ರಾಷ್ಟ್ರ ರಾಜಕೀಯ ಶಕ್ತಿಯಾಗಿ ಬೆಳೆಯುತ್ತಿರುವ ಡಿಕೆಶಿ ಮಟ್ಟಹಾಕಲು ಬಿಜೆಪಿ ಸಂಚು; ಕಾಂಗ್ರೆಸ್ ಸಂಸದರ ಆರೋಪ

ಡಿಜಿಟಲ್ ಕನ್ನಡ ಟೀಮ್:

ದಿನೇ ದಿನೇ ರಾಷ್ಟ್ರ ರಾಜಕೀಯ ಶಕ್ತಿಯಾಗಿ ಬೆಳೆಯುತ್ತಿರುವ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಕೇಂದ್ರ ತನಿಖಾ ಸಂಸ್ಥೆಗಳ ಮೂಲಕ ಮಟ್ಟ ಹಾಕಲು ಬಿಜೆಪಿ ಒಳಸಂಚು ತೀವ್ರವಾಗಿದೆ ಎಂದು ಐವರು ಕಾಂಗ್ರೆಸ್ ಸಂಸದರು ಆರೋಪಿಸಿದ್ದಾರೆ.

ಚುನಾವಣೆಗೆ ಮೊದಲು ಶ್ರೀರಾಮುಲು ಹೇಳಿದ್ದ ಶಾಂತಾ ದಿಲ್ಲಿಗೆ, ಡಿಕೆ ಶಿವಕುಮಾರ್ ಜೈಲಿಗೆ ಎಂಬ ಮಾತು ಅವರ ಮಾತಲ್ಲ. ಕೇಂದ್ರ ಸರಕಾರದ ಹಾಗೂ ರಾಷ್ಟ್ರ ಬಿಜೆಪಿ ನಾಯಕರು ರಾಮುಲು ಬಾಯಲ್ಲಿ ಈ ಮಾತು ಹೇಳಿಸಿದ್ದರು. ಶಾಂತಾ ಅವರು ದಿಲ್ಲಿಗಂತೂ ಹೋಗಲಿಲ್ಲ. ಆದರೆ ಬಿಜೆಪಿಗೆ ಬೆದರಿಕೆಯಾಗಿ ಮಾರ್ಪಟ್ಟಿರುವ ಶಿವಕುಮಾರ್ ಅವರನ್ನು ರಾಜಕೀಯವಾಗಿ ಸದೆಬಡಿಯಲು ಪಿತೂರಿ ನಡೆದಿದೆ ಎಂದು ಸಂಸದರಾದ ಡಿ.ಕೆ. ಸುರೇಶ್, ಧೃವನಾರಾಯಣ್, ಕೆ.ಸಿ. ರಾಮಮೂರ್ತಿ, ಚಂದ್ರಪ್ಪ, ಜಿ.ಸಿ. ಚಂದ್ರಶೇಖರ್ ಬೆಂಗಳೂರಿನಲ್ಲಿ ಬುಧವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು. ಯಾರ್ಯಾರು ಏನೇನು ಹೇಳಿದರು ಎಂಬುದು ಹೀಗಿದೆ:

