ಬಿಹಾರದಲ್ಲಿ ಬಿಜೆಪಿ ಬುದ್ಧಿವಂತಿಕೆ! ಜೆಡಿಯು ಜೊತೆ 20-20 ಪಾಲುದಾರಿಕೆ

ಡಿಜಿಟಲ್ ಕನ್ನಡ ಟೀಮ್:

ಮುಂಬರುವ ಲೋಕಸಭಾ ಚುನಾವಣೆಗೆ ತಾಲೀಮು ಆರಂಭಿಸಿರುವ ಬಿಜೆಪಿ ತನ್ನ ಎನ್ ಡಿಎ ಮೈತ್ರಿ ಕೂಟದ ಬೇರು ಗಟ್ಟಿ ಮಾಡಿಕೊಳ್ಳುವತ್ತ ಗಮನ ಹರಿಸಿದೆ. ಅದರ ಮೊದಲ ಹೆಜ್ಜೆಯಾಗಿ ಬಿಹಾರದಲ್ಲಿ ಜೆಡಿಯು ಜೊತೆಗಿನ ಮೈತ್ರಿಯನ್ನು ಬಲಪಡಿಸಿಕೊಳ್ಳಲು 20 20 ಪಾಲುದಾರಿಕೆಯ ಸೂತ್ರ ಅಳವಡಿಸಿಕೊಳ್ಳಲು ಮುಂದಾಗಿದೆ. ಇದರೊಂದಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಹಾರದ 40 ಕ್ಷೇತ್ರಗಳ ಪೈಕಿ ಬಿಜೆಪಿ 20 ಹಾಗೂ ಜೆಡಿಯು 20 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿವೆ.

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡು ವಿರೋಧ ಪಕ್ಷ ಸೇರಿದ್ದ ಬಿಜೆಪಿ, ತಂತ್ರಗಾರಿಕೆ ಮೂಲಕ ಮತ್ತೆ ಅಧಿಕಾರ ಹಿಡಿದಿದೆ. ಬಿಹಾರದಲ್ಲಿ ಲಾಲೂ ಪ್ರಸಾದ್ ನೇತೃತ್ವದ ಆರ್‌ಜೆಡಿ, ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಹಾಗೂ ಕಾಂಗ್ರೆಸ್ ಮಹಾಮೈತ್ರಿ ಮೂಲಕ ಅಧಿಕಾರ ಹಿಡಿದಿತ್ತು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಆರ್ ಜೆಡಿ ಹಾಗೂ ಜೆಡಿಯು ನಡುವೆ ಭಿನ್ನಾಭಿಪ್ರಾಯದ ಲಾಭ ಪಡೆದ ಕಮಲ ಪಡೆ, ತನ್ನ ಹಳೇ ಸ್ನೇಹಿತ ನಿತೀಶ್ ಕುಮಾರ್ ಮನಸ್ಸು ಬದಲಾಯಿಸಿ ಮತ್ತೆ ಎನ್ ಡಿಎ ಮೈತ್ರಿಕೂಟ ಮೈತ್ರಿ ಕೂಟದಲ್ಲಿ ಸೇರಿಸಿಕೊಳ್ಳಲು ಯಶಸ್ವಿಯಾಗಿತ್ತು. ಬಳಿಕ ನಿತೀಶ್ ಕುಮಾರ್ ರಾಜೀನಾಮೆ ನೀಡಿದ ಮರುದಿನವೇ ಬಿಜೆಪಿ ಬೆಂಬಲದೊಂದಿಗೆ ಮತ್ತೆ ಸಿಎಂ ಆಗಿ ಅಧಿಕಾರಕ್ಕೇರಿದ್ರು.

