ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ತಪ್ಪಾಗಿರೋದು ನಿಜ: ಡಿಕೆ ಶಿವಕುಮಾರ್ ಪುನರುಚ್ಚಾರ

ಡಿಜಿಟಲ್ ಕನ್ನಡ ಟೀಮ್:

‘ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು. ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಹಸ್ತಕ್ಷೇಪ ಮಾಡಿ ತಪ್ಪು ಮಾಡಿದೆವು’ ಇದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ನೀಡಿರುವ ಹೇಳಿಕೆ.

ನಿನ್ನೆ ಈ ವಿಚಾರವಾಗಿ ಡಿಕೆಶಿ ಅವರು ಮಾಧ್ಯಮಗಳಿಗೆ ನೀಡಿದ ಹೇಳಿಕೆ ರಾಜಕೀಯವಾಗಿ ಚರ್ಚೆಯಾಗಿತ್ತು. ಈ ಬಗ್ಗೆ ಗುರುವಾರ ಸ್ಪಷ್ಟನೆ ನೀಡಿರುವ ಸಚಿವರು ಹೇಳಿದ್ದಿಷ್ಟು…

‘ನಾನು ಸೂಕ್ತ ಕಾಲ, ಸೂಕ್ತ ಸಮಯ, ಸೂಕ್ತ ಜಾಗ ನೋಡಿ ನನ್ನ ಅಭಿಪ್ರಾಯವನ್ನು ಜನರ ಮುಂದೆ ಇಟ್ಟಿದ್ದೇನೆ. ನಾವು ತಪ್ಪು ಮಾಡಿದ್ದೇವೆ ಎಂದು ನನ್ನ ಆತ್ಮಸಾಕ್ಷಿ ಹೇಳುತ್ತಿತ್ತು. ನಾವು ರಾಜಕಾರಣಿಗಳು, ಸರಕಾರ ಪ್ರತಿನಿಧಿಗಳು. ನಮ್ಮ ಕೆಲಸ ಅಲ್ಲ ಇದು. ಯಡಿಯೂರಪ್ಪನವರ ಹಾದಿಯಾಗಿ, ಬಿಜೆಪಿಯವರು ಸೇರಿ ಈ ಮನವಿ ಸಲ್ಲಿಸಿದ್ದರು ನಿಜ. ಆದರೆ ಹಿಂದೆ ಕೇಂದ್ರ ಸರ್ಕಾರ ಇದನ್ನು ಮಾಡಲು ಸಾಧ್ಯವಿಲ್ಲ ಅಂತಾ ಹೇಳಿತ್ತು. ನಾವು ಅದಕ್ಕಾಗಿ ಸಮಿತಿ ರಚನೆ ಮಾಡಿ, ಸಿದ್ದರಾಮಯ್ಯನವರ ನೇತೃತ್ವದಲ್ಲಿ ಅರ್ಜಿ ಸಲ್ಲಿಸಿದೆವು. ಆದರೆ ಇದರಲ್ಲಿ ನಾವು ಹಸ್ತಕ್ಷೇಪ ಮಾಡಬಾರಡಿತ್ತು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ನನ್ನ ಆತ್ಮಸಾಕ್ಷಿ ಅಭಿಪ್ರಾಯ. ಅದನ್ನು ನಾನು ಹೇಳಿದ್ದೇನೆ.

ನಾನು ಎಲ್ಲರಿಗೂ ಸಮಾಧಾನ ಪಡಿಸಲು ಸಾಧ್ಯವಿಲ್ಲ. ಬೇರೆಯವರ ವಿಚಾರ ಹಾಗೂ ಅಭಿಪ್ರಾಯವನ್ನು ತಪ್ಪು ಎಂದು ನಾನು ಹೇಳುವುದಿಲ್ಲ. ಬೇರೆಯವರು ಏನು ಬೇಕಾದರೂ ಹೇಳಿಕೊಳ್ಳಲಿ. ನಾನು ಯಾರ ಜತೆಗೂ ಸ್ಪರ್ಧೆಗೆ ಇಳಿದಿಲ್ಲ. ಚುನಾವಣಾ ರಾಜಕಾರಣ ಮಾಡಲು ಹೋಗುತ್ತಿಲ್ಲ. ರಾಜಕೀಯದಲ್ಲಿ ಧರ್ಮ ಇರಬೇಕು ಆದರೆ ಧರ್ಮದಲ್ಲಿ ರಾಜಕೀಯ ಇರಬಾರದು ಅನ್ನೋದು ನನ್ನ ಅಭಿಪ್ರಾಯ.
ನಾವು ಯಾರ ಪರ ನಿಂತೆವೋ ಅವರು ನಮ್ಮ ಬೆನ್ನಿಗೆ ನಿಲ್ಲಲಿಲ್ಲ. ಹೀಗಾಗಿ ನನ್ನ ಆತ್ಮಸಾಕ್ಷಿಗೆ ತಪ್ಪು ಎನಿಸಿತು. ಅದನ್ನು ಹೇಳಿದೆ.’

ಇನ್ನು ಎಂ.ಬಿ ಪಾಟೀಲ್ ಅವರು ಹಾಸನದಲ್ಲಿ ಎಷ್ಟು ಲಿಂಗಾಯತರನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ ಎಂದು ಪ್ರಶ್ನಿಸಿರುವುದಕ್ಕೆ ಉತ್ತರಿಸಿದ ಡಿಕೆಶಿ, ‘ಎಂ.ಬಿ ಪಾಟೀಲ್ ಅವರು ನನ್ನ ಸ್ನೇಹಿತರು. ನನಗೆ ಆ ಶಕ್ತಿ ಇಲ್ಲ. ಒಬ್ಬರನ್ನು ಗೆಲ್ಲಿಸಿಕೊಂಡು ಬರುವಷ್ಟು ಶಕ್ತಿ ನನ್ನಲಿಲ್ಲ. ಹೀಗಾಗಿ ಅವರು ಹೇಳಿರುವುದರಲ್ಲಿ ತಪ್ಪೇನಿಲ್ಲ.

Leave a Reply