ಬಿಎಸ್​ವೈ ವಿರುದ್ಧ ನಿಂತ ಲಿಂಗಾಯತ ಸಮುದಾಯ?

ಡಿಜಿಟಲ್ ಕನ್ನಡ ಟೀಮ್:

ಮಾಜಿ ಸಿಎಂ ಬಿಎಸ್​ವೈ ವಿರುದ್ಧ ಲಿಂಗಾಯತ ಸಮುದಾಯ ಮತ ಚಲಾಯಿಸಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಲಿಂಗಾಯತ ಸಮುದಾಯ ಭರ್ಜರಿ ಬೆಂಬಲ ನೀಡಿದ್ರಿಂದ 104 ಸ್ಥಾನಗಳಲ್ಲಿ ಗೆಲುವು ದಾಖಲಿಸಿ, ಆಡಳಿತದಲ್ಲಿದ್ದ ಕಾಂಗ್ರೆಸ್​ ಪಕ್ಷವನ್ನು ಮಕಾಡೆ ಮಲಗಿಸಿತ್ತು. ಪ್ರತ್ಯೇಕ ಧರ್ಮ ಮಾಡಲು ಸಿದ್ದರಾಮಯ್ಯ ಸರ್ಕಾರ ಪ್ರಸ್ತಾವನೆ ಕಳುಹಿಸಿದ್ರಿಂದ ಲಿಂಗಾಯತರು ಮುನಿಸಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದ್ರೀಗ ಬಳ್ಳಾರಿ ಲೋಕಸಭಾ ಹಾಗೂ ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯ ಹೆಚ್ಚು ಮತಗಳನ್ನು ಹೊಂದಿದ್ದರೂ ಸಹ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಅಭ್ಯರ್ಥಿಗಳು ಭರ್ಜರಿ ಗೆಲುವು ದಾಖಲಿಸಿದ್ದಾರೆ.

ವರ್ಕೌಟ್​ ಆಯ್ತಾ ಸಚಿವರ ಕ್ಷಮೆ?
ಚುನಾವಣಾ ಪ್ರಚಾರದ ಮಧ್ಯೆ ಸಚಿವ ಡಿ.ಕೆ ಶಿವಕುಮಾರ್​, ಲಿಂಗಾಯ ಧರ್ಮ ಪ್ರತ್ಯೇಕ ಮಾಡಲು ಸರ್ಕಾರ ಕೈ ಹಾಕಿದ್ದು ಸರಿಯಾದ ನಿರ್ಧಾರ ಆಗಿರಲಿಲ್ಲ. ಹಾಗಾಗಿ ಆ ಸರ್ಕಾರದ ಭಾಗವಾಗಿದ್ದ ನಾನೂ ಕ್ಷಮಾಪಣೆ ಕೋರುತ್ತೇನೆ ಎಂದಿದ್ರು. ಈ ಮಾತು ಸಾಕಷ್ಟು ಜನರ ಮನಪರಿವರ್ತನೆ ಮಾಡಿದ್ದು, ಡಿ.ಕೆ ಶಿವಕುಮಾರ್​ ಅವರ ಮಾತನ್ನು ಮನ್ನಿಸಿರುವ ಲಿಂಗಾಯತ ಸಮುದಾಯ ಕಾಂಗ್ರೆಸ್​ – ಜೆಡಿಎಸ್​ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಕಾಂಗ್ರೆಸ್​ ನಾಯಕರು ಡಿಕೆಶಿ ಮಾತನ್ನು ವಿರೋಧಿಸಿದ್ರೂ ಜನರು ಮಾತ್ರ ಸಚಿವರ ಕ್ಷಮೆಗೆ ಮನ್ನಣೆ ನೀಡಿರೋದು ಕನ್ಫರ್ಮ್​ ಆಗಿದೆ.

ಸಾಲ ಮನ್ನಾಗೆ ಮನಸೋತನಾ ಮತದಾರ?
ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಜನ ಮೆಚ್ಚುವಂತಹ ಕಾರ್ಯ ಅಂದ್ರೆ ರೈತರ ಸಂಪೂರ್ಣ ಬೆಳೆ ಸಾಲಮನ್ನಾ ಯೋಜನೆ. ಈ ಯೋಜನೆ ಜಾರಿ ಸ್ವಲ್ಪ ತಡವಾದರೂ ಸರ್ಕಾರದ ಮೇಲೆ ವಿಶ್ವಾಸವಿರಿಸಿಕೊಂಡು ಮತದಾರ ಸರ್ಕಾರದ ಕೈ ಹಿಡಿದಿದ್ದಾನೆ. ಮಂಡ್ಯ, ರಾಮನಗರ, ಬಳ್ಳಾರಿ, ಜಮಖಂಡಿಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಭರ್ಜರಿ ಜಯ ದಾಖಲಿಸಿದ್ರೆ, ಶಿವಮೊಗ್ಗದಲ್ಲಿ ಮಾತ್ರ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ, ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರಗೆ ಕಠಿಣ ಪೈಪೋಟಿ ಒಡ್ಡಿದ್ದಾರೆ. ಈ ಮೂಲಕ ಶಿವಮೊಗ್ಗ ಕಮಲ ಕೋಟೆ ಅನ್ನೋದನ್ನು ಮತ್ತೊಮ್ಮೆ ಸಾಬೀತು ಮಾಡಿಕೊಂಡಿದ್ದಾರೆ.

Leave a Reply