ಎಂಜೆ ಅಕ್ಬರ್ ವಿರುದ್ಧ ಪತ್ರಕರ್ತೆ ಯಿಂದ ಅತ್ಯಾಚಾರ ಆರೋಪ! ಸಂಬಂಧವಿತ್ತು ಆದರೆ ಅತ್ಯಾಚಾರ ಮಾಡಿಲ್ಲ ಎಂದ ಮಾಜಿ ಸಚಿವ!

ಡಿಜಿಟಲ್ ಕನ್ನಡ ಟೀಮ್:

23 ವರ್ಷಗಳ ಹಿಂದೆ ಎಮ್ ಜೆ ಅಕ್ಬರ್ ಅವರು ನನ್ನ ಮೇಲೆ ಅತ್ಯಾಚಾರ ನಡೆಸಿದ್ದರು ಎಂದು ಪತ್ರಕರ್ತ ಪಲ್ಲವಿ ಗೊಗೋಯ್ ಆರೋಪಿಸಿದ್ದಾರೆ.

ನ್ಯಾಷನಲ್ ಪಬ್ಲಿಕ್ ರೇಡಿಯೋ ದ ಸಂಪಾದಕರಾಗಿರುವ ಪಲ್ಲವಿ ಗೊಗೊಯ್, ’23 ವರ್ಷಗಳ ಹಿಂದೆ ಅಂದರೆ 1994ರಲ್ಲಿ ಹಿಂದೆ ಅಕ್ಬರ್ ಅವರ ಜೊತೆ ಕೆಲಸ ಮಾಡುತ್ತಿದ್ದಾಗ ಅವರು ನನ್ನ ಮೇಲೆ ಅತ್ಯಾಚಾರ ನಡೆಸಿದ್ದರು’ ಎಂದು ದಿ ವಾಶಿಂಗ್ಟನ್ ಪೋಸ್ಟ್ ಪತ್ರಿಕೆಗೆ ನೀಡಿದ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಈಗಾಗಲೇ ಮೀಟು ಅಭಿಯಾನದಲ್ಲಿ ಹತ್ತಕ್ಕೂ ಹೆಚ್ಚು ಪತ್ರಕರ್ತೆಯರು ಮಾಜಿ ಸಚಿವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದು, ಇದರಿಂದ ಅಕ್ಬರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತಾಗಿದೆ. ಈಗ ಅತ್ಯಾಚಾರದ ಗಂಭೀರ ಆರೋಪ ಕೇಳಿ ಬಂದಿದೆ.

ಪಲ್ಲವಿ ಅವರ ಆರೋಪ ಹೀಗಿದೆ…

ಕಚೇರಿಯಲ್ಲಿ ಸಂಪಾದಕೀಯ ಪುಟದ ಲೇಖನ ಹಾಗೂ ಹೆಡ್ಡಿಂಗ್ ಅನ್ನು ತೋರಿಸಲು ಅಕ್ಬರ್ ಅವರ ಬಳಿಗೆ ಹೋದೆ. ನನ್ನ ಕೆಲಸವನ್ನು ಹೊಗಳುತ್ತಾ ನನಗೆ ಮುತ್ತಿಡಲು ಪ್ರಯತ್ನಿಸಿದರು. ತಕ್ಷಣವೇ ಅದನ್ನು ವಿರೋಧಿಸಿದ ನಾನು ಕೋಪ ಹಾಗು ಬೇಸರದಿಂದ ಹೊರ ಬಂದೆ.

ಕೆಲವು ತಿಂಗಳ ನಂತರ ಮುಂಬೈನಲ್ಲಿ ಮ್ಯಾಗಜಿನ್ ಉದ್ಘಾಟನೆಗೆ ನನ್ನನ್ನು ಆಮಂತ್ರಿಸಿದ ಅಕ್ಬರ್ ಅವರು ನನ್ನ ಹತ್ತಿರ ಬಂದರು. ಮತ್ತೆ ಮುತ್ತಿಡುವ ಪ್ರಯತ್ನ ಮಾಡಿದರು. ನಾನು ಅವರೊಂದಿಗೆ ಜಗಳವಾಡಿ ಕಣ್ಣೀರಿಡುತ್ತಾ ಅಲ್ಲಿಂದ ಓಡಿಹೋದೆ. ಆಗ ಅಕ್ಬರ್ ಅವರು ನಾನು ಮತ್ತೆ ಅವರ ಪ್ರಯತ್ನಕ್ಕೆ ವಿರೋಧಿಸಿದರೆ ಕೆಲಸದಿಂದ ತೆಗೆದುಹಾಕುವ ಬೆದರಿಕೆಯೊಡ್ಡಿದರು.

