ಅನಂತ ಅಂತಿಮ ಸಂಸ್ಕಾರದ ವಿಧಿ ವಿಧಾನಗಳೇನು?

ಡಿಜಿಟಲ್ ಕನ್ನಡ ಟೀಮ್:

ಅನಂತ ಕುಮಾರ್​ ಅಂತಿಮ ಯಾತ್ರೆ ಶುರುವಾಗಿದ್ದು, ಬೆಳಗ್ಗೆ 8 ಗಂಟೆಗೆ ಅನಂತ ಕುಮಾರ್​ ನಿವಾಸದಿಂದ ಹೊರಟ ಅನಂತ ಯಾತ್ರೆ, ಮಲ್ಲೇಶ್ವರಂ ಕೇಂದ್ರ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಿಜೆಪಿ ಕಚೇರಿಯ ದರ್ಶನದ ಬಳಿಕ ಇಲ್ಲಿಂದ ಹೊರಟು, ನ್ಯಾಷನಲ್​ ಕಾಲೇಜು ಮೈದಾನದಲ್ಲಿ ಮತ್ತೆ ಸಾರ್ವಜನಿಕ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು. ಅಲ್ಲಿ ಸಾಕಷ್ಟು ಗಣ್ಯರು, ಕೇಂದ್ರ ಸಚಿವರು ಕೊನೆಯದಾಗಿ ಅನಂತ ಕುಮಾರ್​ ದರ್ಶನ ಪಡೆಯಲಿದ್ದಾರೆ.

ಮಧ್ಯಾಹ್ನ 1 ಗಂಟೆಯ ಬಳಿಕ ನ್ಯಾಷನಲ್ ಕಾಲೇಜು ಮೈದಾನದಿಂದ ಚಾಮರಾಜಪೇಟೆಯ ರುದ್ರಭೂಮಿಗೆ ಕೊಂಡೊಗಲಾಗುವುದು. ನ್ಯಾಷನಲ್​ ಕಾಲೇಜು ಮೈದಾನದಿಂದ ಪಾರ್ಥಿವ ಶರೀರವನ್ನು ಅಂತಿಮ ಯಾತ್ರೆ ಮೂಲಕ ರವಾನೆ ಮಾಡಲು ನಿರ್ಧಾರ ಮಾಡಲಾಗಿದ್ದು, ಸಾಕಷ್ಟು ಗಣ್ಯ ನಾಯಕರು ಅಂತಿಮ ಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ. ಚಾಮರಾಜಪೇಟೆಯ ಹಿಂದೂ ರುದ್ರಭೂಮಿಯಲ್ಲಿ ಸ್ಮಾರ್ಥ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನಡೆಯಲಿದ್ದು, ಕುಟುಂಬದ ಸದಸ್ಯರು, ಆತ್ಮೀಯರು ಮಾತ್ರ ಪೂಜೆ ಪುನಸ್ಕಾರ ಮಾಡಲಿದ್ದಾರೆ. ವಿಧಿವಿಧಾನದ ಬಳಿಕ ಸಕಲ ಸರ್ಕಾರಿ ಗೌರವ ಸಮರ್ಪಣೆ ಮಾಡಿ ಅಗ್ನಿ ಸ್ಪರ್ಷ ಮಾಡಲಾಗುತ್ತೆ.

ಅನಂತ ಕುಮಾರ್​ ಅವರ ಸಹೋದರ ನಂದಕುಮಾರ್‌ ಅಂತಿಮ ವಿಧಿವಿಧಾನ ನಡೆಸಿಕೊಡಲಿದ್ದು, ಸ್ಮಾರ್ಥ ಮುಲಕನಾಡು ಬ್ರಾಹ್ಮಣ ಸಂಪ್ರದಾಯದಂತೆ ಚಾಮರಾಜಪೇಟೆ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ. ಪುರೋಹಿತ ಶ್ರೀನಾಥ ಶಾಸ್ತ್ರಿ ನೇತೃತ್ವದಲ್ಲಿ 45 ನಿಮಿಷ ಅಂತ್ಯಕ್ರಿಯೆ ಪೂಜಾ ವಿಧಿವಿಧಾನಗಳು ನಡೆಯಲಿವೆ. ಮೊದಲು ಗಂಗಾಜಲದಿಂದ ಪಾರ್ಥಿವ ಶರೀರಶುದ್ಧಿಕರಣ ನಡೆಯಲಿದ್ದು, ಬಳಿಕ ಪಾರ್ಥಿವ ಶರೀರಕ್ಕೆ ಹೊಸಬಟ್ಟೆ ಧಾರಣೆ ಮಾಡಲಾಗುತ್ತೆ. ಚಿತೆಗೆ 50 ಕೆಜಿ ತುಪ್ಪ, 10 ಕೆಜಿ ಕರ್ಪೂರ, ಬೆರಣಿ, ಗಂಧದ ಚಕ್ಕೆ, 1 ಟನ್ ಕಟ್ಟಿಗೆ ಬಳಸಿ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತೆ.

ಅನಂತ್​ ಕುಮಾರ್ ಅಂತ್ಯಕ್ರಿಯೆಗೆ ಕರ್ಪೂರ ಮತ್ತು ಸುಗಂಧದ್ರವ್ಯಗಳನ್ನು ಬಳಸಲಾಗ್ತಿದೆ. ಕೇಂದ್ರ ಸಚಿವರ ಅಂತ್ಯಸಂಸ್ಕಾರ ಇರೋದ್ರಿಂದ ಇಂದು ಸಂಜೆ ತನಕ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಬೇರೆ ಶವಗಳ ಸಂಸ್ಕಾರಕ್ಕೆ ಅವಕಾಶ ಇರೋದಿಲ್ಲ. ಈ ಬಗ್ಗೆ ಚಿತಾಗಾರದ ಸಿಬ್ಬಂದಿಗೆ ಬಿಬಿಎಂಪಿ ಆಯುಕ್ತರು ಸೂಚನೆ ಕೊಟ್ಟಿದ್ದಾರೆ. ಇನ್ನು ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುವಂತೆಯೂ ಸೂಚನೆ ಕೊಟ್ಟಿದ್ದಾರೆ. ಅಂತ್ಯಸಂಸ್ಕಾರದ ಹಿನ್ನೆಲೆಯಲ್ಲಿ ರುದ್ರಭೂಮಿಯಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.

Leave a Reply