ಎಲ್ ಚಂದ್ರಶೇಖರ್ ಕಣದಿಂದ ಹಿಂದಕ್ಕೆ! ಡಿಕೆಶಿ ಸಹೋದರರ ಮಾಸ್ಟರ್ ಸ್ಟ್ರೋಕ್! ರಾಮನಗರದಲ್ಲಿ ಬಿಜೆಪಿ ಅಬ್ಬೆಪಾರಿ!

ಡಿಜಿಟಲ್ ಕನ್ನಡ ಟೀಮ್:

ಅಚ್ಚರಿಯ ರಾಜಕೀಯ ಬೆಳವಣಿಗೆಯಲ್ಲಿ ರಾಮನಗರ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಪರ ಸ್ಪರ್ಧಿಸಿದ್ದ ಎಲ್. ಚಂದ್ರಶೇಖರ್ ಅವರು ಈಗ ಕಣದಿಂದ ಹಿಂದೆ ಸರಿಯಲಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವಣ ಭಿನ್ನಮತವನ್ನು ಗೆಲುವಿನ ಸೋಪಾನ ಮಾಡಿಕೊಳ್ಳುವ ಮೂಲಕ ಜೆಡಿಎಸ್ ಭದ್ರಕೋಟೆಯಲ್ಲಿ ಕಮಲ ಅರಳಿಸಲು ಮುಂದಾಗಿದ್ದ ಬಿಜೆಪಿಗೆ ಡಿಕೆ ಸಹೋದರರು ದೊಡ್ಡ ಶಾಕ್ ನೀಡಿದ್ದಾರೆ.

ಗುರುವಾರ ಬೆಳಗ್ಗೆ ತಮ್ಮ ಸದಾಶಿವನಗರದ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ ಸುರೇಶ್, ಈ ವಿಚಾರವನ್ನು ಪ್ರಕಟಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಎಲ್. ಚಂದ್ರಶೇಖರ್, ‘ಬಿಜೆಪಿ ನಾಯಕರು ನನ್ನನ್ನು ಪಕ್ಷಕ್ಕೆ ಸೇರಿಸಿಕೊಂಡರು ಆದರೆ ಯಾವುದೇ ನಾಯಕರು ನನಗೆ ಸರಿಯಾದ ಗೌರವ ನೀಡುತ್ತಿಲ್ಲ. ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಶ್ ಅವರು ಹೊರತುಪಡಿಸಿ ಯಾವೊಬ್ಬ ನಾಯಕ ನನ್ನ ಪರ ಪ್ರಚಾರಕ್ಕೆ ಬಂದಿಲ್ಲ. ನನ್ನ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಬಿಜೆಪಿ ಸೇರಿದ 15 ದಿನಗಳಲ್ಲಿ ಪಕ್ಷದ ಮನಸ್ಥಿತಿ ಅರಿವಾಗಿದೆ. ಹೀಗಾಗಿ ನಾನು ಚುನಾವಣೆಯಿಂದ ಹಿಂದೆ ಸರಿಯುತ್ತಿದ್ದೇನೆ’ ಎಂದು ತಿಳಿಸಿದರು.

