ಗರ್ಭಾವಸ್ಥೆಯಲ್ಲಿ ಮಧುಮೇಹ: ಏನು ಮಾಡಬೇಕು? ಏನು ಮಾಡಬಾರದು?

ಡಾ.ಬಿ.ರಮೇಶ್

ಗರ್ಭಾವಸ್ಥೆ ಎನ್ನುವುದು 9 ತಿಂಗಳ ಅಗ್ನಿಪರೀಕ್ಷೆ ಇದ್ದಂತೆ. ಈ ಅವಧಿಯಲ್ಲಿ ಗರ್ಭಿಣಿ ಹತ್ತು ಹಲವು ಬಗೆಯ ತೊಂದರೆಗಳನ್ನು ಎದುರಿಸಬೇಕಾಗಿ ಬರುತ್ತದೆ. ತನ್ನ ಗರ್ಭದಲ್ಲಿರುವ ಶಿಶು ಸುರಕ್ಷಿತವಾಗಿ ಹೊರಗೆ ಬರಬೇಕೆನ್ನುವುದೇ ಅವಳ ಕಾಳಜಿ ಮತ್ತು ಕಳಕಳಿಯಾಗಿರುತ್ತದೆ.

ಗರ್ಭಾವಸ್ಥೆಯಲ್ಲಿ ಅನೇಕ ಕಾಯಿಲೆಗಳು ಆಕಸ್ಮಿಕವೆಂಬಂತೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಅವುಗಳಲ್ಲೊಂದು ಮಧುಮೇಹ ಅಥವಾ ಸಕ್ಕರೆ ಕಾಯಿಲೆ. ಈ ರೋಗವು ಗರ್ಭಾವಸ್ಥೆಯ ಮೊದಲ ತ್ರೈಮಾಸಿಕ ಮುಗಿಯುತ್ತಿದ್ದಂತೆ ಪ್ರತ್ಯಕ್ಷವಾಗಿ ಹೆರಿಗೆಯಾಗುತ್ತಿದ್ದಂತೆ ತಂತಾನೇ ಹೊರಟುಹೋಗುತ್ತದೆ. ಈ ಅವಧಿಯ ಆಗುಹೋಗುಗಳನ್ನು ಬಹು ಎಚ್ಚರಿಕೆಯಿಂದ ಗಮನಿಸುತ್ತಿರಬೇಕಾಗುತ್ತದೆ.

ಭಾರತದಲ್ಲಿ ಶೇ. 5ರಿಂದ 10ರಷ್ಟು ಮಹಿಳೆಯರಲ್ಲಿ ಮಧುಮೇಹವು ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುತ್ತದೆ ಎಂಬ ಅಂದಾಜಿದೆ.

ಏನು ಕಾರಣ?

ಗರ್ಭಾವಸ್ಥೆಯಲ್ಲಿ ಮಧುಮೇಹ ಅಥವಾ ವೈದ್ಯ ಭಾಷೆಯಲ್ಲಿ ‘ಜೆಸ್ಟೇಶನಲ್ ಡಯಾಬಿಟೀಸ್’ ಎಂದು ಕರೆಯಲ್ಪಡುವ ಈ ಸಮಸ್ಯೆ ಏಕೆ ಉಂಟಾಗುತ್ತದೆ ಎಂಬುದಕ್ಕೆ ಅನೇಕ ಕಾರಣಗಳನ್ನು ಪಟ್ಟಿ ಮಾಡಬಹುದು. ಅವುಗಳೆಂದರೆ :

  • ಬದಲಾಗುತ್ತಿರುವ ಜೀವನಶೈಲಿಯೂ ಇದಕ್ಕೆ ಕಾರಣವಾಗಿರಬಹುದು. 35ರ ಬಳಿಕ ಗರ್ಭ ಧರಿಸುವುದು, ಚಟುವಟಿಕೆಯಿಲ್ಲದ ಜೀವನಶೈಲಿ ಕೊಬ್ಬಿನಾಂಶವುಳ್ಳ ಆಹಾರಗಳನ್ನು ಅತಿಯಾಗಿ ಸೇವಿಸುವುದು ಮತ್ತು ಧೂಮಪಾನ.
  • ತಂದೆ – ತಾಯಿ ಅಥವಾ ತನ್ನ ಅಕ್ಕ- ಅಣ್ಣನಿಗೆ ಮಧುಮೇಹವಿದ್ದಿದ್ದರೆ ಆಕೆಗೂ ಅದು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.
  • ಪಾಲಿಸಿಸ್ಟಿಕ್ ಒವೇರಿಯನ್ ಸಿಂಡ್ರೋಮ್ ಸಮಸ್ಯೆ ಇರುವವರಲ್ಲೂ ಮಧುಮೇಹ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಏನೇನು ತೊಂದರೆ ಆಗಬಹುದು?

