ಉಪ ಚುನಾವಣೆ: ಕರ್ನಾಟಕದಲ್ಲೂ ಬಿಜೆಪಿಗೆ ಎದುರಾಗುತ್ತಾ ಉತ್ತರ ಪ್ರದೇಶ ಮಾದರಿ ಮುಖಭಂಗ..!?

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ‌ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ‌ ಉಪಚುನಾವಣೆ ಎದುರಾಗಿದ್ದು, ಬಿಜೆಪಿ‌ ಐದು ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಿದೆ. ಅದರಲ್ಲಿ ಬಿಜೆಪಿಯ ಎರಡು‌ ಕ್ಷೇತ್ರ, ಕಾಂಗ್ರೆಸ್‌ನ ಒಂದು‌ ಹಾಗೂ ಜೆಡಿಎಸ್‌ನ ಎರಡು ಕ್ಷೇತ್ರಗಳಿವೆ. ಆದ್ರೆ‌ ಇದೀಗ ರಾಜ್ಯದಲ್ಲಿ‌ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದು, ಎಲ್ಲಾ‌ ಐದು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಹಾಗೂ ಜೆಡಿಎಸ್ ಒಟ್ಟಾಗಿ ನಿಂತಿರುವುದು ಬಿಜೆಪಿ‌ ಪಾಳಯದಲ್ಲಿ ಸೋಲುವ ಭೀತಿ‌ ಎದುರಾಗಿದೆ. ಅದರಲ್ಲೂ‌ ಬಿಜೆಪಿ ಸಂಸದರಿದ್ದ ಶಿವಮೊಗ್ಗ ಹಾಗೂ ಬಳ್ಳಾರಿ ಬಿಜೆಪಿ ಪಾಲಿಗೆ ಮಹತ್ವದ್ದಾಗಿದೆ.

ಇತ್ತೀಚೆಗೆ ನಡೆದ ಉತ್ತರ ಪ್ರದೇಶದ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿಗೆ ತೀವ್ರವಾದ ಮುಖಭಂಗವಾಗಿತ್ತು. ಸಿಎಂ ಯೋಗಿ ಆದಿತ್ಯನಾಥರ ತವರು ಕ್ಷೇತ್ರ ಗೋರಖ್ ಪುರ, ಕೈರಾನಾ ಮತ್ತು ಫುಲ್ಪಪುರದಲ್ಲಿ ಬಿಜೆಪಿಗೆ ಭಾರಿ ಮುಖಭಂಗವಾಗಿತ್ತು. ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ಹಾಗೂ ಮಾಯಾವತಿ ಅವರ ಬಹುಜನ ಸಮಾಜ್ ಪಕ್ಷ ಮೈತ್ರಿಯೊಂದಿಗೆ ಈ ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಮಕಾಡೆ ಮಲಗಿಸಿತ್ತು. ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಹೋರಾಟದಿಂದ ಬಿಜೆಪಿ ವಿರುದ್ಧ  ಫಲಿತಾಂಶ ಬಂದು‌‌ ಬಿಟ್ಟರೆ‌ ಎಂಬುದು ರಾಜ್ಯ ಬಿಜೆಪಿ ನಾಯಕರ ಚಿಂತೆ.

