ಮೋದಿ ಜಪಾನ್ ಪ್ರವಾಸ! ದ್ವೀಪ ರಾಷ್ಟ್ರದ ಮೇಲೆ ಭಾರತ ಪ್ರಧಾನಿಗೇಕೆ ಹೆಚ್ಚಿನ ಒಲವು?

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಜಪಾನ್ ಪ್ರವಾಸ ಕೈಗೊಂಡಿದ್ದಾರೆ. ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೊ ಅಬೆ ನಡುವಣ ದ್ವಿಪಕ್ಷೀಯ ಮಾತುಕತೆ ಸಂದರ್ಭದಲ್ಲಿ ಉಭಯ ನಾಯಕರು ಭದ್ರತೆ ಹಾಗೂ ಸಂಪರ್ಕ ವ್ಯವಸ್ಥೆ ಕುರಿತು ಚರ್ಚಿಸುವ ಸಾಧ್ಯತೆ ಇದೆ.

ಒಂದು ಲೆಕ್ಕದಲ್ಲಿ ಹೇಳುವುದಾದರೆ ಮೋದಿ ಅವರ ಈ ಪ್ರವಾಸ ಭಾರತದ ಪಾಲಿಗೆ ಪ್ರಮುಖವಾಗಿದೆ. ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಬುಲೆಟ್ ರೈಲು ಯೋಜನೆ ಮೂಲೆ ಹಿಡಿಯುತಿರುವ ಸಂದರ್ಭದಲ್ಲಿ ಈ ಯೋಜನೆಗೆ ಮೋದಿ ಹಾಗೂ ಶಿಂಜೊ ಅಬೆ ಮರು ಜೀವ ನೀಡುವರೆ ಎಂಬ ಪ್ರಶ್ನೆ ಉದ್ಭವಿಸಿದೆ.

ಅಕ್ಟೋಬರ್ 28 ಹಾಗೂ 29ರಂದು ಮೋದಿ ಜಪಾನ್‌ ಪ್ರವಾಸ ಮಾಡಲಿದ್ದು, ಇಂಡೋ- ಜಪಾನ್ ವಾರ್ಷಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅದರೊಂದಿಗೆ ಕಳೆದ ನಾಲ್ಕು ವರ್ಷಗಳಲ್ಲಿ ಮೋದಿ ಮೂರನೇ ಬಾರಿಗೆ ಜಪಾನ್ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಈ ಸಭೆ ವೇಳೆ ಉಭಯ ದೇಶಗಳ ನಾಯಕರು ಪ್ರಮುಖ ನಿರ್ಧಾರಗಳನ್ನು ಪ್ರಕಟಿಸುವ ಸಾಧ್ಯತೆಗಳ ಜತೆಗೆ ಹೊಸ ಯೋಜನೆಗಳು ಘೋಷಣೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಭಾರತದ ಜಪಾನ್ ರಾಯಭಾರಿ ಕೆಂಜಿ ಹಿರಾಮಟ್ಸು  ತಿಳಿಸಿದ್ದಾರೆ.

ಉಭಯ ನಾಯಕರು ಭದ್ರತೆ ಹಾಗೂ ಸಂಪರ್ಕದ ಕುರಿತಾಗಿ ಎರಡು ದೇಶಗಳು ಹೆಚ್ಚು ಗಮನ ಹರಿಸಲಿದ್ದು, ಜಲಾಂತರ್ಗಾಮಿ ಹಾಗೂ ಯುಎಸ್-2 ವಿಮಾನ ಖರೀದಿ ಒಪ್ಪಂದಕ್ಕೂ ಸಹಿ ಹಾಕುವ ನಿರೀಕ್ಷೆ ಇದೆ.

ಜಪಾನ್ ಪ್ರಧಾನಿ ಅಬೆ ಅವರು ಚೀನಾ ಪ್ರವಾಸ ಮುಗಿಸಿದ ಮರು ದಿನವೇ ಮೋದಿ ಅವರನ್ನು ಭೇಟಿ ಮಾಡಲಿದ್ದು, ಈ ಸಭೆಯ ಪ್ರತಿ ನಿರ್ಧಾರ ಕೇವಲ ಭಾರತ ಮಾತ್ರವಲ್ಲದೇ ಏಷ್ಯಾದ ಭವಿಷ್ಯಕ್ಕೆ ಮಹತ್ವದ ಪಾತ್ರ ನಿರ್ವಹಿಸಲಿದೆ.

ಬುಲೆಟ್ ರೈಲು ಯೋಜನೆಗೆ ಮರು ಜೀವ?