ಗರ್ಭಾವಸ್ಥೆಯಲ್ಲಿ ಮಧುಮೇಹ ಕಾಣಿಸಿಕೊಂಡರೆ ದೇಹದಲ್ಲಿ ಬಾಹ್ಯ ಹಾಗೂ ಆಂತರಿಕ ಭಾಗದಲ್ಲಿ ಅನೇಕ ಬಗೆಯ ತೊಂದರೆಗಳು ಉಂಟಾಗಬಹುದು. ಅವುಗಳೆಂದರೆ:

  • ಚರ್ಮದಲ್ಲಿ ಸೋಂಕು, ಮೂತ್ರಕೋಶದಲ್ಲಿ ಸೋಂಕು ಉಂಟಾಗಿ ಉರಿಮೂತ್ರದ ಸಮಸ್ಯೆ ಕಾಣಿಸಿಕೊಳ್ಳಬಹುದು. ಚರ್ಮದಲ್ಲಿ ತುರಿಕೆ, ಬಿಳಿಮುಟ್ಟಿನ ಸಮಸ್ಯೆ ಆಗಬಹುದು.
  • ಮಧುಮೇಹದ ಸಮಸ್ಯೆ ಇದ್ದಾಗ ಗರ್ಭಿಣಿಯರಲ್ಲಿ ರಕ್ತದೊತ್ತಡದ ಸಮಸ್ಯೆ ಕೂಡ ಹೆಚ್ಚುವರಿಯಾಗಿ ಸೇರಿಕೊಳ್ಳಬಹುದು.
  • ಗರ್ಭಸ್ಥ ಶಿಶುವಿನ ತೂಕ ಹೆಚ್ಚಾಗಿ ಹೆರಿಗೆ ಕಷ್ಟಕರ ಆಗಿ ಸಿಸೇರಿಯನ್ ಮೂಲಕ ಹೆರಿಗೆ ಮಾಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಹುದು.
  • ಕೆಲವೊಮ್ಮೆ ಕಾರಣವಿಲ್ಲದೆಯೇ ಮಗು ಹೊಟ್ಟೆಯಲ್ಲಿಯೇ ಮೃತಪಟ್ಟಿರುತ್ತದೆ.

ಮಧುಮೇಹ ಪತ್ತೆ ಹಚ್ಚುವುದು ಹೇಗೆ?

ಗರ್ಭಾವಸ್ಥೆಗಿಂತ ಮುಂಚೆ ಮಧುಮೇಹದ ಯಾವುದೇ ಲಕ್ಷಣಗಳನ್ನು ಹೊಂದಿರದ ಗರ್ಭಿಣಿಗೆ ಮಧ್ಯಾವಧಿಯಲ್ಲಿ ಮಧುಮೇಹ ಬಂದಿದೆಯೆಂದು ಕಂಡುಹಿಡಿಯುವುದರಿಂದ ಹೇಗೆ? ಅದಕ್ಕಾಗಿ ಅನೇಕ ನಿಯಮಿತ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ಸಾಮಾನ್ಯವಾಗಿ ಗರ್ಭಿಣಿ ಮೊದಲ ಬಾರಿ ವೈದ್ಯರ ಬಳಿ ತಪಾಸಣೆಗೆ ಬಂದಾಗ ಮೂತ್ರ ಪರೀಕ್ಷೆಯ ಜತೆಗೆ ರಕ್ತಪರೀಕ್ಷೆ ಸಹ ನಡೆಸುವರು. ಅದರ ಜತೆಗೆ ಸಕ್ಕರೆಯ ಪ್ರಮಾಣವನ್ನು ಕಂಡುಕೊಳ್ಳಲಾಗುತ್ತದೆ.

