ಆಂಧ್ರದಲ್ಲಿ ಜಗನ್​ ಮೇಲೆ ಅಟ್ಯಾಕ್​?

ಡಿಜಿಟಲ್ ಕನ್ನಡ ಟೀಮ್:

ಆಂಧ್ರಪ್ರದೇಶದಲ್ಲಿ ವಿರೋದ ಪಕ್ಷದ ನಾಯಕ ಜಗನ್​ಮೋಹನ್​ ರೆಡ್ಡಿ ಕೊಲೆ ಯತ್ನ ನಡೆದಿದೆ. ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಯುವಕನೊಬ್ಬ ಜಗನ್ ಭುಜಕ್ಕೆ ಚಾಕು ಹಾಕಿದ್ದಾನೆ. ವಿಶಾಪಟ್ಟಣಂ ಏರ್​ಪೋರ್ಟ್​ ಒಳಗೆ ಜಗನ್ ಮೋಹನ್​ ರೆಡ್ಡಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದ ಅಲ್ಲಿನ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್​ ಎಂಬಾತ ಜಗನ್​ ಮೇಲೆ ದಾಳಿ ಮಾಡಿದ್ದಾನೆ.

ಸೆಲ್ಫಿ ತೆಗೆದು ಕೊಳ್ಳುವ ಸಂದರ್ಭದಲ್ಲಿ ಜಗನ್ ಜೊತೆ ಮಾತು ಆರಂಭಿಸಿದ ಶ್ರೀನಿವಾಸ್ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಪಡೆದರೆ ಏನು ಮಾಡುವಿರಿ ಎಂದು ಕೇಳಿದ್ದಾನೆ. ಹೀಗೆ ಮಾತುಕತೆ ಆರಂಭಿಸುತ್ತಿದ್ದಂತೆ ಶ್ರೀನಿವಾಸ್ ಕೋಳಿ ಕಾಳಗದಲ್ಲಿ ಕೋಳಿಗಳ ಕಾಲಿಗೆ ಕಟ್ಟುವ ಸಣ್ಣ ಚಾಕುವಿನಿಂದ ಜಗನ್ ಕುತ್ತಿಗೆ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ್ದಾನೆ. ಈ ವೇಳೆ ಎಚ್ಚೆತ್ತ ಜಗನ್ ಕೈ ಅಡ್ಡ ನೀಡಿದ ಪರಿಣಾಮ ಭುಜಕ್ಕೆ ಚಾಕು ಚುಚ್ಚಿದೆ. ಸ್ಥಳದಲ್ಲೇ ರಕ್ತಸ್ರಾವವಾಯಿತು. ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಯುವಕ​ನನ್ನ ಸುತ್ತುವರೆದು ವಶಕ್ಕೆ ತೆಗೆದುಕೊಂಡಿದ್ದಾರೆ.

ಯಾವುದೇ ಏರ್‌ಪೋರ್ಟ್‌ ಒಳಗೆ ಸಣ್ಣದೊಂದು ನೈಲ್ ಕಟ್ಟರ್ ಕೂಡ ತೆಗೆದುಕೊಂಡು ಹೋಗಲು ಭದ್ರತಾ ಸಿಬ್ಬಂದಿ ಬಿಡುವುದಿಲ್ಲ. ಆದ್ರೆ ಯುವಕ ಶ್ರೀನಿವಾಸ್​ ಚಾಕು ಕೊಂಡೊಯ್ದಿದ್ದು ಹೇಗೆ..? ಅನ್ನೊದು ಅನುಮಾನ ಮೂಡಿಸುತ್ತಿದೆ.

ದಿವಂಗತ ನಾಯಕ ರಾಜಶೇಖರ ರೆಡ್ಡಿ ಸಾವಿನ ಬಳಿಕ ಆಂಧ್ರದಲ್ಲಿ ರಾಜಕೀಯ ಮೇಲಾಟ ನಡೆದು ಕಾಂಗ್ರೆಸ್​ ಬಿಟ್ಟು ವೈಎಸ್​ಆರ್​ ಕಾಂಗ್ರೆಸ್​ ಕಟ್ಟಿದ್ದು, ಈ ಬಾರಿ ಎಲೆಕ್ಷನ್​ನಲ್ಲಿ ಅಧಿಕಾರಕ್ಕೆ ಬರುವ ಸಾಧ್ಯತೆಯಿದ್ದು, ಅದಕ್ಕಾಗಿಯೇ ದಾಳಿ ನಡೆಸಲಾಗಿದೆ ಅನ್ನೋ ಮಾತುಗಳು ಕೇಳಿಬಂದಿವೆ.. ದಾಳಿ ವಿಚಾರ ಗೊತ್ತಾಗ್ತಿದ್ದ ಹಾಗೆ ಏರ್​​ಪೋರ್ಟ್ ಎದುರು ಹೈಡ್ರಾಮಾವೇ ನಡೆದಿದ್ದು, ವೈಎಸ್​ಆರ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಚಾಕು ಇರಿತಕ್ಕೆ ಒಳಗಾದ ಜಗನ್ಮೋಹನ್​ ರೆಡ್ಡಿ​ಗೆ ವಿಶಾಖಪಟ್ಟಣಂ ಏರ್​ಪೋರ್ಟ್​ನಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೈದ್ರಾಬಾದ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈಎಸ್​ಆರ್​​ ಕಾಂಗ್ರೆಸ್​ ಕಾರ್ಯಕರ್ತರು ಆಸ್ಪತ್ರೆ ಎದುರು ಭಾರೀ ಪ್ರತಿಭಟನೆ ನಡೆಸಿದ್ದು, ವಿರೋಧ ಪಕ್ಷದ ನಾಯಕನಾಗಿರುವ ಜಗನ್ಮೋಹನ್​ ರೆಡ್ಡಿ ಹತ್ಯೆಗೆ ಸರ್ಕಾರವೇ ಯತ್ನಿಸಿದೆ ಎಂದು ವೈಎಸ್​ಆರ್​ ಕಾಂಗ್ರೆಸ್​ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಸಾದುದ್ದೀನ್​ ಓವೈಸಿ ಟ್ವಿಟ್ಟರ್​ನಲ್ಲಿ ಆಕ್ರೋಶ ಹೊರ ಹಾಕಿದ್ದು, ಇದು ಚಂದ್ರಬಾಬು ನಾಯ್ಡು ಸರ್ಕಾರದ ಭದ್ರತಾ ವೈಫಲ್ಯ ಅಂತಾ ಟೀಕಿಸಿದ್ದಾರೆ.

ಅಭಿಮಾನಿಗಳಿಗಾಗಿ ಟ್ವೀಟ್ ಮಾಡಿರೋ ಜಗನ್ಮೋಹನ್ ರೆಡ್ಡಿ, ನಾನು ಸೇಫ್ ಅಂತ ಹೇಳಿದ್ದಾರೆ. ಈ ಮಧ್ಯೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಕೇಂದ್ರ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Leave a Reply