ನಾಪತ್ತೆಯಾಗಿದ್ದ ರೆಡ್ಡಿ ಸಿಸಿಬಿ ಮುಂದೆ ಪ್ರತ್ಯಕ್ಷ!

ಡಿಜಿಟಲ್ ಕನ್ನಡ ಟೀಮ್:

ಆಂಬಿಡೆಂಟ್ ಕಂಪನಿ ಮಾಲೀಕನನ್ನು ಜಾರಿ ನಿರ್ದೇಶನಾಲಯ ಪ್ರಕರಣದಿಂದ ಖುಲಾಸೆ ಮಾಡಿಸಲು 20 ಕೋಟಿ ರೂಪಾಯಿ ಡೀಲ್ ಮಾಡಿದ್ದಾರೆ ಎನ್ನಲಾಗಿರುವ ಪ್ರಕರಣದಲ್ಲಿ ಗಣಿಧಣಿ ಜನಾರ್ದನ ರೆಡ್ಡಿ ಸಿಸಿಬಿ ಎದುರು ಶರಣಾಗಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಸಿಸಿಬಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿಕೊಂಡು ತಿರುಗುತ್ತಿದ್ದ ರೆಡ್ಡಿ ನೋಟಿಸ್‌ಗೆ ಬೆದರಿ ಸಿಸಿಬಿ ಅಧಿಕಾರಿಗಳ ಎದುರು ಹಾಜರಾಗಿದ್ದಾರೆ.

ಆಂಬಿಡೆಂಟ್ ವಂಚನೆ ಕೇಸ್‌ನಲ್ಲಿ ನಿಮ್ಮ ಹೆಸರು ಪ್ರಸ್ತಾಪವಾಗಿದೆ ಈ ಬಗ್ಗೆ ಏನಂತಿರಾ..? ಈ ಫೋಟೋದಲ್ಲಿ ಇರೋದು ನೀವೇ ಅಲ್ವಾ ಎಂದು ತನಿಖಾಧಿಕಾರಿಗಳು ಒಂದೊಂದೆ ಅಂಶಗಳನ್ನು ಬಾಯಿ ಬಿಡಿಸುತ್ತಿದ್ದಾರೆ. ನಿಮ್ಮ ಪಕ್ಕದಲ್ಲಿ ಇರೋದು ಯಾರು..? ಅವರಿಗೂ ನಿಮಗೂ‌ ಹೇಗೆ ಪರಿಚಯ ಆಯ್ತು ಎಂದು ಕೇಳಿದ್ದಕ್ಕೆ ಇದ್ರಲ್ಲಿ ಅಲಿಖಾನ್‌ ಇದಾರೆ ಅವರು‌ ನನ್ನ ಪಿಎ, ಉಳಿದವರು ಅಲಿಖಾನ್‌ಗೆ ಪರಿಚಯಸ್ಥರು ಇರಬಹುದು ಎಂದು ರೆಡ್ಡಿ ಉತ್ತರ ಕೊಟ್ಟಿದ್ದಾರೆ.

ವಕೀಲರಾದ ಚಂದ್ರಶೇಖರ್ ಹಾಗೂ ಸುದರ್ಶನ್ ಜೊತೆ ಆಗಮಿಸಿದ ಜನಾರ್ದನ ರೆಡ್ಡಿ, ಸಿಸಿಬಿ ಪೊಲೀಸರ ಕೆಲವೊಂದು ಪ್ರಶ್ನೆಗೆ ಉತ್ತರಿಸಲು ತಡಬಡಾಯಿಸಿದ್ದಾರೆ. ನೀವು 20 ಕೋಟಿ ಡೀಲ್ ಮಾಡಿರೋದಾಗಿ ಫರೀದ್ ಹೇಳಿಕೆ ಕೊಟ್ಟಿದ್ದಾರೆ ಇದ್ರ ಬಗ್ಗೆ ನೀವು ಏನ್ ಹೇಳ್ತಿರಾ ಎಂದಿದ್ದಕ್ಕೆ, ಫರೀದ್ ಯಾರು ಅನ್ನೋದೆ ನನಗೆ ಗೊತ್ತಿರಲಿಲ್ಲ.. ಒಮ್ಮೆ ಅಷ್ಟೇ ಭೇಟಿ ಆಗಿದ್ದು, ನಾನು ಯಾವುದೇ ಹಣಕ್ಕೆ ಡೀಲ್‌ ಮಾಡಿಲ್ಲ.. ರಾಜಕೀಯವಾಗಿ‌ ಇಲ್ಲಸಲ್ಲದ‌ ಆರೋಪ‌ ಮಾಡ್ತಿದ್ದಾರೆ.. ತನಿಖೆ ವೇಳೆ ತಪ್ಪಿತಸ್ಥ ಅಂತ ಗೊತ್ತಾದ್ರೆ ಏನೇ ಶಿಕ್ಷೆ ಕೊಟ್ಟರು ಅನುಭವಿಸಲು ಅದಕ್ಕೆ ನಾನು ಸಿದ್ಧ ಎಂದಿದ್ದಾರೆ.

