ನಾಳೆ ಏಕತೆಯ ಪ್ರತಿಮೆ ಲೋಕಾರ್ಪಣೆ! ಮೋದಿಯ ರಾಜಕೀಯ ಗುರಿ ಸಾರುತ್ತಿದೆ ಸರ್ದಾರ್ ಪಟೇಲರ ಸ್ಮಾರಕ!

ಡಿಜಿಟಲ್ ಕನ್ನಡ ಟೀಮ್:

ಭಾರತದ ಉಕ್ಕಿನ ಮನುಷ್ಯ ಎಂದೇ ಬಿಂಬಿತವಾಗಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಮೋದಿ ಸರಕಾರ ನಿರ್ಮಿಸಿರುವ ಉಕ್ಕಿನ ಪ್ರತಿಮೆ ಇಂದು ಅನಾವರಣಗೊಳ್ಳಲಿದೆ. ಸರ್ದಾರ್ ಸರೋವರ ತಟದಲ್ಲಿ ನರ್ಮದಾ ಡ್ಯಾಂ ಕಡೆ ಮುಖ ಮಾಡಿ ನಿರ್ಮಿತವಾಗಿರುವ ಈ ಪ್ರತಿಮೆ ವಿಶ್ವದಲ್ಲೇ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಕಾರಣವಾಗಿದೆ.

ಅಮೆರಿಕದ ಸ್ಟ್ಯಾಚು ಆಫ್ ಲಿಬರ್ಟಿಗಿಂತ ನಾಲ್ಕು ಪಟ್ಟು ಎತ್ತರ ಅಂದರೆ ಸುಮಾರು 600 ಅಡಿ ಇರುವ ಸರ್ದಾರ್ ಪಟೇಲರ ಉಕ್ಕಿನ ಪ್ರತಿಮೆ ಈಗ ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿದೆ. ಈ ಪ್ರತಿಮೆ ಸರ್ದಾರ್ ಪಟೇಲ್ ಅವರಿಗೆ ಗೌರವ ಸೂಚಕವಾಗಿ ನಿರ್ಮಾಣ ಮಾಡಲಾಗಿದ್ದರೂ ಈ ಪ್ರತಿಮೆ ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಉದ್ದೇಶವನ್ನು ಸಾರುತ್ತಿದೆ.

ಹೌದು, 1940ರ ದಶಕದಲ್ಲಿ ಸ್ವಾತಂತ್ರದ ಸಂದರ್ಭದಲ್ಲಿ ಭಾರತವನ್ನು ಒಗ್ಗೂಡಿಸಿದ ಹಾಗೂ ದೇಶದ ಮೊದಲ ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿದ ಸರ್ದಾರ್ ವಲ್ಲಭಭಾಯಿ ಪಟೇಲರು ದೇಶದ ಉಕ್ಕಿನ ಮನುಷ್ಯ ಎಂದೇ ಕರೆಯಲ್ಪಟ್ಟರು. ನಂತರ ಬಲಪಂಥೀಯ ಹಿಂದೂ ರಾಷ್ಟ್ರವಾದಿಗಳಿಗೆ ಐಕಾನ್ ಆದರು. ಸರ್ದಾರ್ ಪಟೇಲರ ಈ ಪ್ರತಿಮೆ ನಿರ್ಮಾಣವಾಗಿರುವುದು ಕೂಡ ಕಳೆದ ಕೆಲವು ದಶಕಗಳಲ್ಲಿ ಸಾಕಷ್ಟು ಹಿಂದೂ ಹಾಗೂ ಮುಸಲ್ಮಾನರ ನಡುವಣ ಸಂಘರ್ಷಕ್ಕೆ ಸಾಕ್ಷಿಯಾಗಿದ್ದ ಪಶ್ಚಿಮ ಗುಜರಾತಿನಲ್ಲಿ. ಇದು ದೇಶದ ಏಕತೆಯ ಪ್ರತಿಮೆಯಾದರೂ ಇದನ್ನು ಜಾಗತಿಕ ಮಟ್ಟದಲ್ಲಿ ಭಾರತ ಶಕ್ತಿಶಾಲಿ ರಾಷ್ಟ್ರವಾಗಿ ಬೆಳೆಯುತ್ತಿರುವುದರ ಸೂಚಕವಾಗಿಯೂ ಬಿಂಬಿಸಲು ಮೋದಿ ಮುಂದಾಗಿದ್ದಾರೆ.

