ರಾಮುಲು ಬಳ್ಳಾರಿಯವರಲ್ಲ ಈಗ ಅವರೂ ಪರ ಊರಿನವರು: ಡಿಕೆಶಿ

ಡಿಜಿಟಲ್ ಕನ್ನಡ ಟೀಮ್:

‘ಪ್ರಚಾರಕ್ಕಾಗಿ ಶ್ರೀರಾಮುಲು ಅವರು ಬಳ್ಳಾರಿಗೆ ಬಂದಿದ್ದಾರೆ. ಬಳ್ಳಾರಿಗೂ ಶ್ರೀರಾಮುಲು ಅವರಿಗೂ ಯಾವುದೇ ಸಂಬಂಧವಿಲ್ಲ…’ ಇದು ಬಳ್ಳಾರಿ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಅವರು ಶ್ರೀರಾಮುಲು ವಿರುದ್ಧ ಮಾಡಿದ ಟೀಕೆ.

ಗುರುವಾರ ಬಳ್ಳಾರಿ ನಗರದ ವಾರ್ಡಗಳಲ್ಲಿ ಪ್ರಚಾರ ಕಾರ್ಯದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಲ ಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ಅವರು ಹೇಳಿದ್ದಿಷ್ಟು…

‘ಶ್ರೀರಾಮುಲು ಅವರು ಜಾತಿ ಮೇಲೆ ರಾಜಕಾರಣ ಮಾಡುತ್ತಿದ್ದಾರೆ ಆದರೆ ಕಾಂಗ್ರೆಸ್ ಜಾತಿ ಮೇಲೆ ಎಂದಿಗೂ ರಾಜಕಾರಣ ಮಾಡಿಲ್ಲ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಎಲ್ಲಾ ಸಮುದಾಯದವರು ಅಧಿಕಾರದಲ್ಲಿದ್ದ ಹಾಗೆ. ಶ್ರೀರಾಮುಲು ಅವರು ಈ ಜಿಲ್ಲೆಯನ್ನು ಬಿಟ್ಟು ಬೇರೆ ಕಡೆ ಹೋಗಿದ್ದಾರೆ. ಅವರಿಗೆ ಬಳ್ಳಾರಿ ಜನರ ಮೇಲೆ ಮತದಾರರ ಮೇಲೆ ವಿಶ್ವಾಸವಿಲ್ಲ. ಇಲ್ಲಿನ ಜನರು ತಮಗೆ ಮತ ಹಾಕುವುದಿಲ್ಲ ಎಂದು ಭಾವಿಸಿ ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಹೀಗಾಗಿ ರಾಮುಲು ಅವರು ಕೂಡ ಈಗ ನನ್ನಂತೆ ಹೊರಗಿನ ಜಿಲ್ಲೆಯವರು. ನಾನಾದರೂ ಜಿಲ್ಲೆಯ ಉಸ್ತುವಾರಿಯನ್ನು ಹೊತ್ತಿದ್ದು ಇಲ್ಲಿನ ಜನರ ಸೇವೆಗೆ ಆಗಮಿಸಿದ್ದೇನೆ. ಆದರೆ ಶ್ರೀರಾಮುಲು ಅವರು ಕೇವಲ ಪ್ರಚಾರಕ್ಕಾಗಿ ಆಗಮಿಸಿದ್ದಾರೆ. ಈಗ ಅವರಿಗೂ ಬಳ್ಳಾರಿಗೂ ಯಾವುದೇ ಸಂಬಂಧವಿಲ್ಲ.’

ಬಳ್ಳಾರಿ ಉಪ ಚುನಾವಣೆಯಲ್ಲಿ ಶಾಂತಾ ಅವರು ಹಾಗೂ ಉಗ್ರಪ್ಪ ನವರು ಸ್ಪರ್ಧಿಸಿದ್ದು ಇಲ್ಲಿ ಇವರಿಬ್ಬರ ನಡುವಿನ ಸ್ಪರ್ಧೆ ಇದೆ. ಹೀಗಾಗಿ ಶ್ರೀರಾಮುಲು ಮತ್ತೂ ಡಿಕೆ ಶಿವಕುಮಾರ್ ನಡುವಣ ಸ್ಪರ್ಧೆ ಎಂದು ಹೇಳುವುದನ್ನು ಬಿಡಿ. ಈ ಚುನಾವಣೆಯನ್ನು ಕಾಂಗ್ರೆಸ್ ವರ್ಸಸ್ ಬಿಜೆಪಿ ನಡುವಣ ಸ್ಪರ್ಧೆ ಎಂದು ನೋಡಿ. ಸಂಸತ್ತಿನಲ್ಲಿ ನಮ್ಮನ್ನು ಯಾರು ಪ್ರತಿನಿಧಿಸಬೇಕು ಯಾರು ತಮ್ಮ ವ್ಯಕ್ತಿ ಎಂಬುದನ್ನು ಮತದಾರರು ಯೋಚಿಸುತ್ತಾರೆ. ಶ್ರೀರಾಮುಲು ಅವರನ್ನು ಸಂಸತ್ತಿಗೆ ಕಳುಹಿಸಿದ್ದೆವು ಅವರು ಏನು ಮಾಡಿದರು ಈಗ ಉಗ್ರಪ್ಪ ಅವರನ್ನು ಕಳುಹಿಸಿದರೆ ಬಳ್ಳಾರಿ ಪರವಾಗಿ ಏನು ಮಾಡುತ್ತಾರೆ. ಬಿಜೆಪಿ ಸರ್ಕಾರ ಬಳ್ಳಾರಿಗೆ ಏನು ಮಾಡಿದ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಏನು ಕೊಡುಗೆ ಕೊಟ್ಟಿದೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಪರಿಸ್ಥಿತಿ ಹೇಗಿತ್ತು ಈಗ ಪರಿಸ್ಥಿತಿ ಹೇಗಿದೆ ಹೇಗಿದೆ ಅಂತ ಮತದಾರರು ತೀರ್ಮಾನ ಮಾಡುತ್ತಾರೆ.’

‘ಈ ಚುನಾವಣೆಯಲ್ಲಿ ನಾವು ಮತದಾರರಿಗೆ ಮನವಿ ಮಾಡಿಕೊಳ್ಳುವುದು ಏನೆಂದರೆ, ನಿಮ್ಮನ್ನು ಪ್ರತಿನಿಧಿಸುವ, ನಿಮ್ಮ ದ್ವನಿಯನ್ನು ಎತ್ತುವ, ನಿಮ್ಮ ಸೇವೆ ಮಾಡುವ, ನಿಮ್ಮ ಋಣ ತೀರಿಸುವ ಅಭ್ಯರ್ಥಿಯನ್ನು ಆಯ್ಕೆ ಮಾಡಿ. ಆ ದೃಷ್ಟಿಯಿಂದ ಈ ಚುನಾವಣೆಯನ್ನು ಉಗ್ರಪ್ಪ ವರ್ಸಸ್ ಶಾಂತ ಎಂದು ಪರಿಗಣಿಸುವಂತೆ ಮತದಾರರಲ್ಲಿ ಮನವಿ ಮಾಡಿಕೊಳ್ಳುತ್ತೇನೆ.’

Leave a Reply