ಜನಾರ್ದನ ರೆಡ್ಡಿಗೆ ಸಂಕಷ್ಟ ತಂದ 57 ಕೆಜಿ ಚಿನ್ನ!?

  ಡಿಜಿಟಲ್ ಕನ್ನಡ ಟೀಮ್:

  ಬೆಂಗಳೂರಿನ ಆರ್​ಟಿ ನಗರದ ಕನಕನಗರದಲ್ಲಿ ಫರೀದ್ ಎಂಬಾತ ಆಂಬಿಡೆಂಟ್​ ಹೆಸರಿನ ಚಿಟ್​ಫಂಡ್​ ಕಂಪನಿ ಶುರು ಮಾಡಿದ್ದ. ಬೆಳಗ್ಗೆ 6 ಗಂಟೆಗೆ ಓಪನ್​ ಆಗ್ತಿದ್ದ ಈ ಚಿಟ್​ಫಂಡ್​ ಆಫೀಸ್​ ಬೆಳಗ್ಗೆ ​8 ಗಂಟೆಗೆ ಕ್ಲೋಸ್​ ಆಗ್ತಿತ್ತು. ಆಂಬಿಡೆಂಟ್​ ಕಂಪನಿಯಲ್ಲಿ ಸಾವಿರಾರು ಜನ ಹಣ ಹೂಡಿಕೆ ಮಾಡಿದ್ರು. ಆದ್ರೆ ಹೂಡಿಕೆಯಾದ ಹಣದ ಮೇಲೆ ಷೇರು, ಬಡ್ಡಿ ಸೇರಿದಂತೆ ಲಾಭಾಂಶದ ಪಾಲನ್ನು ಸರಿಯಾಗಿ ಕೊಡಲಿಲ್ಲ ಅನ್ನೋ ಕಾರಣಕ್ಕೆ ಡಿಜೆ ಹಳ್ಳಿ ಪೊಲೀಸ್​ ಠಾಣೆಗೆ ಜನರು ದೂರು ನೀಡಿದ್ರು. ಆಂಬಿಡೆಂಟ್​ ಕಂಪನಿ ವ್ಯವಹಾರದ ಬಗ್ಗೆ ತನಿಖೆ ನಡೆಸಿದೆ ಪೊಲೀಸ್ರು ಶಾಕ್​ ಆಗಿದ್ರು. ಆಂಬಿಡೆಂಟ್​ ವ್ಯವಹಾರದ ಆಳ, ಅಗಲ ನೋಡಿದ ಬೆಚ್ಚಿ ಬಿದ್ದ ಪೊಲೀಸರು, ಸಿಸಿಬಿಗೆ ಹಸ್ತಾಂತರ ಮಾಡಿದ್ರು.

  ಪೊಲೀಸ್​ ಕಂಪ್ಲೆಂಟ್​ ಆಗುವ ಮೊದಲು ಆಂಬಿಡೆಂಟ್ ಮಾಲಿಕ ಫರೀದ್ ಕಚೇರಿ ಮೇಲೆ ಜಾರಿ ನಿರ್ದೇಶನಾಲಯದಿಂದ ದಾಳಿಯಾಗಿತ್ತು. ಇದ್ರಿಂದ ಭಯಭೀತನಾದ ಫರೀದ್​, ಜಾರಿ ನಿರ್ದೇಶನಾಲಯ ತನಿಖೆಯಿಂದ ಬಚಾವಾಗಲು ಪ್ರಯತ್ನ ಮಾಡ್ತಿದ್ದ. ಆಗ ಫರೀದ್​ಗೆ ಪರಿಚಯವಾಗಿದ್ದೇ ಜನಾರ್ದನ ರೆಡ್ಡಿ ಆಪ್ತ ಅಲಿಖಾನ್​. ಅಲಿ ಖಾನ್​ ಮೂಲಕ ಜನಾರ್ದನ ರೆಡ್ಡಿ ಸಂಪರ್ಕ ಮಾಡಿದ ಫರೀದ್​ ಜಾರಿ ನಿರ್ದೇಶನಾಲಯ ತನಿಖೆಗೆ ಬ್ರೇಕ್​ ಹಾಕಲು ಡೀಲ್ ಕುದುರಿಸಿದ್ದ. ಕೇಸ್ ಮುಚ್ಚಿ ಹಾಕಿದ್ರೆ 18 ಕೋಟಿ ರೂಪಾಯಿ ಕೊಡ್ತೀನಿ ಎಂದು ಆಫರ್​ ಕೂಡ ಇಟ್ಟಿದ್ನಂತೆ.