24ರಿಂದ 28ನೇ ವಾರದಲ್ಲಿ ಮಧುಮೇಹ ಇದೆಯೇ ಇಲ್ಲವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಜಿಸಿಟಿ ಪರೀಕ್ಷೆ (ಗ್ಲೂಕೋಸ್ ಚಾಲೆಂಜ್ ಟೆಸ್ಟ್) ನಡೆಸಲಾಗುತ್ತದೆ. 50 ಗ್ರಾಂ ನಷ್ಟು ಗ್ಲುಕೋಸ್ ಪುಡಿಯನ್ನು ಒಂದು ಲೋಟ ನೀರಿನಲ್ಲಿ ಹಾಕಿಕೊಂಡು ಗರ್ಭಿಣಿಗೆ ಕುಡಿಯಲು ಹೇಳಲಾಗುತ್ತದೆ. ಒಂದು ಗಂಟೆಯ ಬಳಿಕ ಪರೀಕ್ಷೆ ನಡೆಸಲಾಗುತ್ತದೆ. ಅದರಲ್ಲಿ ಬಹಳಷ್ಟು ವ್ಯತ್ಯಾಸ ಗೋಚರಿಸಿದರೆ ಗರ್ಭಿಣಿಗೆ ಮಧುಮೇಹ ಬಂದಿದೆ ಎಂದರ್ಥ. ಅದೇ ರೀತಿ ಗ್ಲೂಕೋಸ್ ಟಾಲರೆನ್ಸ್ ಟೆಸ್ಟ್ ಅಂದರೆ ಗ್ಲೂಕೋಸ್ ದೇಹಕ್ಕೆ ಹೇಗೆ ಸ್ಪಂದಿಸುತ್ತದೆ ಎಂಬುದನ್ನು ತಿಳಿದುಕೊಳ್ಳಲು ಈ ಪರೀಕ್ಷೆ ನಡೆಸಲಾಗುತ್ತದೆ.

ಮಧುಮೇಹ ಖಚಿತತೆ ಬಳಿಕ ಮುಂದೆ ಹೇಗೆ?

ಗರ್ಭಿಣಿಗೆ ಮಧುಮೇಹ ಇದೆಯೆಂದು ಖಚಿತವಾದ ಬಳಿಕ ಆಕೆ ನಿಯಮಿತವಾಗಿ ಕೆಲವು ತಪಾಸಣೆಗಳನ್ನು ಮಾಡಿಸಿಕೊಳ್ಳಬೇಕು. ವೈದ್ಯರ ಸಲಹೆಗಳನ್ನು ಚಾಚೂ ತಪ್ಪದೇ ಪಾಲಿಸಿದರೆ ಅಂತಹ ಗರ್ಭಿಣಿಯರಿಗೆ ಯಾವುದೇ ಹೆಚ್ಚಿನ ಸಮಸ್ಯೆ ಉಂಟಾಗದು.

ಮಧುಮೇಹ ಇರುವ ಗರ್ಭಿಣಿಯರು ಒಂದೇ ಸಲಕ್ಕೆ ಹೆಚ್ಚು ಆಹಾರ ಸೇವಿಸಬಾರದು. ತಿಂಡಿ – ಊಟಗಳನ್ನು ಮೂರು-ಮೂರು ತಾಸಿನ ಅಂತರದಲ್ಲಿ ಮಾಡಬೇಕು. ಸೊಪ್ಪು, ತರಕಾರಿಗಳು, ಕಾಳುಗಳು ನಿಮ್ಮ ಆಹಾರದಲ್ಲಿ ಒಳಗೊಂಡಿರಲಿ. ಪೌಷ್ಟಿಕಾಂಶವುಳ್ಳ ದ್ರವಪದಾರ್ಥಗಳನ್ನು ಸಹ ಕುಡಿಯಬೇಕು. ಪ್ರತಿದಿನ ಮುಂಜಾನೆ ಸಂಜೆ ಅರ್ಧ-ಅರ್ಧ ಗಂಟೆಗಳ ವಾಕಿಂಗ್ ಮಾಡಬೇಕು. ಜೀವನಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಯಾವುದನ್ನು ಸೇವಿಸಬೇಕು, ಯಾವುದನ್ನು ಸೇವಿಸಬಾರದು ಎಂಬುದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ವೈದ್ಯರ ಸಲಹೆಯಂತೆ ಗರ್ಭಿಣಿಯು ವಾರವಾರವೂ ರಕ್ತ ಪರೀಕ್ಷೆ ಮಾಡಿಕೊಳ್ಳಬೇಕು. ಮನೆಯಲ್ಲೇ ಗ್ಲೂಕೋಸ್ ಮಾನಿಟರಿಂಗ್ ಉಪಕರಣವನ್ನು ಇಟ್ಟುಕೊಂಡು ರಕ್ತಪರೀಕ್ಷೆ ಮಾಡಿಕೊಂಡು ಅದರಲ್ಲಿನ ಸಕ್ಕರೆ ಪ್ರಮಾಣವನ್ನು ಬರೆದಿಟ್ಟುಕೊಳ್ಳಬೇಕು. ವೈದ್ಯರ ಬಳಿ ಹೋದಾಗಲೆಲ್ಲ ಅದನ್ನು ವೈದ್ಯರ ಗಮನಕ್ಕೆ ತರಬೇಕು. ನಿಮ್ಮ ಸ್ವಯಂ ಪರೀಕ್ಷೆ ವೈದ್ಯರಿಗೆ ಚಿಕಿತ್ಸೆಯನ್ನು ಹೇಗೆ ಮುಂದುವರಿಸಬೇಕೆಂದು ನಿರ್ಧರಿಸಲು ಸಹಾಯವಾಗುತ್ತದೆ.

