ಅನಂತ ಕುಮಾರ್ ಗೆ ಪ್ರಧಾನಿ ಮೋದಿ ಸೇರಿ ಗಣ್ಯರ ನಮನ, ಶಾಲಾ ಕಾಲೇಜುಗಳಿಗೆ ರಜೆ

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ಅನಂತ ಕುಮಾರ್ ಅವರ ಅಗಲಿಕೆಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಅನೇಕ ಗಣ್ಯರಿಂದ ಸಂತಾಪ ವ್ಯಕ್ತವಾಗುತ್ತಿದೆ. ಕೇಂದ್ರ ಸಚಿವ ಅನಂತ ಕುಮಾರ್ ಅವರ ಗೌರವಾರ್ಥ ರಾಜ್ಯಾದ್ಯಂತ ಮೂರು ದಿನಗಳ ಶೋಕಾಚಾರಣೆ ಮಾಡಲಾಗುವುದು. ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದ್ದಾರೆ. ಜತೆಗೆ ಶಾಲಾ, ಕಾಲೇಜು, ಸರ್ಕಾರಿ ಕಚೇರಿಗಳಿಗೆ ಇಂದು (12-11-2018) ರಜೆ ಘೋಷಿಸಲಾಗಿದೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಬೆಳಿಗ್ಗೆ ಮೈಸೂರಿನಿಂದ ಹೊರಟು ನೇರವಾಗಿ ನ್ಯಾಷನಲ್ ಕಾಲೇಜು ಮೈದಾನಕ್ಕೆ ಆಗಮಿಸಿ ಕೇಂದ್ರ ಸಚಿವ ಅನಂತಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲಿದ್ದಾರೆ. ಇದೇ ವೇಳೆ ಅನಂತ್ ಕುಮಾರ್ ಅವರಿಗೆ ಸಂತಾಪ ಸೂಚಿಸುವ ಸಲುವಾಗಿ ಕೋರ್ಟ್ ಗಳಿಗೆ ರಜೆ ಘೋಷಿಸಲಾಗಿದೆ ಎಂದು ಎ ಎ ಬಿ ಅಧ್ಯಕ್ಷ ಎಪಿ ರಂಗನಾಥ ಅವರು ತಿಳಿಸಿದ್ದಾರೆ.

ಗಣ್ಯರ ಸಂತಾಪ…

ಅತ್ಯುತ್ತಮ ನಾಯಕ ಹಾಗೂ ನನ್ನ ಸಹೋದ್ಯೋಗಿ ಅನಂತ ಕುಮಾರ್ ಅವರ ಅಗಲಿಕೆ ಸುದ್ದಿ ಕೇಳಿ ತೀವ್ರ ಬೇಸರವಾಗಿದೆ. ಕಿರಿಯ ವಯಸ್ಸಿನಲ್ಲೇ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ಅವರು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ಕಾಲಸದಿಂದ ಸದಾ ಜನರ ಮನಸ್ಸಲ್ಲಿ ಉಳಿಯಲಿದ್ದಾರೆ.
ನರೇಂದ್ರ ಮೋದಿ, ಪ್ರಧಾನ ಮಂತ್ರಿ

ಕೇಂದ್ರ ಸಚಿವರಾದ ಅನಂತ್ ಕುಮಾರ್ ಅವರು ನಮ್ಮನ್ನು ಅಗಲಿದ್ದಾರೆ ಎನ್ನುವ ಸುದ್ದಿ ಕೇಳಿ ಮನಸ್ಸಿಗೆ ತೀವ್ರ ದುಃಖವಾಗಿದೆ. ದೆಹಲಿಯಲ್ಲಿ ಕರ್ನಾಟಕದ ಧ್ವನಿಯಂತಿದ್ದ ಅನಂತ್ ಕುಮಾರ್ ಅವರು ಒಬ್ಬ ಪಳಗಿದ ಮುತ್ಸದ್ದಿ ರಾಜಕಾರಣಿಯಾಗಿದ್ದರು. ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲೆಂದು ಪ್ರಾರ್ಥಿಸುತ್ತೇನೆ.
ಹೆಚ್.ಡಿ ದೇವೇಗೌಡ, ಮಾಜಿ ಪ್ರಧಾನಿ