ಪ್ರತಿಮೆಯ ಕುರಿತ ಪ್ರಚಾರದ ವಿಡಿಯೋದಲ್ಲಿ ಪ್ರಧಾನಮಂತ್ರಿ ಮೋದಿ, ‘ಸರ್ದಾರ್ ಪಟೇಲರ ಸ್ಮರಣಾರ್ಥ ನಿರ್ಮಾಣವಾಗಿರುವ ಈ ಪ್ರತಿಮೆ ವಿಶ್ವದ ಪ್ರಮುಖ ಪ್ರವಾಸಿ ತಾಣವಾಗಲಿದೆ.’ ಎಂದಿದ್ದರು. ಜತೆಗೆ ‘ನಮ್ಮ ಎತ್ತರ ನೋಡಿ ಈದೇಶದ ಎತ್ತರ ಅಳೆಯಿರಿ.. ಇದೇ ನಮಗೆ ಬೇಕಾಗಿರುವುದು’ ಎಂಬ ಸಂದೇಶ ನೀಡಿದ್ದರು. ಭಾರತ ವಿಶ್ವ ಗುರುವಾಗಿ ಬೆಳೆದು ನಿಲ್ಲಬೇಕೆಂಬ ಉದ್ದೇಶ ಹೊಂದಿರುವ ಮೋದಿ, ಭಾರತ ಜಗತ್ತಿನ ಪ್ರಬಲ ಶಕ್ತಿಯಾಗಿ ಹೊಮ್ಮುತ್ತಿರುವುದಕ್ಕೆ ಸೂಚಕವಾಗಿ ಈ ಪ್ರತಿಮೆಯನ್ನು ಬಳಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ‘ಸರ್ದಾರ್ ಪಟೇಲರು ಭಾರತದ ಮೊದಲ ಪ್ರಧಾನಿಯಾಗಿದ್ದರೆ, ಇಂದು ಕಾಶ್ಮೀರದ ಭಾಗ ಪಾಕಿಸ್ತಾನದ ಆಕ್ರಮಿತ ಪ್ರದೇಶವಾಗುತ್ತಿರಲಿಲ್ಲ’ ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವರನ್ನು ಟೀಕಿಸಿದ್ದರು. ಅಲ್ಲದೆ ಸರ್ದಾರ್ ಪಟೇಲರನ್ನು ಬಲಪಂಥೀಯ ಹಾಗೂ ರಾಷ್ಟ್ರವಾದಿ ನಾಯಕನ ಪ್ರತಿರೂಪವಾಗಿ ಬಿಂಬಿಸಿದ್ದರು. ಹೀಗೆ ಪ್ರಧಾನಿ ಮೋದಿ ಹಾಗೂ ಬಿಜೆಪಿ ಸರ್ದಾರ್ ಪಟೇಲ್ ಅವರನ್ನು ತಮ್ಮ ರಾಜಕೀಯ ಐಕಾನ್ ಆಗಿ ಬಳಸಿಕೊಳ್ಳುತ್ತಿದ್ದು, ಈ ಪ್ರತಿಮೆ ಕೂಡ ಅದರ ಭಾಗವಾಗಿದೆ.

2013ರಲ್ಲಿ ಲೋಕಸಭೆ ಚುನಾವಣೆಗೂ ಮುನ್ನ ದೇಶದ ಮೂಲೆ ಮೂಲೆಗಳಿಂದ ಪ್ರತಿಮೆ ನಿರ್ಮಾಣಕ್ಕೆ ಉಕ್ಕನ್ನು ಸಂಗ್ರಹಿಸಿದ್ದ ಮೋದಿ, ಪ್ರಧಾನಿಯಾಗುವ ಮೊದಲೇ ಈ ಪ್ರತಿಮೆ ನಿರ್ಮಾಣ ಮಾಡಲು ಸಿದ್ಧತೆ ನಡೆಸಿದ್ದರು. ಬುಧವಾರ ಅನಾವರಣಗೊಳ್ಳಲಿರುವ ಈ ಪ್ರತಿಮೆ ಪರೋಕ್ಷವಾಗಿ 2019ರ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಮೋದಿ ನಾಂದಿ ಹಾಡಲಿದ್ದಾರೆ ಎಂಬ ವಿಶ್ಲೇಷಣೆ ಮಾಡಲಾಗುತ್ತಿದೆ.