ಕಳೆದ‌ ಬಾರಿ‌ ಉತ್ತರ ಪ್ರದೇಶದಲ್ಲಿ ಅಧಿಕಾರ ಹಿಡಿದಿದ್ದ ಸಮಾಜವಾದಿ ಪಕ್ಷ  ಅಪ್ಪ ಮಕ್ಕಳ‌ ಕಿತ್ತಾಟದಿಂದ ಅಧಿಕಾರ ಕಳೆದುಕೊಂಡಿತ್ತು. ಬಿಜೆಪಿ‌ ಭರ್ಜರಿ ಬಾರಿಸುವ ಮೂಲಕ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಅಧಿಕಾರಕ್ಕೆ‌ ಏರಿತ್ತು. ಆದರೆ ತಕ್ಷಣವೇ ತಪ್ಪನ್ನು ಅರಿತುಕೊಂಡ ಸಮಾಜವಾದಿ ಪಕ್ಷ ಮತಗಳು ಹರಿದು ಹಂಚಿ ಹೋದರೆ‌ ಮಾತ್ರ‌ ಬಿಜೆಪಿ‌ ಗೆಲುವಿಗೆ ಅವಕಾಶ ಅನ್ನೋ ಗುಟ್ಟನ್ನು ಮನದಟ್ಟು ಮಾಡಿಕೊಂಡು‌ ಬಹುಜನ ಸಮಾಜವಾದಿ‌ ಪಕ್ಷದ‌ ನಾಯಕಿ ಮಾಯಾವತಿ ಅವರ ಜಿತೆ ಮಾತುಕತೆ ನಡೆಸಿ ಹೊಂದಾಣಿಕೆ ಸೂತ್ರ ರಚನೆ ಮಾಡಿತ್ತು. ಆ ಬಳಿಕ ಸಿಎಂ ಕ್ಷೇತ್ರವಾದ ಗೋರಖ್‌ಪುರದಲ್ಲೂ ಎಸ್‌ಪಿ, ಬಿಎಸ್‌ಪಿ ಮೈತ್ರಿ ಅಭ್ಯರ್ಥಿ ಗೆಲುವು ಸಾಧಿಸಿದರು. ಉತ್ತರ ಪ್ರದೇಶದಲ್ಲಿ ತನ್ನದೇ ಸರ್ಕಾರವಿದ್ದರೂ ಮೈತ್ರಿ ಅಭ್ಯರ್ಥಿ ವಿರುದ್ಧ ಬಿಜೆಪಿ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ ಈಗ ರಾಜ್ಯದಲ್ಲಿಯೂ ಅದೇ ರೀತಿ ಮೈತ್ರಿ ಇದ್ದು, ಅಧಿಕಾರ ಕೂಡ ದೋಸ್ತಿಗಳ ಹಿಡಿತದಲ್ಲಿದೆ. ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡು ಬಿಜೆಪಿಗೆ ಮತ್ತೆ ಮುಖಭಂಗವಾಗುವಂತೆ ಮಾಡಲು ಕಾಂಗ್ರೆಸ್ ಜೆಡಿಎಸ್ ಎಲ್ಲ ರೀತಿಯ ರಾಜಿಗೂ ಮುಂದಾಗಿ ರಣತಂತ್ರ ರೂಪಿಸಿವೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ತಮ್ಮ ಕ್ಷೇತ್ರ ಶಿವಮೊಗ್ಗದಲ್ಲಿ ಪುತ್ರ ಬಿ.ವೈ ರಾಘವೇಂದ್ರ ಅವರನ್ನೇ ಕಣಕ್ಕಿಳಿಸಿದ್ದರೂ ದೋಸ್ತಿಗಳ ಪಾಳಯದಿಂದ ಮಾಜಿ ಸಿಎಂ ಬಂಗಾರಪ್ಪನವರ ಪುತ್ರ ಮಧು ಬಂಗಾರಪ್ಪ ಸ್ಪರ್ಧಿಸಿದ್ದಾರೆ.  ಅದೇ ರೀತಿ ಮಂಡ್ಯ ಹಾಗೂ ರಾಮನಗರದಲ್ಲಿ ಕಾಂಗ್ರೆಸ್ ಪಕ್ಷದ ಮತಗಳು ಸಂಪೂರ್ಣವಾಗಿ ಒಟ್ಟು ಗೂಡದಿದ್ದರೂ ಗೆಲುವನ್ನು ಕಸಿದುಕೊಳ್ಳಲು ಬಿಜೆಪಿ ಸಾಧ್ಯವಿಲ್ಲ. ಇನ್ನು ಜಮಕಂಡಿಯಲ್ಲಿ ಜಮಖಂಡಿಯಲ್ಲಿ ತಂದೆ ಸಾವಿನ ಬಳಿಕ ಅಖಾಡಕ್ಕೆ ಬಂದಿರುವ ಕಾಂಗ್ರೆಸ್ ನ ಆನಂದ್ ನ್ಯಾಮಗೌಡ ಅವರಿಗೆ ಅನುಕಂಪದ ಅಲೆ ಪ್ಲಸ್ ಪಾಯಿಂಟ್ ಆಗಲಿದೆ. ಇನ್ನು ಬಳ್ಳಾರಿಯಲ್ಲಿ ಶಾಂತ ಹಾಗೂ ಉಗ್ರಪ್ಪ‌ ನಡುವೆ ಬಿಗ್ ಫೈಟ್ ಸಾಕಷ್ಟು ಗಮನ ಸೆಳೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಅವರಿಗೆ ವಿಜಯಮಾಲೆ ಹಾಕಲು ದೋಸ್ತಿಗಳ ಕಸರತ್ತು ಭರ್ಜರಿಯಾಗಿ ನಡೆಯುತ್ತಿದೆ. ಬಿಜೆಪಿ ನಿಯಂತ್ರಣದಲ್ಲಿರುವ ಶಿವಮೊಗ್ಗ ಹಾಗೂ ಬಳ್ಳಾರಿಯಲ್ಲಿ ದೋಸ್ತಿಗಳು ನೀಡುತ್ತಿರುವ ಪೈಪೋಟಿ ಕಮಲ ಪಾಳಯದಲ್ಲಿ ಬೆವರು ಹರಿಸುವಂತೆ ಮಾಡುತ್ತಿದೆ. ಆದರೆ ಇತರೆ ಮೂರು ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲುವಿನ ಸಾಧ್ಯತೆ ತೀರಾ ಕಡಿಮೆ ಇದೆ.

ಉತ್ತರ ಪ್ರದೇಶ ಉಪಚುನಾವಣೆ ಮಾದರಿಯಲ್ಲಿ ಕರ್ನಾಟಕ ಉಪ ಚುನಾವಣೆಯಲ್ಲೂ ಬಿಜೆಪಿಗೆ ಮುಖಭಂಗ ಎದುರಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಇದು ಸಹಜವಾಗಿಯೇ ಬಿಜೆಪಿ ನಾಯಕರ ಚಿತ್ತ ಕೆಡಿಸಿದೆ.

Leave a Reply