ಉಪಚುನಾವಣೆಯಲ್ಲಿ ಬಿಜೆಪಿ ಒಡಕು ಬಯಲು! ಅನಂತ್ ಕುಮಾರ್ ಹೆಗಡೆ ನಿರ್ಲಕ್ಷ್ಯ ಯಾಕೆ?

ಡಿಜಿಟಲ್ ಕನ್ನಡ ಟೀಮ್:

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹಿಂದುತ್ವದ ಫೈರಿಂಗ್ ಬ್ರಾಂಡ್ ಅಂತಾನೇ ಪ್ರಸಿದ್ಧಿ. ಎಡಪಂಥೀಯರು, ಬುದ್ಧಿಜೀವಿಗಳನ್ನು ಹಿಗ್ಗಾಮುಗ್ಗಾ ಜಾಡಿಸುವ ಮೂಲಕ ಹಿಂದುತ್ವ ರಕ್ಷಣೆಗೆ ನಿಂತಿರುವ ನಾಯಕನ ರೀತಿ ಯುವಕರಲ್ಲಿ ಆಕರ್ಷಣೆ ಮೂಡಿಸಿದ್ರು. ಅದರಲ್ಲೂ ಸಂವಿಧಾನ ಬದಲಾವಣೆಗಾಗಿಯೇ ನಾವು ಅಧಿಕಾರಕ್ಕೆ ಬಂದಿರೋದು ಎಂದು ಹೇಳಿಕೆ ನೀಡಿದ ಬಳಿಕ ಸಾಕಷ್ಟು ಅಬ್ಬರದ ಪ್ರಚಾರವನ್ನು ಪಡೆದ್ರು. ಎಲ್ಲಿ ಹೋದರೂ ಏನಾದರೂ ಒಂದು ಹೇಳಿಕೆ ನೀಡುವ ಮೂಲಕ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮಾಧ್ಯಮಗಳಲ್ಲಿ ಹಾಟ್ ಫೇವರಿಟ್ ಆಗಿಬಿಟ್ರು. ಆದ್ರೆ ಇಂಥಹ ಅನಂತ್ ಕುಮಾರ್ ಹೆಗಡೆ ಅವರನ್ನು ಬಿಜೆಪಿ ಈಗ ಪ್ರಚಾರದಿಂದಲೇ ದೂರ ಇಟ್ಟಿದೆ.

ರಾಜ್ಯದಲ್ಲಿ ಪಂಚ ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಅನಂತ್ ಕುಮಾರ್ ಹೆಗಡೆ ಅವರನ್ನು ಯಾವ ರೀತಿಯಲ್ಲೂ ಬಳಸಿಕೊಳ್ತಿಲ್ಲ. ಇದಕ್ಕೆ ಕಾರಣವೇನು ಅನ್ನೋದು ಕಮಲ ಕಾರ್ಯಕರ್ತರಲ್ಲಿ ಪ್ರಶ್ನೆ ಮೂಡಿಸಿದೆ.