ಈ ಪ್ರತಿಮೆಯ ವಿಶೇಷತೆಗಳೇನು?

 • 600 ಅಡಿ ಎತ್ತರದ ಪ್ರತಿಮೆ.
 • 193 ಎತ್ತರದ ಅಡಿಪಾಯ.
 • 20 ಸಾವಿರ ಚದರ ಮೀ. ವಿಸ್ತೀರ್ಣದಲ್ಲಿ ಪ್ರತಿಮೆ ನಿರ್ಮಾಣ.
 • 3001 ಕೋಟಿ ರು. ವೆಚ್ಚ.
 • 4000 ಕಾರ್ಮಿಕರಿಂದ ನಿರ್ಮಾಣ.
 • 2000 ಟನ್ ನಷ್ಟು ತಾಮ್ರ ಬಳಕೆ.
 • 25 ಸಾವಿರ ಟನ್ ಕಬ್ಬಿಣ ಬಳಕೆ.
 • 250 ಇಂಜಿನಿಯರ್ಗಳಿಂಗ ಪ್ರತಿಮೆ ವಿನ್ಯಾಸ.
 • 90 ಸಾವಿರ ಟನ್ ಸಿಮೆಂಟ್ ಬಳಸಿ ಪ್ರತಿಮೆ ಕಾಮಗಾರಿ.
 • 200 ಚೀನಾ ಕಾರ್ಮಿಕರು ಪ್ರತಿಮೆ ನಿರ್ಮಾಣಕ್ಕೆ ದುಡಿದಿದ್ದಾರೆ.
 • 2013, ಅ.31ರಂದು ಕಾಮಗಾರಿ ಆರಂಭ.
 • ರಿಕ್ಟರ್ ಮಾಪಕದ್ಲಿ 6.5ರಷ್ಟು ಭೂಕಂಪನವನ್ನು ತಡೆಯುವ ಸಾಮರ್ಥ್ಯ ಪ್ರತಿಮೆಗೆ ಇದೆ.
 • ಪ್ರತಿ ಗಂಟೆಗೆ 180 ಕಿ.ಮೀ ವೇಗದಲ್ಲಿ ಬೀಸುವ ಗಾಳಿಯನ್ನು ಎದುರಿಸುವ ಶಕ್ತಿ ಪ್ರತಿಮೆಗೆ ಇದೆ.
 • ಎಲ್ ಅಂಡ್ ಟಿ ಸಂಸ್ಥೆ 2989 ಕೋಟಿ ರು.ಗೆ ಈ ಪ್ರತಿಮೆ ನಿರ್ಮಾಣದ ಗುತ್ತಿಗೆ ಪಡೆದಿತ್ತು.
 • ಪ್ರತಿಮೆಯ ಎದೆ ಭಾಗದಲ್ಲಿ ವಿಕ್ಷಣಾ ಗ್ಯಾಲರಿ. ಒಂದು ಬಾರಿಗೆ 200 ಮಂದಿ ಈ ಗ್ಯಾಲರಿಯಲ್ಲಿ ನಿಂತು ಸುತ್ತಲಿನ ಪ್ರದೇಶ ವೀಕ್ಷಿಸಬಹುದು.
 • ಪ್ರವಾಸಿಗರು ಕೆಳಭಾಗದಿಂದ ಪ್ರತಿಮೆ ನೋಡಿದರೆ 790 ಅಡಿ ಎತ್ತರದಲ್ಲಿರಲಿದೆ ಪ್ರತಿಮೆಯ ನೆತ್ತಿ.
 • ಮಹಾರಾಷ್ಟ್ರ ಮೂಲದ ಖ್ಯಾತ ಶಿಲ್ಪಕಾರ ರಾಮ್ ವಾಂಜಿ ಸುತಾರ್ ಈ ಪ್ರತಿಮೆಯ ಶಿಲ್ಪಿ. ಇವರು ಕಳೆದ ಏಳು ದಶಕದಲ್ಲಿ 8 ಸಾವಿರಕ್ಕೂ ಹೆಚ್ಚು ಪ್ರತಿಮೆ ನಿರ್ಮಿಸಿದ್ದಾರೆ.

Leave a Reply