ಡಿ.ಕೆ. ಸುರೇಶ್: ಮರುಚುನಾವಣೆ ಅದರಲ್ಲೂ ಬಳ್ಳಾರಿ ಗೆಲುವಿನ ನಂತರ ತಮ್ಮನ್ನು ಹಾಗೂ ತಮ್ಮ ಸಹೋದರ ಡಿ.ಕೆ. ಶಿವಕುಮಾರ್ ಅವರನ್ನು ಕೇಂದ್ರ ತನಿಖಾ ಸಂಸ್ಥೆಗಳ ಮೂಲಕ ಕಾನೂನು ಹಾಗೂ ರಾಜಕೀಯವಾಗಿ ಸದೆಬಡಿಯಲು ಸಂಚು ನಡೆದಿದೆ. ಕೇಂದ್ರ ಸರಕಾರದ ಅಧೀನದಲ್ಲಿರುವ ತನಿಖಾ ಸಂಸ್ಥೆಗಳ ಮೂಲಕ ತಮ್ಮ ವಿರುದ್ಧ ಸಂಚು ನಡೆದಿರುವುದನ್ನು ಮೊದಲಿಂದಲೂ ಹೇಳುತ್ತಲೇ ಬಂದಿದ್ದವು. ಮರುಚುನಾವಣೆ ಫಲಿತಾಂಶದ ನಂತರ ಅದು ತೀವ್ರವಾಗಿರುವುದು ಗಮನಕ್ಕೆ ಬಂದಿದೆ. ಮರುಚುನಾವಣೆಗೆ ಮೊದಲು ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಶ್ರೀರಾಮುಲು ಅವರು ಬಳ್ಳಾರಿ ಬಿಜೆಪಿ ಅಭ್ಯರ್ಥಿ ‘ಶಾಂತಾ ಅವರು ದಿಲ್ಲಿಗೆ, ಡಿ.ಕೆ. ಶಿವಕುಮಾರ್ ಜೈಲಿಗೆ’ ಎಂದು ಹೇಳಿಕೆ ಕೊಟ್ಟಿದ್ದರು. ಅದು ಅವರ ಮಾತಲ್ಲ. ಅವರ ಪಕ್ಷದ ಕೇಂದ್ರ ನಾಯಕರು ಆಡಿಸಿರುವ ಮಾತು ಎಂಬುದು ಮರುಚನಾವಣೆ ಫಲಿತಾಂಶದ ನಂತರ ತಮ್ಮ ಹಾಗೂ ಶಿವಕುಮಾರ್ ವಿರುದ್ಧ ನಡೆದಿರುವ ರಹಸ್ಯ ಕಾರ್ಯಾಚರಣೆಗಳಿಂದ ಸಾಬೀತಾಗುತ್ತಿದೆ. ರಾಮುಲು ಬಾಯಲ್ಲಿ ಆಡಿಸಿರುವ ಮಾತನ್ನು ಅನುಷ್ಠಾನಕ್ಕೆ ತರಲು ಕೇಂದ್ರ ಬಿಜೆಪಿ ನಾಯಕರು ಹೊರಟಂತಿದೆ. ಹೀಗಾಗಿ ಕಾನೂನು ಹಾಗೂ ರಾಜಕೀಯ ಒತ್ತಡ ಹೆಚ್ಚು ಮಾಡುತ್ತಿದ್ದಾರೆ.

2019 ರ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ರಾಜಕೀಯ ವಿರೋಧಿಗಳನ್ನು ಬಗ್ಗು ಬಡಿಯುವ ಕಾಯಕದಲ್ಲಿ ಕೇಂದ್ರ ಸರಕಾರ ನಿರತವಾಗಿದೆ. ಚುನಾವಣೆಯಿಂದ ಚುನಾವಣೆಗೆ ರಾಷ್ಟ್ರ ಮಟ್ಟದಲ್ಲಿ ಪ್ರಬಲ ನಾಯಕರಾಗಿ ಹೊರಹೊಮ್ಮುತ್ತಿರುವ ಡಿ.ಕೆ. ಶಿವಕುಮಾರ್ ಅವರನ್ನು ಜೈಲಿಗೆ ಕಳುಹಿಸುವ ಮೂಲಕ ಸದೆಬಡಿಯಲು ಸಂಚು ನಡೆದಿದೆ ಎಂದು ಬಿಜೆಪಿಯಲ್ಲಿರುವ ಕೆಲ ಸ್ನೇಹಿತರೇ ನಮಗೆ ತಿಳಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಹೆಬ್ಬಾಗಿಲು ತೆರೆಯಲು ಬಂಡೆಗಲ್ಲಾಗಿ ಅಡ್ಡನಿಂತಿರುವ ರಾಜಕೀಯ ವಿರೋಧಿಗಳನ್ನು ಐಡಿ, ಇಡಿ. ಸಿಬಿಐ ದಾಳಿಗಳ ಮೂಲಕ ಮಟ್ಟ ಹಾಕುವ ಕೆಲಸ ನಡೆದಿದೆ. ನಾನು ಮೊದಲೇ ಹೇಳಿರುವಂತೆ ಐಡಿ, ಇಡಿ, ಸಿಬಿಐ ಬಿಜೆಪಿಯ ಇತರೆ ಮೋರ್ಚಾಗಳಂತೆ ಕೆಲಸ ಮಾಡುತ್ತಿವೆ. ಅವರ ಮಾತು ಕೇಳದವರನ್ನು ಕದಲಿಸುತ್ತಿರುವುದಕ್ಕೆ ಇತ್ತೀಚೆಗೆ ಆದ ಇಡಿ ನಿರ್ದೇಶಕರ ಬದಲಾವಣೆಯೇ ಸಾಕ್ಷಿ. ತಮ್ಮ ವಿರುದ್ಧ ರಾಜಕೀಯ ಹಾಗೂ ಕಾನೂನಾತ್ಮಕವಾಗಿ ನಡೆದಿರುವ ಷಡ್ಯಂತ್ರದ ಬಗ್ಗೆ ವಿವರಣೆ ನೀಡಲು ಹಿಂದಿನ ಇಡಿ ನಿರ್ದೇಶಕರಿಗೆ ರಾಜ್ಯದ ಒಂಬತ್ತು ಮಂದಿ ಸಂಸದರು ಪತ್ರ ಬರೆದು ಅವಕಾಶ ಕೇಳಿದ್ದೆವು. ಆದರೆ ಯಾಕೋ ಅವಕಾಶ ಕೊಡಲಿಲ್ಲ. ಸಂಸತ್ ಸದಸ್ಯರಿಗೇ ನಿವೇದನೆ ಅವಕಾಶ ನಿರಾಕರಣೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತಂದಂತೆ. ಈಗ ಬಂದಿರುವ ಹೊಸ ನಿರ್ದೇಶಕರಿಗೂ ಈಗಾಗಲೇ ಮನವಿ ಮಾಡಲಾಗಿದೆ. ಅವರು ನಮ್ಮ ಅಹವಾಲು ಕೇಳುತ್ತಾರೋ ಇಲ್ಲವೋ ನೋಡಬೇಕು. ಬಿಜೆಪಿ ನಾಯಕರು ಮಾತ್ರ ತನಿಖಾ ಸಂಸ್ಥೆಗಳ ಹೆಸರೇಳಿಕೊಂಡು ಬೆದರಿಕೆ ಹಾಗೂ ಕುತಂತ್ರ ರಾಜಕೀಯ ಮಾಡುತ್ತಿದ್ದಾರೆ.

