ಟಿಪ್ಪು ಜಯಂತಿ ಬೇಡವಾದರೆ ಕೇಂದ್ರ ಸರ್ಕಾರದಿಂದ ಫರ್ಮಾನು ಹೊರಡಿಸಿ, ಬಿಜೆಪಿಗೆ ಡಿಕೆಶಿ ಸವಾಲ್!

ಡಿಜಿಟಲ್ ಕನ್ನಡ ಟೀಮ್:

‘ರಾಜಕೀಯ ಕಾರಣಕ್ಕಾಗಿ ಟಿಪ್ಪು ಜಯಂತಿ ವಿರೋಧಿಸುವುದು ಸರಿಯಲ್ಲ. ಒಂದು ವೇಳೆ ಟಿಪ್ಪು ಜಯಂತಿ ಆಚರಿಸಲೇಬಾರದು ಎಂಬುದಾದರೆ ಕೇಂದ್ರದಲ್ಲಿ ನಿಮ್ಮದೇ ಸರಕಾರವಿದೆ, ಇನ್ನು ಮುಂದೆ ಟಿಪ್ಪು ಜಯಂತಿ ಆಚರಣೆ ಬೇಡ ಎಂದು ಫರ್ಮಾನು ಹೊರಡಿಸಿ…’ ಇದು ಟಿಪ್ಪು ಜಯಂತಿ ಆಚರಣೆ ವಿರೋಧಿಸುತ್ತಿರುವ ಬಿಜೆಪಿ ನಾಯಕರಿಗೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಕಿದ ಸವಾಲು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಆಯೋಜಿಸಲಾಗಿದ್ದ ಟಿಪ್ಪು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಹೇಳಿದ್ದಿಷ್ಟು…

‘ಶಾಂತಿಭಂಗಕ್ಕಾಗಿ ಮತ್ತು ರಾಜಕೀಯ ಕಾರಣಕ್ಕಾಗಿ ವಿರೋಧ ಮಾಡುವುದು ಸರಿಯಲ್ಲ. ನಿಮಗೆ ಟಿಪ್ಪು ಬಗ್ಗೆ ಸ್ಪಷ್ಟ ಮಾಹಿತಿ ಇದ್ದರೆ ಕೇಂದ್ರ ಸರ್ಕಾರಕ್ಕೆ ಅದನ್ನು ಮನವರಿಕೆ ಮಾಡಿಕೊಟ್ಟು ಇನ್ನು ಮುಂದೆ ಟಿಪ್ಪು ಜಯಂತಿ ಆಚರಿಸಬಾರದು ಎಂದು ಫರ್ಮಾನು ಹೊರಡಿಸಿ. ನಿಮ್ಮದೆ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಆಗ ನಾವು ಸುಮ್ಮನಾಗುತ್ತೇವೆ.

ಈ ಹಿಂದೆ ಯಡಿಯೂರಪ್ಪನವರು, ಅಶೋಕ್, ಜಗದೀಶ್ ಶೆಟ್ಟರ್ ಸೇರಿದಂತೆ ಬಿಜೆಪಿಯ ನಾಯಕರು ಟಿಪ್ಪು ಸುಲ್ತಾನ್ ಬಗ್ಗೆ ಮಾತನಾಡಿರುವುದು ನನ್ನ ಬಳಿ ಇದೆ. ಬೇಕಿದ್ದರೆ ಅದನ್ನು ಕಳುಹಿಸಿಕೊಡುತ್ತೇನೆ. ನಿಮ್ಮ ಮಾತುಗಳನ್ನೆಲ್ಲ ವಾಪಸ್ ಪಡೆದುಕೊಳ್ಳಿ ಆಮೇಲೇ ಜಯಂತಿಯನ್ನು ವಿರೋಧ ಮಾಡಿ. ಟಿಪ್ಪು ಸುಲ್ತಾನ್ ದೇಶ ಕಂಡ ಅಪ್ರತಿಮ ದೇಶ ಭಕ್ತ. ರಾಷ್ಟ್ರಪತಿ ರಾಮನಾಥ್ ಕೋವಿಂದ್, ವಿಧಾನಮಂಡಲದ 60ನೇ ವರ್ಷಾಚರಣೆ ವೇಳೆ ಜಂಟಿ ಅಧಿವೇಶನ ಉದ್ದೇಶಿಸಿ 20 ನಿಮಿಷ ಭಾಷಣ ಮಾಡಿದ್ದರು. ಅದರಲ್ಲಿ 4 ನಿಮಿಷ ಟಿಪ್ಪು ಕುರಿತು ಹೊಗಳಿದ್ದಾರೆ. ದೇಶದ ಮೊದಲ ಸ್ವಾತಂತ್ರ ಹೋರಾಟದಲ್ಲಿ ಟಿಪ್ಪು ಸುಲ್ತಾನ್ ಮತ್ತು ಝಾನ್ಸಿ ರಾಣಿ ಲಕ್ಷ್ಮಿಬಾಯಿ ಅವರನ್ನು ಉಲ್ಲೇಖಿಸಲಾಗಿದೆ. ಸಂವಿಧಾನದಲ್ಲಿ ಇವರ ಫೋಟೋ ಇದೆ. ಇತಿಹಾಸ ತಿಳಿಯದೆ ಅವರ ಫೋಟೋ ಹಾಕಲು ಅವರೇನು ದಡ್ಡರಾ? ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳದೆ ಮಾತನಾಡಬೇಡಿ.