ಕೇಂದ್ರ ಸಚಿವರು ಹಾಗೂ ನನ್ನ ಆತ್ಮೀಯ ಮಿತ್ರರೂ ಆದ ಅನಂತ ಕುಮಾರ್ ಅವರ ನಿಧನದಿಂದ ನೋವಾಗಿದೆ. ಮೌಲ್ಯಾಧಾರಿತ ರಾಜಕಾರಣಿ, ಜನಪರ ನಾಯಕರಾದ ಅವರು ಸಂಸದರು ಹಾಗೂ ಕೇಂದ್ರ ಸಚಿವರಾಗಿ ದೇಶಕ್ಕೆ ಕೊಡುಗೆ ನೀಡಿದ್ದಾರೆ. ನಾನು ಉತ್ತಮ ಸ್ನೇಹಿತನನ್ನು ಕಳೆದುಕೊಂಡಿದ್ದು, ಅವರ ಆತ್ಮಕ್ಕೆ ಶಾತಿ ಸಿಗಲಿ.
ಹೆಚ್.ಡಿ ಕುಮಾರಸ್ವಾಮಿ, ಮುಖ್ಯಮಂತ್ರಿ

ಅನಂತ ಕುಮಾರ್ ಅವರ ಸಾವಿನಿಂದ ತೀವ್ರ ಬೇಸರವಾಗಿದೆ. ದೇಶ ಹಾಗೂ ಸಂಸ್ಥೆಗಾಗಿ ಬದ್ಧತೆಯಿಂದ ಸೇವೆ ಸಲ್ಲಿಸಿದ್ದರು. ಕರ್ನಾಟಕದಲ್ಲಿ ಪಕ್ಷದ ಬಲವರ್ದನೆಗೆ ಹಗಲಿರುಳು ಶ್ರಮಿಸಿದ್ದರು. ಕೇಂದ್ರ ಸಚಿವ ಸಂಪುಟದಲ್ಲಿ ಅನೇಕ ಇಲಾಖೆಗಳ ಜವಾಬ್ದಾರಿ ವಹಿಸಿದ್ದರು. ಅವರ ಅಗಲಿಕೆ ಭಾರತೀಯ ರಾಜಕೀಯಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಓಂ ಶಾಂತಿ.
ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಬೆಂಗಳೂರಿನಲ್ಲಿ ಕೇಂದ್ರ ಸಚಿವರಾದ ಅನಂತ ಕುಮಾರ್ ಅವರು ವಿಧಿವಶರಾಗಿರುವ ಸುದ್ದಿ ಕೇಳಿ ಬೇಸರವಾಗಿದೆ. ಅವರ ಕುಟುಂಬದವರಿಗೆ, ಸ್ನೇಹಿತರು ಹಾಗೂ ಬೆಂಬಲಿಗರಿಗೆ ಸಂತಾಪ ಸೂಚಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ.
ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ

ಅನಂತಕುಮಾರ್ ಅವರ ನಿಧನವು ಪಕ್ಷಕ್ಕೆ ಹಾಗೂ ವೈಯಕ್ತಿಕವಾಗಿ ನನಗೆ ಆದ ಭಾರೀ ನಷ್ಟ. ಒಬ್ಬ ಉತ್ತಮ ರಾಜಕಾರಣಿಯನ್ನು ಕಳೆದುಕೊಂಡು ರಾಜ್ಯ ಹಾಗೂ ದೇಶ ಬಡವಾಗಿದೆ. ಎಂತಹ ಕ್ಲಿಷ್ಟ ಪರಿಸ್ಥಿತಿಯಲ್ಲೂ ಉತ್ತಮ ಸಲಹೆಗಳನ್ನು ನೀಡಿ ಪಕ್ಷದ ಬೆಳವಣಿಗೆಗೆ ಕಾರಣವಾಗಿದ್ದ ಇವರ ಕೊಡುಗೆಗಳನ್ನು ಎಂದಿಗೂ ಮರೆಯಲಾಗದು. ದೇವರು ಇವರ ಆತ್ಮಕ್ಕೆ ಶಾಂತಿ ನೀಡಲಿ.
ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ಅನಂತಕುಮಾರ್ ಅವರು ಪಕ್ಷ ಮತ್ತು ರಾಜಕಾರಣದ ಮೀರಿದ ಸ್ನೇಹವಲಯ ಸಂಪಾದಿಸಿದ್ದು, ಅಜಾತಶತ್ರುವಾಗಿದ್ದರು. ಮೌಲ್ಯಾಧಾರಿತ ರಾಜಕಾರಣಿ ಆಗಿದ್ದರು. ಅವರೊಡನೆ ತಮಗೆ ವ್ಯಕ್ತಿಗತ ಸ್ನೇಹವೂ ಇತ್ತು. ಅವರು ಕೇಂದ್ರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದಾಗ ನಾನು ಕೂಡ ರಾಜ್ಯದಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲಿ ನಗರಾಭಿವೃದ್ಧಿ ಸಚಿವನಾಗಿದ್ದೆ. ಆಗ ಬೆಂಗಳೂರಲ್ಲಿ ಮೆಟ್ರೋ ರೈಲು ಯೋಜನೆ ಕುರಿತು ಕೃಷ್ಣ ಅವರ ಸಂಪುಟ ಕೈಗೊಂಡ ನಿರ್ಣಯಕ್ಕೆ ಕೇಂದ್ರ ಸರಕಾರದ ಅನುಮೋದನೆ ಸಿಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತಾವು ವಿದೇಶ ಪ್ರವಾಸ ಕೈಗೊಂಡು ಸಲ್ಲಿಸಿದ ಹುಡ್ಕೋ ವರದಿ ಇದಕ್ಕೆ ಪ್ರೇರಣೆ ಆಗಿತ್ತು. ಅವರು ಸಂಸದರಾಗಿ, ಕೇಂದ್ರ ಸಚಿವರಾಗಿ ದೇಶ, ಕರ್ನಾಟಕ ಹಾಗೂ ಬೆಂಗಳೂರು ಪ್ರಗತಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ತಾವು ವಹಿಸಿಕೊಂಡ ಅಧಿಕಾರಕ್ಕೆ ಜನಪರ ಕಾಳಜಿಯಿಂದ ನ್ಯಾಯ ಒದಗಿಸಿದ್ದರು. ಉತ್ತಮ ಸಂಸದೀಯ ಪಟು, ಚತುರ ವಾಗ್ಮಿಯೂ ಆಗಿದ್ದ ಅನಂತಕುಮಾರ್ ಸಜ್ಜನಿಕೆಗೆ ಹೆಸರಾಗಿದ್ದರು. ಸತತ ಅಧ್ಯಯನ, ವಿಚಾರಶೀಲತೆ, ಕಾರ್ಯಕ್ಷಮತೆ ಮೈಗೂಡಿಸಿಕೊಂಡಿದ್ದರು. ಅವರ ಅಗಲಿಕೆಯಿಂದ ರಾಜಕೀಯ ಕ್ಷೇತ್ರಕ್ಕೆ ಅಪಾರ ಹಾನಿಯಾಗಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಕುಟುಂಬ ವರ್ಗ ಹಾಗೂ ಅಪಾರ ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖ ಸಹಿಸುವ ಶಕ್ತಿ ನೀಡಲಿ.
ಡಿ.ಕೆ ಶಿವಕುಮಾರ್, ಜಲಸಂಪನ್ಮೂಲ ಸಚಿವ

ಕೇಂದ್ರ ಸಚಿವ ಅನಂತ್‌ಕುಮಾರ್ ಸಾವಿನ ಸುದ್ದಿ ಕೇಳಿ‌ ಆಘಾತಗೊಂಡಿದ್ದೇನೆ. ಕರ್ನಾಟಕ ಮತ್ತು ದೆಹಲಿ ನಡುವಿನ ಕೊಂಡಿಯೊಂದು‌ ಕಳಚಿಬಿದ್ದಿದೆ. ರಾಜಕೀಯವಾಗಿ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಅವಕಾಶ ಮತ್ತು ವಯಸ್ಸಿತ್ತು. ಅವರ ಕುಟುಂಬ ವರ್ಗದ ದುಃಖದಲ್ಲಿ‌ ನಾನೂ ಭಾಗಿಯಾಗಿದ್ದೇನೆ.
ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಪ್ರತಾಪಾ… ಪಾಸ್ಪೋರ್ಟ್ ಸೇವಾ ಕೇಂದ್ರ ಅಪ್ರೂವ್ ಮಾಡ್ಸಿದೀನಿ, ಮೈಸೂರು-ಬೆಂಗಳೂರು ಹೈವೇನ ಮೋದಿಜಿ ನಾಳೆ ಮಹಾರಾಜಾ ಗ್ರೌಂಡ್ ನಲ್ಲಿ ಘೋಷಣೆ ಮಾಡ್ತಾರೆ, ಏರ್ಪೋರ್ಟ್ಗೆ ಮರುಜೀವ ಕೊಡೋದಕ್ಕೆ ಜಯಂತ್ ಸಿನ್ಹಾಗೆ ಸೂಚಿಸಿದ್ದೇನೆ ಅಂತ ಸದಾ ಸಿಹಿ ಸುದ್ದಿ ಕೊಡುತ್ತಿದ್ದ ಆ ಧ್ವನಿಯನ್ನೇ ಕಿತ್ತುಕೊಂಡಲ್ಲಾ ದೇವರೇ..
ಪ್ರತಾಪ್ ಸಿಂಹ, ಸಂಸದ

