ಟಿಎ, ಡಿಎ ತಗೊಳ್ಳೋ ಶಾಂತಕ್ಕ ಬೇಕಾ? ಸಿಂಹಘರ್ಜನೆ ಮಾಡೋ ಉಗ್ರಪ್ಪ ಬೇಕಾ?: ಡಿಕೆಶಿ ಪ್ರಶ್ನೆ

ಡಿಜಿಟಲ್ ಕನ್ನಡ ಟೀಮ್:

ಸಂಸತ್ತಿಗೆ ಹೋಗಿ ಟಿಎ, ಡಿಎ ಬಿಲ್ ತಗೊಂಡು ಬರೋರು (ಶಾಂತಾ) ಬೇಕಾ..? ಅಥವಾ ಬಳ್ಳಾರಿ ಬಗ್ಗೆ ಸಿಂಹ ಘರ್ಜನೆಯಲ್ಲಿ ಮಾತನಾಡೋರು (ಉಗ್ರಪ್ಪ) ಬೇಕಾ..? ನೀವೇ ತೀರ್ಮಾನ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಬಳ್ಳಾರಿಯಿಂದ ಬಿಜೆಪಿಯ ಮೂವರನ್ನು ಸಂಸತ್ತಿಗೆ ಕಳುಹಿಸಿದ್ದೀರಿ. ಕರುಣಾಕರರೆಡ್ಡಿ, ಶಾಂತಕ್ಕಾ, ಶ್ರೀರಾಮುಲು ಅಣ್ಣಾವ್ರನ್ನ. ಒಂದು ದಿನ ನಿಮ್ಮ ಸಮಸ್ಯೆ ಬಗ್ಗೆ, ಕಷ್ಟ-ಸುಖದ ಬಗ್ಗೆ ಅವರು ಮಾತಾಡೀದ್ದಾರಾ? ಬಳ್ಳಾರಿ ಧ್ವನಿಯನ್ನ ಸಂಸತ್ತಿನಲ್ಲಿ ಕೇಳಿಸಿದ್ದಾರಾ? ಈಗ ಶಾಂತಕ್ಕನವರನ್ನು ಕೇಳಿ, ನಿಮಗೆ ಯಾಕೆ ಮತ ಕೊಡಬೇಕು ಅಂತಾ ಎಂದು ಬಾಪೂಜಿನಗರ, ಬ್ರೂಸ್ ಪೇಟೆ ಮತ್ತಿತರ ಕಡೆ ನಡೆಸಿದ ರೋಡ್ ಶೋನಲ್ಲಿ ಡಿಕೆಶಿ ಶುಕ್ರವಾರ ಮತದಾರರಿಗೆ ಕಿವಿಮಾತು ಹೇಳಿದರು.

ರಾಮುಲು ಮೊಳಕಾಲ್ಮೂರಿನಲ್ಲಿ ನಿಲ್ಲಬಹುದು. ದೂರದ ಬಾದಾಮಿಯಲ್ಲಿ ನಿಲ್ಲಬಹುದು. ಆದರೆ ಪಕ್ಕದೂರಿನ ಉಗ್ರಪ್ಪನವರು ಇಲ್ಲಿ ಬಂದು ನಿಲ್ಲಬಾರದು ಎಂದರೆ ಯಾವ ನ್ಯಾಯ? ರಾಮುಲು ಗದಗ ಜಿಲ್ಲೆ ಉಸ್ತುವಾರಿ ಸಚಿವರಾಗಬಹುದು. ಕರುಣಾಕರರೆಡ್ಡಿ ಚಿತ್ರದುರ್ಗ ಉಸ್ತುವಾರಿ ಹೊರಬಹುದು. ಆದರೆ ನಾನು ಮಾತ್ರ ಬಳ್ಳಾರಿ ಜಿಲ್ಲೆ ಉಸ್ತುವಾರಿ ವಹಿಸಿಕೊಳ್ಳಬಾರದು ಅಂದರೆ ಹೇಗೆ? ಈಗ ರಾಮುಲು ಮತ್ತು ನಾನು ಇಬ್ಬರೂ ಹೊರಗಿನವರು. ರಾಮುಲು ಚಿತ್ರದುರ್ಗದಿಂದ ಇಲ್ಲಿಗೆ ಪ್ರಚಾರಕ್ಕೆ ಬಂದಿದ್ದಾರೆ. ನಾನು ಬೆಂಗಳೂರಿಂದ ಬಂದಿದ್ದೇನೆ, ಅಷ್ಟೇ. ಇಲ್ಲಿ ಫೈಟ್ ಇರೋದು ಉಗ್ರಪ್ಪ ಮತ್ತು ಶಾಂತಕ್ಕ ನಡುವೆ. ಸಂಸತ್ತಿನಲ್ಲಿ ಸಿಂಹದಂತೆ ಘರ್ಜನೆ ಮಾಡೋ ತಾಕತ್ತಿರೋ ಉಗ್ರಪ್ಪ ಅವರನ್ನು ತಂದು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಸೈಲೆಂಟ್ ಆಗಿರೋ ಶಾಂತಕ್ಕ ಬೇಕಾ? ಗುಂಡು ಸಿಡಿದಂಗೆ ಮಾತಾಡೋ ಉಗ್ರಪ್ಪ ಬೇಕಾ? ನೀವೇ ಡಿಸೈಡ್ ಮಾಡಿ ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡುತ್ತಿದ್ದಂತೆ ಸಂಕಟಕ್ಕೆ ಬಿದ್ದು ಈ ರಾಜ್ಯನಾ ಎರಡು ಭಾಗ ಮಾಡಬೇಕು ಎಂದ ರಾಮುಲು ಅಣ್ಣಾವ್ರ ಮಾತು ಕೇಳ್ತೀರಾ? ಒಂದೇ ತಾಯಿ ಮಕ್ಕಳಂತೆ ಬದುಕಬೇಕು ಅನ್ನೋ ಕಾಂಗ್ರೆಸ್ ಸಿದ್ಧಾಂತ ಒಪ್ತೀರಾ? ನೀವೇ ಹೇಳಿ ಎಂದರು.

