ಮಂಡ್ಯದಲ್ಲಿ ಜೆಡಿಎಸ್​ ಅಭ್ಯರ್ಥಿ ವಿರುದ್ಧ ಷಡ್ಯಂತ್ರಕ್ಕೆ ಕಾಂಗ್ರೆಸ್​ ಕಂಗಾಲು!

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್​ಗೆ ದೇಶದಲ್ಲಿ ನಡೆಯುತ್ತಿರುವ ಪಂಚರಾಜ್ಯಗಳ ಚುನಾವಣೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದುದು ರಾಜ್ಯ ಉಪಚುನಾವಣೆ. ಅದೇ ಕಾರಣಕ್ಕೆ ಕಾಂಗ್ರೆಸ್​ ಹೈಕಮಾಂಡ್​​ ರಾಜ್ಯ ಕಾಂಗ್ರೆಸ್​ ನಾಯಕರಿಗೆ ಫರ್ಮಾನು ಹೊರಡಿಸಿದ್ದು, ಉಪಚುನಾವಣೆ ನಡೆಯುತ್ತಿರುವ ಐದೂ ಕ್ಷೇತ್ರಗಳಲ್ಲೂ ಮೈತ್ರಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಖಡಕ್​ ಸೂಚನೆ ಕೊಟ್ಟಿದೆ.

ಇದೇ ಸೂಚನೆಯನ್ನು ಹೊತ್ತು ಕಾಂಗ್ರೆಸ್​ ರಾಜ್ಯ ಉಸ್ತುವಾರಿ ವೇಣುಗೋಪಾಲ್​ ಬಾಗಲಕೋಟೆಯ ಜಮಖಂಡಿಗೆ ಭೇಟಿ ನೀಡಿದ್ರು. ಮಾಜಿ ಸಿಎಂ ಸಿದ್ದರಾಮಯ್ಯ ಮೂರು ದಿನಗಳ ಕಾಲ ಜಮಖಂಡಿಯಲ್ಲಿ ಪ್ರಚಾರ ನಡೆಸುತ್ತಿದ್ದು, ಸಾಕಷ್ಟು ಕಾಂಗ್ರೆಸ್​ ನಾಯಕರು ಜಮಖಂಡಿಯಲ್ಲೇ ಬೀಡುಬಿಟ್ಟಿದ್ದಾರೆ. ಹೀಗಾಗಿ ಕಾಂಗ್ರೆಸ್​ ಹೈಕಮಾಂಡ್​ ರವಾನಿಸಿದ್ದ ಸಂದೇಶವನ್ನು ಸಿದ್ದರಾಮಯ್ಯ ಅವರಿಗೆ ತಲುಪಿಸಬೇಕಾಗಿತ್ತು. ಅದೇ ಕಾರಣಕ್ಕೆ ಓಡೋಡಿ ಬಂದು ಸಭೆ ನಡೆಸಿದ್ದಾರೆ.

ಶಿವಮೊಗ್ಗ, ರಾಮನಗರ, ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್​ ಹಾಗೂ ಜಮಖಂಡಿ ಹಾಗೂ ಬಳ್ಳಾರಿಯಲ್ಲಿ ಕಾಂಗ್ರೆಸ್​ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು, ಮಂಡ್ಯ ಕ್ಷೇತ್ರದಲ್ಲಿ ಇನ್ನೂ ಕೂಡ ಮೈತ್ರಿ ಗೊಂದಲ ಬಗೆಹರಿದಿಲ್ಲ. ಒಳಗೊಳಗೆ ಕಾಂಗ್ರೆಸ್​ ಪಕ್ಷದ ನಾಯಕರು ಜೆಡಿಎಸ್​ನ ಎಲ್​.ಆರ್​ ಶಿವರಾಮೇಗೌಡರನ್ನು ಸೋಲಿಸಲು ಸಂಚು ನಡೆದಿದೆ ಅನ್ನೋ ಮಾಹಿತಿ ರವಾನೆಯಾಗಿದೆ. ಇದೇ ಕಾರಣಕ್ಕೆ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ವೇಣುಗೋಪಾಲ್​ ಸಿದ್ದರಾಮಯ್ಯ ಮೂಲಕ ಸಂದೇಶ ರವಾನಿಸಿದ್ದು, ಯಾವುದೇ ಕಾರಣಕ್ಕೂ ಬಿಜೆಪಿ ಅಭ್ಯರ್ಥಿಗೆ ಸಹಾಯವಾಗಬಾರದು, ಇದನ್ನು ಸಿದ್ದರಾಮಯ್ಯ ಅವರೇ ನೋಡಿಕೊಳ್ಳಬೇಕು ಎಂದು ಹೈಕಮಾಂಡ್​ ಸೂಚನೆ ಕೊಟ್ಟಿದೆ ಎನ್ನಲಾಗಿದೆ. ಮಂಡ್ಯ ನಾಯಕರಾದ ಚಲುವರಾಯಸ್ವಾಮಿ ಹಾಗೂ ರಮೇಶ್​ ಬಂಡಿಸಿದ್ದೇಗೌಡ ಕಾಂಗ್ರೆಸ್​ ಸೇರುವಾಗ ಪ್ರಮುಖ ಪಾತ್ರ ವಹಿಸಿದ್ದು ಇದೇ ಸಿದ್ದರಾಮಯ್ಯ, ಕಾಂಗ್ರೆಸ್​ನಲ್ಲಿ ನಾಯಕರು ಅಂತಾ ಒಪ್ಪಬಹುದಾದ ವ್ಯಕ್ತಿ ಅಂದ್ರೆ ಸಿದ್ದರಾಮಯ್ಯ, ಅದೆ ಕಾರಣಕ್ಕೆ ಸಿದ್ದರಾಮಯ್ಯ ಅವರಿಗೆ ಹೊಣೆ ನೀಡಲಾಗಿದೆ ಎನ್ನಲಾಗಿದೆ.