ಮೊದಲನೇ ಕಾರಣ ಅನಂತ್ ಕುಮಾರ್ ಹೆಗಡೆ ಮೊದಲೇ ಹಿಂದುತ್ವವಾದಿ, ಅವರು ಬಾಯಿ ಬಿಟ್ರೆ ಹಿಂದೂಗಳನ್ನು ಹೊರತುಪಡಿಸಿ ಉಳಿದವರೆಲ್ಲರನ್ನೂ ಹೀನಾಯಮಾನವಾಗಿ ಬೈದು ಬಿಡ್ತಾರೆ. ಅಕ್ರೋಶದ ಸುರಿಮಳೆಯನ್ನೇ ಸುರಿಸಿಬಿಡ್ತಾರೆ. ಈ ರೀತಿ ಅಬ್ಬರದ ಪ್ರಚಾರ ಮಾಡಿದರೆ ಮತಗಳ ಛಿದ್ರವಾಗುವ ಭೀತಿ ಬಿಜೆಪಿ ಪಾಳಯದಲ್ಲಿ ಮನೆ ಮಾಡಿದೆ. ಅದೇ ರೀತಿ ಅನಂತ್ ಕುಮಾರ್ ಹೆಗಡೆ ಮುಖ್ಯಮಂತ್ರಿ ಅಭ್ಯರ್ಥಿ ಆದರೂ ಅಚ್ಚರಿಯಿಲ್ಲ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ, ಏಕಾಏಕಿ ಮುಖ್ಯಮಂತ್ರಿಯನ್ನಾಗಿ ಮಾಡಿದ ಆರ್‌ಎಸ್‌ಎಸ್, ಕರ್ನಾಟಕದಲ್ಲೂ ಅನಂತ್ ಕುಮಾರ್ ಹೆಗಡೆ ಅವರನ್ನು ಅಚ್ಚರಿಯಾಗಿ ಮುಖ್ಯಮಂತ್ರಿ ಮಾಡಿಬಿಡುತ್ತೆ ಎನ್ನಲಾಗಿತ್ತು. ಆದ್ರೆ ಬಹುಮತ ಬಾರದೆ ಇದ್ದುದ್ದಕ್ಕೆ ಎಲ್ಲರೂ ತಟಸ್ಥರಾದರು. ಇದೇ ಕಾರಣಕ್ಕೆ ಬಿಎಸ್‌ವೈ ಅನಂತ್ ಕುಮಾರ್ ಹೆಗಡೆಯನ್ನು ದೂರ ಇಟ್ಟಿದ್ದಾರೆ ಎನ್ನಲಾಗ್ತಿದೆ.

ಅನಂತ್ ಕುಮಾರ್ ಹೆಗಡೆ ಅಷ್ಟೇ ಅಲ್ಲ, ಬಿಎಸ್‌ವೈ ಪಾಳಯದ ನಾಯಕರು ಮಾತ್ರವೇ ಉಪಚುನಾವಣೆ ಪ್ರಚಾರದಲ್ಲಿ ಕಾಣಿಸಿಕೊಳ್ತಿದ್ದಾರೆ. ಅದನ್ನು ಬಿಟ್ಟರೆ, ಬೇರೆ ಯಾವ ನಾಯಕರೂ ಚುನಾವಣಾ ಪ್ರಚಾರದಲ್ಲಿ ಇಲ್ಲ. ಅಪ್ಪಿತಪ್ಪಿಯೂ ಚುನಾವಣೆ ಬಗ್ಗೆ ಮಾತನಾಡ್ತಿಲ್ಲ. ಇನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಚುನಾವಣಾ ಪ್ರಚಾರದಲ್ಲಿ ಸ್ಥಾನ ಪಡೆದಿದ್ದರೂ ಕೂಡ ವಿದೇಶಕ್ಕೆ ಹೋಗಿದ್ದಾರೆ. ಈ ಮೂಲಕ ಚುನಾವಣೆಯಲ್ಲಿ ಭಾಗಿಯಾಗದೆ ದೂರವಾಗಿದ್ದಾರೆ. ಬಿಎಸ್ ಯಡಿಯೂರಪ್ಪ ತನ್ನ ಹಿಂಬಾಲಕರನ್ನು ಮಾತ್ರವೇ ಎಲ್ಲದಕ್ಕು ನಿಯೋಜನೆ ಮಾಡ್ತಾರೆ, ಉಳಿದವರನ್ನು ಯಾವುದೇ ಕಾರಣಕ್ಕೂ ಗಮನಿಸುವುದಿಲ್ಲ ಅನ್ನೋ ಆರೋಪ ಮೊದಲಿನಿಂದಲೂ ಇದೆ. ಈ ಚುನಾವಣೆಯಲ್ಲೂ ಕೂಡ ಬಿಜೆಪಿಯ ಒಡಕು ಬಯಲಾಗುತ್ತಿದೆ ಎಂದು ಪಕ್ಷದ ಕಾರ್ಯಕರ್ತರಲ್ಲಿ ಚರ್ಚೆಯಾಗುತ್ತಿದೆ.

Leave a Reply