#MeToo..? ಅರ್ಜುನ್ ಸರ್ಜಾ, ಶೃತಿ ರಾಜಿಗೆ ಸಜ್ಜಾಗಿದೆಯಾ ವೇದಿಕೆ..?!

ಡಿಜಿಟಲ್ ಕನ್ನಡ ಟೀಮ್:

ವಿಶ್ವಾದ್ಯಂತ ಹ್ಯಾಸ್ ಟ್ಯಾಗ್ ಮೀಟೂ ಅಭಿಯಾನ ಶುರುವಾಗಿದ್ದು, ಅನೇಕ ಗಣ್ಯಾತಿಗಣ್ಯರ ಮುಖಕ್ಕೆ ಮಸಿ ಮೆತ್ತಿಕೊಂಡಿದೆ. ಅದರಲ್ಲೂ ದೇಶದಲ್ಲಿ ವಿದೇಶಾಂಗ ರಾಜ್ಯ ಸಚಿವರಾಗಿದ್ದ ಅಕ್ಬರ್ ತಲೆದಂಡವೇ ಆಗಿದೆ. ಅಷ್ಟೇ ಅಲ್ಲದೆ ಸಾಕಷ್ಟು ನಟಿಯರು ಮೀಟೂ ಅಭಿಯಾನದಲ್ಲಿ ಭಾಗಿಯಾಗಿದ್ದು, ಇಂತಿಷ್ಟು ವರ್ಷಗಳ ಹಿಂದೆ ನಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಸಾಮಾಜಿಕ ಜಾಲ ತಾಣದಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ನಟ ಅಮಿತಾಭ್ ಬಚ್ಚನ್ ಸೇರಿದಂತೆ ಕನ್ನಡದ ರಾಕ್ ಸಿಂಗರ್ ರಘು ದೀಕ್ಷಿತ್ ಕೂಡ #MeeToo ಆಕ್ರೋಶಕ್ಕೆ ತುತ್ತಾಗಿದ್ದಾರೆ. ಅದನ್ನು ಒಪ್ಪಿಕೊಂಡು ಕ್ಷಮೆ ಕೂಡ ಕೇಳಿದ್ದಾರೆ. ಇದೀಗ ಕನ್ನಡ ಕುವರ ಸ್ಟಾರ್ ಆ್ಯಕ್ಟರ್ ಅರ್ಜುನ್ ಸರ್ಜಾಗೂ ಮೀಟೂ ಮಸಿ ಮೆತ್ತಿಕೊಂಡಿದ್ದು, ಸಿನಿಮಾವೊಂದರ ಶೂಟಿಂಗ್ ವೇಳೆ ನನ್ನ ಮೇಲೆ ದೌರ್ಜನ್ಯ ಎಸಗಿದ್ರು ಎಂದು ನಟಿ ಶೃತಿ ಹರಿಹರನ್ ಆರೋಪಿಸಿದ್ದಾರೆ.

ನಟಿ ಶೃತಿ ಹರಿಹರನ್ ಆರೋಪವನ್ನು ಇಲ್ಲೀವರೆಗೂ ನಟ ಅರ್ಜುನ್ ಸರ್ಜಾ ಅಲ್ಲಗಳೆದಿಲ್ಲ. ಆದ್ರೆ ಸಂಬಂಧಿಕರು, ಆಪ್ತರು ಮಾತ್ರ ಅರ್ಜುನ್ ಸರ್ಜಾ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಸರ್ಜಾ ಅವರ ಮಾವ ಹಿರಿಯ ನಟ ರಾಜೇಶ್ ಈ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದು ನಾಳೆ ರಾಜಿ ಸಂಧಾನಕ್ಕೆ ವೇದಿಕೆ ಸಜ್ಜು ಮಾಡಲಾಗಿದೆ.

ಒಂದು ಹೆಣ್ಣು ಸುಖಾಸುಮ್ಮನೆ ಒಬ್ಬರ ವಿರುದ್ಧ ಈ ವಿಚಾರದಲ್ಲಿ ಆರೋಪ ಮಾಡಲಾರಳು. ಅದರಲ್ಲೂ ತನ್ನ ಶೀಲದ ವಿಚಾರದಲ್ಲಿ ಬೀದಿಗೆ ಬಂದು ಮಾತನಾಡುವ ತಾಕತ್ತು ಕೂಡ ಹೆಣ್ಣಿಗೆ ಕಷ್ಟ ಸಾಧ್ಯ. ಅಂತಹುದರಲ್ಲಿ ನಟಿ ಶೃತಿ ಹರಿಹರನ್ ನೇರವಾಗಿ ಹೆಸರು ಹೇಳುವ ಮೂಲಕ ಎದೆಗಾರಿಕೆ ಪ್ರದರ್ಶನ ಮಾಡಿದ್ದಾರೆ ಎಂದರೆ ಏನೋ ಹೆಚ್ಚು ಕಡಿಮೆ ನಡೆದಿರಬೇಕು. ಒಂದು ವೇಳೆ ಶೃತಿ ಹರಿಹರನ್ ಆರೋಪವನ್ನು ತಳಿ ಹಾಕುವುದಾದರೆ, ಆಕೆ ಹೇಳುತ್ತಿರೋದು ಸುಳ್ಳು ಎಂದು ಆರೋಪಿತ ನಟ ಅರ್ಜುನ್ ಸರ್ಜಾ ಸಾಬೀತು ಮಾಡಬೇಕಿದೆ. ಅಷ್ಟಕ್ಕೂ ಇಷ್ಟು ದಿನ ಕಾನೂನು ಸಲಹೆ ಪಡೆಯುತ್ತಾ ದಿನದೂಡುವ ಪ್ರಮಯವೇ ಇರಲಿಲ್ಲ.

ಈ ರೀತಿಯ ಆರೋಪ ಬಂದ ತಕ್ಷಣ ಅದಕ್ಕೆ ಬೇರೆಬೇರೆ ರೂಪ ಕೊಡುವ ಯತ್ನ ನಡೆಯುತ್ತಿದೆ. ಅದರಲ್ಲೂ ಬಲಪಂಥೀಯ ನಾಯಕ ನಟನ ವಿರುದ್ಧ ಎಡಪಂಥೀಯ ನಟಿ ಹಾಗೂ ಸಹಚರರು ಆರೋಪ ಮಾಡ್ತಿರೋದು ಎಂಬ ಮಾತುಗಳು ಕೇಳಿಬಂದಿವೆ. ತಪ್ಪನ್ನೇ ಮಾಡದಿದ್ರೆ ಯಾವ ಪಂಥದ ನಾಯಕ, ನಾಯಕಿ ಆದರೇನು..? ಆರೋಪದಿಂದ ಮುಕ್ತರಾಗುವುದು ಅಷ್ಟೇ ಮುಖ್ಯವಲ್ಲವೇ ಅನ್ನೋ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ಇಷ್ಟು ದಿನದ ಬಳಿಕ ಆರೋಪ ಮಾಡಿರುವುದು ಅನುಮಾನಕ್ಕೆ ಕಾರಣವಾದರೂ ಆರೋಪದ ಬಳಿಕ ರಾಜಿ ಪಂಚಾಯ್ತಿ ಮೂಲಕ ವಿವಾದಕ್ಕೆ ತೆರೆ ಎಳೆಯಲು ಮುಂದಾಗಿರೋದು ಅನುಮಾನವನ್ನು ಮತ್ತಷ್ಟು ಇಮ್ಮಡಿಗೊಳಿಸಿರೋದು ಮಾತ್ರ ಸುಳ್ಳಲ್ಲ.

Leave a Reply