತ್ತವೆ. ಹಾಗಾಗಿ ವರ್ಷಕ್ಕೊಮ್ಮೆ ಹೃದಯದ ತಪಾಸಣೆ ಮಾಡಿಸಿಕೊಳ್ಳಬೇಕು.
 • ಆಹಾರದಲ್ಲಿ ಕಟ್ಟುನಿಟ್ಟು ಅಗತ್ಯ. ಹೆಚ್ಚು ಮಸಾಲೆಯುಕ್ತ ಪದಾರ್ಥಗಳಿಂದ ದೂರಇರಿ. ಹುರಿದ ಕರಿದ ಪದಾರ್ಥಗಳನ್ನು ಮಿತಪ್ರಮಾಣದಲ್ಲಿ ಸೇವಿಸಿ.

ಹೆಚ್ಚಿನ ಮಾಹಿತಿಗೆ:

ಆಲ್ಟಿಯಸ್ ಹಾಸ್ಪಿಟಲ್
#915, 1ನೇ ಮಹಡಿ, ಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್‍ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರ, ಬೆಂಗಳೂರು.
9663311128/ 080-28606789

ಶಾಖೆ: #6/63, 59ನೇ ಅಡ್ಡರಸ್ತೆ,
4ನೇ ಬ್ಲಾಕ್, ರಾಜಾಜಿನಗರ ಎಂಟ್ರೆನ್ಸ್,
ಎಂ.ಇ.ಐ.ಪಾಲಿಟೆಕ್ನಿಕ್ ಎದುರು,
ರಾಮಮಂದಿರದ ಹತ್ತಿರ, ರಾಜಾಜಿನಗರ,
ಬೆಂಗಳೂರು-10,
9900031842/ 080-23151873

ಇಮೇಲ್ ವಿಳಾಸ: altiushospital@yahoo.com, www.altiushospital.com

Leave a Reply