ರಾಕೇಶ್ ಸಾವಿನ ಬಗ್ಗೆ ಜನಾರ್ಧನರೆಡ್ಡಿ ಅಮಾನುಷ ಟೀಕೆ; ಸಿದ್ದರಾಮಯ್ಯ ಟ್ವಿಟೋಕ್ತಿ!

ಡಿಜಿಟಲ್ ಕನ್ನಡ ಟೀಮ್:

ಬಳ್ಳಾರಿ ಉಪ ಚುನಾವಣೆ ಸಮರದಲ್ಲಿ ರಂಗ ಪ್ರವೇಶ ಮಾಡಿರುವ ಗಾಲಿ ಜನಾರ್ಧನ ರೆಡ್ಡಿ ನಾಲಿಗೆ ನಿಯಂತ್ರಣವಿಲ್ಲದಂತೆ ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಟೀಕಾ ಪ್ರಹಾರ ಮಾಡುವ ಭರದಲ್ಲಿ ರೆಡ್ಡಿ, ‘ಹಿರಿಯ ಮಗ ರಾಕೇಶ್ ಸಾವು ಸಿದ್ದರಾಮಯ್ಯಗೆ ದೇವರು ಕೊಟ್ಟ ಶಿಕ್ಷೆ’ ಎಂದು ಹೇಳಿಕೆ ನೀಡಿದ್ದಾರೆ.

ತಾವು ಜೈಲು ಶಿಕ್ಷೆ ಅನುಭವಿಸಿದ್ದಕ್ಕೆ ಸಿದ್ದರಾಮಯ್ಯ ಅವರೇ ಕಾರಣ ಎಂದು ಸುದ್ದಿ ವಾಹಿನಿಗೆ ಹೇಳಿಕೆ ನೀಡಿದ್ದ ರೆಡ್ಡಿ, ‘ಸಿದ್ದರಾಮಯ್ಯ ಅವರು 4 ವರ್ಷ ನನ್ನ ಜೈಲಿನಲ್ಲಿ ಕೊಳೆಯುವಂತೆ ಮಾಡಿ, ನನ್ನ ಹೆಂಡತಿ ಮಕ್ಕಳಿಂದ ದೂರ ಉಳಿಯುವಂತೆ ಮಾಡಿದ್ದರು. ಅದಕ್ಕೆ ದೇವರು ಅವರ ಹಿರಿಯ ಮಗ ರಾಕೇಶ್ ಸಾವಿನ ಮುಖಾಂತರ ಶಿಕ್ಷೆ ಕೊಟ್ಟಿದ್ದಾನೆ’ ಎಂದರು.

ರಾಜಕೀಯ ವಾಕ್ಸಮರದಲ್ಲಿ ಸಿದ್ದರಾಮಯ್ಯ ಅವರ ಪುತ್ರನ ಸಾವನ್ನು ಬಳಕೆ ಮಾಡಿಕೊಳ್ಳುವ ಮೂಲಕ ರೆಡ್ಡಿ ಕೀಳು ಮಟ್ಟಕ್ಕೆ ಇಳಿದಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.

ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟರ್ ನಲ್ಲಿ ನೀಡಿರುವ ಉತ್ತರ ಹೀಗಿದೆ…

‘ನನ್ನ ಮಗನ ಸಾವು ನನಗೆ ದೇವರುಕೊಟ್ಟ ಶಿಕ್ಷೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ. ನಿಮ್ಮ ಪಾಪಗಳಿಗಾಗಿ ಶಿಕ್ಷೆಯನ್ನು ನಿಮ್ಮ ಮಕ್ಕಳಿಗೆ ದೇವರು ನೀಡದಿರಲಿ ಎಂದು ದೇವರನ್ನು ಬೇಡಿಕೊಳ್ಳುತ್ತೇನೆ.’

Leave a Reply