ಕೆಲ ದಿನಗಳ ನಂತರ ಜೈಪುರದ ಕಾರ್ಯಕ್ರಮಕ್ಕೆ ಅಕ್ಬರ್ ಅವರು ನನ್ನನ್ನು ಕರೆದುಕೊಂಡು ಹೋದರು. ಆಗ ಹೋಟೆಲ್ ರೂಮ್ ನಲ್ಲಿ ನನ್ನ ಮೇಲೆ ದೈಹಿಕವಾಗಿ ದೌರ್ಜನ್ಯ ನಡೆಸಿ ನನ್ನ ಬಟ್ಟೆಗಳನ್ನು ಕಿತ್ತೆಸೆದು ಅತ್ಯಾಚಾರ ಮಾಡಿದರು. ನನ್ನ ಮೇಲಿನ ದೌರ್ಜನ್ಯಕ್ಕೆ ಅವಮಾನಗೊಂಡು ನಾನು ಪೊಲೀಸರಿಗೆ ದೂರು ನೀಡಲು ಹಿಂಜರಿದೆ. ಇದಾದ ನಂತರವೂ ಅನೇಕ ತಿಂಗಳುಗಳ ಕಾಲ ಅಕ್ಬರ್ ಅವರು ನನ್ನ ಮೇಲೆ ದೈಹಿಕವಾಗಿ ಮೌಖಿಕವಾಗಿ ಹಾಗೂ ಮಾನಸಿಕವಾಗಿ ದೌರ್ಜನ್ಯ ನಡೆಸಿದ್ದರು.

ನಾನು ಪುರುಷ ಸಹೋದ್ಯೋಗಿಗಳ ಜೊತೆ ಮಾತನಾಡುವುದನ್ನು ನೋಡಿದರೆ ಅಕ್ಬರ್ ಜೋರಾಗಿ ಬೈಯುತ್ತಿದ್ದರು. ಅವರ ನಡವಳಿಕೆ ನನ್ನನ್ನು ಭಯಭೀತಳನ್ನಾಗಿ ಮಾಡಿತ್ತು. ಲಂಡನ್ ಕಚೇರಿಯಲ್ಲಿದ್ದ ವೇಳೆ ನಾನು ಸಹೋದ್ಯೋಗಿಯೊಂದಿಗೆ ಮಾತನಾಡುತ್ತಿರುವುದನ್ನು ಕಂಡು ಕೋಪಗೊಂಡರು. ಒಂದು ಸಂಜೆ ಸಹದ್ಯೋಗಿಗಳು ತೆರಳಿದ ನಂತರ ಅಕ್ಬರ್ ಅವರು ನನ್ನನ್ನು ಬಯ್ಯಲು ಶುರುಮಾಡಿದರು ಅವರ ಮೇಜಿನ ಮೇಲಿದ್ದ ವಸ್ತುಗಳನ್ನು ನನ್ನತ್ತ ಎಸೆದರು. ಭಯದಿಂದ ನಾನು ಕಚೇರಿಯಿಂದ ಓಡಿಹೋಗಿ ಪಾರ್ಕ್ ಒಂದರಲ್ಲಿ ಸುಮಾರು ಗಂಟೆಗಳ ಕಾಲ ಅವಿತುಕೊಂಡೆ. ಅಕ್ಬರ್ ಅವರ ವರ್ತನೆ ಸಹಿಸಿಕೊಳ್ಳಲಾಗದೆ ನಾನು ಕೆಲಸವನ್ನು ಬಿಟ್ಟೆ.’

ಸಂಬಂಧವಿತ್ತು ನಿಜ ಆದ್ರೆ ಅತ್ಯಾಚಾರ ಮಾಡಿಲ್ಲ!

