ಒಂದೇ ದಿನದಲ್ಲಿ ಚಕ್ರವರ್ತಿ ಆಗಲು ಹೊರಟವರಿಂದ ಬಳ್ಳಾರಿ ಜನರ ಬದುಕು ಬರ್ಬಾತ್: ಡಿಕೆಶಿ

ಡಿಜಿಟಲ್ ಕನ್ನಡ ಟೀಮ್:

ಜಿಲ್ಲೆಯ ಜನರ ಬದುಕನ್ನು ಬರಡು ಮಾಡಿ ಪರಾರಿಯಾಗಿರುವ ಶ್ರೀರಾಮಲು, ಜನಾರ್ಧನರೆಡ್ಡಿ ಅವರ‌ ಕರಾಳ ಛಾಯೆಯಿಂದ ಬಳ್ಳಾರಿಯನ್ನು ಬಂಧಮುಕ್ತ ಮಾಡಲು ನಮಗೆ ಮತ್ತಷ್ಟು ರಾಜಕೀಯ ಶಕ್ತಿ ನೀಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.

ಕೆಲವರು (ರಾಮುಲು, ರೆಡ್ಡಿ ಬಳಗ) ಒಂದೇ ದಿನದಲ್ಲಿ ಚಕ್ರವರ್ತಿ ಆಗಲು ಹೊರಟು ಪ್ರಜೆಗಳನ್ನು ಬೀದಿಗೆ ತಂದು ನಿಲ್ಲಿಸಿದರು. ಒಂದೇ ಹೊತ್ತಿಗೆ ನಾಲ್ಕೈದು ದಿನದ ಊಟ ಮಾಡಿದ್ರೆ ಅಜೀರ್ಣ ಆಗುತ್ತೆ, ವಾಂತಿ-ಬೇಧಿ ಆಗುತ್ತೆ. ಆರೋಗ್ಯ ಕೆಡ್ತದೆ. ಆ ಕುಟುಂಬ ಇವತ್ತು ದೇಶದ ಆರೋಗ್ಯ ಕೆಡಿಸಿದೆ. ಬಳ್ಳಾರಿಯ ಎಲ್ಲ ಕಾರ್ಖಾನೆಗಳು ಮುಚ್ಚುವ ಸ್ಥಿತಿ ತಲುಪಿವೆ ಎಂದು ಲಾರಿ ಮಾಲೀಕರ ಸಂಘದ ಸಭೆಯಲ್ಲಿ ಗುರುವಾರ ಭಾಗವಹಿಸಿ ವಿಷಾದ ವ್ಯಕ್ತಪಡಿಸಿದರು.

ಈಗ ಇತಿಹಾಸ ಕೆಣಕಿ ಯಾವುದೇ ಪ್ರಯೋಜನ ಇಲ್ಲ. ಈಗೇನಾಗಿದೆ, ಮುಂದೇನು ಮಾಡಬೇಕು ಎಂಬುದಷ್ಟೆ ನಮ್ಮ ಮುಂದಿರೋ ವಿಚಾರ. ಜನ ನರಳ್ತಿದ್ದಾರೆ. ಅದರಿಂದ ಅವರನ್ನು ಪಾರು ಮಾಡಬೇಕು. ಅದಕ್ಕೆ ನಾನು ಬದ್ಧ ಎಂದರು.

ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಯನ್ನು ತಡೆದಿದ್ದು ಕಾಂಗ್ರೆಸ್. ಇಂತಹ ಪಕ್ಷದ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅವರಿಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

ಮೂರು ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅವಕಾಶ ಕೊಟ್ಟಿದ್ದೀರಿ. ಆದರೆ ಆ ಪಕ್ಷದವರು ಬಳ್ಳಾರಿಗೆ ಏನು ಮಾಡಿದ್ದಾರೆ ಎನ್ನುವುದು ಮುಖ್ಯ. ಕರುಣಾಕರ ರೆಡ್ಡಿ, ಶಾಂತಾ ಮತ್ತು ಶ್ರೀ ರಾಮುಲು ಅಧಿಕಾರ ಪಡೆದುಕೊಂಡಿದ್ದಾರೆ ಹೊರತು ಜನರಿಗೆ ಏನು ಮಾಡಿಲ್ಲ. ಇಲ್ಲಿ ಎಲ್ಲರಿಗೂ ಉದ್ಯೋಗ ಇತ್ತು. ಇಲ್ಲಿ ಸಂಪತ್ತು ಇತ್ತು. ಆದರೆ, ಇಂದು ಇವೆಲ್ಲವೂ ದೂರ ಆಗಿವೆ. ಇದು ಯಾರಿಂದ ಆಯ್ತು ಎಂಬುದನ್ನು ಅರ್ಥ ಮಾಡಿಕೊಂಡು ಮತ ಚಲಾಯಿಸಬೇಕೆಂದು ಕೋರಿದರು.