ನಮ್ಮಲ್ಲಿ ಐಕ್ಯತೆ, ಏಕತೆಗೆ ಹೆಚ್ಚು ಒತ್ತು ಕೊಟ್ಟಿದ್ದೇವೆ. ಟಿಪ್ಪು ಜಯಂತಿಯಿಂದ ರಾಜಕೀಯ ಲಾಭ ಮಾಡಿಕೊಳ್ಳುವ ಉದ್ದೇಶ ನಮಗಿಲ್ಲ. ರಾಜಕೀಯಕ್ಕಾಗಿ ವಿರೋಧ ಮಾಡುವುದನ್ನು ಬಿಡಿ. ಯಾವುದೇ ಧರ್ಮ, ಪೂಜೆಯಾದರೂ ಅದರ ಮೂಲ ಉದ್ದೇಶವೊಂದೆ ಧರ್ಮದ ಹೆಸರಿನಲ್ಲಿ, ಜಾತಿ ಹೆಸರಿನಲ್ಲಿ ಸಮಾಜ ಒಡೆಯಬಾರದು. ಜಗತ್ತಿನ ಯಾವುದೇ ಭಾಗದಲ್ಲಿರುವ ಮನುಷ್ಯರಾದರೂ ಅವರ ರಕ್ತದ ಬಣ್ಣದ ಒಂದೇ. ಕಣ್ಣೀರಿನ, ಬೆವರಿನ ರುಚಿ ಒಂದೇ. ನಮ್ಮ ಮಕ್ಕಳಿಗೆ ಇತಿಹಾಸದ ಬಗ್ಗೆ ತಪ್ಪು ಸಂದೇಶ ಕೊಡಬಾರದು.

ನಾನು ಇಲ್ಲಿಗೆ ಸರಕಾರದ ಪರವಾಗಿ ಬಂದಿದ್ದೇನೆ. ಯಾರನ್ನು ಮೆಚ್ಚಿಸಲು ನಾನು ಇಲ್ಲಿಗೆ ಬಂದಿಲ್ಲ. ಎಲ್ಲಾ ಧರ್ಮದ ನಾಯಕರು, ದೇಶಕ್ಕೆ ತ್ಯಾಗ ಮಾಡಿದ ಮಹಾತ್ಮರನ್ನು ಸ್ಮರಿಸುವ ಕೆಲಸ ಎಲ್ಲ ಸರಕಾರಗಳು ಮಾಡಿಕೊಂಡು ಬಂದಿವೆ. ಅದರಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ. ಅದನ್ನು ಮಾಡುತ್ತಲೂ ಇಲ್ಲ.

ರಾಜಕೀಯದಲ್ಲಿ ಧರ್ಮ ಇರಬೇಕು. ಧರ್ಮದಲ್ಲಿ ರಾಜಕೀಯ ಇರಬಾರದು. ಈ ವಿಚಾರದಲ್ಲಿ ಬಿಜೆಪಿಗೆ ಆಗುತ್ತಿರುವ ಸಮಸ್ಯೆ ಏನು ಎಂಬುದು ತಿಳಿಯುತ್ತಿಲ್ಲ. ಇದರಿಂದ ವೋಟ್ ಜಾಸ್ತಿ ಆಗುತ್ತಾ? ಯಾವುದೇ ವ್ಯಕ್ತಿ ಹುಟ್ಟುವಾಗ ಇದೇ ಜಾತಿ ಎಂದು ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ. ತನ್ನದೇ ಆದ ರೀತಿಯಲ್ಲಿ ತನ್ನ ಮಕ್ಕಳನ್ನು ಅಂತಹ ಧೀಮಂತ ನಾಯಕ ನಾವೆಲ್ಲರೂ ನೆನೆಯಬೇಕು.’

Leave a Reply