ತೋಂಟದಾರ್ಯ ಶ್ರೀ ಲಿಂಗೈಕ್ಯ; ಶೋಕಸಾಗರದಲ್ಲಿ ಭಕ್ತವೃಂದ

ಗದಗದ ತೋಂಟದಾರ್ಯ ಮಠದ ಸಿದ್ದಲಿಂಗ ಸ್ವಾಮೀಜಿ ಬೆಳಗಿನ ಜಾವ ಲಿಂಗೈಕ್ಯರಾಗಿದ್ದಾರೆ. ಹೃದಯಾಘಾತಕ್ಕೆ ಒಳಗಾದ ಶ್ರೀಗಳನ್ನು ಗದಗ್‌ನ ಚಿರಾಯು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ. ಸ್ವಾಮೀಜಿ ನಿಧನದಿಂದ ಅಪಾರ ಭಕ್ತವೃಂದ ಶೋಕ ಸಾಗರದಲ್ಲಿ ಮುಳುಗಿದೆ.

ತೊಂಟದಾರ್ಯ ಶ್ರೀಗಳು ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿಯವರು. 7 ತರಗತಿಯಲ್ಲಿದ್ದಾಗಲೇ ಸಿಂದಗಿ ಬಿಟ್ಟು ಹುಬ್ಬಳ್ಳಿಯ ಮೂರು ಸಾವಿರ ಮಠಕ್ಕೆ ತೆರಳಿದ್ದರು. ಬಿಎ ಮುಗಿಸಿದ ನಂತರ ವಿರಕ್ತ ಮಠದ ಸೇವೆ ಪ್ರಾರಂಭ ಮಾಡಿದ ಶ್ರೀಗಳು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಸ್ನಾತಕೋತ್ತರ ಪದವಿ ಪೂರೈಸಿದ್ರು.1974 ರ ಬಳಿಕ ಪೂರ್ವಾಶ್ರಮಕ್ಕೆ ವಾಪಸ್ ಬಂದಿಲ್ಲ..15 ವರ್ಷಗಳ ಹಿಂದೆ ತಂದೆ ನಿಧನ, 5 ವರ್ಷಗಳ ಹಿಂದೆ ತಾಯಿ ನಿಧನರಾದಾಗಲೂ ಅಂತ್ಯಕ್ರಿಯೆಗೆ ಬಂದಿರಲಿಲ್ಲ. ಇವರ ಪೋಷಕರಿಗೆ ಐದು ಗಂಡು, ಎರಡು ಹೆಣ್ಣು ಮಕ್ಕಳಿದ್ದು, ಇವರು ಎರಡನೇಯವರು.

ಗದಗದ ತೋಂಟದಾರ್ಯ ಶ್ರೀಗಳ ನಿಧನಕ್ಕೆ ಜಲ ಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಡಾ. ಸಿದ್ದಲಿಂಗ ಶ್ರೀಗಳು ಮೂಲತಃ ಕಂದಾಚಾರ ವಿರೋಧಿಗಳಾಗಿದ್ದರು. ಆಡಂಬರ, ಅದ್ಧೂರಿತನದಿಂದ ದೂರಾಗಿದ್ದರು. ಮೂವತ್ತು ವರ್ಷಗಳ ಹಿಂದೆಯೇ ಅಡ್ಡಪಲ್ಲಕ್ಕಿ ಮೆರವಣಿಗೆಯನ್ನು ವಿರೋಧಿಸಿ, ತ್ಯಜಿಸಿದರು. ಹಿಂದುಳಿದ ಬಳ್ಳಾರಿ, ಯಾದಗಿರಿ, ರಾಯಚೂರು ಮತ್ತಿತರ ಜಿಲ್ಲೆಗಳಲ್ಲಿ ವಿದ್ಯಾರ್ಥಿ ನಿಲಯಗಳು, ಶಿಕ್ಷಣ ಸಂಸ್ಥೆಗಳು ಹಾಗೂ ರೈತರಿಗೆ ಸಾವಿರಾರೂ ಎಕರೆ ಭೂದಾನ ಮಾಡಿದ್ದರು. ಪ್ರಗತಿಪರ ಸ್ವಾಮೀಜಿ ಎನಿಸಿದ್ದ ಅವರ ಅಗಲಿಕೆಯಿಂದ ಈ ಸಮಾಜ ನಿಜಕ್ಕೂ ಒಬ್ಬ ನೈಜ ಮಾರ್ಗದರ್ಶನನ್ನು ಕಳೆದುಕೊಂಡಂತೆ ಆಗಿದೆ ಎಂದು ಅವರು ಶೋಕಸಂದೇಶದಲ್ಲಿ ತಿಳಿಸಿದ್ದಾರೆ.
ತೋಂಟದಾರ್ಯ ಮಠಾಧೀಶರ ನಿಧನದ ವಿಚಾರ ಆಘಾತ ತಂದಿದೆ ಎಂದು ಮಾಜಿ ಸಚಿವ ಎಂ. ಬಿ. ಪಾಟೀಲ್ ವಿಜಯಪುರದಲ್ಲಿ ಹೇಳಿದ್ದಾರೆ. ಶ್ರೀಗಳು ನಮ್ಮನ್ನು ಅಗಲಿರುವುದು, ಅವರ ಅನುಯಾಯಿಗಳಾದ ನಮಗೆ ಹಾಗೂ ಭಕ್ತರಿಗೆ ಸಾಕಷ್ಟು ನೋವು ತಂದಿದೆ. ಅವರ ಶ್ರೇಷ್ಠ ಕಾರ್ಯಗಳು, ಜೀವನದುದ್ದಕ್ಕೂ ಬಸವಣ್ಣ, ಬಸವಾದಿ ಶರಣರು, ಲಿಂಗಾಯತರ ಬಗ್ಗೆ ಶ್ರೀಗಳ ಕೊಡುಗೆ ಅಪಾರ ಎಂದಿದ್ದಾರೆ. ಬಸವಣ್ಣನವರ ವಚನಗಳನ್ನು ಪುಸ್ತಕ ರಚಿಸಿ ಹಂಚಿಕೆ ಮಾಡಿದ್ದು, ನಮ್ಮ ಜೊತೆ ಉತ್ತಮ ಬಾಂಧವ್ಯವಿತ್ತು ಎಂದಿದ್ದಾರೆ. ಜೊತೆಗೆ ಹೃದಯದ ಅಂತರಾಳದಿಂದ ಶ್ರೀಗಳಿಗೆ ಸಂತಾಪ ಸೂಚಿಸುತ್ತೇನೆ ಎಂದಿದ್ದಾರೆ.