ಹತ್ತು-ಹದಿನೈದು ವರ್ಷಗಳಲ್ಲಿ ಬಳ್ಳಾರಿಯಲ್ಲಿ ಏನೆಲ್ಲ ಆಗಿಹೋಗಿದೆ. 18,000 ಲಾರಿ, ಟಿಪ್ಪರ್ ಗಳಿದ್ದವು. ಬೆಂಗಳೂರಲ್ಲಿ ಒಬ್ಬ ಡ್ರೈವರ್ ಕೂಡ ಸಿಗ್ತಿರಲಿಲ್ಲ. ನನ್ನತ್ರಾನೂ 70-80 ಲಾರಿಗಳಿದ್ದವು. ಗ್ರಾನೈಟ್ ವ್ಯವಹಾರಕ್ಕೆ. ಇಲ್ಲಿನ ಅಬ್ಬರದಲ್ಲಿ ಲಾಸ್ ಆಗಿ ಮಾರ್ಕೊಂಡೆ. ಈಗೇನಾಗಿದೆ ಇಲ್ಲಿನ ಕತೆ? ಒಂದೇ ಒಂದು ಕುಟುಂಬದಿಂದಾಗಿ ಇಡೀ ಜಿಲ್ಲೆ ಜನರ ಬದುಕು ಸರ್ವನಾಶವಾಗಿ ಹೋಗಿದೆ. ಎಲ್ಲರೂ 3-4 ಲಕ್ಷಕ್ಕೆಲ್ಲ ಲಾರಿ ಮಾರಿಕೊಂಡು ಹೋಗಿದ್ದಾರೆ. ಇದರಿಂದ 10,000 ಕುಟುಂಬಗಳು ಬೀದಿಗೆ ಬಿದ್ದಿವೆ. ಅವರಿಗೆ ಮತ್ತೇ ಶಕ್ತಿ ಕೊಡೋ ಜವಾಬ್ದಾರಿ ನಮ್ಮ ಮೇಲಿದೆ. ಚುನಾವಣೆ ನಂತರ ಮುಂದಿನ ಕೆಡಿಪಿ ಸಭೆ ಕರೆದು, ಅಲ್ಲಿಗೆ ಜಿಂದಾಲ್ ಮುಖ್ಯರನ್ನು ಕರೆಯಿಸಿ, ಮಾತನಾಡುತ್ತೇನೆ. ಲಾರಿ ಮಾಲಿಕರ ಕುಟುಂಬಗಳಿಗೆ ಅನುಕೂಲವಾಗುವಂತೆ ಮಾಡಿಕೊಡುತ್ತೇನೆ. ಜಿಂದಾಲ್ ಮಾತ್ರ ಅಲ್ಲದೆ, ಈ ಭಾಗದಲ್ಲಿರುವ ಎಲ್ಲಾ ಕಾರ್ಖಾನೆಗಳ ಮುಖ್ಯಸ್ಥರ ಜತೆ ಮಾತಾಡುತ್ತೇನೆ ಎಂದು ಲಾರಿ ಮಾಲಿಕರಿಗೆ ಭರವಸೆ ನೀಡಿದರು.

ಲಾರಿ ಮಾಲಿಕರು, ಚಾಲಕರು, ಕಾರ್ಮಿಕರು ಎಲ್ಲರೂ ನಮ್ಮ ಅಭ್ಯರ್ಥಿ ಗೆ ಆಶೀರ್ವಾದ ಮಾಡಬೇಕು. ನಿಮ್ಮ ಸೇವೆಗೆ ನಾನು ಸಿದ್ಧನಿದ್ದೇನೆ. ನೀವು ನಮಗೆ ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಜೆ.ಎಸ್.ಆಂಜನೇಯ, ಜಿಲ್ಲಾಧ್ಯಕ್ಷ ಮಹಮ್ಮದ್ ರಫೀಕ್, ಲಾರಿ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ವಿಜಯ ಭಾಸ್ಕರ್ ರೆಡ್ಡಿ, ರವಿ, ಮಂಜುನಾಥ ಮತ್ತಿತರರು ಇದ್ದರು.

Leave a Reply