ಸುಮ್ಮ-ಸುಮ್ಮನೆ ರಾಜೀನಾಮೆ ನೀಡಿ ಮತದಾರರ ತಲೆ ಮೇಲೆ ಮೂರು ಬಾರೀ ಮರುಚುನಾವಣೆ ಹೇರಿರುವ ರಾಮುಲು ಅಣ್ಣಾವ್ರ ನಡೆಯನ್ನು ಹೇಗೆ ಸಹಿಸಿಕೊಳ್ಳುತ್ತೀರಾ? ಅಂಥವರು ನಿಮಗೆ ಬೇಕಾ ಎಂದು ಪ್ರಶ್ನಿಸಿದರು.

ಅಭ್ಯರ್ಥಿ ಉಗ್ರಪ್ಪನವರು ಮಾತನಾಡಿ, ಯಾವ ಜನ್ಮದ ಪುಣ್ಯವೋ ಏನೋ, ಅದ್ಯಾವ ಋಣಾನುಬಂಧವೋ ಏನೋ ನಾನು ನಿಮ್ಮ ಮುಂದೆ ಬಂದು ನಿಂತಿದ್ದೇನೆ. ಹೋದಲೆಲ್ಲ ನೀವು ತೋರುತ್ತಿರುವ ಪ್ರೀತಿ ನನ್ನನ್ನು ಕಟ್ಟಿ ಹಾಕಿದೆ. ನಿಮಗಾಗಿ ಅನವರತ ದುಡಿದು ಋಣ ತೀರಿಸುತ್ತೇನೆ. ನನಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

ಗ್ಯಾಸ್, ಡೀಸೆಲ್, ಪೆಟ್ರೋಲ್ ಬೆಲೆ ದಿನೇ ದಿನೇ ಏರುತ್ತಿರುವ ಈ ಸಂದರ್ಭದಲ್ಲಿ ಸಂಸತ್ತಿನಲ್ಲಿ ಒಮ್ಮೆಯೂ ಧ್ವನಿ ಎತ್ತದ ಶಾಂತಾ ಅವರಂಥವರಿಂದ ಏನು ಪ್ರಯೋಜನಾ? ನಿಮ್ಮ ಮನೆ ಮಗನಾಗಿ ದುಡಿಯುತ್ತೇನೆ. ಸಂಸತ್ತಿನಲ್ಲಿ ನಿಮ್ಮ ಧ್ವನಿಯಾಗುತ್ತೇನೆ ಎಂದು ಹೇಳಿದರು. ಸಚಿವ ಯು.ಟಿ. ಖಾದರ್, ಅನಿಲ್ ಲಾಡ್ ಮತ್ತಿತರ ಮುಖಂಡರು ರೋಡ್ ಶೋನಲ್ಲಿ ಭಾಗವಹಿಸಿದ್ದರು.

Leave a Reply