ಡಿಜಿಟಲ್ ಕನ್ನಡ ಟೀಮ್:
ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ನಾನೊಂದು ತೀರ ನೀನೊಂದು ತೀರ ಎನ್ನುವ ಹಾಗೆ ಮುಖ ಮೂತಿ ತಿರುಗಿಸಿ ಹೋಗುತ್ತಿದ್ದ ಕಾಂಗ್ರೆಸ್, ಜೆಡಿಎಸ್ ನಾಯಕರು ಒಂದೇ ವೇದಿಕೆಯಲ್ಲಿ ಕುಳಿತು, ಒಗ್ಗಟ್ಟು ಪ್ರದರ್ಶನ ಮಾಡಿ, ನಾವೆಲ್ಲರೂ ಒಂದೇ, ಮೈತ್ರಿ ಪಕ್ಷದ ಅಭ್ಯರ್ಥಿ ಗೆಲ್ಲಿಸೋದು ಅಷ್ಟೇ ನಮ್ಮ ಮುಂದಿನ ಗುರಿ ಎಂದಿದ್ದಾರೆ. ಇದಕ್ಕೆ ಕಾರಣ ಸಿದ್ದರಾಮಯ್ಯ ಗೌಪ್ಯವಾಗಿ ಸಭೆ ನಡೆಸಿ ಕೊಟ್ಟಿರುವ ಮದ್ದು, ಆ ಮದ್ದು ಜೆಡಿಎಸ್ ನಾಯಕರ ವಿರುದ್ಧ ಕುದಿಯುತ್ತಿದ್ದ ಚಲುವರಾಯಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ನರೇಂದ್ರ ಸ್ವಾಮಿ ಅವರನ್ನು ಸಮಾಧಾನ ಮಾಡಿದೆ. ಈಗ ಎದುರಾಗಿರುವ ಪ್ರಶ್ನೆ ಅಂದ್ರೆ ನಾಗಮಂಗಲದಲ್ಲಿ ಸೋಲಿನ ಸುಳಿಗೆ ಸಿಲುಕಿ ಕಂಗಾಲಾಗಿರುವ ಚಲುವರಾಯಸ್ವಾಮಿ, ಶಿವರಾಮೇಗೌಡರನ್ನು ಗೆಲ್ಲಿಸಲು ಮುಂದಾಗಿದ್ದು ಯಾಕೆ ಅನ್ನೋ ಅನುಮಾನ ಕಾಂಗ್ರೆಸ್ ಕಾರ್ಯಕರ್ತರನ್ನು ಕಾಡುತ್ತಿದೆ.
ಈ ನಡುವೆ ಚಲುವರಾಯಸ್ವಾಮಿ, ಬಾಲಕೃಷ್ಣ, ರಮೇಶ್ ಬಾಬು ಬಂಡಿಸಿದ್ದೇಗೌಡ ಸೇರಿದಂತೆ ಜೆಡಿಎಸ್ ತೊರೆದು ಬಂದಿರುವ ನಾವೆಲ್ಲರೂ ಒಂದೇ. ಯಾವತ್ತೂ ಒಬ್ಬರನ್ನು ಬಿಟ್ಟು ಒಬ್ಬರು ರಾಜಕೀಯ ಮಾಡೋದಿಲ್ಲ ಎಂದು ಸಚಿವ ಜಮೀರ್ ಆಹ್ಮದ್ ಖಾನ್ ಹೇಳಿದ್ದಾರೆ. ಕಳೆದ ವಿಧಾನಸಭೆಗೂ ಮುನ್ನ ಸಿದ್ದರಾಮಯ್ಯ ಅವರನ್ನು ಮೆಚ್ಚಿಕೊಂಡಿದ್ದ ಜೆಡಿಎಸ್ ಶಾಸಕರು, ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡುವ ಮೂಲಕ ಜೆಡಿಎಸ್ ಕೆಂಗ್ಗಂಣ್ಣಿಗೆ ಗುರಿಯಾದರು. ಆ ಬಳಿಕ ಕಾಲಾವಧಿಯಲ್ಲಿ ಪೂರ್ಣ ಆಗುವ ತನಕ ಜೆಡಿಎಸ್ನಲ್ಲಿದ್ದು, ಅವಧಿ ಅಂತ್ಯವಾಗುವ ವೇಳಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರ ಬಂದಾಗ ಇದೇ ಜಮೀರ್ ಅಹ್ಮದ್ ಖಾನ್ ಮಿನಿಸ್ಟರ್ ಆದಾಗ ಎಲ್ಲಾ ದೋಸ್ತಿಗಳು ತಿರುಗಿ ಬಿದ್ದಿದ್ರು. ಶ್ರೀರಂಗಪಟ್ಟಣದ ರಮೇಶ್ ಬಾಬು ಮನೆಗೆ ಭೇಟಿ ನೀಡಿ ಸಮಾಧಾನ ಮಾಡುವ ಯತ್ನ ಮಾಡಿದ್ರು. ಆದ್ರೆ ಎಕ್ಸ್ ಮಿನಿಸ್ಟರ್ ಚಲುವರಾಯಸ್ವಾಮಿ ಯಾವುದಕ್ಕೂ ಸೊಪ್ಪು ಹಾಕದೆ ಚುನಾವಣಾ ಅಖಾಡದಿಂದ ದೂರಸರಿದಿದ್ದರು. ಆದ್ರೀಗ ಎಲ್ಲರೂ ಒಂದಾಗಿದ್ದಾರೆ. ಇದಕ್ಕೆಕಾರಣ ಸಿದ್ದರಾಮಯ್ಯ ಕೊಟ್ಟ ಭರವಸೆ.
ದೇವಡೆಗೌಡರ ಕುಟುಂಬದ ಜೊತೆಗೆ ಅನ್ಯೋನ್ಯತೆ ಇಂದ ರಾಜಕಾರಣ ಮಾಡ್ತಿದ್ದ ಚಲುವರಾಯಸ್ವಾಮಿ, ರಮೇಶ್ ಬಾಬು, ಮಾಗಡಿ ಮಾಜಿ ಶಾಸಕಬಾಲಕೃಷ್ಣ ಸೇರಿದಂತೆ ಎಲ್ಲರೂ ದೂರ ಆಗಿದ್ದರು. ಆ ಬಳಿಕ ಜೆಡಿಎಸ್ ಅಭ್ಯರ್ಥಿ ವಿರುದ್ದವೇ ಸೋತು ಸುಣ್ಣವಾಗಿದ್ದಾರೆ. ಇದೀಗ ಜೆಡಿಎಸ್ ಅಭ್ಯರ್ಥಿ ಬೆಂಬಲಿಸುವ ಅನಿವಾರ್ಯತೆ ಎದುರಾಗಿದೆ. ಆದ್ರೀಗ ನಿಗಮ ಮಂಡಳಿಯಲ್ಲಿ ಸ್ಥಾನ ಮಾನ ನೀಡಲು ನಿರ್ಧಾರ ಮಾಡ್ತೆವೆ. ಯಾವುದೇ ಗೊಂದಲ ಇಲ್ಲದೆ ಮೈತ್ರಿ ಅಭ್ಯರ್ಥಿ ಗೆಲುವಿಗೆ ಕೆಲಸ ಮಾಡಿ ಆ ನಂತರ ಉಪಚುನಾವಣೆ ಮುಗಿಯುತ್ತಿದ್ದ ಹಾಗೆ ಸಚಿವ ಸಂಪುಟ ವಿಸ್ತರಣೆ ಆಗಲೆಬೇಕು, ಆ ನಂತರ ನಿಗಮ ಮಂಡಳಿಗಳ ನೇಮಕವಾಗಲಿದೆ. ಆಗ ನಿಮಗೆ ಚಾನ್ಸ್ ಕೊಡ್ತೇವೆ ಅನ್ನೋ ಭರವಸೆ ಸಿಕ್ಕಿದೆ ಎನ್ನಲಾಗಿದೆ.