ಜನಾರ್ದನ ರೆಡ್ಡಿಗೆ ಸಿಗಲಿದೆಯೇ ಜಾಮೀನು?

ಡಿಜಿಟಲ್ ಕನ್ನಡ ಟೀಮ್:

ಆ್ಯಂಬಿಡೆಂಟ್​ ಮಾರ್ಕೆಟಿಂಗ್ ಕಂಪನಿ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಜಾಮೀನು ಅರ್ಜಿ ಮಂಗಳವಾರ ವಿಚಾರಣೆ ನಡೆದಿದ್ದು, ತೀರ್ಪನ್ನು ಬುಧವಾರಕ್ಕೆ ಕಾಯ್ದಿರಿಸಲಾಗಿದೆ. ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಸೋಮವಾರದಂದು ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ರು. ಆದ್ರೆ ಕೇಂದ್ರ ಸಚಿವ ಅನಂತ ಕುಮಾರ್ ಅಕಾಲಿಕ ನಿಧನ ಹಿನ್ನಲೆಯಲ್ಲಿ ಕೋರ್ಟ್ ಕಲಾಪಕ್ಕೆ ರಜೆ ನೀಡಲಾಗಿತ್ತು. ಆದರೆ ಇವತ್ತು ಅರ್ಜಿ ವಿಚಾರಣೆ ಪೂರ್ಣವಾಗಿದ್ದು, ಬುಧವಾರಕ್ಕೆ ತೀರ್ಪು ಕಾಯ್ದಿರಿಸಲಾಗಿದೆ.

ಇದೀಗ ಜನಾರ್ದನ ರೆಡ್ಡಿಗೆ ಜಾಮೀನು ಸಿಗಲಿದೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಕಾರಣ 1 ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶ್​ ಅವರು ಹೇಳಿರುವ ಮಾತುಗಳು.

ಜನಾರ್ದನ ರೆಡ್ಡಿ ಪರವಾಗಿ ಹಿರಿಯ ವಕೀಲ ಸಿ. ಹೆಚ್ ಹನುಮಂತರಾಯ ಬಲವಾಗಿ ವಾದ ಮಂಡನೆ ಮಾಡಿದ್ದು, ಆ್ಯಂಬಿಡೆಂಟ್​ ಮಾರ್ಕೆಟಿಂಗ್ ಕಂಪನಿ ವಂಚನೆ ಪ್ರಕರಣದಲ್ಲಿ ಪ್ರಮುಖ ನಾಲ್ವರು ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ. ಐದನೇ ಆರೋಪಿಗೂ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲಾಗಿದೆ. ಯಾವುದೇ ಆರೋಪ‌ ಇಲ್ಲದಿದ್ದರೂ ಜನಾರ್ದನ ರೆಡ್ಡಿ, ಸಿಸಿಬಿ ಪೊಲೀಸರು ನೋಟಿಸ್ ಕೊಟ್ಟ ಮಾರನೇ ದಿನವೇ ಪೊಲೀಸರ ಎದುರು ಹಾಜರಾಗಿದ್ದಾರೆ. ಹಾಗಿದ್ದರು ಸಿಸಿಬಿ‌ ಪೊಲೀಸರು‌ ಬಂಧಿಸಿರೋದು‌ ಸರಿಯಲ್ಲ ಎಂದು ವಾದ ಮಂಡಿಸಿದರು. ಜೊತೆಗೆ ರೆಡ್ಡಿ ಆಪ್ತ ಅಲಿಖಾನ್ 4ನೇ ಆರೋಪಿಯಿಂದ 57 ಕೆಜಿ ಚಿನ್ನ ಪಡೆದಿರೋದು ಸತ್ಯ. ಆದರೆ ಇದಕ್ಕೂ ಜನಾರ್ದನ ರೆಡ್ಡಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಈ ಬಗ್ಗೆ ಜನಾರ್ದನ ರೆಡ್ಡಿಗೆ ಮಾಹಿತಿ ಇರುವುದನ್ನು ಒಪ್ಪಿಕೊಂಡಿದ್ದಾರೆ. ಅದನ್ನು ಮರಳಿ ಕೊಡಿಸಲು ಯತ್ನಿಸುವುದಾಗಿಯೂ ಹೇಳಿದ್ದಾರೆ. ಜನಾರ್ದನ ರೆಡ್ಡಿಗೂ ಆಂಬಿಡೆಂಟ್ ಪ್ರಕರಣಕ್ಕೂ ಸಂಬಂಧ ಇಲ್ಲದಿದ್ದರೂ ಪೊಲೀಸರು ಬಂಧಿಸಿದ್ದಾರೆ ಎಂದು ವಾದ ಮಂಡಿಸಿದರು.

