ದೋಸ್ತಿಗಳ ಬಸ್ಕಿ ಹೊಡೆಸುತ್ತಿರೋ ಬಿಎಸ್​ವೈ!

ಡಿಜಿಟಲ್ ಕನ್ನಡ ಟೀಮ್:

ತಮ್ಮದೇ ಆದ ವಾಕ್ಚಾತುರ್ಯದಿಂದ ಕಾಂಗ್ರೆಸ್​-ಜೆಡಿಎಸ್​ ದೋಸ್ತಿ ನಡುವೆ ಹುಳಿ ಹಿಂಡುವ ಯೋಜನೆ ಹಾಕಿಕೊಂಡಿರುವ ಬಿಜೆಪಿ ಮುಖಂಡ ಯಡಿಯೂರಪ್ಪ ಸಿಕ್ಕ ಅವಕಾಶಗಳನ್ನು ಮೈತ್ರಿಪಾತ್ರರ ಚುಚ್ಚಲು ಬಳಸಿಕೊಳ್ಳುತ್ತಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಯಡಿಯೂರಪ್ಪ, ಚಲುವರಾಯಸ್ವಾಮಿ ಅವರನ್ನು ಸೋಲಿಸಿರುವ ಜೆಡಿಎಸ್ಸಿಗೆ ಸರಿಯಾಗಿ ಬುದ್ಧಿ ಕಲಿಸಬೇಕು ಅಂದ್ರೆ ಬಿಜೆಪಿ ಅಭ್ಯರ್ಥಿ ಡಾ. ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿ ಎಂದು ಕರೆ ನೀಡಿದ್ರು. ಈ ಹಿಂದೆ ಶಿವಮೊಗ್ಗದ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಅವರು, ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದು ಯಾರು..? ಎಂದು ಪ್ರಶ್ನಿಸಿದ್ದರು. ಜೆಡಿಎಸ್​ ಬೆಂಬಲಕ್ಕೆ ನಿಂತಿರುವ ಸಿದ್ದರಾಮಯ್ಯ ಅವರೇ ನಿಮ್ಮನ್ನು ಸೋಲಿಸಲು ಯಾರೆಲ್ಲಾ ಒಂದಾಗಿದ್ರು..? ಯಾರನ್ನು ಎದುರಾಳಿಯಾಗಿ ನಿಲ್ಲಿಸಿದ್ರು..? ಅನ್ನೋದನ್ನು ನೆನಪು ಮಾಡಿಕೊಳ್ಳಿ ಎಂದು ಎಚ್ಚರಿಸಿದ್ರು.

ಯಡಿಯೂರಪ್ಪ ಕಾಂಗ್ರೆಸ್​ ಪರವಾಗಿ ಯಾಕೆ ಬ್ಯಾಟ್​ ಬೀಸುತ್ತಿದ್ದಾರೆ ಅನ್ನೋ ಅನುಮಾನ ಬಿಜೆಪಿ ಕಾರ್ಯಕರ್ತರನ್ನು ಕಾಡುತ್ತಿದೆ. ಆದರೆ ಅವರು ಈ ಮಾತುಗಳನ್ನು ಸುಮ್ಮನೆ ಹೇಳುತ್ತಿಲ್ಲ, ತುಂಬಾ ಮುಂದಾಲೋಚನೆಯಿಂದ ಆಡ್ತಿದ್ದಾರೆ ಅನ್ನೋದು ಬಿಎಸ್​ವೈ ಬಲ್ಲವರ ಮಾತು. ಯಾಕಂದ್ರೆ ಈಗಾಗಲೇ ಜೆಡಿಎಸ್​-ಕಾಂಗ್ರೆಸ್​ ಮೈತ್ರಿಯಿಂದ ಲೋಕಸಭಾ ಹಾಗೂ ವಿಧಾನಸಭಾ ಉಪಚುನಾವಣೆಯಲ್ಲಿ ಸೋಲುವಯಡವಟ್ಟಾಗಬಹುದು ಎಂಬ ಭೀತಿ ಅದನ್ನು ಕಾಡುತ್ತಿದೆ. ಆದ್ರೆ ಕೆಲವು ಕಡೆ ಕಾಂಗ್ರೆಸ್​ ಕಾರ್ಯಕರ್ತರು ಮೈತ್ರಿಯಿಂದ ಬೇಸರಗೊಂಡಿದ್ದು, ಕಾಂಗ್ರೆಸ್​ ಕಾರ್ಯಕರ್ತರ ಮತಗಳನ್ನು ಸೆಳೆಯಲು ಅವರು ಕಸರತ್ತು ನಡೆಸಿದ್ದಾರೆ. ಏಕೆಂದರೆ ಈಗ ಯಾಮಾರಿದರೆ ಲೋಕಸಭೆ ಚುನಾವಣೆಯಲ್ಲೂ ಕಷ್ಟವಾಗುತ್ತದೆ ಎಂಬ ಬಗ್ಗೆ ಆತಂಕಗೊಂಡಿದ್ದಾರೆ.

ಕಾಂಗ್ರೆಸ್​-ಜೆಡಿಎಸ್​ ನಡುವಿನ ಮನಸ್ತಾಪಗಳು, ಆಕ್ರೋಶದ ಮಾತುಗಳನ್ನು ಹಾಗಿಂದ ಹಾಗೆ ನೆನಪು ಮಾಡ್ತಿದ್ರೆ, ಕಾಂಗ್ರೆಸ್​ ಕಾರ್ಯಕರ್ತರಲ್ಲಿ ಮೈತ್ರಿ ಮುನಿಸು ಮುಂದುವರಿಸಬಹುದು ಅನ್ನೋದು ಬಿಜೆಪಿ ನಾಯಕರ ಲೆಕ್ಕಾಚಾರ. ಒಂದು ವೇಳೆ ಲೋಕಸಭಾ ಚುನಾವಣೆ ವೇಳೆಗೆ ಮೈತ್ರಿಯಲ್ಲಿ ಒಡಕು ಮೂಡಿಸಲು ಯಶಸ್ವಿಯಾದ್ರೆ ತಾವು ದಾಪುಗಾಲಿಡಲು ಯಾವುದೇ ಅಡ್ಡಿಯಾಗುವುದಿಲ್ಲ ಅನ್ನೋದು ಬಿಜೆಪಿಯ ಕಾರ್ಯತಂತ್ರ. ಒಂದು ವೇಳೆ ಇವರಿಬ್ಬರ ಮೈತ್ರಿ ಮುಂದುವರಿದರೆ 10 ಸ್ಥಾನಗಳನ್ನೂ ಗೆಲ್ಲುವುದು ಕಷ್ಟವಾಗುತ್ತದೆ ಅನ್ನೋದನ್ನು ಅರಿತಿರುವ ಭಾರತೀಯ ಜನತಾ ಪಾರ್ಟಿ, ಇಬ್ಬರ ನಡುವೆ ಸಮನ್ವಯ ಮೂಡದಂತೆ ನೋಡಿಕೊಳ್ಳಲು ಶ್ರಮಿಸುತ್ತಿದೆ. ಅಕಸ್ಮಾತ್​ ಮೈತ್ರಿಯಲ್ಲಿ ಬಿರುಕು ಮೂಡಿಸಲು ವಿಫಲವಾದರೂ ಕಾರ್ಯಕರ್ತರ ಮನಸ್ಸು ಒಂದಾಗಬಾರದು ಅನ್ನೋ ಲೆಕ್ಕಾಚಾರದಿಂದ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ.

Leave a Reply