ಸರ್ದಾರ್ ಪಟೇಲರು ಇಲ್ಲದಿದ್ದರೆ ಭಾರತ ಛಿದ್ರವಾಗುತ್ತಿತ್ತು: ಏಕತೆಯ ಪ್ರತಿಮೆ ಅನಾವರಣ ಮಾಡಿ ಉಕ್ಕಿನ ಮನುಷ್ಯನ ಸ್ಮರಿಸಿದ ಪ್ರಧಾನಿ ಮೋದಿ

ಡಿಜಿಟಲ್ ಕನ್ನಡ ಟೀಮ್:

ವಿಶ್ವದಲ್ಲೇ ಅತಿ ಎತ್ತರದ ಪ್ರತಿಮೆ ಎಂಬ ಖ್ಯಾತಿಗೆ ಪಾತ್ರವಾಗಿರುವ ಗುಜರಾತಿನ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಉಕ್ಕಿನ ಪ್ರತಿಮೆ (ಏಕತೆಯ ಪ್ರತಿಮೆ)ಯನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಉದ್ಘಾಟಿಸಿದ್ದಾರೆ.

ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಈ ಪ್ರತಿಮೆಯ ಕನಸು ಕಂಡಿದ್ದ ಮೋದಿ, ಇಂದು ಅದನ್ನು ನನಸಾಗಿಸಿದ್ದಾರೆ. ವಾಯುಪಡೆಯ ಕಿರಣ್ ವಿಮಾನಗಳು ಆಗಸದಿಂದ ಪಟೇಲರ ಪ್ರತಿಮೆಗೆ ತ್ರಿವರ್ಣವನ್ನು ಅಭಿಶೇಕ ಮಾಡುವ ಮೂಲಕ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಾಯಿತು. ಈ ಪ್ರತಿಮೆ ಉದ್ಘಾಟಿಸಿದ ನಂತರ ಮಾತನಾಡಿದ ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ, ಈ ಏಕತೆಯ ಪ್ರತಿಮೆ ನಿಡಿದ್ದಕ್ಕಾಗಿ ಪ್ರಧಾನಿ ಅವರಿಗೆ ಧನ್ಯವಾದ ಅರ್ಪಿಸಿದರು.

ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶಕ್ಕೆ ಸರ್ದಾರ್ ಪಟೇಲರ ಕೊಡುಗೆಯನ್ನು ಸ್ಮರಿಸುತ್ತಾ, ಈ ಪ್ರತಿಮೆ ನಿರ್ಮಾಣಕ್ಕೆ ನೆರವಾದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದರು. ಈ ವೇಳೆ ಮೋದಿ ತಮ್ಮ ಭಾಷಣದಲ್ಲಿ ಹೇಳಿದ ಪ್ರಮುಖ ಅಂಶಗಳು ಹೀಗಿವೆ…