ನಮಗೆ ಇಡಿಯಿಂದ ಹೊಸದಾಗಿ ಯಾವುದೇ ನೋಟೀಸ್ ಬಂದಿಲ್ಲ. ಆದರೆ ಬಿಜೆಪಿಗೆ ಬರಬೇಕು ಇಲ್ಲವೇ, ಜೈಲಿಗೆ ಹೋಗಬೇಕು ಎಂಬ ಸಂದೇಶವನ್ನು ಕೇಂದ್ರ ಸರಕಾರದವರು ನಮಗೆ ರವಾನೆ ಮಾಡುತ್ತಿದ್ದಾರೆ. ಹಾಗೆಂದು ಬಿಜೆಪಿಯವರೇ ಖುದ್ದಾಗಿ ನನಗೇ ಹೇಳಿದ್ದಾರೆ. ನಿನ್ನೆ-ಮೊನ್ನೆವರೆಗೂ ನಮ್ಮನ್ನು ಹೀಗೆ ಬ್ಲಾಕ್ ಮೇಲ್ ಮಾಡಲಾಗಿದೆ. ಆದರೆ ಅವರ ಹೆಸರು ಬಹಿರಂಗಪಡಿಸಲು ಹೋಗುವುದಿಲ್ಲ.

ಆದರೆ ಒಂದು ಮಾತು ಸತ್ಯ. ಕೇಂದ್ರ ಸರಕಾರ ಯಾವುದೇ ಒತ್ತಡ ಹಾಕಿದರೂ ನಾವು ಬಗ್ಗುವುದಿಲ್ಲ. ಜೈಲಿಗೆ ಕಳುಹಿಸಿದರೂ ಹೆದರುವುದಿಲ್ಲ. ನಾನು ಕಾಂಗ್ರೆಸ್ ಕಟ್ಟಾಳುಗಳು. ಯಾರಿಗೂ ಹೆದರುವುದಿಲ್ಲ. ಯಾವುದಕ್ಕೂ ಬಗ್ಗುವುದಿಲ್ಲ. ಆದರೆ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಲು ಏನೆಲ್ಲ ಬೇಕೋ ಅದನ್ನು ಮಾಡುತ್ತೇವೆ. ವೈರಿಗಳ ನಡೆ ಗುರಿಯಾಗಿಸಿಕೊಂಡೇ ರಾಜಕೀಯ ಮಾಡುತ್ತೇವೆ. ನಮಗೆ ಕಾನೂನಿನ ಬಗ್ಗೆ ಅಪಾರ ಗೌರವವಿದೆ. ಆದರೆ ಕೇಂದ್ರ ತನಿಖಾ ಸಂಸ್ಥೆಗಳು ಯಾವುದೋ ಒಂದು ಪಕ್ಷದ, ಸರಕಾರದ ಆದೇಶದಂತೆ ಕಾರ್ಯನಿರ್ಹವಸುತ್ತಿರುವುದು ತರವಲ್ಲ. ಅಧಿಕಾರಿಗಳು ಈ ನೆಲದ ಕಾನೂನು ಪ್ರಕಾರ ಕೆಲಸ ನಿರ್ವಹಿಸಬೇಕು. ಈ ಎಲ್ಲ ಬೆಳವಣೆಗೆಗಳ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಅವರಿಗೂ ವಿವರಣೆ ನೀಡಲು ಕೋರಿದ್ದ ಅವಕಾಶ ಈವರೆಗೂ ಸಿಕ್ಕಿಲ್ಲ.