ಸಿಸಿಬಿ ಅಭಿಯೋಜಕರು ಕೂಡ ಪೊಲೀಸರ ಪರವಾಗಿ ವಾದ ಮಂಡಿಸಿದ್ದು, ಆ್ಯಂಬಿಡೆಂಟ್​ ವಂಚನೆ ಪ್ರಕರಣದಲ್ಲಿ ಒಟ್ಟು 600 ಕೋಟಿ ರೂಪಾಯಿಗೂ ಹೆಚ್ಚಿನ ಅಕ್ರಮ ನಡೆದಿರೋದು ಪತ್ತೆಯಾಗಿದೆ. ಆ್ಯಂಬಿಡೆಂಟ್ ಕಂಪನಿ ಜನರಿಗೆ ವಂಚನೆ ಮಾಡಿದೆ ಎಂದು ಆರೋಪಿಸಿದರು. ಇದಕ್ಕೆ ಮಧ್ಯಪ್ರವೇಶ ಮಾಡಿದ ನ್ಯಾಯಮೂರ್ತಿ ಆಂಬಿಡೆಂಟ್‌ ಪ್ರಕರಣಕ್ಕೂ ಜನಾರ್ದನ ರೆಡ್ಡಿಗೂ ಏನು ಸಂಬಂಧ..!? ಎಂದು ಪ್ರಶ್ನೆ ಮಾಡಿದ್ರು. ಜೊತೆಗೆ ದೂರು ಒಂದು ರೀತಿ ಇದೆ, ತನಿಖೆ ನಡೆಯುತ್ತಿರೋದು ಬೇರೆ ರೀತಿ ಇದೆ ಎಂದು ತರಾಟೆಗೆ ತೆಗದುಕೊಂಡರು.

ಜನಾರ್ದನ ರೆಡ್ಡಿ ಮೇಲೆ ಗ್ರಾಹಕರಿಂದ ಬಂದಿರುವ ಒಂದಾದರೂ ಆರೋಪ ತೋರಿಸಿ. 20 ಕೋಟಿ ಹಣದ ವ್ಯವಹಾರ ಇದೆ ಎಂದು ವಾದ ಮಾಡುತ್ತಿದ್ದೀರಿ. ಇದರ ಹಿಂದೆ ಬೇರೇನೋ ಇರಬಹುದು ಎನಿಸುತ್ತದೆ. ಇದನ್ನು ತೆರೆದ ಕೋರ್ಟ್‌ನಲ್ಲಿ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಒಟ್ಟಾರೆ ಸರ್ಕಾರಿ ಅಭಿಯೋಜಕರ ವಾದಕ್ಕೆ ನ್ಯಾಯಮೂರ್ತಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ನಾಳೆ ಜನಾರ್ದನ ರೆಡ್ಡಿ ಪರವಾಗಿಯೇ ತೀರ್ಪು ಬರಬಹುದು ಎನ್ನಲಾಗ್ತಿದೆ.

ಸಿಸಿಬಿ ಪೊಲೀಸರ ತನಿಖೆಯ ಕಾರ್ಯ ವೈಖರಿ ಬಗ್ಗೆ ನ್ಯಾಯಮೂರ್ತಿ ಜಗದೀಶ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಈ ವಿಚಾರ ಗೊತ್ತಾಗ್ತಿದ್ದ ಹಾಗೆ ಜನಾರ್ದನ ರೆಡ್ಡಿ ಮೊಗದಲ್ಲಿ ಸಂತಸ ಮನೆ ಮಾಡಿದೆ. ಜೈಲಧಿಕಾರಿಗಳ ಜೊತೆ ಸಂತೋಷದಿಂದಲೇ ಮಾತಾಡಿರರುವ ಜನಾರ್ದನ ರೆಡ್ಡಿ, ನನ್ನ ತೇಜೋವಧೆಗಾಗಿ ಸಿಸಿಬಿ ಅಧಿಕಾರಿಗಳು ಹೀಗೆ ಮಾಡಿದ್ರು. ಆದ್ರೆ ಸತ್ಯವೇನು? ತನಿಖೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಅನ್ನೋದು ನ್ಯಾಯಾಲಯಕ್ಕೆ ಗೊತ್ತಾಗಿದೆ. ನಮ್ಮ ಮೇಲೆ ಈಗಲಾದ್ರು ಒಳ್ಳೆಯ ಅಭಿಪ್ರಾಯ ಬಂದಿದೆ. ಭಗವಂತನಿದ್ದಾನೆ, ನಾಳೆ ಜಾಮೀನು ಸಿಕ್ಕೇ ಸಿಗುತ್ತೆ ಎಂದು ಸಿಬ್ಬಂದಿ ಬಳಿ ಹೇಳಿಕೊಂಡು ಸಂಭ್ರಮಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

Leave a Reply