ಕೇಂದ್ರ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಅನಂತ ಕುಮಾರ್ ವಿಧಿವಶ

ಡಿಜಿಟಲ್ ಕನ್ನಡ ಟೀಮ್:

ಹಲವು ತಿಂಗಳುಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದ ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ಅನಂತ ಕುಮಾರ್ ವಿಧಿವಶರಾಗಿದ್ದಾರೆ.

ಕೆಲವು ತಿಂಗಳ ಹಿಂದೆ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆದಿದ್ದ ಅನಂತ ಕುಮಾರ್ ಅವರು ಕಳೆದ ತಿಂಗಳು 20ರಂದು ತವರಿಗೆ ಮರಳಿದ್ದರು. ನಂತರ ಬಸವನಗುಡಿಯ ಶಂಕರ್ ಕ್ಯಾನ್ಸರ್ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಸೋಮವಾರ ಬೆಳಗಿನ ಜಾವ 2 ಗಂಟೆಗೆ ಅವರು ಕೊನೆಯುಸಿರೆಳೆದಿದ್ದಾರೆ.

1959 ಜುಲೈ 22ರಂದು ಬೆಂಗಳೂರಿನಲ್ಲಿ ಜನಿಸಿದ ಅನಂತ ಕುಮಾರ್, ಹುಬ್ಬಳ್ಳಿಯ ಕೆಎಸ್ ಕಲಾ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದರು. ನಂತರ ಜೆಎಸ್ಎಸ್ ಕಾನೂನು ಕಾಲೇಜಿನಲ್ಲಿ ಎಲ್ಎಲ್ ಬಿ ಪದವಿ ಪಡೆದಿದ್ದರು. ವಿದ್ಯಾರ್ಥಿಯಾಗಿದ್ದಾಗಲೇ ರಾಷ್ಟ್ರೀಯ ಸ್ವಯಂ ಸೇವಾ ಸಂಘದಲ್ಲಿ ಗುರುತಿಸಿಕೊಂಡಿದ್ದ ಅನಂತ ಕುಮಾರ್ ಅವರು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಸದಸ್ಯರಾಗಿದ್ದರು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಸರಕಾರದ ವಿರುದ್ಧ ಪ್ರತಿಭಟನೆ ಮಾಡಿ ಜೈಲುವಾಸ ಅನುಭವಿಸಿದ್ದರು. ನಂತರ ಎಭಿವಿಪಿಯ ರಾಜ್ಯ ಘಟಕದ ಕಾರ್ಯದರ್ಶಿಯಾಗಿ ಆಯ್ಕೆಯಾದ ಇವರು ನಂತರ 1985ರಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯಾದರು. ನಂತರ ಭಾರತೀಯ ಜನತಾ ಪಕ್ಷವನ್ನು ಸೇರಿ ಯುವ ಮೋರ್ಚಾದ ರಾಜ್ಯಾಧ್ಯಕ್ಷರಾದರು. 1996ರಲ್ಲಿ ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕವಾದರು.

1996ರಿಂದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದ ಅನಂತ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ಎರಡು ಪ್ರಮುಖ ಖಾತೆಗಳ ಜವಾಬ್ದಾರಿ ವಹಿಸಿದ್ದರು. 2014ರಲ್ಲಿ ರಸಗೊಬ್ಬರ ಖಾತೆ ಜವಾಬ್ದಾರಿ ವಹಿಸಿಕೊಂಡಿದ್ದ ಅನಂತ ಕುಮಾರ್, 2016ರ ಜುಲೈನಿಂದ ಸಂಸದೀಯ ವ್ಯವಹಾರಗಳ ಖಾತೆಯ ಜವಾಬ್ದಾರಿಯನ್ನು ಹೊತ್ತಿದ್ದರು. ಇದಕ್ಕೂ ಮುನ್ನ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ನಾಗರೀಕ ವಿಮಾನಯಾನ ಸಚಿವರಾಗುವ ಮೂಲಕ ಆ ಸಚಿವ ಸಂಪುಟದ ಅತ್ಯಂತ ಕಿರಿಯ ಸಚಿವರಾಗಿದ್ದರು.

ಪತ್ನಿ ತೇಜಸ್ವಿನಿ ಹಾಗೂ ಇಬ್ಬರು ಮಕ್ಕಳಾದ ಐಶ್ವರ್ಯ, ವಿಜೇತರನ್ನ ಅಗಲಿರುವ ಅನಂತ್ ಕುಮಾರ್, ಅಪಾರ ಕಾರ್ಯಕರ್ತರು ಹಾಗೂ ಅಭಿಮಾನಿ ಬಳಗ ಹೊಂದಿದ್ದಾರೆ. ಅನಂತ್ ಕುಮಾರ್ ಅಂತಿಮ ದರ್ಶನಕ್ಕೆ ಸಾವಿರಾರು‌ ಜನರು ಆಗಮಿಸುವ ಹಿನ್ನೆಲೆಯಲ್ಲಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ವ್ಯವಸ್ಥೆ ಮಾಡಲಾಗ್ತಿದೆ. ಬೆಳಗ್ಗೆ 8 ಗಂಟೆ ನಂತ್ರ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಚಾಮರಾಜಪೇಟೆಯ ಹಿಂದೂರಿದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲು ಚಿಂತಿಸಲಾಗ್ತಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಇತರೆ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಆಗಮಿಸುವ ಹಿನ್ನೆಲೆ ನಾಳೆ ಬೆಳಗ್ಗೆ 11 ಗಂಟೆಗೆ ಅಂತ್ಯ ಸಂಸ್ಕಾರ ನೆರವೇರಿಸಲು ನಿರ್ಧರಿಸಲಾಗಿದೆ.

ಜಯನಗರ ಎಸಿಪಿ ಶ್ರೀನಿವಾಸ್ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದ್ದು, ಭದ್ರತೆಗೆ 1 ಕೆ‌.ಎಸ್.ಆರ್.ಪಿ ತುಕಡಿ, ಐದು ಇನ್ಸ್‌ಪೆಕ್ಟರ್ ಸೇರಿ 100 ಜನರನ್ನು ನಿಯೋಜನೆ ಮಾಡಲಾಗಿದೆ.

Leave a Reply