ಬಳ್ಳಾರಿಯಲ್ಲಿ ಗೆದ್ದ ಮೇಲೆ ‘ರಾಮಲು ಅಣ್ಣಾವ್ರಿಗೆ ಅಭಿನಂದನೆ’ ಎಂದ ಡಿಕೆಶಿ

ಡಿಜಿಟಲ್ ಕನ್ನಡ ಟೀಮ್:

‘ಚುನಾವಣೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಬಳ್ಳಾರಿಯಲ್ಲಿ ಚುನಾವಣೆ ವೇಳೆ ಸಂಘರ್ಷ ಇಲ್ಲದೆ ಶಾಂತಿಯುತವಾಗಿ ನಡೆಯಲು ಸಹಕರಿಸಿದ ಶ್ರೀರಾಮುಲು ಅಣ್ಣ ಅವರಿಗೆ ಅಭಿನಂದನೆ…’ ಇದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಬಳ್ಳಾರಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪ ಅವರ ಗೆಲುವಿನ ನಂತರ ನೀಡಿದ ಪ್ರತಿಕ್ರಿಯೆ.

ಉಪಚುನಾವಣೆ ಫಲಿತಾಂಶದ ಪ್ರಕಟವಾಗಿ ತಮ್ಮ ಅಭ್ಯರ್ಥಿ ಗೆಲುವು ಪಕ್ಕಾ ಆಗುತ್ತಿದ್ದಂತೆ ಬೆಂಗಳೂರಿನ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೇಳಿದ್ದಿಷ್ಟು…

‘ಕಾಂಗ್ರೆಸ್ ಪಕ್ಷ ನನಗೆ ನೀಡಿದ ಜವಾಬ್ದಾರಿಯನ್ನು ನಾನು ನಿಭಾಯಿಸಿದ್ದೇನೆ.

ಚುನಾವಣೆಯ ಆರಂಭದಲ್ಲಿ ಶ್ರೀರಾಮುಲು ಅವರು ಶಾಂತಕ್ಕ ಪಾರ್ಲಿಮೆಂಟ್‍ಗೆ, ಡಿ.ಕೆ.ಶಿವಕುಮಾರ್ ಜೈಲಿಗೆ ಎಂದು ಹೇಳಿಕೊಂಡಿದ್ದರು. ಈಗ ಯಾರು ಎಲ್ಲಿಗೆ ಹೋಗಿದ್ದಾರೆ ಎಂದು ಜನ ತೀರ್ಮಾನಿಸಿದ್ದಾರೆ. ಹಣ, ಹೆಂಡ ಹಂಚಿ ಕಾಂಗ್ರೆಸ್ ಗೆದ್ದಿದೆ ಎಂದು ಫಲಿತಾಂಶದ ನಂತರ ಆರೋಪಿಸಲಾಗುತ್ತಿದೆ. ಬಿಜೆಪಿಯವರಿಗೆ ಮಾಹಿತಿ ಇದ್ದರೆ ಆರಂಭದಲ್ಲೇ ದೂರು ಕೊಟ್ಟು ಹಣ, ಹೆಂಡ ಹಂಚುವವರನ್ನು ಹಿಡಿಸಬಹುದಿತ್ತು. ಕಾಲ ಕಾಲಕ್ಕೆ ಪ್ರಚೋದನಾತ್ಮಕವಾಗಿ ಮಾತನಾಡಿ, ನಮ್ಮನ್ನು ಕೆರಳಿಸುವ ಪ್ರಯತ್ನ ಮಾಡಿದರು. ಆದರೆ ನಾವು ಅತ್ಯಂತ ಸಂಯಮದಿಂದ ವರ್ತಿಸಿದ್ದೇವೆ. ನಮ್ಮ ಕಾರ್ಯಕರ್ತರಿಗೂ ಕೂಡ ಶಾಂತಿ ರೀತಿಯಿಂದಿರಲು ಮನವಿ ಮಾಡಿಕೊಂಡಿದ್ದೆ.

ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಈಗ ನಾವು ಗೆದ್ದಿರಬಹುದು, ಅವರು ಸೋತಿರಬಹುದು. ಅದು ಮುಖ್ಯವಲ್ಲ. ಒಂದು ಸಣ್ಣ ಘರ್ಷಣೆಯೂ ಆಗದಂತೆ ಶಾಂತಿಯುತವಾಗಿ ಚುನಾವಣೆ ನಡೆಯಲು ಶ್ರೀರಾಮುಲು ಅಣ್ಣ ಸಹಕರಿಸಿದ್ದಾರೆ, ಅದಕ್ಕಾಗಿ ಅವರಿಗೆ ಧನ್ಯವಾದ ಹೇಳುತ್ತೇನೆ. ಬಳ್ಳಾರಿ ವಿಷಯದಲ್ಲಿ ನನ್ನ ಬಾಂಬ್ ಒಂದೇ. ಅದು ಅಭಿವೃದ್ಧಿಯ ಬಾಂಬ್. ಬಳ್ಳಾರಿಯಲ್ಲಿ ಹಲವಾರು ರೀತಿಯ ಸವಾಲುಗಳಿವೆ. ಶುದ್ಧ ಕುಡಿಯುವ ನೀರು, ನಿರುದ್ಯೋಗ, ಜನರ ವಲಸೆ, ಧೂಳು ಸೇರಿ ಸಾಕಷ್ಟು ಸಮಸ್ಯೆಗಳಿವೆ. ಪರಿಹಾರ ಮಾಡಲು ಅವಕಾಶಗಳಿವೆ. 371(ಜೆ) ವಿಶೇಷ ಸ್ಥಾನಮಾನವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಿದೆ. ನಾನು ಅದರತ್ತ ಗಮನ ಕೊಡುತ್ತೇನೆ.

ಬಳ್ಳಾರಿಯ ಜನ ಜಾತಿ, ಧರ್ಮದ ಭೇದ ಬಿಟ್ಟು ಚುನಾವಣೆ ನಡೆಸಿದ್ದಾರೆ. ಉಗ್ರಪ್ಪ ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ನಮ್ಮ ಧ್ವನಿಯಾಗುತ್ತಾರೆ ಎಂಬ ವಿಶ್ವಾಸವಿಟ್ಟಿದ್ದಾರೆ. ಉಗ್ರಪ್ಪ ಅವರನ್ನು ಅಭ್ಯರ್ಥಿ ಮಾಡಬೇಕು ಎಂದು ಪ್ರಸ್ತಾಪಿಸಿದ್ದೇ ನಾನು. ಅದಕ್ಕೆ ರಾಹುಲ್‍ಗಾಂಧಿ ಸೇರಿದಂತೆ ಕಾಂಗ್ರೆಸ್‍ನ ಎಲ್ಲಾ ನಾಯಕರು ಸಹಕಾರ ನೀಡಿದರು.

ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗುತ್ತಾರೆ ಎಂದು ಶ್ರೀರಾಮುಲು ಅಣ್ಣ ತೀರ್ಪು ನೀಡಿದ್ದರು. ಅವರ ಹೇಳಿಕೆ ನೋಡಿ ನನಗೆ ಆಶ್ಚರ್ಯವಾಗಿತ್ತು. ರಾಮುಲು ಯಾವಾಗ ನ್ಯಾಯಾಧೀಶರಾದರು? ಇತ್ತೀಚೆಗೆ 12 ಜನ ನ್ಯಾಯಾಧೀಶರು ಪ್ರಮಾಣವಚನ ಸ್ವೀಕರಿಸಿದಾಗ ಶ್ರೀರಾಮುಲು ಕೂಡ ಪ್ರಮಾಣ ವಚನ ತೆಗೆದುಕೊಂಡಿದ್ದರೆ ಎಂದು ಅನುಮಾನ ಕಾಡಿತ್ತು. ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ. ಈಗ ನಮ್ಮ ಹಣೆಬರಹವನ್ನೇ ಜನ ನೋಡುತ್ತಿದ್ದಾರೆ. ಬಿಜೆಪಿ ಆಪರೇಷನ್ ಕಮಲ ಮಾಡುತ್ತೇವೆ, ಸರ್ಕಾರ ರಚಿಸುತ್ತೇವೆ ಎಂದು ಬ್ಯಾಗ್ ನೇತುಹಾಕಿಕೊಂಡು ತಿರುಗಾಡುತ್ತಿದೆ. ನಾವು ಯಾವುದೇ ಆಪರೇಷನ್ ನಡೆಸುವುದಿಲ್ಲ, ಬಿಜೆಪಿಯವರು ಏನು ಮಾಡುತ್ತಾರೋ ಮಾಡಲಿ ಕಾದು ನೋಡುತ್ತೇವೆ.’

Leave a Reply