ಅನಂತ ಕುಮಾರ್ ಅವರ ಸಾವಿನ ಸುದ್ದಿ ಕೇಳಿ ಬೇಸರವಾಗಿದೆ. ಅವರು ತಮ್ಮ ತಲೆಮಾರಿನ ರಾಜಕೀಯ ನಿಪುಣರಲ್ಲಿ ಒಬ್ಬರಾಗಿದ್ದರು. ಉತ್ತಮ ಜ್ಞಾನ, ಅನುಭವ ಹೊಂದಿದ್ದ ಅವರು ಅತ್ಯುತ್ತಮ ವಾಗ್ಮಿಯಾಗಿದ್ದರು. ಅವರ ಅಗಲಿಕೆಯಿಂದ ಅವರ ಸಹೋದ್ಯೋಗಿಗಳು ಹಾಗೂ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ.
ಪರಮೇಶ್ವರ್, ಉಪಮುಖ್ಯಮಂತ್ರಿ

ಅನಂತ ಕುಮಾರ್ ಅವರ ಅಂತಿಮ ಕಾರ್ಯಕ್ಕಾಗಿ ಬೆಂಗಳೂರಿನತ್ತ ಪ್ರಯಾಣ ಬೆಳೆಸುತ್ತಿದ್ದೇನೆ. ಅವರು ಹುಬ್ಬಳ್ಳಿಯ ದಿನಗಳಿಂದಲೂ ನಮ್ಮ ಕುಟುಂಬ ಸದಸ್ಯರಂತೆ ಇದ್ದರು. ಅವರ ಅಗಲಿಕೆ ನೋವು ತಂದಿದೆ. ಇದರಿಂದ ನನಗೆ ವೈಯಕ್ತಿಕವಾಗಿ ದೊಡ್ಡ ನಷ್ಟವಾಗಿದೆ. ಅವರು ಇನ್ನಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ.
ಪ್ರಹ್ಲಾದ್ ಜೋಷಿ, ಸಂಸದ

ಕೇಂದ್ರ ಸಚಿವರಾದ ಶ್ರೀ ಅನಂತ ಕುಮಾರ್ ಅವರ ನಿಧನ ಬೇಸರ ತಂದಿದೆ. ಅವರ ಕುಟುಂಬ ಸದಸ್ಯರು, ಬೆಂಬಲಿಗರು ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ಸಿಗಲಿ ಎಂದು ಸಂತಾಪ ಸೂಚಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.
ಡಿ.ಕೆ ಸುರೇಶ್, ಸಂಸದ

ಬಿಜೆಪಿ ಹಿರಿಯ ನಾಯಕ, ಕೇಂದ್ರ ಸಚಿವರಾದ ಅನಂತ ಕುಮಾರ್ ಅವರ ಸಾವಿನ ಸುದ್ದಿ ಕೇಳಿ ಆಘಾತವಾಗಿದೆ. ಇದು ಕರ್ನಾಟಕದ ಜನತೆಗೆ ದೊಡ್ಡ ನಷ್ಟ. ಅವರ ಕುಟುಂಬ, ಸ್ನೇಹಿತರು ಹಾಗೂ ಬೆಂಬಲಿಗರಿಗೆ ನೋವನ್ನು ತಡೆಯುವ ಶಕ್ತಿ ದೇವರು ನೀಡಲಿ.
ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ

1 COMMENT

  1. He was with me in a lorry when we went RSS route March in malleswaram in Bangalore between 2002 to 2005 this was at the end of the RSS SAMATA SANGAMA CAMP held in Nagvara he was sitting behind of me like common men even though he was central minister. We lost a great leader… Jai Hind. Belliappa ex-servicemen Navy Mysore

Leave a Reply