ಜನಾರ್ಧನರೆಡ್ಡಿ ಪ್ರಕರಣದಲ್ಲಿ ಸರಕಾರದ ಹಸ್ತಕ್ಷೇಪ ಇಲ್ಲ: ಡಿಕೆಶಿ

ಡಿಜಿಟಲ್ ಕನ್ನಡ ಟೀಮ್:

ಮಾಜಿ ಸಚಿವ ಜನಾರ್ಧನರೆಡ್ಡಿ ಪ್ರಕರಣದ ತನಿಖೆಯಲ್ಲಿ ಸರಕಾರ ಯಾವುದೇ ಹಸ್ತಕ್ಷೇಪ ಮಾಡಿಲ್ಲ, ಮಾಡುವುದೂ ಇಲ್ಲ. ಪೊಲೀಸರು ಕಾನೂನು ಪ್ರಕಾರ ತನಿಖೆ ನಡೆಸುತ್ತಿದ್ದಾರೆ ಅಷ್ಟೇ ಎಂದು ಬಳ್ಳಾರಿ ಜಿಲ್ಲೆ ಉಸ್ತುವಾರಿಯನ್ನು ಹೊತ್ತಿರುವ ಜಲ ಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಪ್ರಕರಣ ಕುರಿತು ಪೊಲೀಸರು ಬಹಳ ದಿನಗಳಿಂದ ತನಿಖೆ ನಡೆಸುತ್ತಿದ್ದಾರೆ. ತನಿಖೆ ನಡೆಯುತ್ತಿರುವುದರಿಂದ ಈ ಹಂತದಲ್ಲಿ ಹೆಚ್ಚಿಗೆ ಏನನ್ನೂ ಮಾತಾಡಲು ಬಯಸುವುದಿಲ್ಲ. ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ ಎಂದು ಮಾಧ್ಯಮದವರಿಗೆ ಬೆಂಗಳೂರಿನಲ್ಲಿ ಗುರುವಾರ ತಿಳಿಸಿದರು.

ಜನಾರ್ಧನರೆಡ್ಡಿ ಪ್ರಕರಣದ ಮತ್ತೊಬ್ಬ ಆರೋಪಿ ಫಾರೀದ್ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಜತೆ ತೆಗೆಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಪ್ರತಿನಿತ್ಯ ನಮ್ಮನ್ನು ನೋಡಲು ಸಾವಿರಾರು ಮಂದಿ ಬರುತ್ತಾರೆ. ಕೆಲಸ-ಕಾರ್ಯ ನಿಮಿತ್ತ ಭೇಟಿ ಮಾಡುತ್ತಾರೆ. ಈ ಸಂದರ್ಭ ಹಾಗೂ ಕಾರ್ಯಕ್ರಮ ವೇದಿಕೆಗಳಲ್ಲಿ ನೂರಾರು ಮಂದಿ ಫೋಟೋ ತೆಗೆಸಿಕೊಳ್ಳುತ್ತಾರೆ. ಅವರು ಯಾರು? ಎಲ್ಲಿಂದ ಬಂದಿರುತ್ತಾರೆ? ಅವರ ಹಿನ್ನೆಲೆ ಏನು ಎಂಬುದು ಆ ಸಂದರ್ಭದಲ್ಲಿ ಗೊತ್ತಾಗುವುದಿಲ್ಲ, ಗೊತ್ತಾಗಲು ಸಾಧ್ಯವೂ ಇಲ್ಲ. ಈ ರೀತಿ ಅಪರಾಧ ಪ್ರಕರಣಗಳು ಬೆಳಕಿಗೆ ಬಂದಾಗಷ್ಟೇ ಅವರು ಯಾರು, ಏನು ಎಂಬುದು ಗೊತ್ತಾಗುತ್ತದೆ. ಪೋಟೋ ತೆಗೆಸಿಕೊಂಡ ಮಾತ್ರಕ್ಕೆ ಅವರ ಜತೆ ಸಂಪರ್ಕ ಇದೆ ಎಂದು ಅರ್ಥವಲ್ಲ ಎಂದು ಹೇಳಿದರು.

Leave a Reply