  ಆಂಬಿಡೆಂಟ್​ ಕಂಪನಿ ಮಾಲೀಕ ಫರೀದ್, ಜನಾರ್ದನ ರೆಡ್ಡಿಗೆ ನೇರವಾಗಿ ಹಣ ಕೊಡದೆ ಚಿನ್ನದ ಮೂಲಕ ಮೂಲಕ ನೀಡಲು ನಿರ್ಧಾರ ಮಾಡಿದ್ದ. ಹಾಗಾಗಿ 18 ಕೋಟಿ ಹಣದ ಬದಲು ಚಿನ್ನದ ಗಟ್ಟಿ ಕೊಡಲು ನಿರ್ಧರಿಸಿದ್ದ. ಚಿನ್ನದ ಉದ್ಯಮಿ ರಮೇಶ್​ ಕೊಠಾರಿ ಸಂಪರ್ಕಿಸಿದ ಫರೀದ್​, ಅಕೌಂಟ್​ಗೆ 18 ಕೋಟಿ ಹಣ ವರ್ಗಾವಣೆ ಮಾಡಿದ್ದ. ಆರ್​ಟಿಜಿಎಸ್ ಮೂಲಕ 18 ಕೋಟಿ ಪಡೆದ ಉದ್ಯಮಿ ರಮೇಶ್​ ಕೊಠಾರಿ, 57 ಕೆಜಿ ಚಿನ್ನವನ್ನು ಕೊರಿಯರ್​ ಮೂಲಕ ಬಳ್ಳಾರಿಗೆ ರವಾನೆ ಮಾಡಿದ್ದನಂತೆ.

  ಬಳ್ಳಾರಿಯಲ್ಲಿ ಮತ್ತೊಬ್ಬ ಚಿನ್ನದ ವ್ಯಾಪಾರಿ ರಮೇಶ್, ಕೊರಿಯರ್​ನಲ್ಲಿ ಬಂದಿದ್ದ 57 ಕೆಜಿ ಚಿನ್ನವನ್ನು ಪಡೆದುಕೊಂಡು ನೇರವಾಗಿ ಜನಾರ್ದನ ರೆಡ್ಡಿ ಆಪ್ತ ಅಲಿಖಾನ್​ಗೆ ಹಸ್ತಾಂತರ ಮಾಡಿದ. ಆದ್ರೆ ಅಲ್ಲಿಂದ ಚಿನ್ನ ಎಲ್ಲಿಗೆ ಹೋಯ್ತು ಅನ್ನೋದು ನಿಗೂಢವಾಗಿದೆ. ಇದೀಗ ನಿಗೂಢ ಭೇದಿಸಲು ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ. ಸಿಸಿಬಿ ಬಲೆಗೆ ಅಲಿಖಾನ್​ ಬಿದ್ದರೆ ಸತ್ಯಾಂಶ ಬಯಲಿಗೆ ಬರಲಿದೆ. 57 ಕೆಜಿ ಚಿನ್ನ ರೆಡ್ಡಿ ಕೈ ಸೇರಿದೆಯೋ. ಇಲ್ಲ ಇನ್ನಾರಿಗೆ ಸೇರಿದೆಯೋ ಅನ್ನೋ ಬಗ್ಗೆ ಅಲಿಖಾನ್​ ನೀಡುವ ಹೇಳಿಕೆ ಮೇಲೆ ನಿಂತಿದೆ.

  ಆದ್ರೆ ಅಲಿಖಾನ್​ ಬಳಿಯಿಂದ ಜನಾರ್ದನ ರೆಡ್ಡಿ ಚಿನ್ನವನ್ನು ಪಡೆದಿಲ್ಲ ಎಂದರೆ, ಸಿಸಿಬಿ ಪೊಲಿಸರಿಂದ ತಪ್ಪಿಸಿಕೊಂಡು ಓಡಿಹೋಗುವ ಪ್ರಮೆಯ ಇರಲಿಲ್ಲ. ಆದ್ರೆ ಸಿಸಿಬಿ ಪೊಲೀಸರು ಅರೆಸ್ಟ್ ಮಾಡ್ತಾರೆ ಅನ್ನೋ ಭಯದಲ್ಲಿ ಜನಾರ್ದನ ರೆಡ್ಡಿ ನಾಪತ್ತೆ ಆಗಿರೋದನ್ನು ನೋಡಿದ್ರೆ, ಇದ್ರಲ್ಲಿ ಏನೋ ಗೋಲ್ಮಾಲ್​ ನಡೆದಿದೆ ಅನ್ನೋ ಅನುಮಾನ ಮೂಡಿಸುತ್ತಿದೆ. ಇನ್ನೊಂದು ಮೂಲಗಳ ಪ್ರಕಾರ ಜನಾರ್ದನ ರೆಡ್ಡಿ ವಿರುದ್ಧ ರಾಜ್ಯ ಸರ್ಕಾರ ಸಂಚು ಮಾಡಿದೆ ಎನ್ನಲಾಗ್ತಿದೆ. ಆದ್ರೆ ರಾಜ್ಯ ಸರ್ಕಾರ ಇಲ್ಲದೇ ಇರುವ ಪ್ರಕರಣದಲ್ಲಿ ಜನಾರ್ದನ ರೆಡ್ಡಿಯನ್ನು ಸಿಲುಕಿಸಿ ಮುಖಭಂಗ ಅನುಭವಿಸಲು ಸಿದ್ಧವಿರಲ್ಲ ಅನ್ನೋ ಮಾತು ಕೂಡ ಅಷ್ಟೆ ಸತ್ಯವಾಗಿದೆ. ಒಟ್ಟಾರೆ 57 ಕೆಜಿ ಚಿನ್ನ ರೆಡ್ಡಿಗೆ ಜೈಲು ಕೊಠಡಿಯನ್ನು ಮತ್ತೆ ಪರಿಚಯಿಸುವ ಸಂಕಷ್ಟ ತಂದೊಡ್ಡಿದೆ.

  Leave a Reply