ಮೋದಿಯ ಕನಸಿನ ಕೂಸಾಗಿರುವ ಬುಲೆಟ್ ರೈಲು ಯೋಜನೆಗೆ ಸಂಬಂಧಿಸಿದಂತೆ ಉಭಯ ನಾಯಕರು ಮಾತುಕತೆ ನಡೆಸುವ ಸಾಧ್ಯತೆ ಹೆಚ್ಚಾಗಿದೆ. ಮಹಾರಾಷ್ಟ್ರಾ ಹಾಗೂ ಗುಜರಾತ್ ನಡುವಣ ಈ ಮಹತ್ವದ ಯೋಜನೆಗೆ ಸಂಬಂಧಿಸಿದಂತೆ ಆಯಾ ರಾಜ್ಯ ಸರಕಾರಗಳು ಅಗತ್ಯ ಭೂಮಿ ವಶಕ್ಕೆ ಪಡಿಸಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲದಿರುವುದು ಈ ಯೋಜನೆ ಮುಂದಕ್ಕೆ ಸಾಗದೇ ನಿಂತಿದೆ. ಹೀಗಾಗಿ  ಕುರಿತು ಉಭಯ ನಾಯಕರು ಚರ್ಚಿಸುವ ಸಾಧ್ಯತೆ ಹೆಚ್ಚಾಗಿದೆ.

ಜಪಾನ್ ಮೇಲೆ ಮೋದಿ ಪ್ರೀತಿ

ಮೋದಿ ಪ್ರಧಾನಿಯಾದ ಬಳಿಕ ಮೊದಲ ವಿದೇಶ ಪ್ರವಾಸ ಜಪಾನ್ ಆಗಿತ್ತು. ಜಪಾನ್ ಜತೆಗಿನ ಸಂಬಂಧಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವ ಮೋದಿ, ತಮ್ಮದೇ ಆದ ವಿದೇಶಾಂಗ ನೀತಿ ರೂಪಿಸಿ ಅದರಲ್ಲಿ ಜಪಾನ್ ಜತೆಗಿನ ಸಂಬಂಧ ವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದರು. ಕಳೆದ ನಾಲ್ಕು ವರ್ಷಗಳಲ್ಲಿ ಭಾರತದ ಪ್ರಧಾನಿ ಮೂರು ಬಾರಿ ಜಪಾನ್ ಪ್ರವಾಸ ಮಾಡಿರುವುದು ಇದಕ್ಕೆ ಸಾಕ್ಷಿ.

ಭಾರತ ಈವರೆಗೂ ಕೇವಲ ರಷ್ಯಾ ಜತೆಗೆ ಮಾತ್ರ ದ್ವಿಪಕ್ಷೀಯ ವಾರ್ಷಿಕ ಸಭೆಯನ್ನು ನಡೆಸಿಕೊಂಡು ಬಂದಿದೆ. ಮೋದಿ ಪ್ರಧಾನಿಯಾದ ಬಳಿಕ ಜಪಾನ್ ಜತೆಗೂ ಈ ದ್ವಿಪಕ್ಷೀಯ ವಾರ್ಷಿಕ ಸಭೆ ಆರಂಭಿಸಿದ್ದು, ಜಪಾನ್ ಜತೆಗಿನ ಸ್ನೇಹಕ್ಕೆ ಮೋದಿ ಎಷ್ಟು ಆದ್ಯತೆ ನೀಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇದರ ಹಿಂದೆ ಜಾಗತಿಕ ಮಟ್ಟದ ಲೆಕ್ಕಾಚಾರವೂ ಇದೆ. ಏಷ್ಯಾದಲ್ಲಿ ಚೀನಾ ನಿಯಂತ್ರಣಕ್ಕೆ ಬ್ರೇಕ್ ಹಾಕಲು ಹೊರಟಿರುವ ಭಾರತಕ್ಕೆ ಇತರೆ ರಾಷ್ಟ್ರಗಳ ಬೆಂಬಲ ಅಗತ್ಯವಿದೆ. ಈಗಾಗಲೇ ಭಾರತದ ಕುಚುಕುವಿನಂತಿರುವ ರಷ್ಯಾ ಜತೆಗಿನ ಸಂಬಂಧ ಗಟ್ಟಿಯಾಗುತ್ತಿದ್ದು, ಇದರ ಜತೆಗೆ ಜಪಾನ್ ಸ್ನೇಹ ಹೆಚ್ಚಿನ ಬಲ ತಂದಿದೆ.

ಜಾಗತಿಕ ಮಟ್ಟದಲ್ಲಿ ಬುಲೆಟ್ ರೈಲು ತಂತ್ರಜ್ಞಾನದಲ್ಲಿ ಹೆಚ್ಚು ಹಿಡಿತ ಸಾಧಿಸಿರುವ ರಾಷ್ಟ್ರಗಳೆಂದರೆ ಚೀನಾ ಹಾಗೂ ಜಪಾನ್. ಹೀಗಾಗಿ ಭಾರತ ಚೀನಾಗಿಂತ ಜಪಾನ್ ಜತೆಗೆ ಈ ಯೋಜನೆಯನ್ನು ಪೂರ್ಣಗೊಳಿಸಲು ಉತ್ಸುಕವಾಗಿದೆ. ಇನ್ನು ಜಪಾನ್ ಹಾಗೂ ಅಮೆರಿಕ ದೋಸ್ತಿ ಉತ್ತಮವಾಗಿದ್ದು, ಆ ಮೂಲಕ ಅಮೆರಿಕದ ಜತೆಗಿನ ನಂಟನ್ನು ಮತ್ತಷ್ಟು ಬಲಪಡಿಸಿಕೊಳ್ಳುವುದು ಮೋದಿ ವಿದೇಶಾಂಗ ತಂತ್ರಗಾರಿಕೆಯ ಭಾಗವಾಗಿದೆ.

Leave a Reply