ರಾಮನಗರ ಕಣದಿಂದ ಬಿಜೆಪಿ ಅಭ್ಯರ್ಥಿ ಹಿಂದೆ ಸರಿದಿದ್ದಾಯ್ತು, ಮುಂದೇನು?

ಡಿಜಿಟಲ್ ಕನ್ನಡ ಟೀಮ್:

ಜೆಡಿಎಸ್- ಕಾಂಗ್ರೆಸ್ ಭದ್ರಕೋಟೆಯಾಗಿರುವ ರಾಮನಗರದಲ್ಲಿ ಕಮಲ ಅರಳಿಸಲು ಮುಂದಾಗಿದ್ದ ಬಿಜೆಪಿ ನಾಯಕರಿಗೆ ಡಿಕೆ ಸಹೋದರರು ಮರ್ಮಾಘಾತ ನೀಡಿದ್ದಾರೆ. ಮತದಾನಕ್ಕೆ 2 ದಿನ ಬಾಕಿ ಇರುವಾಗ ಬಿಜೆಪಿ ಅಭ್ಯರ್ಥಿ ಎಲ್ ಚಂದ್ರಶೇಖರ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದು, ಮುಂದೇನು? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಉತ್ತರ ಹೀಗಿದೆ.

ಬಿಜೆಪಿ ಅಭ್ಯರ್ಥಿಯಾಗಿ ಚಂದ್ರಶೇಖರ್ ಮುಂದುವರಿಕೆ:
ಚುನಾವಣಾ ಆಯೋಗದ ಮೂಲಗಳ ಪ್ರಕಾರ ಮತದಾನ ನಡೆಯುವ ಮುನ್ನ ಸ್ಪರ್ಧೆಯಿಂದ ಅಭ್ಯರ್ಥಿ ಹಿಂದೆ ಸರಿದಿರುವುದು ಇದೇ ಮೊದಲಲ್ಲ. ಹಿಂದೆ ಅನೇಕ ಬಾರಿ ಇಂಥ ಪ್ರಕರಣಗಳು ನಡೆದಿವೆ. ಕಾನೂನಿನ ಪ್ರಕಾರ ನಾಮಪತ್ರ ಹಿಂಪಡೆಯುವ ಕೊನೆಯ ದಿನಾಂಕ ಮುಗಿದ ಮೇಲೆ ಯಾವುದೇ ಅಭ್ಯರ್ಥಿ ಸ್ಪರ್ಧೆಯಿಂದ ಹಿಂದೆ ಸರಿದರೂ ಮತದಾನದ ವೇಳೆ ಅಭ್ಯರ್ಥಿಯ ಹೆಸರು ದಾಖಲಾಗಿರುತ್ತದೆ. ಹೀಗಾಗಿ ನಾಳೆ ನಡೆಯಲಿರುವ ರಾಮನಗರ ವಿಧಾನಸಭಾ ಉಪಚುನಾವಣೆ ವೇಳೆ ಮತ ಯಂತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಎಂ ಚಂದ್ರಶೇಖರ್ ಅವರ ಹೆಸರು ಉಳಿಯಲಿದೆ. ಈ ಬಗ್ಗೆ ಚುನಾವಣಾ ಅಧಿಕಾರಿಗಳು ಗುರುವಾರ ಸ್ಪಷ್ಟನೆ ನೀಡಿದ್ದು ‘ಈವರೆಗೂ ಆಯೋಗಕ್ಕೆ ಯಾವುದೇ ದೂರು ಬಂದಿಲ್ಲ ಹೀಗಾಗಿ ಮತಯಂತ್ರ ಹಾಗೂ ವಿವಿಪ್ಯಾಟ್ ಗಳಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಎಂ ಚಂದ್ರಶೇಖರ್ ಅವರ ಹೆಸರು ಉಳಿಯಲಿದೆ’ ಎಂದು ತಿಳಿಸಿದ್ದಾರೆ. ಇನ್ನು ಕೆಲವು ಪ್ರಕರಣಗಳಲ್ಲಿ ಚುನಾವಣಾ ಅಧಿಕಾರಿಗಳು ಸ್ಪರ್ಧೆಯಿಂದ ಹಿಂದೆ ಸರಿಯುವ ವ್ಯಕ್ತಿ ಚುನಾವಣೆಗೆ ಮಾಡಿದ ಖರ್ಚನ್ನು ಬೆಂಬಲಿಸುವ ಮತ್ತೊಬ್ಬ ಅಭ್ಯರ್ಥಿಗೆ ಸೇರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಬೆಂಬಲಿಗರ ಮತ ಯಾರಿಗೆ?
ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಅವರು ತಮಗಾಗಿರುವ ಹಿನ್ನಡೆಯನ್ನು ಮೆಟ್ಟಿ ನಿಲ್ಲಲು ಪ್ರಯತ್ನಿಸುತ್ತಿದ್ದು ಬಿಜೆಪಿ ಗುರುತಿಗೆ ಮತ ಹಾಕಲು ತಮ್ಮ ಕಾರ್ಯಕರ್ತರಿಗೆ ನೀಡಬಹುದು. ಇಲ್ಲವಾದರೆ ಅನಿತಾ ಕುಮಾರಸ್ವಾಮಿ ಹೊರತಾಗಿ ಇತರ ಯಾವುದಾದರೂ ಅಭ್ಯರ್ಥಿಗೆ ಮತಗಳನ್ನು ನೀಡುವಂತೆ ಸಂದೇಶ ರವಾನಿಸಬಹುದು. ರಾಮನಗರದಲ್ಲಿ ಬೇರೂರಲು ಪ್ರಯತ್ನಿಸುತ್ತಿರುವ ಬಿಜೆಪಿ ತಮ್ಮ ಬೆಂಬಲಿಗರ ಮತಗಳನ್ನು ತನ್ನಲ್ಲೇ ಉಳಿಸಿಕೊಳ್ಳಲು ಇಚ್ಚಿಸುತ್ತದೆ. ಹೀಗಾಗಿ ಬಿಜೆಪಿ ಗುರುತಿಗೆ ಮತ ಹಾಕುವಂತೆ ಸಂದೇಶ ರವಾನಿಸುವ ಸಾಧ್ಯತೆ ಹೆಚ್ಚಿದೆ. ಈ ಚುನಾವಣೆಯನ್ನು ವಿರೋಧಿಸಿ ಬಿಜೆಪಿ ಬೆಂಬಲಿಗರು ನೋಟಾ ಮತ ಹಾಕಬಹುದು.