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಶಿವಸೇನೆ ಹಾಗೂ ಆಂಧ್ರಪ್ರದೇಶದ ಟಿಡಿಪಿ ತನ್ನ ಮೇಲೆ ಮುನಿಸಿಕೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಜೆಡಿಯು ಜೊತೆಗಿನ ಸಂಬಂಧ ಗಟ್ಟಿ ಮಾಡಿಕೊಳ್ಳಲು ಮುಂದಾಗಿದೆ. ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು ಎಂಬುದರ ಬಗ್ಗೆ ಕಳೆದ ಕೆಲವು ದಿನಗಳಿಂದ ಚರ್ಚೆ ಶುರುವಾಗಿತ್ತು. ಇರುವ 40 ಲೋಕಸಭಾ ಕ್ಷೇತ್ರಗಳ ಪೈಕಿ, 25 ಸ್ಥಾನಗಳನ್ನು ತನಗೆ ಬಿಟ್ಟುಕೊಡಬೇಕು, ಇನ್ನುಳಿದ ೧೫ ಸ್ಥಾನಗಳಲ್ಲಿ ಜೆಡಿಯು ಸ್ಪರ್ಧೆ ಮಾಡ್ಬೇಕು ಎಂದು ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಆಗ್ರಹ ಮಾಡಿದ್ದರು. ದೇಶದಲ್ಲಿ ಮೋದಿ ಅಲೆಯಿದೆ, ಜೆಡಿಯು ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧೆ ಸರಿಯಾಗಲ್ಲ ಎಂದು ವಾದಿಸಿದ್ದರು.

ಬಿಜೆಪಿಯಂತೆ ಜೆಡಿಯು ಕೂಡ 25 ಸ್ಥಾನಗಳಿಗಾಗಿ ಪಟ್ಟು ಹಿಡಿದಿತ್ತು. ಬಿಜೆಪಿಗೆ ಹೆಚ್ಚಿನ ಸ್ಥಾನಗಳನ್ನು ಬಿಟ್ಟುಕೊಡಲು ಒಪ್ಪದ ಜೆಡಿಯು ಮುಖಂಡರು ದೇಶದಲ್ಲಿ ಮೋದಿ ಅಲೆ ಇದೆಯೋ ಇಲ್ವೋ ಗೊತ್ತಿಲ್ಲ. ಆದ್ರೆ ಬಿಹಾರದಲ್ಲಿ ಇರೋದು ಮಾತ್ರ ನಿತೀಶ್ ಕುಮಾರ್ ಅಲೆ. ಇಲ್ಲಿ ಮೋದಿ ಅಲೆ ವರ್ಕೌಟ್ ಆಗಲ್ಲ ಎಂದು ಪ್ರತಿವಾದಿಸಿತ್ತು.

ಹೀಗಾಗಿ ಎರಡು ಪಕ್ಷಗಳ ನಡುವೆ ಮತ್ತೆ ಅಸಮಾಧಾನದ ಹಾಗೆಯಾಡಲು ಶುರು ಮಾಡಿತ್ತು. ಈ ಸಮಸ್ಯೆ ದೊಡ್ಡದಾಗುವ ಮುನ್ನ ಬಿಜೆಪಿ ಎಚ್ಚೆತ್ತುಕೊಂಡಿತು. ಶುಕ್ರವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಜೆಡಿಎಸ್ ಅಧ್ಯಕ್ಷ ನಿತೀಶ್ ಕುಮಾರ್ ಸಭೆ ನಡೆಸಿ ಉಭಯ ಪಕ್ಷಗಳು ಕ್ಷೇತ್ರಗಳನ್ನು ಹಂಚಿಕೊಳ್ಳಲು ನಿರ್ಧರಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಆರ್‌ಜೆಡಿ ಹಾಗು ಜೆಡಿಯು ಹೊಂದಾಣಿಕೆ ಮಾಡಿಕೊಂಡಾಗ ಬಿಜೆಪಿ ಧೂಳೀಪಟವಾಗಿತ್ತು. ಆದ್ರೀಗ ಬಿಜೆಪಿ ಬುದ್ಧಿವಂತಿಕೆ ಪ್ರದರ್ಶಿಸಿ ಸಮಬಲದ ಹೋರಾಟಕ್ಕೆ ಸಜ್ಜಾಗಿದೆ.

Leave a Reply