ಕೆ.ಸಿ. ರಾಮಮೂರ್ತಿ: ರಾಜಕೀಯ ತಂತ್ರಗಾರಿಕೆಗೆ ಹೆಸರಾದ ಸಚಿವ ಡಿ.ಕೆ. ಶಿವಕುಮಾರ್ ಅವರು ಬಿಜೆಪಿಗೆ ಬೆದರಿಕೆಯಾಗಿ ಪರಿಣಮಿಸಿದ್ದಾರೆ. ಅವರು ರಾಜ್ಯವಲ್ಲದೇ ರಾಷ್ಟ್ರ ಮಟ್ಟದ ರಾಜಕೀಯ ನಾಯಕರಾಗಿ ಬೆಳೆಯುತ್ತಿರುವುದು ಬಿಜೆಪಿಗೆ ಆತಂಕ ತಂದಿದೆ. ಹೀಗಾಗಿ ಅವರನ್ನು ಬಗ್ಗು ಬಡಿಯಲು ಎಲ್ಲ ಕುತಂತ್ರಗಳನ್ನು ಮಾಡುತ್ತಿದ್ದಾರೆ.

ಕಳೆದ ಸೆಪ್ಟೆಂಬರ್ 13 ರಂದು ನಾವು ಒಂಬತ್ತು ಮಂದಿ ಸಂಸತ್ ಸದಸ್ಯರು ಇಡಿ ನಿರ್ದೇಶಕರಿಗೆ ಪತ್ರ ಬರೆದು 15 ನಿಮಿಷ ಚರ್ಚೆಗೆ ಅವಕಾಶ ಕೊಡಿ ಎಂದು ಕೇಳಿದ್ದೆವು. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಿರಾಕರಣೆಗೆ ಕಾರಣ ತಿಳಿಸಲಿಲ್ಲ. ನಾನೂ ಒಬ್ಬ ಪೊಲೀಸ್ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದೇನೆ. ಆದರೆ ದೂರುದಾರನ ಆಹವಾಲು ಆಲಿಸದಿರುವಷ್ಟು ಉಡಾಫೆಯನ್ನು ಎಂದಿಗೂ ಮೆರೆದಿಲ್ಲ. ಅದು ಒಬ್ಬ ಅಧಿಕಾರಿಗೆ ಶೋಭೆ ತರುವುದಿಲ್ಲ. ಅದು ಕರ್ತವ್ಯಲೋಪವಾಗುತ್ತದೆ. ಈಗ ಹೊಸ ಇಡಿ ನಿರ್ದೇಶಕರಿಗೂ ಸಂದರ್ಶನ ಅವಕಾಶ ಕೇಳಿದ್ದೇವೆ. ಅವರಾದರೂ ಅವಕಾಶ ಕಲ್ಪಿಸುವ ಸೌಜನ್ಯ ಮೆರೆಯಬೇಕು.