‘ರಾಷ್ಟ್ರೀಯ ಪಕ್ಷ ಸಿದ್ಧಾಂತಕ್ಕೆ ಮನ್ನಣೆ ಸಿಗುತ್ತದೆ ಎಂದು ಹೋದೆ. ಆರಂಭದಲ್ಲಿ ನಮ್ಮ ಬಳಿ 10 ಶಾಸಕರಿದ್ದಾರೆ ಕೆಲವೇ ದಿನಗಳಲ್ಲಿ ಸರ್ಕಾರ ಬೀಳಿಸುತ್ತೇವೆ. ಚುನಾವಣೆ ವೆಚ್ಚ ನಾವೇ ನೋಡಿಕೊಳ್ಳುತ್ತೇವೆ. ನಿನಗೆ ಎಲ್ಲ ನಾಯಕರ ಬೆಂಬಲವಿದೆ ಎಂದಿದ್ದರು. ಆದರೆ ನನ್ನನ್ನು ಕಡೆಗಣಿಸಲಾಗುತ್ತಿದೆ. ಬಿಜೆಪಿಯಲ್ಲೇ ಒಮ್ಮತವಿಲ್ಲ. ಯೋಗೇಶ್ವರ್ ಅವರು ಕರೆತಂದಿದ್ದಾರೆ ಅವರೇ ಎಲ್ಲ ನೋಡಿಕೊಳ್ತಾರೆ ಎಂಬ ಅಸಡ್ಡೆ ಮನೋಭಾವ ತೋರಿದ್ದಾರೆ. ಬಿಜೆಪಿಯಲ್ಲಿ ಯೋಗೇಶ್ವರ್ ಕಂಡರೆ ಸದಾನಂದ ಗೌಡರಿಗೆ ಆಗಲ್ಲ. ಸದಾನಂದ ಗೌಡರನ್ನು ಕಂಡರೆ ಬಿಜೆಪಿಗೆ ಆಗಲ್ಲ. ಯಡಿಯೂರಪ್ಪ ಸಿಎಂ ಆಗಬಾರದು ಅಂತಾ ಅವರದೇ ಪಕ್ಷದವರು ಪ್ರಯತ್ನಿಸುತ್ತಿದ್ದಾರೆ. ಬಳ್ಳಾರಿ, ಮಂಡ್ಯ, ಶಿವಮೊಗ್ಗದಲ್ಲಿ ಎಲ್ಲ ದೊಡ್ಡ ನಾಯಕರು ಪ್ರಚಾರ ಮಾಡುತ್ತಿದ್ದಾರೆ. ಆದರೆ ರಾಮನಗರದತ್ತ ತಿರುಗಿ ನೋಡುತ್ತಿಲ್ಲ. ಆರ್.ಅಶೋಕ್ ಮಂಡ್ಯಗೆ ಹೋಗುತ್ತಾರೆ. ರಾಮನಗರಕ್ಕೆ ಬರಲ್ಲ. ಬಿಜೆಪಿ ನಾಯಕರ ಈ ಮನಸ್ಥಿತಿಯಿಂದ ಬೇಸತ್ತು ಮತ್ತೆ ಮಾತೃಪಕ್ಷಕ್ಕೆ ಮರಳಿದ್ದೇನೆ’ ಎಂದರು.

ನಂತರ ಮಾತನಾಡಿದ ಸಂಸದ ಡಿಕೆ ಸುರೇಶ್, ‘ಬಳ್ಳಾರಿ ಹಾಗೂ ಮಂಡ್ಯಕ್ಕೆ ರಾಮನಗರದ ಮೇಲೆ ಬಿಜೆಪಿ ನಾಯಕರು ಹೋಗುತ್ತಾರೆ. ಆದರೆ ಇಲ್ಲಿ ಪ್ರಚಾರ ಮಾಡುವುದಿಲ್ಲ. ಬಾವುಟ ಕೊಟ್ಟು ಹೋದವರು ಮತ್ತೆ ಆ ಬಾವುಟ ಏನಾಗಿದೆ ಎಂದು ತಿರುಗಿ ನೋಡಿಲ್ಲ. ಶಿವಮೊಗ್ಗದಲ್ಲಿ ತಮ್ಮ ಪುತ್ರ ನಿಂತಿರುವುದಕ್ಕೆ ಯಡಿಯೂರಪ್ಪನವರು ಮುತುವರ್ಜಿ ವಹಿಸಿದ್ದಾರೆ. ಚಂದ್ರಶೇಖರ್ ಅವರು ಕೂಡ ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದವರು. ಬಿಜೆಪಿಯ ಪಕ್ಷದ ನಾಯಕರು ಈ ರೀತಿ ನಡೆಸಿಕೊಂಡಿದ್ದರಿಂದ ಚಂದ್ರಶೇಖರ್ ಅವರು ಮತ್ತೆ ಪಕ್ಷಕ್ಕೆ ವಾಪಸ್ಸಾಗಲು ಇಚ್ಛಿಸಿದ್ದಾರೆ. ಪಕ್ಷದ ವತಿ ಹಾಗೂ ಕಾರ್ಯಕರ್ತರ ಪರವಾಗಿ ನಾನು ಅವರನ್ನು ಪಕ್ಷಕ್ಕೆ ಸ್ವಾಗತಿಸುತ್ತೇನೆ’ ಎಂದರು.

ಅಭ್ಯರ್ಥಿ ಚಂದ್ರಶೇಖರ್ ತಮ್ಮ ನಿರ್ಧಾರದ ಕುರಿತು ಚುನಾವಣಾ ಆಯೋಗಕ್ಕೆ ಇ ಮೇಲ್ ಮೂಲಕ ಪತ್ರ ರವಾನಿಸಿದ್ದು, 11 ಗಂಟೆಗೆ ಚುನಾವಣ ಆಯೋಗ ಕಚೇರಿಗೆ ತೆರಳಿ ತಮ್ಮ ಪತ್ರವನ್ನು ನೀಡಿದ್ದಾರೆ ಎಂದು ಡಿಕೆ ಸುರೇಶ್ ತಿಳಿಸಿದರು.

Leave a Reply