ಕುಮಾರ್ ಬಂಗಾರಪ್ಪನ ಮೀಟ್ರು, ಮೋಟ್ರು ಎರಡನ್ನು ನೋಡಿದ್ದೀವಿ: ಕುಮಾರಸ್ವಾಮಿ ಪರ ನಿಂತ ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್:

ಶೀಘ್ರದಲ್ಲೇ ಸಿಎಂ ಕುಮಾರಸ್ವಾಮಿ ವಿರುದ್ಧ ಮೀಟು ಆರೋಪ ಕೇಳಿ ಬರಲಿದೆ ಎಂದು ಹೇಳಿಕೆ ನೀಡಿದ್ದ ಶಾಸಕ ಕುಮಾರ್ ಬಂಗಾರಪ್ಪ ವಿರುದ್ಧ ಜಲಸಂಪನ್ಮೂಲ ಡಿಕೆ ಶಿವಕುಮಾರ್ ತಿರುಗಿಬಿದ್ದಿದ್ದಾರೆ.

ಬುಧವಾರ ಶಿವಮೊಗ್ಗ ಹಾಗೂ ಬಳ್ಳಾರಿ ಉಪ ಚುನಾವಣೆ, ಸಿಎಂ ಕುಮಾರಸ್ವಾಮಿ ವಿರುದ್ಧ ಕುಮಾರ್ ಬಂಗಾರಪ್ಪ ಆರೋಪ ಹಾಗೂ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರ ಸಾವಿನ ಬಗ್ಗೆ ಜನಾರ್ದನ ರೆಡ್ಡಿ ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು…

ಕುಮಾರ್ ಬಂಗಾರಪ್ಪಗೆ ತಿರುಗೇಟು:

‘ಕುಮಾರ್ ಬಂಗಾರಪ್ಪನ ಮೀಟ್ರು, ಮೋಟ್ರು ಎರಡನ್ನು ನೋಡಿದ್ದೀವಿ. ನಮ್ಮ ಜತೆಯೇ ಇದ್ದ ಕುಮಾರ್ ಬಂಗಾರಪ್ಪ. ಕುಮಾರ್ ಬಂಗಾರಪ್ಪನ್ನ ಮುಂದೆ ಬಿಟ್ಟು ಹಿಂಗೆ ಮಾತಾಡಿಸಿದ್ದಾರೆ. ಯಾರೆಲ್ಲ ಇದರ ಹಿಂದೆ ಇದಾರೆ ಅನ್ನೋದು ಗೊತ್ತಿದೆ. ನಾವು ಹಲವರ ಪುಸ್ತಕ ತೆರೆದ್ರೆ ಆಗ ಗೊತ್ತಾಗುತ್ತೆ. ನನ್ನತ್ರಾನೂ ಬಹಳ‌ಷ್ಟು ಇದೆ. ಕುಮಾರಸ್ವಾಮಿ ಏನ್ ತಪ್ಪು ಮಾಡಿದ್ದಾರೆ. ಅವರು ಯಾರನ್ನ ಎಲ್ಲಿ ಬೇಕಾದ್ರೂ ನಿಲ್ಲಿಸ್ತಾರೆ, ಬಿಜೆಪಿಯವರಿಗೇನು ಕಷ್ಟ. ನೀವು ಅಭಿವೃದ್ಧಿ ಮೇಲೆ ಮತ ಕೇಳ್ರಪ್ಪಾ.’

ಜನಾರ್ದನ ರೆಡ್ಡಿ ಕ್ಷಮೆ ಬೇಕಾಗಿಲ್ಲ:

‘ಜನಾರ್ದನ ರೆಡ್ಡಿ ಅವರ ಕ್ಷಮಾಪಣೆ ನಮಗೆ ಅವಶ್ಯಕತೆ ಇಲ್ಲ, ಬೇಕಿಲ್ಲ. ಕೊಲೆ ಮಾಡಿದ ಮೇಲೆ ಕ್ಷಮಾಪಣೆ ಕೇಳಿದ್ರೆ ಏನ್ ಬಂತು? ಮಾತು ಆಡಿದ್ರೆ ಹೋಯ್ತು, ಮುತ್ತು ಒಡೆದ್ರೆ ಹೋಯ್ತು. ರೆಡ್ಡಿ ಹೇಳಿಕೆ ಬಗ್ಗೆ ರಾಮುಲು, ಯಡಿಯೂರಪ್ಪ ಕ್ಷಮಾಪಣೆ ಕೇಳಬೇಕು. ಅವರು ಇದಕ್ಕೆ ಉತ್ತರ ಕೊಡಬೇಕು. ಖಾವಿ ಹಾಕೊಂಡು ಹಿಂಗೆ ಮಾತಾಡೋದಾ? ಇವರನ್ನು ಬಿಜೆಪಿಗೆ ಸೇರಿಸಿಕೊಂಡಿಲ್ಲ, ಅಮಿತ್ ಶಾ ಅವರು ನಮಗೂ ರೆಡ್ಡಿಗೂ ಸಂಬಂಧ ಇಲ್ಲ ಅಂತಾರೆ. ಸಂಸ್ಕಾರ, ಮನುಷ್ಯತ್ವ ಇಲ್ಲದ ಮನುಷ್ಯನ ಕ್ಷಮಾಪಣೆ ಬೇಕಿಲ್ಲ.’

ನಿಮ್ಮ ಗೌರವ- ಸ್ವಾಭಿಮಾನ ರಕ್ಷಣೆಗೆ ಬಂದಿದ್ದೇನೆ:

‘ಬಳ್ಳಾರಿ ಜಿಲ್ಕೆಗೆ ಹಿಂದೆ ಕೆಲವರು ಮೆತ್ತಿರುವ ಕೊಳಕನ್ನು ಶುಚಿ ಮಾಡಲು, ನಿಮ್ಮ ಸ್ವಾಭಿಮಾನ, ಆತ್ಮಗೌರವದ ರಕ್ಷಣೆಗೆ ನಾನು ಇಲ್ಲಿಗೆ ಬಂದಿದ್ದೇನೆಯೇ ಹೊರತು ಇಲ್ಲಿಂದ ಏನನ್ನೂ ಹೊತ್ತುಕೊಂಡು ಹೋಗಲು ಅಲ್ಲ. ಇಡೀ ದೇಶ ಕರ್ನಾಟಕದ ಕಡೆ, ಅದರಲ್ಲೂ ಬಳ್ಳಾರಿ ಕಡೆಗೆ ನೋಡುತ್ತಿದೆ. ಆರು ಮಂದಿ ಕಾಂಗ್ರೆಸ್ ಶಾಸಕರನ್ನು ಆರಿಸುವ ಮೂಲಕ ನಮಗೆ ಶಕ್ತಿ ತುಂಬಿದ್ದೀರಿ. ಈಗ ಸಂಸತ್ ಸದಸ್ಯರನ್ನು ಆರಿಸುವ ಮೂಲಕ ಇನ್ನಷ್ಟು ಶಕ್ತಿ ಕೊಡಿ. ಕಳೆದ ಐದು ವರ್ಷ ಕಾಂಗ್ರೆಸ್ ಸರಕಾರ ಉತ್ತಮ ಆಡಳಿತ ಕೊಟ್ಟಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಕೂಡ ಮುಂದಿನ ಐದು ವರ್ಷ ಕೂಡ ಮತ್ತಷ್ಟು ಉತ್ತಮ ಆಳ್ವಿಕೆ ನೀಡಲಿದೆ. ನಮ್ಮ ಕೈಗಳನ್ನು ಇನ್ನಷ್ಟು ಬಲಪಡಿಸಿ.

ಬಿಜೆಪಿಯಿಂದ ಸಾವಿರಾರು ಮಂದಿ ಬಂದು ಕಾಂಗ್ರೆಸ್ ಸೇರುತ್ತಿದ್ದಾರೆ. ಇದಿಷ್ಟೇ ಸಾಕು ಜನರ ಭಾವನೆ ಏನಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು.’

Leave a Reply