ಧೃವನಾರಾಯಣ್: ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ನಾಲ್ಕೂವರೇ ವರ್ಷದಲ್ಲಿ ಯಾವುದೇ ಪ್ರಗತಿ ಕೆಲಸ ಮಾಡಲಿಲ್ಲ. ಬಡವರು, ರೈತರು, ಶೋಷಿತರು, ಹಿಂದುಳಿದ ವರ್ಗದವರ ಪರ ಕೆಲಸ ಮಾಡಿಲ್ಲ. ಆ ಹುಳುಕುಗಳನ್ನು ಮುಚ್ಚಿಕೊಳ್ಳಲು ವಿರೋಧಿ ನಾಯಕರನ್ನು ಸದೆಬಡೆವ ಕೆಲಸದಲ್ಲಿ ನಿರತವಾಗಿದೆ. ವಿಧಾನಸಭೆ ಚುನಾವಣೆಗೆ ಮೊದಲು ಕಾಂಗ್ರೆಸ್ ನಾಯಕರ ಮನೆ ಮೇಲೆ ಐಟಿ ದಾಳಿ ನಡೆಸಿ, ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿತ್ತು. ಈಗ ರಾಮುಲು ಹೇಳಿಕೆ ಶಾಂತಾ ದಿಲ್ಲಿಗೆ ಡಿಕೆಶಿ ಜೈಲಿಗೆ ಅದರ ಮುಂದುವರಿದ ಭಾಗ. ಬಹುಶಃ ರಾಮುಲು ಅವರಿಗೆ ಅಮಿತ್ ಶಾ ಅವರೇ ಹೀಗೇ ಹೇಳುವಂತೆ ಹೇಳಿಕೊಟ್ಟಿರಬೇಕು. ಬೇರೆಯವರೂ ಹೇಳಿಕೊಟ್ಟಿರಬಹುದು. ಕಾನೂನು ಮುಂದೆ ಯಾರೂ ದೊಡ್ಡವರಲ್ಲ. ಆದರೆ ಅದನ್ನು ದುರ್ಬಳಕೆ ಮಾಡಿಕೊಳ್ಳುವುದು ಅಪರಾಧವಾಗುತ್ತದೆ. ಈಗ ಕೇಂದ್ರ ಸರಕಾರ ಮಾಡುತ್ತಿರುವುದು ಅದೇ ಕೆಲವನ್ನು. ಕರ್ನಾಟಕ, ದಿಲ್ಲಿ. ಆಂದ್ರ ಪ್ರದೇಶ, ತಮಿಳುನಾಡು ಎಲೆಡೆ ಇದೇ ಕೆಲಸ ಮಾಡಿದೆ. ಇದು ಹೀಗೇ ಮುಂದುವರಿದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ.

ಜಿ.ಸಿ. ಚಂದ್ರಶೇಖರ್: ಕೇಂದ್ರ ಸರಕಾರ ಸ್ವತಂತ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಶಿವಕುಮಾರ್ ಅವರನ್ನು ಸದೆಬಡಿಯಬಹುದು ಎಂದು ತಿಳಿದಿದ್ದರೆ ಅದು ಸುಳ್ಳು. ವಾಸ್ತವವಾಗಿ ಅದು ಶಿವಕುಮಾರ್ ಅವರನ್ನು ರಾಷ್ಟ್ರ ನಾಯಕರನ್ನಾಗಿ ಬೆಳೆಸುತ್ತಿದೆ. ಅವರು ಕುತಂತ್ರ ಮಾಡಿದಷ್ಟು ಶಿವಕುಮಾರ್ ಇನ್ನಷ್ಟು ಪ್ರಬಲರಾಗಿ ಬೆಳೆಯುತ್ತಾರೆ.

ಬಿಜೆಪಿ ಸರಕಾರ ಜೈಲು ರಾಜಕೀಯಕ್ಕೆ ಕೈ ಹಾಕಿರುವುದು ದುರಂತ. ಅದು ಪ್ರಜಾತಂತ್ರದ ಕಗ್ಗೊಲೆ. ಅಧಿಕಾರ ಶಾಶ್ವತ ಅಲ್ಲ. ಇವತ್ತು ಬರುತ್ತದೆ. ನಾಳೆ ಹೋಗುತ್ತದೆ. ಆದರೆ ಅಧಿಕಾರ ಇದ್ದಾಗ ಏನೂ ಮಾಡಿದರು ಎಂಬುದು ಶಾಶ್ವತವಾಗಿ ಉಳಿಯುತ್ತದೆ. ಏನೇ ಮಾಡಿದರೂ ಶಿವಕುಮಾರ್ ಅವರನ್ನು ರಾಜಕೀಯವಾಗಿ ಮುಗಿಸಲು ಯಾರಿಗೂ ಸಾಧ್ಯವಿಲ್ಲ.

Leave a Reply