ಶ್ರೀಗಳ ಅಗಲಿಕೆಯಿಂದ ದೊಡ್ಡ ಆಘಾತವಾಗಿದೆ ಎಂದು ಸಚಿವ ದೇಶಪಾಂಡೆ ತಿಳಿಸಿದ್ದಾರೆ. ಧಾರವಾಡ ಸಮಾಜದ ಹಲವಾರು ಒಳ್ಳೆಯ ಕೆಲಸ ಅವರಿಂದ ಆಗಿವೆ. ಸಾಮಾಜಿಕ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮಾನವ ಜನಾಂಗಕ್ಕಾಗಿ ಕಾರ್ಯ ಮಾಡಿದ್ದಾರೆ.. ಅವರ ಭಕ್ತಾಧಿಗಳಷ್ಟೇ ಅಲ್ಲದೇ ನಮಗೆಲ್ಲರಿಗೂ ಆಘಾತ, ದುಃಖ ಆಗಿದೆ.. ಅವರ ಆದರ್ಶ, ವಿಚಾರಗಳನ್ನು ನಾವು ಅನುಷ್ಠಾನದಲ್ಲಿ ತರುವ ಮೂಲಕ‌ ಶ್ರದ್ಧಾಂಜಲಿ ಸಲ್ಲಿಸಬೇಕು ಎಂದಿದ್ದಾರೆ.

ಶಿವಮೊಗ್ಗದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಗದುಗಿನ ತೋಂಟದಾರ್ಯ ಸಿದ್ದಲಿಂಗ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಬಳಿಕ ಮಾತನಾಡಿದ ಅವರು, ಶ್ರೀಗಳ ನಿಧನದಿಂದ ಇಡೀ ರಾಜ್ಯ ಬಡವಾಗಿದ್ದು, ಆಘಾತವಾಗಿದೆ ಎಂದಿದ್ದಾರೆ.

ಧಾರವಾಡದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಮಾತನಾಡಿದ್ದು, ತೊಂಟದಾರ್ಯ ಶ್ರೀಗಳನ್ನು ಕಳೆದುಕೊಂಡು ದೊಡ್ಡ ಆಘಾತವಾಗಿದೆ.. ನಿನ್ನೆಯವರೆಗೂ ಅವರು ಕಾರ್ಯಕ್ರಗಳಲ್ಲಿ ಭಾಗಿಯಾಗಿದ್ರು.. ಬಸವಾಭಿಮಾನಿಯಾಗಿ ನಿರಂತರ ಅನ್ನ ದಾಸೋಹ ಕೊಟ್ಟವರು.. ಅರವತ್ತು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಶಿಕ್ಷಣ ದಾಸೋಹ ಮಾಡಿದವರು..ಎಲ್ಲ ಸಮಾಜದವರನ್ನು ಸಮಾನತೆಯಿಂದ ಕಾಣುತ್ತಿದ್ದರು..ನಮ್ಮ ಭಾಗದ ದೊಡ್ಡ ಶ್ರೀಗಳನ್ನು ಕಳೆದುಕೊಂಡಿದ್ದೇವೆ ಎಂದು ಸಂತಾಪ ಸೂಚಿಸಿದ್ದಾರೆ..

