ಸೆಕ್ಷನ್ ಗೊತ್ತಿಲ್ಲ, ಕನ್ನಡವೇ ಬರಲ್ಲ, ಇವರು ಸಂಸತ್ತಿಗೆ ಯಾಕೋಗಬೇಕು?; ರಾಮುಲು, ಶಾಂತಾಗೆ ಸಿದ್ರಾಮಯ್ಯ ತಪರಾಕಿ

ಡಿಜಿಟಲ್ ಕನ್ನಡ ಟೀಮ್:

ಲೋಕಸಭೆ ಅಥವಾ ವಿಧಾನಸಭೆಯಲ್ಲಿ ಒಂದು ದಿನವೂ ಶ್ರೀರಾಮುಲು ಮಾತನಾಡಿಲ್ಲ. ಬಳ್ಳಾರಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಶಾಂತಾ ಅವರೂ ಲೋಕಸಭೆಯಲ್ಲಿ ಉಸಿರೆತ್ತಿಲ್ಲ. ಅದ್ಯಾವ ಪುರುಷಾರ್ಥಕ್ಕೆ ಅವರನ್ನು ಲೋಕಸಭೆಗೆ ಕಳುಹಿಸಬೇಕು. ಏನು, ಬರೀ ಅಲಂಕಾರಕ್ಕೆ ಅವರನ್ನು ಅಲ್ಲಿಗೆ ಕಳುಹಿಸಬೇಕಾ ಎಂದು ಮಾಜಿ ಮುಖ್ಯಮಂತ್ರಿ, ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅಣ್ಣ-ತಂಗಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಬಳ್ಳಾರಿಯ ಹಂಪಾಸಾಗರ ಸೇರಿ ನಾನಾ ಕಡೆ ಸೋಮವಾರ ಚುನಾವಣೆ ಪ್ರಚಾರ ಭಾಷಣ ಮಾಡಿದ ಸಿದ್ದರಾಮಯ್ಯನವರು, ರಾಮುಲು ಅವರ ಜನ್ಮ ಜಾಲಾಡಿದ್ದು ಹೀಗೆ:

‘ತಮ್ಮ ಪಕ್ಷದ ಅಭ್ಯರ್ಥಿ ಉಗ್ರಪ್ಪ ಅವರನ್ನು ಹೊರಗಿನವರು ಎಂದು ಹೇಳುವ ಶ್ರೀರಾಮುಲು ಬಾದಾಮಿಯಲ್ಲಿ ನನ್ನ ವಿರುದ್ಧ ಸ್ಪರ್ಧೆ ಮಾಡಿರಲಿಲ್ಲವೇ? ಅವರೇನು ಬಾದಾಮಿಯಲ್ಲಿ ಹುಟ್ಟಿದ್ರಾ? ಮೊಳಕಾಲ್ಮೂರಿನಲ್ಲಿ ಹುಟ್ಟಿ ಬೆಳೆದಿದ್ರಾ? ಅಲ್ಲಿಗೇಕೆ ಹೋಗಿ ನಿಂತುಕೊಂಡ್ರು ಅವರೇನು ಉದ್ಭವ ಮೂರ್ತಿನಾ?’

‘ರಾಮುಲು ಕಣ್ಣು ಬಿಡುವ ಮೊದಲೇ ಉಗ್ರಪ್ಪ ಅವರು ರಾಜಕೀಯಕ್ಕೆ ಬಂದಿದ್ರು. ಉಗ್ರಪ್ಪ ಅವರು ಲೋಕಸಭೆಗೆ ಹೋದರೆ ಅಲ್ಲಿ ಬಳ್ಳಾರಿ ಸದ್ದು ಮಾಡುತ್ತದೆ. ಬಳ್ಳಾರಿ ಜನರ ಸಮಸ್ಯೆ ಕಾಣಿಸುತ್ತದೆ. ಅದಕ್ಕೆ ಪರಿಹಾರ ಸಿಗುತ್ತದೆ. ಆದರೆ ಏನೂ ಮಾತಾಡಕ್ಕೆ ಬಾರದ ಶಾಂತಾ ಅವರು ಹೋದರೆ ಈ ಯಾವ ಕೆಲಸನೂ ಆಗೋದಿಲ್ಲ. ಅವರು ಶಾಂತವಾಗಿ ಕುಂತು ಎದ್ದು ಬರುತ್ತಾರೆ.’

ರಾಮುಲುಗೆ ಏನು ಗೊತ್ತಿದೇರೀ? ಸೆಕ್ಷನ್ 371 ಜೆ ಅಂದರೆ ಏನು ಅಂತ ಕೇಳಿ ನೋಡಿ. ಹೇಳಿಬಿಡಲಿ ನೋಡೋಣ. ಅವರಿಗೆ ಗೊತ್ತಿರೋದು ಬರೀ 420, 302, 307, 376 ಸೆಕ್ಷನ್ ಮಾತ್ರ. ಇಂಥವರನ್ನು ಏಕೆ ಲೋಕಸಭೆಗೆ ಕಳುಹಿಸಬೇಕು? ಇಷ್ಟಕ್ಕೂ ರಾಮುಲು ಲೋಕಸಭೆಗೆ ಯಾಕೆ ರಾಜೀನಾಮೆ ಕೊಟ್ರು ಕೇಳಿ. ಅವರು ಇಲ್ಲದಿದ್ದರೆ ವಿಧಾನಸಭೆ ಮುಳುಗೋಗ್ತಿತ್ತಾ?, ಅದೇನು ನಡೀತಿರಲಿಲ್ವಾ?’

‘ರಾಮುಲುಗೆ ಹೋಲಿಸಿದರೆ ರಾಜಕೀಯದಲ್ಲಿ ಉಗ್ರಪ್ಪ ಅವರದ್ದು ಮೇರು ವ್ಯಕ್ತಿತ್ವ. ಪ್ರಜಾಪ್ರಭುತ್ವ, ಸಂಸದೀಯ ವ್ಯವಸ್ಥೆ ಯಾವುದೂ ರಾಮುಲು ಅವರಿಗೆ ಗೊತ್ತಿಲ್ಲ. ಹಣ, ಅಹಂಕಾರದಿಂದ ರಾಜಕೀಯ ಮಾಡೋರು. ಅಂಥವರಿಂದ ಜನಕ್ಕೆ ಏನು ಪ್ರಯೋಜನ ಒಂದು ದಿನನಾದ್ರೂ ರೈತರ ಸಾಲ ಮನ್ನಾ ಮಾಡಿ ಅಂತ ಲೋಕಸಭೆಯಲ್ಲಿ ಒತ್ತಾಯ ಮಾಡಿದ್ದಾರಾ? ಕನ್ನಡವೇ ಸರಿಯಾಗಿ ಮಾತನಾಡಕ್ಕೆ ಬರಲ್ಲ. ಇಂಥವರು ಲೋಕಸಭೇಲಿ ಏನು ಮಾತನಾಡಿಯಾರು?ರಾಜ್ಯ, ದೇಶ ಗೊತ್ತಿಲ್ಲದವರು ಲೋಕಸಭೆಗೆ ಏಕೆ ಹೋಗಬೇಕು? ಕೇಂದ್ರದಲ್ಲಿ ಬಿಜೆಪಿಯದ್ದೇ ಸರ್ಕಾರ ಇದೆ. ಶ್ರೀರಾಮುಲು ಒಂದಾದರೂ ಯೋಜನೆಯನ್ನು ಬಳ್ಳಾರಿಗೆ ತಂದಿದ್ದಾರೆಯೇ?’

Leave a Reply