 • ಸರ್ದಾರ್ ಪಟೇಲರ ಜನ್ಮ ದಿನವನ್ನು ಇಡೀ ದೇಶ ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸುತ್ತಿದೆ.
 • ಈ ದಿನ ಭಾರತದ ಇತಿಹಾಸದಲ್ಲಿ ಚಿರಸ್ಥಾಯಿಯಾಗಲಿದೆ. ಪ್ರತಿಯೊಬ್ಬ ಭಾರತೀಯ ಈ ದಿನವನ್ನು ಮರೆಯುವುದಿಲ್ಲ.
 • ಭಾರತದ ಪ್ರಜೆಗಳಿಗೆ ಈ ಪ್ರತಿಮೆಯನ್ನು ಅರ್ಪಿಸುತ್ತಿರುವುದಕ್ಕೆ ಅದೃಷ್ಟ ಮಾಡಿದ್ದೆ.
 • ನಾನು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಪ್ರತಿಮೆ ನಿರ್ಮಾಣದ ಆಲೋಚನೆ ಮಾಡಿದ್ದೆ.
 • ಈ ಏಕತೆ ಪ್ರತಿಮೆ ನಿರ್ಮಾಣಕ್ಕೆ ಲಕ್ಷಾಂತರ ರೈತರು ತಮ್ಮ ಕಬ್ಬಿಣದ ಸಲಕರಣೆಗಳನ್ನು ಹಾಗೂ ಹಿಡಿ ಮಣ್ಣನ್ನು ನೀಡಿ ಸಹಕರಿಸಿದ್ದಾರೆ.
 • ಕಾಶ್ಮೀರದಿಂದ ಕನ್ಯಾ ಕುಮಾರಿವರೆಗೂ ರೈಲು ಮಾರ್ಗ ನಿರ್ಮಾಣ ಮಾಡಬೇಕು ಎಂಬುದು ಸರ್ದಾರ್ ಪಟೇಲರ ಕನಸಾಗಿತ್ತು. ಅದು ಈವರೆಗೂ ಸಾಧ್ಯವಾಗಿಲ್ಲ.
 • ಭಾರತ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿ ಸರ್ದಾರ್ ಪಟೇಲರು ದೇಶದ ಗೃಹಮಂತ್ರಿ ಜವಾಬ್ದಾರಿಯನ್ನು ಹೊತ್ತುಕೊಂಡರು.
 • ಭಾರತವನ್ನು ಒಂದಾಗಿ ಇಟ್ಟುಕೊಳ್ಳುವಲ್ಲಿ ಪಟೇಲರ ಶ್ರಮ ಅಪ್ರತಿಮವಾದುದು. ಅವರು ಇಲ್ಲವಾಗಿದ್ದರೆ, ಇಂದು ಭಾರತೀಯರು ಗುಜರಾತಿನಲ್ಲಿರುವ ಗಿರ್ ರಾಷ್ಟ್ರೀಯ ಉದ್ಯೇನವನದಲ್ಲಿನ ಸಿಂಹಗಳನ್ನು ನೋಡಲು, ಹೈದರಾಬಾದಿನಲ್ಲಿರುವ ಚಾರ್ಮಿನಾರ್ ಅನ್ನು ನೋಡಲು ವಿಸಾ ಪಡೆಯುವಂತೆ ಭಾರತ ಛಿದ್ರವಾಗುತ್ತಿತ್ತು.
 • ಈ ಏಕತೆಯ ಪ್ರತಿಮೆ ನಮ್ಮ ದೇಶದ ಇಂಜಿನಿಯರ್ ಗಳ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.
 • ಏಕತೆ ಪ್ರತಿಮೆ ನೋಡಲು ಆಗಮಿಸುವ ಪ್ರವಾಸಿಗರು ಸತ್ಪುರ ಡ್ಯಾಂ, ವಿಂದ್ಯಾ ಮತ್ತು ಸತ್ಪುರ ಪರ್ವತಗಳ ಸೌಂದರ್ಯವನ್ನು ಸವಿಯಬಹುದು.
 • ಸರ್ದಾರ್ ಪಟೇಲರು ಭಾರತವನ್ನು ಶಕ್ತಿಶಾಲಿ, ಸೂಕ್ಷ್ಮ ಹಾಗೂ ಜಾಗೃತ ದೇಶವನ್ನಾಗಿ ಪರಿವರ್ತಿಸುವ ಕನಸು ಹೊಂದಿದ್ದರು. ಅವರ ಆಶಯವನ್ನು ಈಡೇರಿಸುವುದು ನಮ್ಮೆಲ್ಲರ ಕರ್ತವ್ಯ.

ನಂತರ ಪ್ರಧಾನಿ ನರೇಂದ್ರ ಮೋದಿ ಅವರು ವಾಲ್ ಆಫ್ ಯುನಿಟಿ ಅನ್ನು ಉದ್ಘಾಟಿಸಿದರು. ಈ ವೇಳೆ ವಾಯುಪಡೆಯ ಜಾಗ್ವಾರ್ ವಿಮಾನ ಇದರ ಮೇಲೆ ಹಾರಾಟ ಮಾಡಿ ಗೌರವ ಸೂಚಿಸಿತು.

Leave a Reply