ಶ್ರೀಗಳ ಅಗಲಿಕೆಗೆ ಸಿದ್ಧಗಂಗಾ ಕಿರಿಯ ಶ್ರೀಗಳು ಸಂತಾಪ ಸೂಚಿಸಿದ್ದು, ಶ್ರೀಗಳ ಅಗಲಿಕೆ ಆಘಾತ ಉಂಟುಮಾಡಿದೆ. ಕನ್ನಡ ನಾಡಿನಲ್ಲಿ ವಿಶಿಷ್ಟವಾದ ಕಾರ್ಯಗಳನ್ನು ಮಾಡಿದ್ದು, ವಿರಕ್ತ ಸಂಪ್ರದಾಯ ಮಠದಲ್ಲಿ‌ ಮುಂಚೂಣಿಯಲ್ಲಿದ್ದರು. ಸಮಾಜ ಸೇವೆ, ಸಾಹಿತ್ಯ ಸೇವೆ, ಜನಸೇವೆಯಲ್ಲಿ ಅವರ ಸೇವೆ ಅಪಾರವಾದದ್ದು.. ಶರಣ ಹಾಗೂ ವಚನ ಸಾಹಿತ್ಯದಲ್ಲಿ ಕ್ರಾಂತಿ ಉಂಟುಮಾಡಿದವರು.. ಅವರ ಅಗಲಿಕೆ ಭರಿಸಲಾಗದ ನಷ್ಟ ಉಂಟಾಗಿದ್ದು, ಸಿದ್ಧಗಂಗಾ ಮಠಕ್ಕೂ‌ ತೋಂಟದಾರ್ಯ ಮಠಕ್ಕೂ ಅವಿನಾಭಾವ ಸಂಬಂಧ ಇತ್ತು, ಮಠದ ಅನೇಕ‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.. ಹಿರಿಯ ಶ್ರೀಗಳ ಬಗ್ಗೆ ಅಪಾರ ಗೌರವ ಹೊಂದಿದ್ದರು.. ಅವರ ಅಗಲಿಕೆ ನೋವನ್ನು ಭರಿಸುವ ಶಕ್ತಿ ಕನ್ನಡನಾಡಿಗೆ ಸಿಗಲಿ ಎಂದಿದ್ದಾರೆ ಸಿದ್ಧಗಂಗಾ ಮಠದ ಕಿರಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿ..

ದಾವಣಗೆರೆಯಲ್ಲಿ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ, ಸ್ವಾಮೀಜಿಗಳು ಸಮಾಜಕ್ಕೆ ಒಳಿತನ್ನು ಮಾಡುತ್ತಿದ್ದರು. ಇನ್ನಷ್ಟು ದಿನ ಇದ್ದು ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕಿತ್ತು. ಇಷ್ಟು ಬೇಗಾ ವಿಧಿವಶರಾಗಿರುವುದು ತುಂಬಲಾರದ ನಷ್ಟವಾಗಿದೆ ಎಂದಿದ್ದಾರೆ.

ನಾಳೆ ಸಾಯಂಕಾಲ 4 ಗಂಟೆಗೆ ಶ್ರೀಗಳ ಅಂತ್ಯಸಂಸ್ಕಾರ ನೆರವೇರಿಸಲು ತೀರ್ಮಾನ ಮಾಡಲಾಗಿದ್ದು, ಸಂಜೆ 4 ಗಂಟೆಯವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು. ಗದಗದ ತೋಂಟದಾರ್ಯ ಮಠದ ಆವರಣದಲ್ಲಿ ಲಿಂಗಾಯತ ಧರ್ಮದ ವಿಧಿವಿಧಾನಗಳಂತೆ ಅಂತ್ಯಸಂಸ್ಕಾರ ನೆರವೇರಿಸಲು ನಿರ್ಧರಿಸಲಾಗಿದೆ

ನಾಳೆ ಬೆಳಗ್ಗೆ 11 ಗಂಟೆಗೆ ಶ್ರೀಗಳ ಪಾರ್ಥಿವ ಶರೀರದ ಮೆರವಣಿಗೆ ಮೂಲಕ ಕೊಂಡೊಯ್ದು, ಸಂಜೆ 4 ಗಂಟೆಗೆ ಅಂತಿಮ ಸಂಸ್ಕಾರ ತೋಂಟದಾರ್ಯ ಮಠದ ಆವರಣದಲ್ಲಿ ಸಿದ್ದತೆ.. ನಾಡಿನ ವಿವಿಧ ಮೂಲೆಗಳಿಂದ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಅಗತ್ಯ ಭದ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಗದಗ ಎಸ್‌ಪಿ ಸಂತೋಷ ಬಾಬು ಹೇಳಿದ್ದಾರೆ.

Leave a Reply