ಮಧುಮೇಹ ನಿಯಂತ್ರಣದಲ್ಲಿ ಇರದೇ ಇದ್ದಾಗ ಗರ್ಭಿಣಿಯು ಯಾವುದೇ ಮಾತ್ರೆ ಸೇವಿಸದೇ, ಇನ್ಸುಲಿನ್ ಚುಚ್ಚಿಮದ್ದಿನ ಸಹಾಯ ಪಡೆಯಬೇಕಾಗುತ್ತದೆ.

ಹೆರಿಗೆಯ ದಿನ ಸಮೀಪಿಸಿದಾಗ…

ಹೆರಿಗೆಯ ದಿನಗಳು ಸಮೀಪಿಸುತ್ತಿದ್ದಂತೆ ಗರ್ಭಿಣಿಯು ಹೆಚ್ಚೆಚ್ಚು ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಗರ್ಭಸ್ಥ ಶಿಶುವಿನ ಚಲನವಲನದ ಬಗೆಗೂ ವೈದ್ಯರು ಸತತ ನಿಗಾ ಇಟ್ಟಿರುತ್ತಾರೆ. ಗರ್ಭದಲ್ಲಿರುವ ಶಿಶುವಿನ ತೂಕ ಹೆಚ್ಚಿಗೆ ಇದೆ ಎಂದು ಖಚಿತವಾದರೆ ಆ ಹೆರಿಗೆಯನ್ನು ‘ಹೈ ರಿಸ್ಕ್ ಪ್ರೆಗ್ನೆನ್ಸಿ’ ಎಂಬಂತೆ ಭಾವಿಸಿ ಕಾರ್ಯ ಪ್ರವೃತ್ತರಾಗುತ್ತಾರೆ. ಸಹಜ ಹೆರಿಗೆ ಸಾಧ್ಯವಾದರೆ ಅದಕ್ಕೂ ವ್ಯವಸ್ಥೆ ಮಾಡುತ್ತಾರೆ. ಸಹಜ ಹೆರಿಗೆ ಕಷ್ಟಕರ ಎಂದು ಮನವರಿಕೆ ಆದರೆ ಸಿಸೇರಿಯನ್ ಹೆರಿಗೆಗೆ ಸಿದ್ಧರಾಗುತ್ತಾರೆ.

ಹೆರಿಗೆಯ ನಂತರ…

ಹೆರಿಗೆಯಾಗಿ ಪ್ಲಾಸೆಂಟಾ ಹೊರಗೆ ಹೋಗುತ್ತಿದ್ದಂತೆಯೇ ಮಧುಮೇಹವು ತಂತಾನೇ ಹೊರಟುಹೋಗುತ್ತದೆ. ಹೆರಿಗೆಯ ಬಳಿಕ ಬಾಣಂತಿ ಯಾವುದೇ ಆಹಾರ ಪಥ್ಯ ಪಾಲಿಸುವ ಅಗತ್ಯವಿಲ್ಲ. ಗರ್ಭಾವಸ್ಥೆಯಲ್ಲಿ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದವರಿಗೆ ಹೆರಿಗೆಯ ಬಳಿಕ ಒಂದೆರಡು ಬಾರಿ ಸಕ್ಕರೆ ಪರೀಕ್ಸೆ ನಡೆಸಲಾಗುತ್ತದೆ. ಅಷ್ಟರಲ್ಲಿ ರಕ್ತದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬಂದಿರುತ್ತದೆ.

ಹೆಚ್ಚಿನ ಮಾಹಿತಿಗೆ:

ಆಲ್ಟಿಯಸ್ ಹಾಸ್ಪಿಟಲ್
#915, 1ನೇ ಮಹಡಿ, ಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್‍ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರ, ಬೆಂಗಳೂರು.
9663311128/ 080-28606789

ಶಾಖೆ: #6/63, 59ನೇ ಅಡ್ಡರಸ್ತೆ,
4ನೇ ಬ್ಲಾಕ್, ರಾಜಾಜಿನಗರ ಎಂಟ್ರೆನ್ಸ್,
ಎಂ.ಇ.ಐ.ಪಾಲಿಟೆಕ್ನಿಕ್ ಎದುರು,
ರಾಮಮಂದಿರದ ಹತ್ತಿರ, ರಾಜಾಜಿನಗರ,
ಬೆಂಗಳೂರು-10,
9900031842/ 080-23151873

ಇಮೇಲ್ ವಿಳಾಸ: altiushospital@yahoo.com, www.altiushospital.com

Leave a Reply