ಯಾವುದೇ ತಪ್ಪು ಮಾಡಿಲ್ಲ ಎಂದ ಮೇಲೆ‌ ನೀವು ಯಾಕೆ ಇಷ್ಟು ದಿನ ಪರಾರಿಯಾಗಿದ್ರಿ ಎಂದು ತನಿಖಾಧಿಕಾರಿಗಳು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಜನಾರ್ದನ ರೆಡ್ಡಿ, ನನಗೆ ಈ ಬಗ್ಗೆ ಗೊತ್ತಿರಲಿಲ್ಲ, ನಿನ್ನೆ ನೋಟಿಸ್ ಬಂದ ಬಳಿಕ ನನಗೆ ಗೊತ್ತಾಗಿದ್ದು, ಕೋಟಿ ಕೋಟಿ ಡೀಲ್ ಮಾಡಿದ್ದೀನಿ ಅಂತ ಮಾಧ್ಯಮದಲ್ಲಿ ತೋರಿಸ್ತಿದ್ರು. ನಾನು ಪೊಲೀಸರ ಮಗ ನನಗೆ ಪೊಲೀಸರ ಮೇಲೆ‌ ಅಪಾರ ಗೌರವವಿದೆ. ಇದೇ ಗೌರವದಿಂದ ನಾಳೆ ತನಕ ಅವಕಾಶ ಇದ್ದರೂ ನಾನು ಇವತ್ತೇ ವಿಚಾರಣೆಗೆ ಹಾಜರಾದೆ ಎಂದಿದ್ದಾರೆ.

ಈ ಮೊದಲೇ ಆರೋಪಿ ಫರೀದ್ ಕೊಟ್ಟಿರುವ ಹೇಳಿಕೆ ಆಧಾರಿಸಿ ಜನಾರ್ದನ ರೆಡ್ಡಿಯನ್ನು ವಿಚಾರಣೆ ನಡೆಸುತ್ತಿದ್ದು, ಬಂಗಾರದ ಉದ್ಯಮಿ ರಮೇಶ್ ಕೊಠಾರಿಗೆ ಸಿಸಿಬಿ ಅಧಿಕಾರಿಗಳು ಬುಲಾವ್ ಕೊಟ್ಟಿದ್ದಾರೆ. ಜನಾರ್ದನ ರೆಡ್ಡಿ ಸಾಕಷ್ಟು ಪ್ರಶ್ನೆಗಳಿಗೆ ಇದಕ್ಕೂ ನನಗೂ ಸಂಬಂಧ ಇಲ್ಲಾ ಎಂದಿದ್ದಾರೆ. ದೇಶಬಿಟ್ಟು ಹೋಗಲು ಯತ್ನಿಸಿದ್ರಾ ಎಂದಿದ್ದಕ್ಕೆ ಗರಂ ಆಗಿರುವ ರೆಡ್ಡಿ, ನಾನು ದೇಶ ಬಿಟ್ಟು ಯಾಕೆ ಹೋಗಲಿ ಎಂದು ಮರು ಪ್ರಶ್ನೆ ಹಾಕಿದ್ದಾರೆ. ಇದೇ ವೇಳೆ ಸುಪ್ರೀಂಕೋರ್ಟ್ ನನಗೆ ಕಂಡಿಷನ್ ಬೇಲ್ ನೀಡಿದೆ. ನನ್ನ ಪಾಸ್‌ಪೋರ್ಟ್ ಅನ್ನು ಸಿಬಿಐ‌ ಸೀಜ್ ಮಾಡಿದೆ.ನಾನೂ ಕೂಡ ಶಾಸಕನಾಗಿ, ಸಚಿವನಾಗಿ ಕೆಲಸ ಮಾಡಿದ್ದೇನೆ.. ನನಗೂ ಕೂಡ ಕಾನೂನಿನ ಅರಿವಿದೆ. ನೀವು ನೋಟಿಸ್ ನೀಡದೆ ನಾನು ಯಾಕೆ ವಿಚಾರಣೆಗೆ ಬರಬೇಕು. ನಿನ್ನೆ ನೀವು ನೋಟಿಸ್ ನೀಡಿದ್ದೀರಿ ಹಾಗಾಗಿ ಒಂದು ದಿನ ಮೊದಲೇ ವಿಚಾರಣೆಗೆ ಬಂದಿದ್ದು ನಾನು ತನಿಖೆಗೆ ಸಹಕಾರ ನೀಡುತ್ತೇನೆ ಎಂದಿದ್ದಾರೆ. ಒಟ್ಟಾರೆ ಸತತ ಐದು ಗಂಟೆಗಳ ಕಾಲ ವಿಚಾರಣೆ ಮುಂದುವರಿದಿದೆ.

Leave a Reply