ಒಂದು ವೇಳೆ ಮಂಡ್ಯದಲ್ಲಿ ಜೆಡಿಎಸ್​ ಅಭ್ಯರ್ಥಿ ಸೋಲನ್ನಪ್ಪಿದ್ರೆ ಏನಾಗುತ್ತೆ ಅನ್ನೋ ಮಾತನ್ನು ಕಾಂಗ್ರೆಸ್​ ಕಾರ್ಯಕರ್ತರು ಕೇಳುತ್ತಾರೆ ನಿಜ. ಆದ್ರೆ ದೇಶದಲ್ಲಿ ಪ್ರಾದೇಶಿಕ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಮುಂದಿನ ಲೋಕಸಭಾ ಚುನಾವಣೆ ಎದುರಿಸಲು ಸಜ್ಜಾಗಿರುವ ಕಾಂಗ್ರೆಸ್​ ಪಾಲಿಗೆ ಮಾಜಿ ಪ್ರಧಾನಿ ದೇವೇಗೌಡರು ಸಂಜೀವಿನಿಯಾಗಿದ್ದಾರೆ. ಬಲಾಢ್ಯವಾಗಿರುವ ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್​ ಅಭ್ಯರ್ಥಿ ಸೋಲು ಅನುಭವಿಸಿದ್ರೆ, ತೆನೆಹೊತ್ತ ಮಹಿಳೆಗೆ ಮುಖಭಂಗ ಆಗೋದು ನಿಶ್ಚಿತ. ಜೆಡಿಎಸ್​ ಸೋಲು ಅನುಭವಿಸಿದ್ರೆ, ಅಭ್ಯರ್ಥಿ ಶಿವರಾಮೇಗೌಡ ಅವರಿಗಾದ ಸೋಲು ಅನ್ನೋದಕ್ಕಿಂತ ನೇರವಾಗಿ ಮಾಜಿ ಪ್ರಧಾನಿ ದೇವೇಗೌಡರಿಗಾದ ಸೋಲು ಎನ್ನಬಹುದು. ಲೋಕಸಭೆಗೂ ಮುನ್ನವೇ ಪ್ರಾದೇಶಿಕ ಪಕ್ಷಕ್ಕೆ ಸೋಲು ಉಂಟಾಗಿ, ಜೆಡಿಎಸ್​ ಕಾಂಗ್ರೆಸ್​ ಜೊತೆಗಿನ ಮೈತ್ರಿ ಬಿಟ್ಟು ಹೊರಬಂದರೆ ರಾಷ್ಟ್ರೀಯ ಮಟ್ಟದಲ್ಲಿ ಹೊಂದಾಣಿಕೆ ಮಾಡಲು ಬೇರೆ ಯಾರೂ ಸಮರ್ಥ ನಾಯಕರಿಲ್ಲ. ಅದೇ ಕಾರಣಕ್ಕಾಗಿ ಐದೂ ಕ್ಷೇತ್ರಗಳಲ್ಲಿ ಗೆಲ್ಲಿಸಲೇಬೇಕು ಎಂದು ರಾಹುಲ್ ಗಾಂಧಿ​ ಫರ್ಮಾನು ಹೊರಡಿಸಿದ್ದಾರೆ ಅನ್ನೋದು ಕಾಂಗ್ರೆಸ್​ ಮೂಲಗಳ ಮಾಹಿತಿ.

Leave a Reply