ಚುನಾವಣೆ ಮುಂದೂಡುವಂತೆ ಬಿಜೆಪಿ ಮನವಿ:
ತಮ್ಮ ಪಕ್ಷದ ಅಭ್ಯರ್ಥಿ ಚಂದ್ರಶೇಖರ್ ಕಣದಿಂದ ಹಿಂದೆ ಸರಿದಿರುವುದರಿಂದ ತಕ್ಷಣವೇ ಚುನಾವಣೆಯನ್ನು ಮುಂದೂಡಬೇಕು ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ಶುಕ್ರವಾರ ದೂರು ನೀಡಿದೆ.

  • ಬಿ ಜೆ ಪಿ ಎಸ್ ಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಿ.ನಾ ರಾಮು ಅವರು ರಾಜ್ಯ ಚುನಾವಣಾ ಆಯೋಗಕ್ಕೆ ಇಮೇಲ್, ಫ್ಯಾಕ್ಸ್, ಟ್ವಿಟರ್ ಹಾಗೂ ವಾಟ್ಸ್ ಅಪ್ ಮೂಲಕ ಚುನಾವಣೆ ಮುಂದೂಡುವಂತೆ ದೂರು ನೀಡಿದ್ದಾರೆ.
  • ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರನ್ನು ಭೇಟಿ ಮಾಡಿರುವ ರಾಜ್ಯ ಬಿಜೆಪಿ ನಾಯಕರು ದಾಖಲೆಗಳ ಸಮೇತ ದೂರು ನೀಡಿದ್ದು ಚುನಾವಣೆ ಮುಂದೂಡಲು ಮನವಿ ಮಾಡಿದ್ದಾರೆ.
  • ಇನ್ನು ಬಿಜೆಪಿ ಕೇಂದ್ರ ನಾಯಕರು ಕೇಂದ್ರ ಚುನಾವಣಾ ಆಯೋಗದ ಆಯುಕ್ತರಾದ ರಾವತ್ ಅವರನ್ನು ಭೇಟಿ ಮಾಡಿದ್ದು ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ರಾಮನಗರ ಉಪ ಚುನಾವಣೆಯನ್ನು ಮುಂದೂಡಬೇಕು ಎಂದು ಕೋರಿದ್ದಾರೆ.

ವರದಿ ಕೇಳಿದ ಬಿಜೆಪಿ ಹೈಕಮಾಂಡ್:
ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಲ್ಲಿ ಪಕ್ಷದ ಅಭ್ಯರ್ಥಿ ಹಿಂದೆ ಸರಿದಿರುವುದು ಪಕ್ಷದ ನಾಯಕತ್ವಕ್ಕೆ ದೊಡ್ಡ ಮಟ್ಟದ ಹಿನ್ನಡೆಯಾಗಿದೆ. ಈ ಬೆಳವಣಿಗೆಯಿಂದ ಕೇವಲ ರಾಜ್ಯದಲ್ಲಿ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲೂ ಬಿಜೆಪಿಗೆ ಮುಖಭಂಗವಾಗಿದ್ದು, ಈ ಕುರಿತು ವರದಿ ನೀಡುವಂತೆ ಕೇಂದ್ರ ಬಿಜೆಪಿ ನಾಯಕರು ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ.

Leave a Reply