ತಮ್ಮ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅಕ್ಬರ್, ‘ ಸಾವಿರ 1994 ರ ಅವಧಿಯಲ್ಲಿ ನನ್ನ ಹಾಗೂ ಪಲ್ಲವಿಯವರು ಒಮ್ಮತದ ಸಂಬಂಧವಿತ್ತು. ಈ ಸಂಬಂಧ ಅನೇಕ ತಿಂಗಳುಗಳ ಕಾಲ ಮುಂದುವರೆದಿತ್ತು. ಆದರೆ ಈ ಸಂಬಂಧ ನನ್ನ ಸಾಂಸಾರಿಕ ಹಾಗೂ ವೈಯಕ್ತಿಕ ಜೀವನದಲ್ಲಿ ಹಲವು ಪ್ರಶ್ನೆಗಳು ಉದ್ಭವಿಸಿದವು. ಹೀಗಾಗಿ ಆ ಸಂಬಂಧವನ್ನು ಅಂತ್ಯಗೊಳಿಸಿದ್ದೆ. ಆದರೆ ಈ ಸಂಬಂಧ ಉತ್ತಮ ರೀತಿಯಲ್ಲಿ ಅಂತ್ಯಗೊಂಡಿರಲಿಲ್ಲ. ಆದರೆ ಈಗ ಪಲ್ಲವಿ ಅವರು ಮಾಡಿರುವ ಆರೋಪ ಸುಳ್ಳು’ ಎಂದು ಸ್ಪಷ್ಟನೆ ನೀಡಿದ್ದಾರೆ.

ಅಕ್ಬರ್ ಗೆ ಪತ್ನಿಯ ಬೆಂಬಲ!

ಪತಿ ಅಕ್ಬರ್ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪತ್ನಿ ಮಲ್ಲಿಕಾ, ‘ ತುಷಿತಾ ಪಟೇಲ್ ಹಾಗೂ ಪಲ್ಲವಿ ಅವರು ಅನೇಕ ಬಾರಿ ನಮ್ಮ ಮನೆಗೆ ಬರುತ್ತಿದ್ದರು, ಕುಡಿಯುತ್ತಿದ್ದರು ಹಾಗೂ ಊಟ ಮಾಡುತ್ತಿದ್ದರು. ನಮ್ಮ ಕುಟುಂಬದೊಂದಿಗೆ ಚೆನ್ನಾಗಿಯೇ ಇದ್ದರು. ಅವರು ಎಂದಿಗೂ ಲೈಂಗಿಕ ಕಿರುಕುಳದ ಸಂತ್ರಸ್ತೆಯಾಗಿರುವಂತೆ ಕಂಡಿರಲಿಲ್ಲ. ಆಕೆಯ ಮುಖದಲ್ಲಿ ಎಂದಿಗೂ ಸಂತ್ರಸ್ತೆಯ ಲಕ್ಷಣಗಳು ಗೋಚರಿಸಲಿಲ್ಲ. ಆದರೆ ಈಗ ಅತ್ಯಾಚಾರ ಆರೋಪ ಏಕೆ ಮಾಡಿದ್ದಾರೆ ಹಾಗೂ ಅದಕ್ಕೆ ಕಾರಣವೇನು ಎಂಬುದು ತಿಳಿದಿಲ್ಲ. ಮೀಟು ಅಭಿಯಾನದ ಹೆಸರಲ್ಲಿ ನನ್ನ ಪತಿಯ ವಿರುದ್ಧ ಅನೇಕ ಆರೋಪಗಳು ಕೇಳಿಬಂದಿದ್ದವು. ಇಲ್ಲಿಯವರೆಗೂ ನಾನು ಸುಮ್ಮನೆ ಇದ್ದೆ. ಆದರೆ ವಾಷಿಂಗ್ಟನ್ ಪೋಸ್ಟ್ ನಲ್ಲಿ ಪಲ್ಲವಿ ಅವರ ಆರೋಪದ ಬಗ್ಗೆ ನನಗೆ ಸತ್ಯಾಂಶ ತಿಳಿದಿದ್ದರಿಂದ ಈಗ ಬಹಿರಂಗವಾಗಿ ಮಾತನಾಡುತ್ತಿದ್ದೇನೆ’ ಎಂದರು.

Leave a Reply